ಚಿಕ್ಕಬಳ್ಳಾಪುರ: ಕಳೆದ ಎರಡು ತಿಂಗಳ ಹಿಂದೆ ನಾಪತ್ತೆಯಾಗಿದ್ದ ವ್ಯಕ್ತಿಯ ಮೃತದೇಹವು ನೀಲಗಿರಿ ತೋಪಿನ ಪಾಳುಬಿದ್ದಿರುವ ಬಾವಿಯೊಂದರಲ್ಲಿ ಪತ್ತೆಯಾಗಿದೆ. ಈ ವ್ಯಕ್ತಿಯ ಮೃತದೇಹ ಹೊರತೆಗೆಯಲು ಕಳೆದ ಮೂರುದಿನಗಳಿಂದ ಅಗ್ನಿಶಾಮಕ ಹಾಗೂ ಪೊಲೀಸರು ಹರಸಾಹಸ ಪಡುವಂತಾಗಿದೆ.
ತಾಲ್ಲೂಕಿನ ಚೀಮನಹಳ್ಳಿ ನಿವಾಸಿ ಸಿ.ಎ.ಪಿಳ್ಳಪ್ಪ (70) ಮೃತ ವ್ಯಕ್ತಿ. ಮೃತ ಪಿಳ್ಳಪ್ಪ ಅವರು ಕಳೆದ ಎರಡು ತಿಂಗಳ ಹಿಂದೆ ಕಾಣೆಯಾಗಿದ್ದರು. ಈ ಕುರಿತು ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿತ್ತು. ಆದರೆ ಅವರ ಮೃತದೇಹವು ಮೂರು ದಿನದ ಹಿಂದೆ ಜಾತವಾರಹೊಸಹಳ್ಳಿ ಬಳಿಯಿರುವ ನೀಲಗಿರಿ ತೋಪಿನಲ್ಲಿರುವ ಕೇವಲ 3 ಅಡಿ ಅಗಲವುಳ್ಳ ಹಳೆ ಬಾವಿಯೊಂದರಲ್ಲಿ ಬೈಕ್ ಸಮೇತ ಪತ್ತೆಯಾಗಿದೆ.
ಇದರಿಂದ ಮೃತದೇಹವನ್ನು ಹೊರತೆಗೆಯಲು ಬಾವಿಗೆ ಇಳಿಯಲು ಸಾಧ್ಯವಾಗದ ಕಾರಣ ಬಾವಿಯ ಬಳಿ ಎರಡು ಯಂತ್ರಗಳೊಂದಿಗೆ ಮಣ್ಣು ತೆಗೆಯುವ ಕಾರ್ಯ ಕಳೆದ ಮೂರು ದಿನಗಳಿಂದ ಸತತವಾಗಿ ನಡೆಯುತ್ತಿದೆ. ಸರಿಸುಮಾರು 500ಕ್ಕೂ ಹೆಚ್ಚು ಲೋಡ್‍ಗಳಷ್ಟು ಮಣ್ಣನ್ನು ಮೇಲೆ ಎತ್ತಲಾಗಿದೆ. ಸಧ್ಯ ಮೃತ ವ್ಯಕ್ತಿಯ ಬಟ್ಟೆ, ತಲೆ ಬುರುಡೆ ಹಾಗೂ ದ್ವಿಚಕ್ರ ವಾಹನ ಪತ್ತೆಯಾಗಿದೆ.
ನಮ್ಮ ತಂದೆ ಪಿಳ್ಳಪ್ಪ ಅವರ ಸಾವಿನ ಬಗ್ಗೆ ಯಾರ ಮೇಲೆಯೂ ಅನುಮಾನವಿಲ್ಲ. ಅವರು ಏಕೆ ಸತ್ತರು ಎಂಬುದು ಪೊಲೀಸ್ ತನಿಖೆಯಿಂದ ಹೊರಬೀಳಬೇಕಿದೆ ಎಂದು ಮೃತ ಪಿಳ್ಳಪ್ಪ ಅವರ ಮಗ ದೇವರಾಜ್ ತಿಳಿಸಿದ್ದಾರೆ.
ಘಟನಾ ಸ್ಥಳಕ್ಕೆ ಎಸ್.ಪಿ ಕುಶಾಲ್ ಚೌಕ್ಸೆ ಇತರರು ಭೇಟಿ ನೀಡಿ ಪರಿಶೀಲಿಸಿದ್ದಾರೆ. ಹೆಚ್ಚುವರಿ ಪೊಲೀಸ್ ಅಧೀಕ್ಷಕ ಖಾಸಿಂ, ತಹಶೀಲ್ದಾರ್ ಸೇರಿದಂತೆ ಅಗ್ನಿಶಾಮದಳ, ಪೊಲೀಸ್ ಸಿಬ್ಬಂದಿ ಸ್ಥಳದಲ್ಲಿ ಇದ್ದು, ಮೃತ ದೇಹ ಶೋಧ ಕಾರ್ಯ ಮುಂದುವರೆದಿದೆ.