ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಶಿಡ್ಲಘಟ್ಟ: ಮಹಿಳೆಯರಿಗೆ ಸಾಲ ವಿತರಣೆ

Last Updated 1 ಫೆಬ್ರುವರಿ 2021, 4:21 IST
ಅಕ್ಷರ ಗಾತ್ರ

ಶಿಡ್ಲಘಟ್ಟ: ‘ಮಹಿಳಾ ಸ್ವಸಹಾಯ ಸಂಘದ ಸದಸ್ಯರಿಗೆ ಇದೀಗ ವೈಯಕ್ತಿಕವಾಗಿ ಸಿಗುತ್ತಿರುವ ಅಲ್ಪ ಪ್ರಮಾಣದ ಸಾಲಕ್ಕೆ ತೃಪ್ತಿ ಪಡದೇ 50-100 ಜನರ ಗುಂಪು ರಚಿಸಿಕೊಂಡು ಸ್ವಯಂ ಉದ್ಯೋಗ ಮಾಡಲು ಮುಂದಾದಲ್ಲಿ ಯಾವುದೇ ಭದ್ರತೆಯಿಲ್ಲದೇ ಡಿಸಿಸಿ ಬ್ಯಾಂಕ್‌ನಿಂದ ಮತ್ತಷ್ಟು ಸಾಲ ಸೌಲಭ್ಯ ನೀಡಲಾಗುವುದು’ ಎಂದು ಡಿಸಿಸಿ ಬ್ಯಾಂಕ್ ಅಧ್ಯಕ್ಷ ಬ್ಯಾಲಹಳ್ಳಿ ಗೋವಿಂದಗೌಡ ತಿಳಿಸಿದರು.

ನಗರದ ಹೊರವಲಯದ ವರದನಾಯಕನಹಳ್ಳಿ ಬಳಿಯಿರುವ ಬಾಲಾಜಿ ಕಲ್ಯಾಣ ಮಂಟಪದಲ್ಲಿ ಭಾನುವಾರ ಶಿಡ್ಲಘಟ್ಟ ಟೌನ್ ರೇಷ್ಮೆ ಬೆಳೆಗಾರರ ಹಾಗೂ ರೈತರ ವ್ಯವಸಾಯ ಸೇವಾ ಸಹಕಾರ ಸಂಘದ ವತಿಯಿಂದ ಆಯೋಜಿಸಲಾಗಿದ್ದ ರೈತರಿಗೆ ಮತ್ತು ಮಹಿಳಾ ಸ್ವಸಹಾಯ ಸಂಘಗಳಿಗೆ ಸಾಲ ವಿತರಣೆ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡಿದರು.

‘ಕೋಲಾರ, ಚಿಕ್ಕಬಳ್ಳಾಪುರ ಜಿಲ್ಲೆಗಳಲ್ಲಿ ಉದ್ಯೋಗ ಸೃಷ್ಟಿ ಮಾಡಲು ಡಿಸಿಸಿ ಬ್ಯಾಂಕ್ ಮುಂದಾಗಿದೆ. ಪ್ರತಿಯೊಬ್ಬರೂ ಸ್ವಯಂ ಉದ್ಯೋಗ ಕೈಗೊಳ್ಳಲು ಮುಂದಾಗಬೇಕು. ಸಾಲ ನಮ್ಮಲ್ಲಿ ಪಡೆದು ವಾಣಿಜ್ಯ ಬ್ಯಾಂಕುಗಳಲ್ಲಿ ಠೇವಣಿ ಇಡುವುದನ್ನು ಪ್ರತಿಯೊಬ್ಬರೂ ಬಿಡಬೇಕು. ಡಿಸಿಸಿ ಬ್ಯಾಂಕ್ ಬಡವರ ಹಾಗೂ ಮಹಿಳೆಯರ ಪರವಾಗಿದೆ’ ಎಂದರು.

ಶಾಸಕ ವಿ.ಮುನಿಯಪ್ಪ ಮಾತನಾಡಿ, ‘ನಷ್ಟದಲ್ಲಿದ್ದ ಕೋಲಾರ ಡಿಸಿಸಿ ಬ್ಯಾಂಕ್‌ ಅನ್ನು ಅತಿ ಕಡಿಮೆ ಅವಧಿಯಲ್ಲಿ ದೇಶದಲ್ಲಿಯೇ ಮಾದರಿ ಬ್ಯಾಂಕನ್ನಾಗಿ ರೂಪಿಸಿದ ಕೀರ್ತಿ ಡಿಸಿಸಿ ಬ್ಯಾಂಕ್‌ನ ಅಧ್ಯಕ್ಷ ಗೋವಿಂದಗೌಡ ಸೇರಿದಂತೆ ಅವರ ಆಡಳಿತ ಮಂಡಳಿಯ ಎಲ್ಲಾ ನಿರ್ದೇಶಕರಿಗೆ ಸಲ್ಲುತ್ತದೆ’ ಎಂದರು.

ಡಿಸಿಸಿ ಬ್ಯಾಂಕ್ ನಿರ್ದೇಶಕ ನಾಗನಾಳ ಸೋಮಣ್ಣ ಮಾತನಾಡಿ, ರಾಜ್ಯದಾದ್ಯಂತ ಅತಿಹೆಚ್ಚು ಮಹಿಳಾ ಸ್ವಸಹಾಯ ಸಂಘಗಳಿಗೆ ಸಾಲ ನೀಡಿದ ಕೀರ್ತಿ ಕೋಲಾರ, ಚಿಕ್ಕಬಳ್ಳಾಪುರ ಜಿಲ್ಲಾ ಕೇಂದ್ರ ಸಹಕಾರ ಬ್ಯಾಂಕಿಗೆ ಸಲ್ಲುತ್ತದೆ.

ಶಿಡ್ಲಘಟ್ಟ ಟೌನ್ ರೇಷ್ಮೆ ಬೆಳೆಗಾರರ ಹಾಗೂ ರೈತರ ಸೇವಾ ಸಹಕಾರ ಸಂಘದ ವತಿಯಿಂದ ಸುಮಾರು 54 ಸ್ವಸಹಾಯ ಸಂಘಗಳಿಗೆ ₹2.38 ಕೋಟಿ, 245 ರೈತರಿಗೆ ಕೆಸಿಸಿ ಸಾಲವಾಗಿ ₹4.27 ಕೋಟಿ, ರೇಷ್ಮೆ ಹುಳು ಮನೆ ನಿರ್ಮಾಣ ಮಾಡಲು 11 ಜನರಿಗೆ ₹81 ಲಕ್ಷ, ಕೋಳಿ ಸಾಕಾಣಿಕೆಗಾಗಿ ಓರ್ವ ರೈತನಿಗೆ ₹10 ಲಕ್ಷ ಸೇರಿದಂತೆ ಒಟ್ಟು ₹7.56 ಕೋಟಿ ಸಾಲ ವಿತರಣೆ ಮಾಡಲಾಯಿತು.

ಡಿಸಿಸಿ ಬ್ಯಾಂಕ್ ಉಪಾಧ್ಯಕ್ಷ ಎ.ನಾಗರಾಜ್, ಟೌನ್ ರೇಷ್ಮೆ ಬೆಳೆಗಾರರ ಹಾಗೂ ರೈತರ ವ್ಯವಸಾಯ ಸೇವಾ ಸಹಕಾರ ಸಂಘದ ಅಧ್ಯಕ್ಷ ಬಿ.ನಾರಾಯಣಸ್ವಾಮಿ, ಮಾಜಿ ಅಧ್ಯಕ್ಷರಾದ ಶೆಟ್ಟಹಳ್ಳಿ ರಾಮಚಂದ್ರಪ್ಪ, ವಿ.ಬಿ. ನಾರಾಯಣಸ್ವಾಮಿ, ನಿರ್ದೇಶಕರಾದ ವೇಣುಗೋಪಾಲ್, ನರಸಿಂಹಮೂರ್ತಿ, ಡಿಸಿಸಿ ಬ್ಯಾಂಕ್ ವ್ಯವಸ್ಥಾಪಕ ಆನಂದ್, ಮೇಲ್ವಿಚಾರಕ ಶ್ರೀನಾಥ್, ಟೌನ್ ಎಸ್ ಎಫ್ ಸಿ ಎಸ್ ಕಾರ್ಯನಿರ್ವಹಣಾಧಿಕಾರಿ ದೇವಿಕ, ತಾಲ್ಲೂಕು ಪಂಚಾಯಿತಿ ಸದಸ್ಯ ಕೋಟಹಳ್ಳಿ ಶ್ರೀನಿವಾಸ್ ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT