ಗುರುವಾರ , ಜುಲೈ 29, 2021
23 °C

ಮಹಿಳೆಯಿಂದ ಕೋಟ್ಯಂತರ ವಂಚನೆ; ಮೂವರ ಬಂಧನ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಚಿಕ್ಕಬಳ್ಳಾಪುರ: ಇಲ್ಲಿನ ಪ್ರಶಾಂತ ನಗರದ ಮಹಿಳೆಯೊಬ್ಬರು ಹೈದರಾಬಾದ್ ಉದ್ಯಮಿಯೊಬ್ಬರಿಗೆ ಕೋಟ್ಯಂತರ ರೂಪಾಯಿ ವಂಚಿಸಿದ್ದಾರೆ. ಈ ಸಂಬಂಧ ಮೂವರನ್ನು ಪೊಲೀಸರು ಬಂಧಿಸಿದ್ದಾರೆ.

ಅರ್ಚನಾ ಎಂಬುವವರು ಹೈದರಾಬಾದ್ ಉದ್ಯಮಿ ವಂಶಿಕೃಷ್ಣ ಅವರಿಂದ ₹ 2.2 ಕೋಟಿ ಹಣ ಪಡೆದಿದ್ದರು. ಹಣ ವಾಪಸ್ ಕೇಳಿದರೆ ಕೊಲೆ ಬೆದರಿಕೆ ಹಾಕಿಸಿದ್ದರು. ಈ ಸಂಬಂಧ ವಂಶಿಕೃಷ್ಣ ಪೊಲೀಸರಿಗೆ ದೂರು ನೀಡಿದ್ದರು. ಅರ್ಚನಾ ತಂಗಿಯ ಗಂಡ ಶ್ರೀಪತಿ, ತಮ್ಮ ಶ್ರೀಹರಿ ಹಾಗೂ ಶಂಕರ್ ಎಂಬುವವರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಆರೋಪಿ ಅರ್ಚನಾ ಕೋವಿಡ್ ಕಾರಣದಿಂದ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತದ್ದು ಅಲ್ಲಿ ಪೊಲೀಸ್ ಪಹರೆ ಹಾಕಲಾಗಿದೆ.

ಶನಿವಾರ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಜಿ.ಕೆ.ಮಿಥುನ್ ಕುಮಾರ್ ನೇತೃತ್ವದಲ್ಲಿ ಪೊಲೀಸರು ಅರ್ಚನಾ ಮನೆಯ ಮೇಲೆ ದಾಳಿ ನಡೆಸಿದರು. ₹ 75 ಸಾವಿರ ನಗದು ಸೇರಿದಂತೆ ಕೆಲವು ದಾಖಲೆಗಳನ್ನು ವಶಕ್ಕೆ ಪಡೆದರು.

’ಕಳೆದ ವರ್ಷದ ಆಗಸ್ಟ್‌ನಲ್ಲಿ ಸಿವಿಲ್ ಕೆಲಸಕ್ಕೆ ಸಂಬಂಧಿಸಿದಂತೆ ವಂಶಿಕೃಷ್ಣ ಅವರಿಗೆ ಹಣ ಅಗತ್ಯವಾಗಿತ್ತು. ಆಗ ಅವರಿಗೆ ಅರ್ಚನಾ ಪರಿಚಯವಾಗಿದೆ. ರೈಸ್‌ಪುಲ್ಲಿಂಗ್ ವಸ್ತುವನ್ನು ಕಂಪನಿಗೆ ಮಾರಾಟ ಮಾಡಿದ್ದೇನೆ. ಅವರು ₹ 6.50 ಲಕ್ಷ ಕೋಟಿಯನ್ನು ನೀಡಿದ್ದಾರೆ. ಆ ಹಣವನ್ನು ಪಡೆಯಲು ನಾನು ₹ 24 ಕೋಟಿ ತೆರಿಗೆ ಪಾವತಿಸಬೇಕು. ಆ ಹಣ ಪಾವತಿಸಿದ 48 ಗಂಟೆಯಲ್ಲಿ ಪೂರ್ಣ ಹಣ ದೊರೆಯುತ್ತದೆ. ಆ ಹಣ ದೊರೆತರೆ ನಾನು ₹ 10 ಕೋಟಿ ಹೂಡಿಕೆ ಮಾಡುವೆ ಎಂದು ವಂಶಿಕೃಷ್ಣ ಅವರಿಗೆ ತಿಳಿಸಿದ್ದಾರೆ. ಅವರಿಂದ ₹ 2.2 ಕೋಟಿ ಪಡೆದಿದ್ದಾರೆ’ ಎಂದು ಜಿ.ಕೆ.ಮಿಥುನ್ ಕುಮಾರ್ ತಿಳಿಸಿದ್ದಾರೆ.

ಸಾಕಷ್ಟು ವ್ಯಕ್ತಿಗಳಿಗೆ ಇವರು ₹ 10 ಲಕ್ಷ, ₹ 20 ಲಕ್ಷ ಪಡೆದು ವಂಚಿಸಿದ್ದಾರೆ. ವಿಚಾರಣೆ ನಂತರ ಮತ್ತಷ್ಟು ಮಾಹಿತಿ ದೊರೆಯಲಿದೆ. ಹಣ ಕೇಳಿದಾಗ ಬಂಧಿತ ಶಂಕರ್, ವಂಶಿಕೃಷ್ಣ ಅವರಿಗೆ ಬೆದರಿಕೆ ಹಾಕಿದ್ದಾನೆ. ಶಂಕರ್ ಕಲಾವಿದರಾಗಿದ್ದರು ಎನ್ನಲಾಗುತ್ತಿದೆ. ಅರ್ಚನಾ ನವದೆಹಲಿಯ ಐಶಾರಾಮಿ ಹೋಟೆಲ್‌ನಲ್ಲಿ ತಂಗಿದ್ದ ಚಿತ್ರಗಳು ದೊರೆತಿವೆ. ಬ್ಯಾಂಕ್ ದಾಖಲೆಗಳನ್ನು ವಶಕ್ಕೆ ಪಡೆದಿದ್ದೇವೆ. ಈ ವಂಚನೆಯ ಹಿಂದೆ ಇನ್ನೂ ಯಾರು ಯಾರು ಇದ್ದಾರೆ ಎನ್ನುವುದು ತನಿಖೆಯ ನಂತರ ತಿಳಿಯಲಿದೆ ಎಂದು ಹೇಳಿದರು.

ಆರ್‌ಬಿಐನ ನಕಲಿ ದಾಖಲೆಗಳನ್ನು ಸೃಷ್ಟಿಸಿ ಅದಕ್ಕೆ ನಕಲು ಸಹಿ ಮಾಡಿ ನನಗೆ ನೀಡಿದ್ದರು. ನನ್ನ ಹಣ ವಾಪಸ್ ಕೇಳಿದರೆ ಪ್ರಾಣ ಬೆದರಿಕೆ ಸಹ ಹಾಕಿದರು ಎಂದು ವಂಶಿಕೃಷ್ಣ ದೂರಿನಲ್ಲಿ ತಿಳಿಸಿದ್ದಾರೆ.  

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು