ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜನ ವಿರೋಧಿ ನೀತಿ ವಿರುದ್ಧ ಹೋರಾಟ- ಮಿಟ್ಟೇಮರಿಯಲ್ಲಿ ಸಿಪಿಎಂ ಬಹಿರಂಗ ಸಭೆ

Last Updated 6 ಅಕ್ಟೋಬರ್ 2021, 3:37 IST
ಅಕ್ಷರ ಗಾತ್ರ

ಬಾಗೇಪಲ್ಲಿ: ಕ್ಷೇತ್ರದ ಜನರ ಸಮಸ್ಯೆಗಳ ಪರ ಹಾಗೂ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳ ಜನ ವಿರೋಧಿನೀತಿಗಳ ವಿರುದ್ಧ ಹೋರಾಟ ಮಾಡುತ್ತಿರುವ ಸಿಪಿಎಂನ್ನು ಕೃಷಿಕೂಲಿಕಾರ್ಮಿಕರು ಸೇರಿದಂತೆ ಎಲ್ಲಾ ವರ್ಗದ ಜನರು ಬೆಂಬಲಿಸಬೇಕು ಎಂದು ಭಾರತ ಕಮ್ಯೂನಿಸ್ಟ್ ಪಕ್ಷ (ಮಾರ್ಕ್ಸ್‌ವಾದಿ) ಜಿಲ್ಲಾ ಸಮಿತಿ ಕಾರ್ಯದರ್ಶಿ ಜಯರಾಮರೆಡ್ಡಿ ಕರೆ ನೀಡಿದರು.

ತಾಲ್ಲೂಕಿನ ಮಿಟ್ಟೇಮರಿ ಬಸ್ ನಿಲ್ದಾಣದಲ್ಲಿ ಮಂಗಳವಾರ ಸಿಪಿಎಂನ ಮಿಟ್ಟೇಮರಿ ಸ್ಥಳೀಯ ಸಮಿತಿಯ 5ನೇ ಸಮ್ಮೇಳನದ ಅಂಗವಾಗಿ ಬಹಿರಂಗ ಸಭೆಯನ್ನು ಉದ್ಘಾಟಿಸಿ ಮಾತನಾಡಿದರು.

ಕ್ಷೇತ್ರದಲ್ಲಿ ಭೂ ಹೋರಾಟಗಳು, ಮನೆ-ನಿವೇಶನ ನೀಡಲು, ಉಳುವವನಿಗೆ ಭೂಮಿ ನೀಡಬೇಕು, ಜನರಿಗೆ ಮೂಲ ಸೌಲಭ್ಯಗಳನ್ನು ಕಲ್ಪಿಸಬೇಕು ಎಂದು ಕೆಂಬಾವುಟದ ನೇತೃತ್ವದಲ್ಲಿ ಹೋರಾಟಗಳನ್ನು ಮಾಡುತ್ತಿದ್ದೇವೆ. ಮತದಾರರು ಚುನಾವಣೆಗಳಲ್ಲಿ ಜನಪರ ಕೆಲಸ ಮಾಡುವವರಿಗೆ ಮತ ನೀಡಬೇಕು. ಆದರೆ ಜನರ ಸಮಸ್ಯೆಗಳನ್ನು ಆಲಿಸದ ನಪ್ರತಿನಿಧಿಗಳನ್ನು ಆಯ್ಕೆ ಮಾಡುತ್ತಿರುವುದರಿಂದ ಕ್ಷೇತ್ರದಲ್ಲಿ ಯಾವುದೇ ಶಾಶ್ವತವಾದ ಕಾರ್ಯಗಳು ಆಗಿಲ್ಲ ಎಂದು ಆರೋಪಿಸಿದರು.

ಸಿಪಿಎಂನ ತಾಲ್ಲೂಕು ಕಾರ್ಯದರ್ಶಿ ಮಹಮದ್ ಅಕ್ರಂ ಮಾತನಾಡಿ, ಪ್ರತಿ 5 ವರ್ಷಕ್ಕೊಮ್ಮೆ ಸಿಪಿಎಂ ಪಕ್ಷದಿಂದ ಗ್ರಾಮ, ತಾಲ್ಲೂಕು, ಜಿಲ್ಲಾ, ರಾಜ್ಯ ಹಾಗೂ ಕೇಂದ್ರ ಸಮಿತಿಗಳ ಸಮ್ಮೇಳನಗಳನ್ನು ಮಾಡಲಾಗುವುದು. ಸಿಪಿಎಂ ಪಕ್ಷದಲ್ಲಿ ಹೈಕಮಾಂಡ್ ಇರುವುದಿಲ್ಲ. ಗ್ರಾಮ ಮಟ್ಟದಿಂದ ಕೇಂದ್ರಸಮಿತಿಯ ಕಾರ್ಯದರ್ಶಿಗಳು, ಸಮಿತಿ ಸದಸ್ಯರ ತೀರ್ಮಾನಗಳೇ ಅಂತಿಮವಾಗಿರುತ್ತದೆ. ಸಮ್ಮೇಳನಗಳಲ್ಲಿ ಆಯಾ ಪ್ರದೇಶಗಳ ಜನರ ಸಮಸ್ಯೆ, ರಾಜಕೀಯ ಪರಿಸ್ಥಿತಿ, ಮುಂದಿನ 5 ವರ್ಷಗಳ ಹೋರಾಟದ ರೂಪುರೇಷೆಗಳು ಸೇರಿದಂತೆ ವಿವಿಧ ವಿಷಯಗಳ ಬಗ್ಗೆ ಚರ್ಚೆ ಮಾಡಲಾಗುವುದು. ಸಮ್ಮೇಳನಗಳಲ್ಲಿ ಕಾರ್ಯದರ್ಶಿಗಳನ್ನಾಗಿ ಸದಸ್ಯರುಗಳೇ ಆಯ್ಕೆ ಮಾಡುತ್ತಾರೆ ಎಂದು ತಿಳಿಸಿದರು.

ಸಿಪಿಎಂ ಜಿಲ್ಲಾ ಸಮಿತಿ ಸದಸ್ಯ ಪಿ.ಮಂಜುನಾಥರೆಡ್ಡಿ ಮಾತನಾಡಿ, ಕ್ಷೇತ್ರದಲ್ಲಿ ಕಾಂಗ್ರೆಸ್‌ನ ಶಾಸಕರು, ಬಿಜೆಪಿಯ ಸಂಸದರು ಆಯ್ಕೆ ಆಗಿದ್ದರೂ, ಕ್ಷೇತ್ರದಲ್ಲಿ ಶಾಶ್ವತವಾಗಿ ಕುಡಿಯುವ ನೀರು, ಗ್ರಾಮಗಳಿಗೆ ಸಂಪರ್ಕಿಸುವ ರಸ್ತೆ, ಬಡಜನರಿಗೆ ನಿವೇಶನ-ಮನೆ ಹಂಚಿಕೆ ಮಾಡಿಲ್ಲ. ಕಾಂಗ್ರೆಸ್, ಬಿಜೆಪಿ ಜನವಿರೋಧಿ ಸರ್ಕಾರಗಳು ಆಗಿವೆ. ಸಾಮಾನ್ಯ ಜನರ ಬದುಕುಗಳ ಜೊತೆ ಚೆಲ್ಲಾಟ ಆಡುತ್ತಿವೆ. ಕ್ಷೇತ್ರದಲ್ಲಿ ಸಿಪಿಎಂ ಗೆ ಜನರೇ ಶಕ್ತಿ ಆಗಿದ್ದಾರೆ. ಮತ್ತಷ್ಟು ಶಕ್ತಿ ತುಂಬಲು ಐಕ್ಯವಾಗಿ ಸಂಘಟಿತರಾಗಬೇಕು ಎಂದು ತಿಳಿಸಿದರು.

ಬಹಿರಂಗ ಸಭೆಯಲ್ಲಿ ಸಿಪಿಎಂನ ಜಿಲ್ಲಾ ಸಮಿತಿ ಸದಸ್ಯರಾದ ಹೇಮಚಂದ್ರ, ಬಿ.ಆಂಜನೇಯರೆಡ್ಡಿ, ಶ್ರೀರಾಮನಾಯಕ್, ಅಶ್ವತಪ್ಪ, ತಾಲ್ಲೂಕು ಸಮಿತಿ ಸದಸ್ಯರಾದ ಸೀನೇನಾಯಕ್, ಜಿ.ಮುಸ್ತಾಫ, ಮಿಟ್ಟೇಮರಿ ಸ್ಥಳೀಯ ಸಮಿತಿ ಸದಸ್ಯರಾದ ಶೋಭಾರಾಣಿ, ನಾರಾಯಣಸ್ವಾಮಿ, ಶ್ರೀನಿವಾಸ್, ಮುಖಂಡರಾದ ವೆಂಕಟರಾಮರೆಡ್ಡಿ, ರಾಮರೆಡ್ಡಿ, ವೆಂಕಟರಾಮರೆಡ್ಡಿ, ಒಬಳರಾಜು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT