ಮಂಗಳವಾರ, ಮಾರ್ಚ್ 9, 2021
31 °C
ಪರಿಶಿಷ್ಟ ಪಂಗಡಗಳ ಅಭಿವೃದ್ಧಿ ನಿಗಮ ನೀಡುವ ಭೂಮಿ ಆಸೆಗೆ ಹೆತ್ತ ಮಗಳನ್ನೇ ಬೆದರಿಸಿ ಪತ್ನಿ ಎಂದು ತೋರಿಸಿದ!, ಮಗಳು ದೂರಿನಿಂದ ಬಯಲಾದ ಕೃತ್ಯ

ಮಗಳನ್ನೇ ಹೆಂಡತಿ ಎಂದ ಭೂಪ!

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Deccan Herald

ಚಿಕ್ಕಬಳ್ಳಾಪುರ: ಭೂರಹಿತ ಬಡ ಕೃಷಿ ಕೂಲಿ ಕಾರ್ಮಿಕರಿಗೆ ಭೂಮಿ ನೀಡುವ ‘ಭೂ ಒಡೆತನ ಯೋಜನೆ’ಯ ಭೂಮಿ ಆಸೆಗಾಗಿ ತಂದೆಯೊಬ್ಬ ನಕಲಿ ದಾಖಲೆಗಳನ್ನು ಸೃಷ್ಟಿಸಿ ಹೆತ್ತ ಮಗಳನ್ನೇ ಹೆಂಡತಿ ಎಂದು ಕರ್ನಾಟಕ ಪರಿಶಿಷ್ಟ ಪಂಗಡಗಳ ಅಭಿವೃದ್ಧಿ ನಿಗಮದ ಅಧಿಕಾರಿಗಳಿಗೆ ತೋರಿಸಿ ಭೂಮಿ ಮಂಜೂರು ಮಾಡಿಸಿಕೊಂಡಿರುವ ಪ್ರಕರಣ ತಡವಾಗಿ ಬೆಳಕಿಗೆ ಬಂದಿದೆ.

ಬಾಗೇಪಲ್ಲಿ ತಾಲ್ಲೂಕಿನ ಅಬ್ಬರವಾರಿಪಲ್ಲಿ ಗ್ರಾಮದ ವೆಂಕಟರಮಣಪ್ಪ ಎಂಬುವರು ಮಗಳು ರಜನಿ ಅವರನ್ನು ಹೆಂಡತಿ ಎಂದು ಬಿಂಬಿಸಿ ಇಂತಹದೊಂದು ಅಕ್ರಮ ಎಸಗಿದ್ದಾರೆ. ಈ ವಂಚನೆ ಪ್ರಕರಣಕ್ಕೆ ಸಂಬಂಧಿಸಿದಂತೆ ರಜನಿ ಅವರು ಕಳೆದ ಜೂನ್ 22 ರಂದು ಹೆಚ್ಚುವರಿ ಜಿಲ್ಲಾಧಿಕಾರಿ ಅವರಿಗೆ ದೂರು ನೀಡಿದ ಬಳಿಕ ಐದು ವರ್ಷಗಳ ಹಿಂದಿನ ಅಕ್ರಮ ಇದೀಗ ಬಯಲಿಗೆ ಬಂದಿದೆ.

ಬಾಗೇಪಲ್ಲಿ ತಾಲ್ಲೂಕಿನ ಮಾಚನಹಳ್ಳಿ ಗ್ರಾಮದ ಮೆಹಬೂಬ್ ಪಾಷಾ ಹಾಗೂ ಚಾಂದ್ ಪಾಷಾ ಎಂಬುವರಿಗೆ ಸೇರಿದ ಸರ್ವೆ ನಂ ೧೬೬ರಲ್ಲಿದ್ದ ಒಂದು ಎಕರೆ ಜಮೀನನ್ನು ಕರ್ನಾಟಕ ಪರಿಶಿಷ್ಟ ಪಂಗಡಗಳ ಅಭಿವೃದ್ಧಿ ನಿಗಮದ ಅಧಿಕಾರಿಗಳು 2013ರಲ್ಲಿ ₨5 ಲಕ್ಷಕ್ಕೆ ಖರೀದಿಸಿ, ಬಾಗೇಪಲ್ಲಿ ಉಪ ನೋಂದಣಾಧಿಕಾರಿ ಕಚೇರಿಯಲ್ಲಿ ರಜನಿ ಅವರ ಹೆಸರಿಗೆ ನೋಂದಣಿ ಮಾಡಿ ಕೊಟ್ಟಿದ್ದರು.

‘ಇದೇ ಉದ್ದೇಶಕ್ಕಾಗಿ ನನ್ನ ತಂದೆ ನನ್ನನ್ನು ಹೆಂಡತಿ ಎಂದು ಬಿಂಬಿಸುವ ನಕಲಿ ದಾಖಲೆಗಳನ್ನು ಸೃಷ್ಟಿಸಿ, ನನಗೆ 2013ರ ಜುಲೈ 17 ರಂದು ಬಲವಂತವಾಗಿ ಸೀರೆ ಉಡುಸಿ, ತಾಳಿ ಹಾಕಿಸಿ ಉಪ ನೋಂದಣಾಧಿಕಾರಿ ಕಚೇರಿಯಲ್ಲಿ ತನ್ನನ್ನು ಗಂಡನೆಂದು ಸುಳ್ಳು ಹೇಳುವಂತೆ ಬೆದರಿಕೆ ಹಾಕಿ ಭೂಮಿಯ ಕ್ರಯಪತ್ರ ನನ್ನ ಹೆಸರಿಗೆ ನೋಂದಣಿ ಮಾಡಿಸಿದ್ದರು’ ಎಂದು ರಜನಿ ದೂರಿನಲ್ಲಿ ತಿಳಿಸಿದ್ದಾರೆ.

ರಜನಿ ಅವರಿಗೆ ಕಳೆದ ನಾಲ್ಕು ವರ್ಷಗಳ ಹಿಂದೆ ಚೇಳೂರು ಹೋಬಳಿಯ ದೊಡ್ಡಿಪಲ್ಲಿ ಗ್ರಾಮದ ರವಣಪ್ಪ ಅವರೊಂದಿಗೆ ವಿವಾಹವಾಗಿತ್ತು. ಒಂದು ವರ್ಷದ ಹಿಂದೆ ರವಣಪ್ಪ ಅವರು ಮಾವನ ಮನೆಗೆ ಹೋಗಿದ್ದ ವೇಳೆ ಪರಿಶಿಷ್ಟ ಪಂಗಡಗಳ ಅಭಿವೃದ್ಧಿ ನಿಗಮದಿಂದ ರಜನಿ ಅವರ ಹೆಸರಿಗೆ ಬಂದ ಪತ್ರವೊಂದರಿಂದ ಈ ವಿಚಾರ ಅವರ ಗಮನಕ್ಕೆ ಬಂದಿತ್ತು. ಬಳಿಕ ಅವರು ಈ ಬಗ್ಗೆ ಮಾಹಿತಿ ಹಕ್ಕು ಕಾಯ್ದೆ (ಆರ್‌ಟಿಐ) ಅಡಿ ನಿಗಮದಿಂದ ಮಾಹಿತಿ ಪಡೆದುಕೊಂಡಾಗ ಮಾವ ಮಾಡಿದ ಕಿತಾಪತಿ ಬೆಳಕಿಗೆ ಬಂದಿದೆ.

ಸದ್ಯ ರಜನಿ ಅವರು ನನ್ನ ತಂದೆ ತನಗೆ ಮೋಸ ಮಾಡಿ ಇಂತಹ ಕೆಲಸ ಮಾಡಿದ್ದಾರೆ. ಆದ್ದರಿಂದ ಆ ಭೂಮಿ ಮಂಜೂರಾತಿ, ಕ್ರಯಪತ್ರ ರದ್ದುಪಡಿಸಬೇಕು ಎಂದು ಎಂದು ತಮ್ಮ ದೂರಿನಲ್ಲಿ ಹೆಚ್ಚುವರಿ ಜಿಲ್ಲಾಧಿಕಾರಿ ಅವರಿಗೆ ಮನವಿ ಸಲ್ಲಿಸಿದ್ದಾರೆ.

‘ಈ ವಿಚಾರವಾಗಿ ನಮ್ಮ ಮಾನ ಬೀದಿಗೆ ಬಂದಿದೆ. ಮಾವನನ್ನು ವಿಚಾರಿಸಿದರೆ ಇದು ಮದುವೆ ಮೊದಲು ನಡೆದ ಘಟನೆ ಎಂದು ಬಾಯಿ ಮುಚ್ಚಿಸಲು ನೋಡಿದರು. ಇದರಿಂದಾಗಿ ಮುಂದೆ ನಮ್ಮ ಮಕ್ಕಳಿಗೆ ಇರುಸುಮುರುಸು ಉಂಟಾಗುವುದು ಬೇಡ ಎಂದು ನಿರ್ಧರಿಸಿ ನನ್ನ ಹೆಂಡತಿ ಹೆಸರಿನಲ್ಲಿರುವ ಜಮೀನು ಮಂಜೂರಾತಿ ರದ್ದುಪಡಿಸುವಂತೆ ಜಿಲ್ಲಾಡಳಿತಕ್ಕೆ ಮನವಿ ಸಲ್ಲಿಸಿದ್ದೇವೆ. ಆದರೆ ದೂರು ನೀಡಿ ಎರಡು ತಿಂಗಳಾದರೂ ಅಧಿಕಾರಿಗಳು ಯಾವುದೇ ಕ್ರಮ ಕೈಗೊಂಡಿಲ್ಲ’ ಎಂದು ರವಣಪ್ಪ ತಿಳಿಸಿದರು.

 

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು