ಚಿಂತಾಮಣಿ: ತಾಲ್ಲೂಕಿನ ಕೈವಾರ ಗ್ರಾಮದಲ್ಲಿ ಆಗಸ್ಟ್ 5ರಂದು ಮನೆಗೆ ನುಗ್ಗಿ ಒಂಟಿ ಮಹಿಳೆಯ ಕತ್ತು ಕೊಯ್ದು ಕೊಲೆ ಮಾಡಿ ಪರಾರಿಯಾಗಿದ್ದ ಆರೋಪಿಯನ್ನು ಪೊಲೀಸರು ಶನಿವಾರ ಬಂಧಿಸಿದ್ದಾರೆ.
ಶಿಡ್ಲಘಟ್ಟ ತಾಲ್ಲೂಕಿನ ತುಮ್ಮನಹಳ್ಳಿ ಗ್ರಾಮದ ಟಿ.ಎಸ್.ದೇವರಾಜು (30) ಬಂಧಿತನಾಗಿರುವ ಆರೋಪಿ.
ಕೃತ್ಯಕ್ಕೆ ಬಳಸಿದ್ದ ಬೈಕ್, ಕದ್ದುಕೊಂಡು ಹೋಗಿದ್ದ ಒಂದು ₹1ಲಕ್ಷ ಮೌಲ್ಯದ ಕತ್ತಿನ ಸರ ಮಾರಾಟ ಮಾಡಿ ಗಳಿಸಿದ್ದ ₹90 ಸಾವಿರ ವಶಪಡಿಸಿಕೊಳ್ಳಲಾಗಿದೆ. ತನಿಖೆಯ ನಂತರ ಆರೋಪಿಯನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗುವುದು ಎಂದು ಎಸ್‌ಪಿ ಕುಶಾಲ್ ಚೌಕ್ಸೆ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.
ಕೈವಾರ ಗ್ರಾಮದ ಸರ್ಕಾರಿ ಶಾಲೆಯ ಮುಂಭಾಗದಲ್ಲಿ ವಾಸವಾಗಿದ್ದ ಲಲಿತಮ್ಮ (67) ಅವರನ್ನು ಕೊಲೆ ಮಾಡಿ ಆಕೆಯ ಕುತ್ತಿಗೆಯಲ್ಲಿದ್ದ ಬಂಗಾರದ ಸರವನ್ನು ಕಿತ್ತುಕೊಂಡು ಪರಾರಿಯಾಗಿದ್ದನು. ಈ ಬಗ್ಗೆ ಗ್ರಾಮಾಂತರ ಠಾಣೆಯಲ್ಲಿ ದೂರು ದಾಖಲಾಗಿತ್ತು. ಜನನಿಬಿಡ ಪ್ರದೇಶದಲ್ಲಿ ಹಗಲಲ್ಲೇ ಕೊಲೆ ಆಗಿದ್ದರಿಂದ ಸಾರ್ವಜನಿಕರು ಆತಂಕಗೊಂಡಿದ್ದರು. ಪೊಲೀಸ್ ಇಲಾಖೆ ಇದನ್ನು ಸವಾಲಾಗಿ ಪರಿಗಣಿಸಿ ಆರೋಪಿಯ ಪತ್ತೆಗಾಗಿ ಡಿವೈಎಸ್ಪಿ ಮುರಳೀಧರ್ ನೇತೃತ್ವದಲ್ಲಿ ವಿಶೇಷ ತಂಡವನ್ನು ರಚಿಸಲಾಗಿತ್ತು ಎಂದು ತಿಳಿಸಿದರು.
ತಂಡವು ವಿವಿಧ ಆಯಾಮಗಳಲ್ಲಿ ಸ್ಥಳ ಪರಿಶೀಲಿಸಿ, ಮೃತರ ಸಂಬಂಧಿಕರು ಮತ್ತು ಸ್ಥಳೀಯರನ್ನು ವಿಚಾರಣೆ ನಡೆಸಿದ್ದರು. ಆ ಭಾಗದಲ್ಲಿರುವ ಎಲ್ಲ ಸಿಸಿ ಕ್ಯಾಮರಾ ಪರಿಶೀಲಿಸಿ ತಾಂತ್ರಿಕ ಮತ್ತು ವೈಜ್ಞಾನಿಕ ತನಿಖಾ ಪದ್ಧತಿ ಬಳಸಿ ಆರೋಪಿಯನ್ನು ಪತ್ತೆ ಮಾಡಿದೆ. ಆರೋಪಿ ಕುಟುಂಬಕ್ಕೆ ಪರಿಚಿತನಾಗಿದ್ದು, ಆತನೊಂದಿಗೆ ಹಣಕಾಸು ವ್ಯವಹಾರವೂ ಇದ್ದು ಆಗಾಗ ಮನೆಗೆ ಬರುತ್ತಿದ್ದನು ಎಂದು ಮಾಹಿತಿ ನೀಡಿದರು.
ಕೃತ್ಯ ನಡೆದ ದಿನ ಮೃತರ ಮಗ ಮತ್ತು ಸೊಸೆ ಕೆಲಸಕ್ಕೆ ತೆರಳಿದ್ದು ಒಬ್ಬರೇ ಮನೆಯಲ್ಲಿದ್ದರು. ಕೃತ್ಯ ನಡೆದ ಒಂದು ವಾರದ ಹಿಂದೆ ಆರೋಪಿ ಮನೆಗೆ ಬಂದಿದ್ದ. ಹಣಕಾಸಿನ ವ್ಯವಹಾರದಿಂದ ಗಲಾಟೆಯಾಗಿ ಕೊಲೆ ಮಾಡಿರಬಹುದು. ಯಾವ ಕಾರಣದಿಂದ ಕೊಲೆ ಮಾಡಿದ್ದಾನೆ ಎಂಬುದು ಇನ್ನೂ ಖಚಿತವಾಗಿಲ್ಲ. ಆರೋಪಿಯ ವಿಚಾರಣೆಯ ನಂತರ ಕಾರಣ ಬಯಲಾಗುತ್ತದೆ ಎಂದರು.
ಹೆಚ್ಚುವರಿ ಎಸ್‌ಪಿ ರಾಜಾ ಇಮಾಮ್ ಖಾಸಿಮ್, ಡಿವೈಎಸ್ಪಿ ಮುರಳೀಧರ್ ಪತ್ರಿಕಾಗೋಷ್ಠಿಯಲ್ಲಿ ಪಾಲ್ಗೊಂಡಿದ್ದರು.
ಗ್ರಾಮಾಂತರ ಠಾಣೆಯ ಇನ್‌ಸ್ಪೆಕ್ಟರ್ ಶಿವರಾಜ್, ಮಮತ, ಪದ್ಮ, ಪುನೀತ್ ನಂಜರಾಯ್, ಪ್ರಕಾಶ್, ಸಂದೀಪ್ ಕುಮಾರ್, ಸುರೇಶ್, ವಿಶ್ವನಾಥ್, ನರೇಶ್, ವೆಂಕಟರವಣ, ಅನಿಲ್ ಕುಮಾರ್, ನಂದೀಶ್ ಕುಮಾರ್, ಚಂದ್ರಪ್ಪ, ಕೃಷ್ಣ, ನಾಗರಾಜ್, ಚೆನ್ನಕೇಶವಗೌಡ, ರವೀಂದ್ರಕುಮಾರ್, ಗಣಕಯಂತ್ರ ವಿಭಾಗದ ವೆಂಕಟರವಣಪ್ಪ, ಅರುಣ್, ಪವನ್, ಬಸವರಾಜ್ ತೆನಿಗಿ, ಶ್ರೀನಿವಾಸ್, ಚೌಡಪ್ಪ, ವೀರಭದ್ರಾಚಾರಿ, ತಿಮ್ಮರಾಜು, ವೇಣುಗೋಪಾಲ ಪತ್ತೆ ತಂಡದಲ್ಲಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.