ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಶಿಡ್ಲಘಟ್ಟ: ಎಸ್ಸೆಸ್ಸೆಲ್ಸಿ ವಿದ್ಯಾರ್ಥಿಗಳಿಗೆ ಡಿಸಿ ಮಾರ್ಗದರ್ಶನ

ಬೋದಗೂರು ಗ್ರಾಮದಲ್ಲಿ ಗ್ರಾಮಸ್ಥರೊಂದಿಗೆ ಸಾಮೂಹಿಕ ಭೋಜನ; ರಾತ್ರಿ 1ರವರೆಗೂ ಮಾತುಕತೆ
Last Updated 22 ಫೆಬ್ರುವರಿ 2021, 4:12 IST
ಅಕ್ಷರ ಗಾತ್ರ

ಶಿಡ್ಲಘಟ್ಟ: ‘ನನ್ನ ಕೈಲಾಗದು, ನನ್ನಿಂದ ಇದು ಸಾಧ್ಯವಾ’ ಎಂಬ ಕೀಳರಿಮೆಯನ್ನು ಮೊದಲು ಬಿಡಬೇಕು. ಪ್ರತಿಯೊಬ್ಬರೂ ‘ನನ್ನಿಂದ ಇದು ಸಾಧ್ಯ’ ಎಂಬ ಛಲದ ಮನೋಭಾವದಿಂದ ಮುನ್ನುಗ್ಗಬೇಕು ಎಂದು ಜಿಲ್ಲಾಧಿಕಾರಿ ಆರ್.ಲತಾ ತಿಳಿಸಿದರು.

ತಾಲ್ಲೂಕಿನ ಆನೂರು ಗ್ರಾಮ ಪಂಚಾಯಿತಿಯ ಬೋದಗೂರು ಗ್ರಾಮದಲ್ಲಿ ಶನಿವಾರ ‘ಜಿಲ್ಲಾಡಳಿತದ ನಡೆ ಗ್ರಾಮಗಳ ಕಡೆ’ ಗ್ರಾಮ ವಾಸ್ತವ್ಯ ಕಾರ್ಯಕ್ರಮದಲ್ಲಿ ಶನಿವಾರ ಸಂಜೆ ವೇಳೆ ಗ್ರಾಮದ ಎಸ್ಸೆಸ್ಸೆಲ್ಸಿ ವಿದ್ಯಾರ್ಥಿಗಳಿಗೆ ಹೀಗೆ ಮಾರ್ಗದರ್ಶನ ಮಾಡಿದರು.

‘ನೀವೆಲ್ಲರೂ ಪ್ರತಿಭಾವಂತ ವಿದ್ಯಾರ್ಥಿಗಳೇ. ನಿಮ್ಮಲ್ಲಿ ಕೀಳರಿಮೆ ಹೋಗಲಾಡಿಸಿ, ಆತ್ಮವಿಶ್ವಾಸ ತುಂಬಿಸಿಕೊಳ್ಳಿ. ಮನಸ್ಸಿಟ್ಟು ಓದಿ. ಪರೀಕ್ಷೆಯಲ್ಲಿ ಉತ್ತಮ ಅಂಕಗಳು ಅದಕ್ಕದೇ ಬರುತ್ತದೆ. ಸರ್ಕಾರಿ ಶಾಲೆಗಳಲ್ಲಿ ಓದಿದ, ಹಳ್ಳಿಗಳ ಬಡ, ಪ್ರತಿಭಾವಂತ ವಿದ್ಯಾರ್ಥಿಗಳು ಎಂಜಿನಿಯರ್, ಡಾಕ್ಟರ್, ಐಎಎಸ್, ಐಪಿಎಸ್ ಮತ್ತಿತರ ಉನ್ನತ ಹುದ್ದೆಗೇರಿದ ಉದಾಹರಣೆಗಳಿವೆ’ ಎಂದು ಕೆಲವರನ್ನು ಹೆಸರಿಸಿದರು.

‘ವಿದ್ಯಾರ್ಥಿಗಳು ಪ್ರತಿ ದಿನ ಎರಡು ತಾಸು ಏಕಾಗ್ರತೆಯಿಂದ ಓದಿದರೂ ಅಗ್ರಶ್ರೇಣಿಯಲ್ಲಿ ತೇರ್ಗಡೆ­ಯಾಗ­ಬಹುದು. ಕಠಿಣ ಎನಿಸಿದ ವಿಷಯಗಳಿಗೆ ವಿದ್ಯಾರ್ಥಿಗಳು ಹೆಚ್ಚು ಒತ್ತು ನೀಡಬೇಕು. ಓದಿದ್ದನ್ನು ಅರ್ಥೈಸಿ­ಕೊಳ್ಳಬೇಕು’ ಎಂದು ತಮ್ಮ ಬಾಲ್ಯ ಓದುತ್ತಿದ್ದ ವಿಧಾನ ಮುಂತಾದ ಸಂಗತಿಗಳನ್ನು ವಿವರಿಸಿದರು.

ಸಾಂಸ್ಕೃತಿಕ ಕಾರ್ಯಕ್ರಮ: ಗ್ರಾಮದ ಮಕ್ಕಳು ಹಾಡುಗಾರಿಕೆ, ನೃತ್ಯ, ಏಕಪಾತ್ರಾಭಿನಯ, ಜನಪದ ಗೀತೆ, ಕೋಲಾಟ ಮೊದಲಾದ ಸಾಂಸ್ಕೃತಿಕ ಕಾರ್ಯಕ್ರಮವನ್ನು ನಡೆಸಿಕೊಟ್ಟರು.

ವಾಸ್ತವ್ಯ: ಗ್ರಾಮಸ್ಥರೊಂದಿಗೆ ಜಿಲ್ಲಾಧಿಕಾರಿ ಸೇರಿದಂತೆ ಅಧಿಕಾರಿಗಳು ಸಾಮೂಹಿಕ ಭೋಜನದಲ್ಲಿ ಪಾಲ್ಗೊಂಡರು. ಬೋದಗೂರು ಗ್ರಾಮದ ನರೇಗಾ ಯೋಜನೆಯಡಿ ನಿರ್ಮಿಸಿರುವ ಎನ್.ಆರ್.ಎಲ್.ಎಂ ವರ್ಕ್ ಶೆಡ್ ನಲ್ಲಿ ಜಿಲ್ಲಾಧಿಕಾರಿ ಹಾಗೂ ವಿವಿಧ ಇಲಾಖೆಗಳ ಮಹಿಳಾ ಅಧಿಕಾರಿಗಳಿಗೆ ವಾಸ್ತವ್ಯಕ್ಕೆ ವ್ಯವಸ್ಥೆ ಮಾಡಲಾಗಿತ್ತು.

‘ಸುಮಾರು 11.30ಕ್ಕೆ ಮಲಗಲು ಹೋದೆವು. ವಿವಿಧ ಇಲಾಖೆಗಳಲ್ಲಿ ಕೆಲಸ ಮಾಡುವ ನಾವು ಮಹಿಳಾ ಅಧಿಕಾರಿಗಳು ಜಿಲ್ಲಾಧಿಕಾರಿ ಅವರೊಂದಿಗೆ ಒಂದೇ ಕೋಣೆಯಲ್ಲಿ ಉಳಿದಿದ್ದೆವು. ರಾತ್ರಿ ಸುಮಾರು 1.30ರವರೆಗೂ ಉದ್ಯೋಗಸ್ಥ ಮಹಿಳೆಯರ ಸವಾಲುಗಳು, ಹಳ್ಳಿಯ ಸ್ವಚ್ಛ ಕಲುಷಿತವಿಲ್ಲದ, ಗದ್ದಲವಿಲ್ಲದ ವಾತಾವರಣ, ಮುಂತಾದ ವಿಚಾರಗಳ ಬಗ್ಗೆ ಮಾತನಾಡುತ್ತಾ ಸಮಯ ಹೋದದ್ದೇ ತಿಳಿಯಲಿಲ್ಲ’ ಎಂದು ವಾರ್ತಾ ಇಲಾಖೆಯ ಮೈನಾಶ್ರೀ ತಿಳಿಸಿದರು.

ರಾಜಕಾಲುವೆ ಒತ್ತುವರಿ: ರಾಜಕಾಲುವೆ ಒತ್ತುವರಿ ಕುರಿತಾಗಿ ದೂರುಗಳು ಬಂದಿದ್ದ ಹಿನ್ನೆಲೆಯಲ್ಲಿ ಜಿಲ್ಲಾಧಿಕಾರಿ ಆರ್.ಲತಾ ಅವರು ಸ್ಥಳ ಪರಿಶೀಲನೆ ನಡೆಸಿದರು. ಒಂದು ವಾರದೊಳಗೆ ರಾಜಕಾಲುವೆ ಒತ್ತುವರಿ ತೆರವುಗೊಳಿಸಬೇಕೆಂದು ಗಡುವನ್ನು ನೀಡಿದರು.

ಹಾಲಿನ ಡೈರಿ ವೀಕ್ಷಣೆ: ಬೋದಗೂರು ಗ್ರಾಮದ ಹಾಲು ಉತ್ಪಾದಕರ ಸಹಕಾರ ಸಂಘದ ಕಟ್ಟಡದಲ್ಲಿ ಹಾಲು ಸಂಗ್ರಹಿಸುವ ವಿಧಾನ, ಸಂಘದಿಂದ ಹೈನುಗಾರರಿಗೆ ಸಿಗುತ್ತಿರುವ ಸೌಲಭ್ಯಗಳ ಬಗ್ಗೆ ಮಾಹಿತಿಯನ್ನು ಜಿಲ್ಲಾಧಿಕಾರಿ ಅವರು ಪಡೆದರು. ನರೇಗಾ ಯೋಜನೆಯಡಿ ನಿರ್ಮಿಸಿರುವ ಕುರಿ ಮತ್ತು ಹಸು ಶೆಡ್‌ಗಳಿಗೆ ಭೇಟಿ ನೀಡಿ ಪರಿಶೀಲಿಸಿದರು.

ಮುಂಜಾನೆ 5.30ರಿಂದ ಗ್ರಾಮ ಸಂಚಾರ

ಜಿಲ್ಲಾಧಿಕಾರಿ ಆರ್.ಲತಾ ಅವರು ಅಧಿಕಾರಿಗಳೊಂದಿಗೆ ಮುಂಜಾನೆ 5.30ಕ್ಕೆ ಗ್ರಾಮ ಸಂಚಾರ ಕೈಗೊಂಡರು. ಆಶ್ರಯ ಯೋಜನೆಯಡಿ ಮಂಜೂರಾದ ಸ್ಥಳ ವೀಕ್ಷಣೆ ನಡೆಸಿದರು. ಪರಿಶಿಷ್ಟ ಜಾತಿ ಮತ್ತು ಪಂಗಡದ ಕಾಲೊನಿಗೆ ಭೇಟಿ ನೀಡುವಂತೆ ಶನಿವಾರ ಮಹಿಳೆಯೊಬ್ಬರು ಮನವಿ ಸಲ್ಲಿಸಿದ್ದರು. ಆ ಮಹಿಳೆಯನ್ನು ಕರೆಸಿ ಅವರೊಂದಿಗೆ ಅಲ್ಲಿಗೆ ತೆರಳಿ ಅವರ ಸಮಸ್ಯೆಗಳನ್ನು ಕೇಳಿದರು. ಎರಡು ದಿನಗಳೊಳಗೆ ಕಾಲೊನಿಯ ಚರಂಡಿಯನ್ನು ಸ್ವಚ್ಛಗೊಳಿಸಿ ನೀರು ಸರಾಗವಾಗಿ ಹರಿದುಹೋಗುವಂತೆ ಮಾಡುವಂತೆ ಅಧಿಕಾರಿಗಳಿಗೆ ಸೂಚಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT