ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಂಗನವಾಡಿ ಕಟ್ಟಡ ಶೀಘ್ರ ಆರಂಭಿಸಿ

ವಿವಿಧ ಇಲಾಖೆಗಳ ಪ್ರಗತಿ ಪರಿಶೀಲನಾ ಸಭೆಯಲ್ಲಿ ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ಎನ್. ನಾಗಾಂಬಿಕಾದೇವಿ ಸೂಚನೆ
Last Updated 26 ನವೆಂಬರ್ 2019, 5:41 IST
ಅಕ್ಷರ ಗಾತ್ರ

ಚಿಕ್ಕಬಳ್ಳಾಪುರ: ಜಿಲ್ಲೆಯಲ್ಲಿ ಅಂಗನವಾಡಿ ಕೇಂದ್ರಗಳಿಗೆ ನಿಗದಿಪಡಿಸಿರುವ ನಿವೇಶನಗಳಲ್ಲಿ ಕಟ್ಟಡ ನಿರ್ಮಾಣ ಕಾಮಗಾರಿಯನ್ನು ಶೀಘ್ರವೇ ಪ್ರಾರಂಭಿಸಬೇಕು ಎಂದು ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ಎನ್. ನಾಗಾಂಬಿಕಾದೇವಿ ಅವರು ಅಧಿಕಾರಿಗಳಿಗೆ ಸೂಚನೆ ನೀಡಿದರು.

ಸೋಮವಾರ ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ಆಯೋಜಿಸಿದ್ದ ವಿವಿಧ ಇಲಾಖೆಗಳ ಪ್ರಗತಿ ಪರಿಶೀಲನಾ ಸಭೆಯಲ್ಲಿ ಮಾತನಾಡಿ, ‘ಜಿಲ್ಲೆಯಲ್ಲಿ ಅಂಗನವಾಡಿ ಕೇಂದ್ರಗಳು ಕೊರತೆ ಇದೆ. ಆದ್ದರಿಂದ ನಿಗಧಿ ಪಡಿಸಿರುವ ನಿವೇಶನಗಳಲ್ಲಿ ಕಟ್ಟಡ ನಿರ್ಮಾಣ ಮಾಡುವ ಕಾಮಗಾರಿಯನ್ನು ಪ್ರಾರಂಭಿಸಬೇಕು. ಇದಲ್ಲದೆ, ಶೌಚಾಲಯಗಳು ಕಡ್ಡಾಯವಾಗಿ ಪ್ರತಿ ಅಂಗನವಾಡಿ ಕೇಂದ್ರದಲ್ಲಿ ಪ್ರತ್ಯೇಕವಾಗಿ ನಿರ್ಮಿಸಬೇಕು’ ಎಂದರು.

ಇದೇ ವೇಳೆ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಉಪನಿರ್ದೇಶಕರಾದ ಜಿ.ಕೆ.ಲಕ್ಷ್ಮೀದೇವಮ್ಮ ಮಾತನಾಡಿ, ‘ಅಂಗನವಾಡಿ ಕೇಂದ್ರಗಳ ಕಟ್ಟಡ ಕಾಮಗಾರಿಗೆ ಅನುದಾನ ಬಿಡುಗಡೆಯಾಗಿಲ್ಲ. ಇದರಿಂದ ಶೀಘ್ರವಾಗಿ ಕಟ್ಟಡಗಳು ನಿರ್ಮಾಣ ಮಾಡಲು ಸಾಧ್ಯವಾಗುತ್ತಿಲ್ಲ. ಇಲಾಖೆಯಿಂದ ಹಮ್ಮಿಕೊಂಡಿದ್ದ ಪೋಷಣ್ ಅಭಿಯಾನ ಕಾರ್ಯಕ್ರಮದಿಂದ ಜಿಲ್ಲೆಯಲ್ಲಿ ಅಪೌಷ್ಠಿಕತೆ ಮಟ್ಟವನ್ನು 272 ರಿಂದ 172 ಮಟ್ಟಕ್ಕೆ ಇಳಿಸಲಾಗಿದೆ. ಅಲ್ಲದೆ, 15-16 ವರ್ಷ ವಯಸ್ಸಿನ ಯುವತಿರಲ್ಲಿ ಹಿಮೊಗೋಬ್ಲಿನ್ ಅಂಶವನ್ನು ಹೆಚ್ಚಿಸಲು ಅರಿವು ಕಾರ್ಯಕ್ರಮವನ್ನು ರೂಪಿಸಲಾಗುತ್ತಿದೆ. ಇಲಾಖೆಯಲ್ಲಿ 25 ಮೇಲ್ವಿಚಾರಕರ ಹುದ್ದೆಗಳು ಖಾಲಿಯಿವೆ. ಕೂಡಲೇ ಹುದ್ದೆಗಳ ಭರ್ತಿಗೆ ಅಧಿಸೂಚನೆ ನೀಡಬೇಕು’ ಎಂದು ತಿಳಿಸಿದರು.

ಶಾಸಕರ ಹಾಗೂ ಸಂಸದರ ಹೆಸರುಗಳ ಮೇಲೆ ಬಿಡುಗಡೆಯಾಗುವ ಅನುದಾನವನ್ನು ಸದ್ಬಳಿಕೆ ಮಾಡುವಲ್ಲಿ ಅಧಿಕಾರಿಗಳು ಮತ್ತಷ್ಟು ಎಚ್ಚರ ವಹಿಸಬೇಕು. ಅನುದಾನದ ಖರ್ಚು-ವೆಚ್ಚ, ಕಾಮಗಾರಿಗಳು ಪೂರ್ಣಗೊಂಡಿರುವ ವರದಿ ಮುಂತಾದ ನಿಖರ ಮಾಹಿತಿಗಳನ್ನು ಸರ್ಕಾರಕ್ಕೆ ಒಪ್ಪಿಸುವ ಜವಾಬ್ದಾರಿ ಅಧಿಕಾರಿಗಳ ಮೇಲಿದೆ. ಈ ನಿಟ್ಟಿನಲ್ಲಿ ಅನುದಾನದ ಸಂಪೂರ್ಣ ವರದಿಯನ್ನು ಸಿದ್ದಪಡಿಸಿ ಎಂದರು.

ನೈರ್ಮಲ್ಯಕ್ಕೆ ಹೆಚ್ಚಿನ ಪ್ರಾಮುಖ್ಯತೆಯನ್ನು ನೀಡುವ ನಿಟ್ಟಿನಲ್ಲಿ ಗ್ರಾಮೀಣ ಪ್ರದೇಶದಲ್ಲಿ ಕಡ್ಡಾಯವಾಗಿ ಶೌಚಾಲಯಗಳನ್ನು ನಿರ್ಮಿಸುವುದರಿಂದ ನೈರ್ಮಲ್ಯಯುಕ್ತ ಜಿಲ್ಲೆಯನ್ನಾಗಿಸಲು ಅಧಿಕಾರಿಗಳು ಮುಂದಾಗಬೇಕು. ಆಯುಷ್ಮಾನ್ ಭಾರತ್ ಕಾರ್ಯಕ್ರಮದ ಬಗ್ಗೆ ಅರಿವು ಮೂಡಿಸಲು ಜಿಲ್ಲೆಯಲ್ಲಿ ವಿವಿಧ ಹೊಸ ಕಾರ್ಯಕ್ರಮಗಳನ್ನು ಹಾಕಿಕೊಳ್ಳಿ ಎಂದು ತಿಳಿಸಿದರು.

ಜಿಲ್ಲೆಯಲ್ಲಿ ಸದ್ಯ ‘ಸಮೃದ್ಧಿ ಮೇವು ಗೋವುಗಳ ನಲಿವು’ ಕಾರ್ಯಕ್ರಮದಲ್ಲಿ ಹಸಿರು ಮೇವು ಕಟಾವು ಮಾಡಿ ರೈತರು ತಮ್ಮ ಜಾನುವಾರುಗಳಿಗೆ ಉಪಯೋಗಿಸುತ್ತಿದ್ದಾರೆ. ಜಿಲ್ಲೆಯಲ್ಲಿ ತಾಲ್ಲೂಕು ಮಟ್ಟದ ಹೋಬಳಿವಾರು 26 ಮೇವು ನಿಧಿಗಳನ್ನು ಸ್ಥಾಪಿಸಿ, ಒಟ್ಟು 241.26 ಮೆಟ್ರಿಕ್ ಟನ್ ಮೇವನ್ನು ಖರೀದಿಸಿ ಫಲಾನುಭವಿಗಳಿಗೆ ನೀಡಲಾಗುತ್ತಿದೆ. ಪ್ರಸ್ತುತ ಜಿಲ್ಲೆಯಲ್ಲಿ 3,53,994 ಟನ್ ಹಸಿರು ಮೇವು ಲಭ್ಯವಿದೆ ಎಂದು ಪಶುಪಾಲನಾ ಮತ್ತು ಪಶುವೈದ್ಯ ಸೇವಾ ಇಲಾಖೆ ಅಧಿಕಾರಿಗಳು ಸಭೆಗೆ ತಿಳಿಸಿದರು.

ಅನಿಲ ಭಾಗ್ಯ ಯೋಜನೆಯ ಅನುಷ್ಠಾನದಲ್ಲಿ ಜಿಲ್ಲೆಯ ಚಿಕ್ಕಬಳ್ಳಾಪುರ, ಗುಂಡಿಬಂಡೆ ಹಾಗೂ ಬಾಗೇಪಲ್ಲಿ ತಾಲ್ಲೂಕಗಳು ಶೇ.100 ರಷ್ಟು ಪ್ರಗತಿ ಕಂಡಿವೆ. ಅಲ್ಲದೆ, ಪಡಿತರ ಚೀಟಿ ವಿತರಣೆಯಲ್ಲಿ ರಾಜ್ಯದಲ್ಲಿಯೇ ಚಿಕ್ಕಬಳ್ಳಾಪುರ ಜಿಲ್ಲೆಯು ಪ್ರಥಮ ಸ್ಥಾನದಲ್ಲಿದೆ. ರಾಗಿ ಹಾಗೂ ಮುಸುಕಿಜೋಳ ಬೆಳೆಗಳ ರೈತರಿಗೆ ಬೆಂಬಲ ಬೆಲೆ ನೀಡಲು 6 ತಾಲ್ಲೂಕುಗಳಲ್ಲಿ ಎಂಎಸ್‍ಪಿ ಕೇಂದ್ರಗಳನ್ನು ನಿರ್ಮಿಸಲಾಗುತ್ತದೆ ಎಂದು ಆಹಾರ, ನಾಗರಿಕ ಸರಬರಾಜು ಹಾಗೂ ಗ್ರಾಹಕರ ವ್ಯವಹಾರಗಳ ಇಲಾಖೆಯ ಉಪನಿರ್ದೇಶಕ ಲಕ್ಷ್ಮೀನಾರಾಯಣ ರೆಡ್ಡಿ ಮಾಹಿತಿ ನೀಡಿದರು.

ಬೆಂಗಳೂರು ನಗರ ಹಾಗೂ ದೇವನಹಳ್ಳಿ ಅಂತರರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಸಮೀಪವಿರುವ ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ ಪ್ರವಾಸೋದ್ಯಮಕ್ಕೆ ಹೆಚ್ಚಿನ ಆದ್ಯತೆ ನೀಡಬೇಕು. ಈಗಾಗಲೇ ಸರ್ಕಾರ ಗುರುತಿಸಿರುವ 13 ಪ್ರವಾಸಿ ತಾಣಗಳಲ್ಲಿ ಮೂಲಸೌಕರ್ಯಗಳನ್ನು ಅಭಿವೃದ್ಧಿಪಡಿಸಬೇಕು. ಇದರಿಂದ ಪ್ರವಾಸಿಗರ ಸಂಖ್ಯೆಯಲ್ಲಿ ಹೆಚ್ಚಳವಾಗಲಿದೆ ಎಂದರು.

ಜಿಲ್ಲೆಯಲ್ಲಿ ಹಿಂದಿನ ವರ್ಷಗಿಂತ ಈ ವರ್ಷವು ಹೆಚ್ಚು ಮಳೆ ಸಂಭವಿಸಿದ್ದು, ಕೆರೆ-ಕುಂಟೆ, ಜಲಾಶಯಗಳು ಭರ್ತಿಯಾಗಿವೆ. ಸದ್ಯದ ಪರಿಸ್ಥಿತಿಯಲ್ಲಿ ನೀರಿನ ಸಮಸ್ಯೆಯು ಇಲ್ಲದಿರಬಹುದು. ಆದರೆ, ಬೇಸಿಗೆಕಾಲದಲ್ಲಿ ಜಿಲ್ಲೆಗೆ ನೀರಿನ ಸಮಸ್ಯೆ ತಲೆದೊರುತ್ತದೆ. ಈ ನಿಟ್ಟಿನಲ್ಲಿ ಮುಂಬರುವ ದಿನಗಳನ್ನು ಗಮನದಲ್ಲಿಟ್ಟುಕೊಂಡು ಅಧಿಕಾರಿಗಳು ಜಲಾಶಯಗಳಲ್ಲಿ ನೀರು ಇಂಗುಹೋಗುವ ಮುಂಚೆಯೇ ನೀರು ಸರಬರಾಜು ಮಾಡಲು ವ್ಯವಸ್ಥೆ ಕಲ್ಪಿಸಿ. ಇದರಲ್ಲಿ ಮುಖ್ಯವಾಗಿ ಚಿಕ್ಕಬಳ್ಳಾಪುರ ತಾಲ್ಲೂಕಿಗೆ ನೀರಿನ ವ್ಯವಸ್ಥೆಯನ್ನು ಕಲ್ಪಿಸುವ ಜಕ್ಕಲಮಡುಗು ಜಲಾಶಯದ ನೀರನ್ನು ಸದ್ಬಳಿಕೆ ಮಾಡಿಕೊಳ್ಳಬೇಕು ಎಂದರು.

ಸಭೆಯಲ್ಲಿ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳಾದ ಬಿ.ಫೌಜಿಯಾ ತರನ್ನುಮ್, ಅಪರ ಜಿಲ್ಲಾಧಿಕಾರಿಗಳಾದ ಆರತಿ ಆನಂದ್ ಸೇರಿದಂತೆ ಜಿಲ್ಲಾ ಮಟ್ಟದ ಅಧಿಕಾರಿಗಳು ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.

3.53 ಲಕ್ಷ ಟನ್‌ ಮೇವು ಲಭ್ಯ

ಜಿಲ್ಲೆಯಲ್ಲಿ ಸದ್ಯ ಸಮೃದ್ಧಿ ಮೇವು ಗೋವುಗಳ ನಲಿವು’ ಕಾರ್ಯಕ್ರಮದಲ್ಲಿ ಹಸಿರು ಮೇವು ಕಟಾವು ಮಾಡಿ ರೈತರು ತಮ್ಮ ಜಾನುವಾರುಗಳಿಗೆ ಉಪಯೋಗಿಸುತ್ತಿದ್ದಾರೆ. ಜಿಲ್ಲೆಯಲ್ಲಿ ತಾಲ್ಲೂಕು ಮಟ್ಟದ ಹೋಬಳಿವಾರು 26 ಮೇವು ನಿಧಿಗಳನ್ನು ಸ್ಥಾಪಿಸಿ, ಒಟ್ಟು 241.26 ಮೆಟ್ರಿಕ್ ಟನ್ ಮೇವನ್ನು ಖರೀದಿಸಿ ಫಲಾನುಭವಿಗಳಿಗೆ ನೀಡಲಾಗುತ್ತಿದೆ. ಪ್ರಸ್ತುತ ಜಿಲ್ಲೆಯಲ್ಲಿ 3,53,994 ಟನ್ ಹಸಿರು ಮೇವು ಲಭ್ಯವಿದೆ ಎಂದು ಪಶುಪಾಲನಾ ಮತ್ತು ಪಶುವೈದ್ಯ ಸೇವಾ ಇಲಾಖೆ ಅಧಿಕಾರಿಗಳು ಸಭೆಗೆ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT