ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸ್ವಯಂ ಬೆಳೆ ಸಮೀಕ್ಷೆ: ಕೇಂದ್ರದ ಮೆಚ್ಚುಗೆ

ಕುರುಬೂರಿನ ರೇಷ್ಮೆ ಕೃಷಿ ಮಹಾವಿದ್ಯಾಲಯದಲ್ಲಿ ನೂತನ ಸಭಾಂಗಣ ಉದ್ಘಾಟನೆ
Last Updated 19 ಸೆಪ್ಟೆಂಬರ್ 2020, 2:10 IST
ಅಕ್ಷರ ಗಾತ್ರ

ಚಿಂತಾಮಣಿ: ರಾಜ್ಯ ಸರ್ಕಾರವು ನೂತನವಾಗಿ ಜಾರಿಗೊಳಿಸಿರುವ ಸ್ವಯಂ ಬೆಳೆ ಸಮೀಕ್ಷೆ ಯೋಜನೆಯು ಕೇಂದ್ರ ಸರ್ಕಾರದ ಗಮನಸೆಳೆದಿದೆ. ಈ ಯೋಜನೆಯನ್ನು ದೇಶದಾದ್ಯಂತ ವಿಸ್ತರಿಸುವುದಾಗಿ ತಿಳಿಸಿರುವುದು ರಾಜ್ಯಕ್ಕೆ ಸಂದ ಗರಿಮೆ ಎಂದು ಕೃಷಿ ಸಚಿವ ಬಿ.ಸಿ.ಪಾಟೀಲ ತಿಳಿಸಿದರು.

ತಾಲ್ಲೂಕಿನ ಕುರುಬೂರಿನ ರೇಷ್ಮೆ ಕೃಷಿ ಮಹಾವಿದ್ಯಾಲಯದಲ್ಲಿ ಶುಕ್ರವಾರ ನೂತನ ಸಭಾಂಗಣ ಮತ್ತು ಕ್ರೀಡಾಂಗಣವನ್ನು ಉದ್ಘಾಟಿಸಿ ಮಾತನಾಡಿದರು.

ರಾಜ್ಯದಲ್ಲಿ ಸ್ವಯಂ ಬೆಳೆ ಸಮೀಕ್ಷೆ ಯಶಸ್ವಿಯಾಗಿ ಮುನ್ನಡೆಯುತ್ತಿದೆ. ಇದುವರೆಗೆ 1,31,997 ರೈತರು ಸ್ವಯಂ ಬೆಳೆ ಸಮೀಕ್ಷೆಯ ನೋಂದಣಿ ಮಾಡಿಕೊಂಡಿದ್ದಾರೆ. ಶೇ 47.58ರಷ್ಟು ಸಾಧನೆಯಾಗಿದೆ.ನಿಗದಿತ ಅವಧಿಯಲ್ಲಿ ಬೆಳೆ ಸಮೀಕ್ಷೆ ಮುಕ್ತಾಯಗೊಳಿಸಲು ಅಧಿಕಾರಿಗಳು ಶ್ರಮಿಸುತ್ತಿದ್ದಾರೆ. ರೈತರು ಸಮೀಕ್ಷೆಯಲ್ಲಿ ಪಾಲ್ಗೊಳ್ಳುತ್ತಿದ್ದಾರೆ ಎಂದರು.

ರೈತರ ಪಹಣಿಗಳಲ್ಲಿ ಬೆಳೆಗಳು ಸರಿಯಾಗಿ ನಮೂದಾಗದೆ ಪ್ರತಿವರ್ಷ ತೊಂದರೆ ಅನುಭವಿಸುತ್ತಿದ್ದರು. ಸರ್ಕಾರದ ಬೆಂಬಲ ಬೆಲೆ, ಬೆಳೆ ನಷ್ಟ ಪರಿಹಾರ ಸೇರಿದಂತೆ ವಿವಿಧ ಸೌಲಭ್ಯ ಪಡೆಯಲು ಪಹಣಿಗಳ ತಿದ್ದುಪಡಿಗಾಗಿ ಕಚೇರಿಗಳಿಗೆ ಪರದಾಡುತ್ತಿದ್ದರು. ರೈತರ ಸಮಸ್ಯೆ ನಿವಾರಿಸುವ ಸಲುವಾಗಿ ಸ್ವತ: ರೈತರೇ ತಮ್ಮ ಜಮೀನುಗಳಲ್ಲಿ ಬೆಳೆದ ಬೆಳೆಗಳನ್ನು ದಾಖಲಿಸುವುದೇ ಬೆಳೆ ಸಮೀಕ್ಷೆಯ ವಿಶೇಷ ಎಂದರು.

ಕೊರೊನಾ ಸೋಂಕು ನಿಯಂತ್ರಣಕ್ಕಾಗಿ ಜಾರಿಗೊಳಿಸಲಾದ ಲಾಕ್‌ಡೌನ್‌ ಕೃಷಿ ಕ್ಷೇತ್ರಕ್ಕೆ ಅನ್ವಯವಾಗದಂತೆ ಮಾಡಿದ್ದೇನೆ. ಕೃಷಿ ಕ್ಷೇತ್ರ ಸ್ಥಗಿತಗೊಂಡರೆ ಇಡೀ ದೇಶ ಸ್ಥಬ್ದವಾಗುತ್ತದೆ. ಜನರು ಹಸಿವಿನಿಂದ ಸಾಯಬೇಕಾಗುತ್ತದೆ ಎಂದು ತಿಳಿಸಿದರು.

ಕೋಲಾರ, ಚಿಕ್ಕಬಳ್ಳಾಪುರ ಸೇರಿದಂತೆ ಎಲ್ಲ ಜಿಲ್ಲೆಗಳಲ್ಲಿ ಉತ್ತಮ ಮಳೆಯಾಗಿದೆ. ಗುರಿಮೀರಿ ಬಿತ್ತನೆಯಾಗಿದೆ. ರಾಜ್ಯದ ಮೊದಲ ಕೃಷಿ ವಿಶ್ವವಿದ್ಯಾಲಯದ ಅಭಿವೃದ್ಧಿಗಾಗಿ ಮುಂದಿನ ದಿನಗಳಲ್ಲಿ ಹೆಚ್ಚಿನ ಅನುದಾನ ನೀಡುವುದಾಗಿ ಭರವಸೆ ನೀಡಿದರು.

ಶೇ 104 ರಷ್ಟು ಬಿತ್ತನೆ: ರಾಜ್ಯದಲ್ಲಿ ಗುರಿಮೀರಿ ಶೇ 104ರಷ್ಟು ಬಿತ್ತನೆಯಾಗಿದೆ. 2007 ರಲ್ಲಿ ಶೇ 98ರಷ್ಟು ಬಿತ್ತನೆಯಾಗಿತ್ತು. ಸೆಪ್ಟೆಂಬರ್ 16ವರೆಗೆ 756 ಮಿ.ಮೀ ವಾಡಿಕೆ ಮಳೆಯಾಗಬೇಕಿದ್ದು, 856 ಮಿ.ಮೀ ಮಳೆಯಾಗಿದೆ. ವಾಡಿಕೆಗಿಂದ ಶೇ 29ರಷ್ಟು ಅಧಿಕ ಮಳೆಯಾಗಿದೆ ಎಂದು ಮಾಹಿತಿ ನೀಡಿದರು.

ಕಾಲೇಜಿನ ಆವರಣದಲ್ಲಿ ಹಮ್ಮಿಕೊಂಡಿದ್ದ ವಸ್ತುಪ್ರದರ್ಶನ ಹಾಗೂ ಮಾರಾಟ ಕೇಂದ್ರ ಮತ್ತು ಗಿಡ ನೆಡುವ ಕಾರ್ಯಕ್ಕೆ ಚಾಲನೆ ನೀಡಿದರು. ಕೃಷಿ ಸಂಶೋಧನಾ ತಾಕುಗಳಿಗೆ ಭೇಟಿ ನೀಡಿದರು. ಗೋಡಂಬಿ, ಜಂಬುನೇರಳೆ, ಹುಣಸೆಯ ನೂತನ ತಳಿಗಳನ್ನು ಬಿಡುಗಡೆ ಮಾಡಿದರು.

ಬೆಂಗಳೂರು ಕೃಷಿ ವಿಶ್ವವಿದ್ಯಾಲಯದ ಕುಲಪತಿ ರಾಜೇಂದ್ರ ಪ್ರಸಾದ್, ರೇಷ್ಮೆ ಕೃಷಿ ಕಾಲೇಜಿನ ಮುಖ್ಯಸ್ಥ ವೆಂಕಟರಮಣ, ಕೃಷಿ ವಿಜ್ಞಾನ ಕೇಂದ್ರದ ಮುಖ್ಯಸ್ಥ ಮಂಜುನಾಥ್, ರಾಮಾಂಜನಿಗೌಡ, ಎಂ.ಸುರೇಶ್, ದಯಾನಂದ್, ಶ್ರೀರಾಮ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT