ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಾಗೇಪಲ್ಲಿ: ಜನಪರ ನಾಯಕ ಜಿ.ವಿ.ಶ್ರೀರಾಮರೆಡ್ಡಿ ಅಸ್ತಂಗತ

ಬಾಗೇಪಲ್ಲಿ ತಾಲ್ಲೂಕಿನಲ್ಲಿ ಶೈಕ್ಷಣಿಕ ಕ್ರಾಂತಿ
Last Updated 16 ಏಪ್ರಿಲ್ 2022, 4:35 IST
ಅಕ್ಷರ ಗಾತ್ರ

ಬಾಗೇಪಲ್ಲಿ: ಅಧಿಕಾರದಲ್ಲಿ ಇದ್ದರೂ, ಇಲ್ಲದಿದ್ದರೂ ನಿರಂತರ ಜನಪರವಾಗಿ ಚಿಂತಿಸುತ್ತ ಅದಕ್ಕೊಂದು ತಾರ್ಕಿಕ ಅಂತ್ಯ ಹಾಡುವವರೆಗೆ ಹೋರಾಟಗಳನ್ನು ರೂಪಿಸುತ್ತಿದ್ದವರು ಮಾಜಿ ಶಾಸಕ ಜಿ.ವಿ.ಶ್ರೀರಾಮರೆಡ್ಡಿ.

ಅವರ ನಿಧನಕ್ಕೆ ಬಾಗೇಪಲ್ಲಿ ಮತ್ತು ಗುಡಿಬಂಡೆ ತಾಲ್ಲೂಕಿನ ಜನರು ಕಂಬನಿ ಮಿಡಿಯುತ್ತಿದ್ದಾರೆ.ತಮ್ಮ ಇಡೀ ಬದುಕನ್ನು ಹೋರಾಟಗಳಲ್ಲಿಯೇ ಸವೆಸಿದರು ಜಿ.ವಿ.ಶ್ರೀರಾಮರೆಡ್ಡಿ.

ರಾಜ್ಯದಲ್ಲಿ ಸಿಪಿಎಂನ ಕೆಂಬಾವುಟವನ್ನು ಬಾಗೇಪಲ್ಲಿ ಮತ್ತು ಗುಡಿಬಂಡೆ ತಾಲ್ಲೂಕಿನಲ್ಲಿ ಪ್ರಬಲವಾಗಿಯೇ ಹಾರಿಸಿದ್ದರು.ಜನರ ಮಧ್ಯೆಯೇ ಬದುಕಿದ, ಜನರ ಸಮಸ್ಯೆಗಳಿಗಾಗಿಯೇ ನಿರಂತರ ಹೋರಾಟಗಳನ್ನು ರೂಪಿಸಿದರು.ಬಾಗೇಪಲ್ಲಿ ಎನ್ನುವ ಬರಡು ಭೂಮಿಯಲ್ಲಿ ಕೆಂಬಾವುಟವನ್ನು ಬೆಳೆಸಿದರು.ನಿಷ್ಠೂರವಾದಿಯಾಗಿದ್ದ ಅವರು ನಂಬಿದ ಸಿದ್ಧಾಂತಗಳನ್ನು ಎಂದೂ ಬಿಟ್ಟು ಕೊಡಲಿಲ್ಲ.

ಚಿಂತಾಮಣಿ ತಾಲ್ಲೂಕಿನ ಬೈರೇಬಂಡ ಗ್ರಾಮ ಶ್ರೀರಾಮರೆಡ್ಡಿ ವಿದ್ಯಾರ್ಥಿ ದೆಸೆಯಲ್ಲಿಯೇ ಎಡಪಂಥೀಯ ಚಿಂತನೆಗಳ ಪ್ರಭಾವಕ್ಕೆ ಒಳಗಾದವರು. ಭಾರತ ವಿದ್ಯಾರ್ಥಿ ಒಕ್ಕೂಟ (ಎಸ್‍ಎಫ್‍ಐ) ಮತ್ತು ಯುವಜನ ಒಕ್ಕೂಟ (ಡಿವೈಎಫ್‍ಐ) ಸಂಸ್ಥಾಪಕ ಸದಸ್ಯರಲ್ಲಿ ಒಬ್ಬರಾಗಿದ್ದವರು. ವಿದ್ಯಾರ್ಥಿ, ಯುವಜನರನ್ನು ಕಟ್ಟಿಕೊಂಡು ಚಿಂತಾಮಣಿಯಲ್ಲಿ ಹೋರಾಟಗಳಿಗೆ ಮುನ್ನುಡಿ ಬರೆದರು.

1996 ಮತ್ತು 2004ರಲ್ಲಿ ಬಾಗೇಪಲ್ಲಿ ಕ್ಷೇತ್ರದಿಂದ ಶಾಸಕರಾಗಿದ್ದ ಶ್ರೀರಾಮರೆಡ್ಡಿ ವಿಧಾನ ಸಭೆಯ ಉತ್ತಮ ಸಂಸದೀಯ ಪಟುವಾಗಿದ್ದರು. ಅಧಿವೇಶನದಲ್ಲಿ ವಿಚಾರ ಮಂಡಿಸುವಾಗಿ ನಿಖರವಾದ ದಾಖಲೆಗಳು, ಅಂಕಿ ಅಂಶಗಳನ್ನು ಇರಿಸಿಕೊಂಡು ನಿರರ್ಗಳವಾಗಿ ಮಾತನಾಡುತ್ತಿದ್ದರು. ತಮ್ಮ ಹರಿತವಾದ ಮತ್ತು ಮೊನಚಾದ ಮಾತುಗಳಿಂದ ಸರ್ಕಾರಕ್ಕೆ ಚಾಟಿ ಬೀಸುತ್ತಿದ್ದರು.ಚಿಕ್ಕಬಳ್ಳಾಪುರ, ಕೋಲಾರ ಸೇರಿದಂತೆ ಬಯಲು ಸೀಮೆಯ ಜಿಲ್ಲೆಗಳಿಗೆಶಾಶ್ವತ ನೀರಾವರಿ ವಿಚಾರವನ್ನು ಸದನದಲ್ಲಿ ಪ್ರಮುಖವಾಗಿ ಪ್ರಸ್ತಾಪಿಸಿದ್ದರು.

ನೀರಾವರಿಗೆ ಆದ್ಯತೆ: ವಂಡಮಾನ್ ಹೊಸ ಕೆರೆ ನಿರ್ಮಾಣ, ಚಿತ್ರಾವತಿ ಅಣೆಕಟ್ಟೆ ನಿರ್ಮಾಣ, ಹಂಪಸಂದ್ರ ಹೊಸ ಕೆರೆ ನಿರ್ಮಾಣ ಶ್ರೀರಾಮರೆಡ್ಡಿ ಅ‌ವರ ನೇತೃತ್ವದಲ್ಲಿ ನಡೆಯಿತು.

ಪರಮಶಿವಯ್ಯ ವರದಿ ಅನ್ವಯ ಪಶ್ಚಿಮಘಟ್ಟಗಳ ನೀರನ್ನು ಬಯಲು ಸೀಮೆಯ ಜಿಲ್ಲೆಗಳಿಗೆ ಹರಿಸುವಂತೆ, ಶಾಶ್ವತ ನೀರಾವರಿ ಕಲ್ಪಿಸುವಂತೆ ಒತ್ತಾಯಿಸಿ ಬಾಗೇಪಲ್ಲಿಯಿಂದ ಬೆಂಗಳೂರಿಗೆ 10 ಸಾವಿರ ಜನರ ಜತೆ ಪಾದಯಾತ್ರೆ ಮಾಡಿದ್ದರು.

ಹೋರಾಟಗಾರರ ಬೆನ್ನೆಲುಬು: ಅಂಗನವಾಡಿ ಕಾರ್ಯಕರ್ತೆಯರು, ಬಿಸಿಯೂ ನೌಕರರು, ಗ್ರೂಪ್ ಡಿ ನೌಕರರು, ಅಲ್ಪ ಸಂಖ್ಯಾತರು, ಮಹಿಳೆಯರು, ದಲಿತರು, ವಿದ್ಯಾರ್ಥಿಗಳ ಮೇಲೆ ರಾಜ್ಯದ ಯಾವುದೇ ಮೂಲೆಯಲ್ಲಿ ದೌರ್ಜನ್ಯ ನಡೆದರೂ ಅದರ ವಿರುದ್ಧ ವಿಧಾನಸೌಧದಲ್ಲಿ ಮತ್ತು ಹೊರಗೆ ಧ್ವನಿ ಎತ್ತುತ್ತಿದ್ದರು. ಅವರ ಆಸ್ತಿಯೇ ಜನರು. ಅವರು ಪಟ್ಟಣದಲ್ಲಿ ವಾಸಿಸುತ್ತಿದ್ದ ಎರಡು ಕೋಣೆಯ ಮನೆಯೊಳಗೆ ಒಂದು ಕೋಣೆಯ ತುಂಬಾ ಪುಸ್ತಕಗಳೇ ತುಂಬಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT