ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹೋರಾಟಗಳಲ್ಲಿ ಅರಳಿದ ನಾಯಕ: ಜಿ.ವಿ.ಶ್ರೀರಾಮರೆಡ್ಡಿ

Last Updated 15 ಏಪ್ರಿಲ್ 2022, 17:47 IST
ಅಕ್ಷರ ಗಾತ್ರ

ಚಿಕ್ಕಬಳ್ಳಾಪುರ: ‘ಅನೇಕ ರಾಜಕಾರಣಿಗಳು ಭ್ರಷ್ಟಾಚಾರದ ಕಾರಣಕ್ಕೆ ಜೈಲಿಗೆ ಹೋದರೆ ನಾನುಕೃಷಿ ಕೂಲಿ ಕಾರ್ಮಿಕರ ಪರವಾಗಿ ಮತ್ತು ಭೂ ಮಾಲೀಕರ ವಿರುದ್ಧದ ಹೋರಾಟಕ್ಕಾಗಿ ಜೈಲಿಗೆ ಹೋಗಿದ್ದೇ ಹೆಚ್ಚು...’

– 2018ರ ವಿಧಾನಸಭೆ ಚುನಾವಣೆ ಸಂದರ್ಭದಲ್ಲಿ ಬಾಗೇಪಲ್ಲಿಯಲ್ಲಿ ನಡೆದ ಸಿಪಿಎಂ ಸಭೆಯಲ್ಲಿ ಜಿ.ವಿ.ಶ್ರೀರಾಮರೆಡ್ಡಿ ಹೇಳಿದ್ದ ಮಾತಿದು.

ಕರ್ನಾಟಕ ರಾಜಕಾರಣದಲ್ಲಿ ಕೃಷಿ ಕೂಲಿಕಾರ್ಮಿಕರು, ಬಗರ್ ಹುಕುಂ ಹಿಡುವಳಿದಾರರು... ಹೀಗೆ ಧ್ವನಿ ಇಲ್ಲದ ಜನರ ಪರವಾಗಿ ಅವಿಶ್ರಾಂತ ಹೋರಾಟ ನಡೆಸಿದ ರಾಜಕಾರಣಿಗಳಲ್ಲಿ ಜಿ.ವಿ.ಶ್ರೀರಾಮರೆಡ್ಡಿ ಪ್ರಮುಖರು. ರಾಜ್ಯದಲ್ಲಿ ತೀವ್ರ ಚರ್ಚೆಗೆ ಕಾರಣವಾಗಿದ್ದ ಮಡೆ ಮಡೆಸ್ನಾನದ ವಿರುದ್ಧ ಹೋರಾಟ ಸೇರಿದಂತೆ ಹಲವುಜನಪರ ಚಳವಳಿಗಳನ್ನು ಅವರು ಮುನ್ನಡೆಸಿದ್ದರು.

ಆಂಧ್ರಪ್ರದೇಶಕ್ಕೆ ಹೊಂದಿ ಕೊಂಡಿರುವ ಬಾಗೇಪಲ್ಲಿ ಮತ್ತು ಗುಡಿಬಂಡೆ ತಾಲ್ಲೂಕುಗಳಲ್ಲಿನ ಕಮ್ಯುನಿಸ್ಟ್ ಹೋರಾಟಗಳಿಗೆ 1950ರಿಂದಲೂ ಹೆಜ್ಜೆ ಗುರುತುಗಳಿವೆ. ಆಂಧ್ರದ ನಕ್ಸಲ್ ಹೋರಾಟಗಾರ ಕೊಂಡಪಲ್ಲಿ ಸೀತಾರಾಮಯ್ಯ ಅವರ ದಟ್ಟ ಪ್ರಭಾವ ಈ ನೆಲದಲ್ಲಿತ್ತು. ಇಂತಹ ನೆಲದಲ್ಲಿ ಎಡಪಂಥೀಯ ಮತ್ತು ರೈತ, ಕೂಲಿ ಕಾರ್ಮಿಕರ ಪರ ಹೋರಾಟಗಳನ್ನು ಇಂದಿನವರೆಗೂ ಕಾಪಿಟ್ಟುಕೊಂಡು ಬಂದವರು ಶ್ರೀರಾಮರೆಡ್ಡಿ.

ಹಲವು ದಶಕಗಳ ಸಾರ್ವಜನಿಕ ಮತ್ತು ರಾಜಕಾರಣದ ಬದುಕಿನಲ್ಲಿ ಸೈದ್ಧಾಂತಿಕವಾಗಿ ಎಂದಿಗೂ ರಾಜಿ ಆಗದ ವ್ಯಕ್ತಿ. ಆ ಬದ್ಧತೆಯೇ ಅವರನ್ನು ‘ಜನಪರ ನಾಯಕ’ನನ್ನಾಗಿಸಿತು.

ಅವರ ಹೋರಾಟದ ಹಿಂದೆ ಗಟ್ಟಿಯಾದ ಕೌಟುಂಬಿಕ ಹಿನ್ನೆಲೆಯೂ ಇದೆ.ಚಿಂತಾಮಣಿ ತಾಲ್ಲೂಕಿನ ಬೈರೇಬಂಡ ಗ್ರಾಮದಲ್ಲಿ ಸ್ಥಿತಿವಂತರ ಕುಟುಂಬದಲ್ಲಿ ಜನಿಸಿದರು. ಅವರ ತಂದೆ ಓಬಿರೆಡ್ಡಿಪ್ರಭಾವಿ ರೈತ. ಚಿಂತಾಮಣಿ ಕ್ಷೇತ್ರದ ಶಾಸಕರಾಗಿದ್ದ ಟಿ.ಕೆ.ಗಂಗಿರೆಡ್ಡಿ, ಶ್ರೀರಾಮರೆಡ್ಡಿ ಅವರ ಹತ್ತಿರದ ಸಂಬಂಧಿ.

ಅವರ ಅಣ್ಣ ಜಿ.ವಿ.ಅಶ್ವತ್ಥನಾರಾಯಣರೆಡ್ಡಿ ಅವಿಭಜಿತ ಕೋಲಾರ ಜಿಲ್ಲೆಯ ಕಮ್ಯುನಿಸ್ಟ್ ನಾಯಕರಲ್ಲಿ ಅಗ್ರಗಣ್ಯರು. ಚಿಂತಾಮಣಿ ಕ್ಷೇತ್ರದಿಂದ ಮೂರು ಬಾರಿ ಸಿಪಿಎಂ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದರು. ಅಂದಿನ ಸಮಯದಲ್ಲಿಯೇ ಜನಪರ ಹೋರಾಟ ಕಟ್ಟುವಲ್ಲಿ ಈ ಸಹೋದರರು ಯಶಸ್ಸು ಕಂಡಿದ್ದರು. ಹೀಗೆ ಎಡಪಂಥೀಯ ವಿಚಾರಗಳಿಂದ ಪ್ರಭಾವಿತವಾಗಿದ್ದ ಕೌಟುಂಬಿಕ ಹಿನ್ನೆಲೆ ಶ್ರೀರಾಮರೆಡ್ಡಿ ಅವರದ್ದು.

ವಿದ್ಯಾರ್ಥಿ ನಾಯಕನಾಗಿ ಅವರು ಹೋರಾಟದ ಬದುಕು ಪ್ರವೇಶಿಸಿದರು. ಭಾರತ ವಿದ್ಯಾರ್ಥಿ ಫೆಡರೇಷನ್ (ಎಸ್‌ಎಫ್‌ಐ) ಸ್ಥಾಪಕ ಸದಸ್ಯರು. ಅವಿಭಜಿತ ಕೋಲಾರ ಜಿಲ್ಲೆಯನ್ನು ಹೋರಾಟ ನೆಲವನ್ನಾಗಿಸಿಕೊಂಡಿದ್ದ ಈ ವಿದ್ಯಾರ್ಥಿ ನಾಯಕ ಸಿಪಿಎಂ ಕೇಂದ್ರ ನಾಯಕರ ಕಣ್ಣಿಗೆ ಬೀಳುತ್ತಲೇ ಬೆಂಗಳೂರಿಗೆ ಹೆಜ್ಜೆಯಿಟ್ಟರು.

ಬಾಗೇಪಲ್ಲಿ ಸಿಪಿಎಂ ಶಾಸಕರಾಗಿದ್ದ ಎ.ವಿ.ಅಪ್ಪಸ್ವಾಮಿ ರೆಡ್ಡಿ1983ರ ಸುಮಾರಿಗೆ ಪಾರ್ಶ್ವವಾಯುವಿಗೆ ತುತ್ತಾದರು. ಪಕ್ಷವು ಶ್ರೀರಾಮರೆಡ್ಡಿ ಅವರನ್ನು ಬಾಗೇಪಲ್ಲಿಗೆ ಕಳುಹಿಸಿತು. ಅಂದಿನಿಂದ ಜೀವಿತದ ಕೊನೆಯವರೆಗೂ ಬಾಗೇಪಲ್ಲಿಯೇ ಅವರ ರಾಜಕೀಯ ಕರ್ಮಭೂಮಿ ಆಯಿತು.

ಸಿಪಿಎಂನಿಂದ ಹೊರಕ್ಕೆ: ಶ್ರೀರಾಮರೆಡ್ಡಿ, ರಾಜಕಾರಣದಲ್ಲಿ ಹಲವು ಏಳುಬೀಳುಗಳನ್ನು ಕಂಡಿದ್ದಾರೆ. ಭೂವ್ಯವಹಾರ, ಹಣಕಾಸು ದುರುಪಯೋಗ, ಅನುಚಿತ ವರ್ತನೆಯ ಆರೋಪಗಳ ಕಾರಣದಿಂದ
2018ರಲ್ಲಿ ಅವರನ್ನು ಸಿಪಿಎಂ ಕೇಂದ್ರ ಸಮಿತಿ ಸದಸ್ಯ ಸ್ಥಾನದಿಂದ ತೆಗೆದುಹಾಕಲಾಯಿತು.

ಸಿಪಿಎಂನಿಂದ ಹೊರಹಾಕಿದ ನಂತರ ಪ್ರಜಾ ಸಂಘರ್ಷ ಸಮಿತಿ (ಪಿಎಸ್‌ಎಸ್‌) ಸ್ಥಾಪಿಸಿದರು. ಸಮಿತಿಯ ಮೂಲಕ ಚಳವಳಿಗಳನ್ನು ಮುಂದುವರಿಸಿದ್ದರು.70ರ ಪ್ರಾಯದಲ್ಲಿಯೂ ಹೋರಾಟದ ಕಸುವು ಬತ್ತಿರಲಿಲ್ಲ. ಇತ್ತೀಚೆಗೆಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ ಬಗರ್ ಹುಕುಂ ಸಾಗುವಳಿ ಹೋರಾಟವನ್ನು ಗ್ರಾಮ ಮಟ್ಟಕ್ಕೆ ಕೊಂಡೊಯ್ದಿದ್ದರು.

2023ರ ವಿಧಾನಸಭಾ ಚುನಾವಣೆಯಲ್ಲಿ ಸ್ಪರ್ಧಿಸಲು ಸಿದ್ಧತೆ ಸಹ ನಡೆಸಿದ್ದರು. ಪಿಎಸ್‌ಎಸ್ ಮೂಲಕ ಜಿಲ್ಲೆಯ ಐದುವಿಧಾನಸಭಾ ಕ್ಷೇತ್ರಗಳಲ್ಲಿ ಅಭ್ಯರ್ಥಿಗಳನ್ನು ಕಣಕ್ಕಿಳಿಸಲು ಚಿಂತಿಸಿದ್ದರು.ಅವರ ನಿಧನದ ಮೂಲಕ ಜನಪರ ಹೋರಾಟದ ಶಕ್ತಿಯೊಂದು ಈ ನೆಲದಿಂದ ಕಳಚಿದೆ.

ಸಿಪಿಎಂನಿಂದ ಹೊರಕ್ಕೆ: ರಾಜಕಾರಣದಲ್ಲಿ ಹಲವು ಏಳುಬೀಳುಗಳನ್ನು ಕಂಡವರು ಶ್ರೀರಾಮರೆಡ್ಡಿ. ಭೂವ್ಯವಹಾರ, ಹಣಕಾಸು ದುರುಪಯೋಗ, ಅನುಚಿತ ವರ್ತನೆಯ ಆರೋಪಗಳನ್ನು ಸಹ ಎದುರಿಸಿದ್ದರು. ಈ ಕಾರಣದಿಂದ 2018ರಲ್ಲಿ ಅವರನ್ನು ಸಿಪಿಎಂ ಕೇಂದ್ರ ಸಮಿತಿ ಸದಸ್ಯ ಸ್ಥಾನದಿಂದ ತೆಗೆದುಹಾಕಲಾಗಿತ್ತು.

ಸಿಪಿಎಂನಿಂದ ಹೊರಹಾಕಿದ ನಂತರ ಜಿಲ್ಲೆಯಲ್ಲಿ ಪ್ರಜಾ ಸಂಘರ್ಷ ಸಮಿತಿಯನ್ನು ಶ್ರೀರಾಮರೆಡ್ಡಿ ಕಟ್ಟಿದರು. ಜಿಲ್ಲೆಯ ಐದು ವಿಧಾನಸಭಾ ಕ್ಷೇತ್ರಗಳಲ್ಲಿಯೂ ಪ್ರಜಾ ಸಂಘರ್ಷ ಸಮಿತಿಯ ಘಟಕಗಳಿವೆ. ಸಮಿತಿಯ ಮೂಲಕ ಹೋರಾಟಗಳನ್ನು ಮುಂದುವರಿಸಿದ್ದರು. 2023ರ ವಿಧಾನಸಭಾ ಚುನಾವಣೆಯಲ್ಲಿ ಐದು ಕ್ಷೇತ್ರಗಳಲ್ಲಿ ಅಭ್ಯರ್ಥಿಗಳನ್ನು ಕಣಕ್ಕಿಳಿಸಲಾಗುವುದು ಎಂದು ಘೋಷಿಸಿದ್ದರು.

ಶ್ರೀರಾಮರೆಡ್ಡಿ ನಿಧನದ ಮೂಲಕ ಜಿಲ್ಲೆಯ ಹಾಗೂ ನಾಡಿನಲ್ಲಿ ಹೋರಾಟದ ಕೊಂಡಿಯೊಂದು ನೆಲದಿಂದ ಕಳಚಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT