ಗುರುವಾರ , ಮಾರ್ಚ್ 4, 2021
22 °C

ಮಾನನಷ್ಟ ಪ್ರಕರಣ: ಕಾನೂನು ಹೋರಾಟಕ್ಕೆ ಸಿದ್ಧ–ಜಿ.ಜಿ ಹಳ್ಳಿ ಬಿ.ನಾರಾಯಣಸ್ವಾಮಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಚಿಕ್ಕಬಳ್ಳಾಪುರ: ‘ಶಿಡ್ಲಘಟ್ಟದ ಪರಿವೀಕ್ಷಣಾ ಮಂದಿರದ ಹಿಂಭಾಗದಲ್ಲಿ ಸರ್ವೇ ನಂಬರ್ 64/1–5 ರಲ್ಲಿರುವ 2 ಎಕರೆ 35 ಗುಂಟೆ ಜಮೀನನ್ನು ಕೊಳಗೇರಿ ನಿವಾಸಿಗಳಿಗೆ ಮಂಜೂರು ಮಾಡಲಾಗಿದೆ. ಅದರಲ್ಲಿ ಕೊಳಗೇರಿ ನಿರಾಶ್ರಿತರಿಗೆ ನಿವೇಶನ ಒದಗಿಸಬೇಕು ಎಂದು ಹೋರಾಟ ಮಾಡಿದ ನಮ್ಮ ಮೇಲೆ ಕೆಲವರು ಮಾನನಷ್ಟ ಪ್ರಕರಣ ದಾಖಲಿಸಿದ್ದಾರೆ. ಇದಕ್ಕೆ ನಾವು ಎದೆಗುಂದುವುದಿಲ್ಲ. ಬದಲು ಕಾನೂನು ಹೋರಾಟ ಮಾಡಲು ಸಿದ್ಧರಿದ್ದೇವೆ’ ಎಂದು ರೈತಸಂಘದ (ಪ್ರೊ.ನಂಜುಂಡಸ್ವಾಮಿ ಸ್ಥಾಪಿತ) ರಾಜ್ಯ ಘಟಕದ ಅಧ್ಯಕ್ಷ ಜಿ.ಜಿ ಹಳ್ಳಿ ಬಿ.ನಾರಾಯಣಸ್ವಾಮಿ ಹೇಳಿದರು.

ನಗರದಲ್ಲಿ ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಈವರೆಗೆ ಶಿಡ್ಲಘಟ್ಟಕ್ಕೆ ಕೃಷಿ ಉತ್ಪನ್ನ ಮಾರುಕಟ್ಟೆ ಇರಲಿಲ್ಲ. ರೈತರಿಗೆ ಅನಾನುಕೂಲವಾದರೂ ಜಿಲ್ಲಾಡಳಿತ ಸ್ಪಂದಿಸಲಿಲ್ಲ. ಆ ಬೇಡಿಕೆ ಈಡೇರಿಸುವಂತೆ ನಾವು ಸೆ.3 ರಿಂದ ಅನಿರ್ದಿಷ್ಟಾವಧಿ ಧರಣಿ ನಡೆಸಿದ ಫಲವಾಗಿ ಇತ್ತೀಚೆಗೆ ಜಿಲ್ಲಾಡಳಿತ ಚಿಕ್ಕದಾಸರಹಳ್ಳಿ ಸರ್ವೇ ನಂಬರ್ 59 ರಲ್ಲಿ ಸುಮಾರು 20 ಎಕರೆ ಮಾರುಕಟ್ಟೆಗೆ ಮಂಜೂರು ಮಾಡಿದೆ’ ಎಂದು ತಿಳಿಸಿದರು.

‘ಇದೇ ಸಂದರ್ಭದಲ್ಲಿ ನಾವು ಪರಿವೀಕ್ಷಣಾ ಮಂದಿರದ ಹಿಂಭಾಗದಲ್ಲಿರುವ ಜಮೀನಿನಲ್ಲಿ ನಿರಾಶ್ರಿತರಿಗೆ ನಿವೇಶನ ನೀಡಬೇಕು ಎಂದು ಒತ್ತಾಯಿಸಿದೆವು. ಆದರೆ ಶಿಡ್ಲಘಟ್ಟದ ಬೈರಪ್ಪನವರ ನಾರಾಯಣಸ್ವಾಮಿ ಎಂಬುವರು ಆ ಜಮೀನು ತಮಗೆ ಸೇರಿದ್ದು ಎಂದು ಆಕ್ಷೇಪ ವ್ಯಕ್ತಪಡಿಸಿದರು. ಈ ಬಗ್ಗೆ ತಹಶೀಲ್ದಾರ್‌ ಅವರಿಗೆ ಮಾಹಿತಿ ಕೇಳಿ 20 ದಿನ ಕಾಲಾವಕಾಶ ನೀಡಿದರೂ ಅವರು ಮಾಹಿತಿ ಒದಗಿಸಲಿಲ್ಲ’ ಎಂದರು.

‘ಆ ಜಮೀನಿಗೆ ಸಂಬಂಧಿಸಿದಂತೆ ಈ ಹಿಂದೆ ಕೋಲಾರದ ಜಿಲ್ಲಾಧಿಕಾರಿ ಮತ್ತು ಕೆಲ ವರ್ಷಗಳ ಹಿಂದೆ ಚಿಕ್ಕಬಳ್ಳಾಪುರ ಜಿಲ್ಲಾಧಿಕಾರಿ ಅವರು ಕೊಳಗೇರಿ ನಿವಾಸಿಗಳ ಪರವಾಗಿ ಆದೇಶ ಮಾಡಿದ್ದಾರೆ. ಆದರೆ ಕೆಲವರು ಮಾರುಕಟ್ಟೆಗೆ ಜಮೀನು ಮಂಜೂರಾದ ಶ್ರೇಯಸ್ಸು ನಮಗೆ ಸಲ್ಲುತ್ತದೆ ಎಂಬ ಅಸೂಹೆಯಿಂದ ನಮ್ಮ ಮೇಲೆ ದೂರು ದಾಖಲಿಸಿದ್ದಾರೆ. ನಾವು ಬರುವ ತಿಂಗಳು ಶಿಡ್ಲಘಟ್ಟದಲ್ಲಿ ದೊಡ್ಡ ಕಾರ್ಯಕ್ರಮ ಹಮ್ಮಿಕೊಳ್ಳುತ್ತೇವೆ’ ಎಂದು ಹೇಳಿದರು.

‘ರೈತಸಂಘದ ಇನ್ನೊಂದು ಬಣದ ಮುಖಂಡರು ಇತ್ತೀಚೆಗೆ ಪತ್ರಿಕಾಗೋಷ್ಠಿಯಲ್ಲಿ ನಮ್ಮದು ರೈತ ಸಂಘವೇ ಅಲ್ಲ ಎಂದು ಹೇಳಿದ್ದಾರೆ. ಯಾವ ಸಂಘಟನೆ ಸರಿ ಇದೆ ಎಂದು ಜನರು ತೀರ್ಮಾನ ಮಾಡುತ್ತಾರೆ. ಸಾಲ ಮನ್ನಾ ಹೆಸರಿನಲ್ಲಿ ರಾಜ್ಯದಾದ್ಯಂತ ಸುಮಾರು ₨25 ಕೋಟಿ ವಸೂಲಿ ಮಾಡಿದವರು ಯಾರು? ರೈತರ ಹೆಸರಿನಲ್ಲಿ ನಾವು ಈವರೆಗೆ ಇಂತಹ ನಿಚ, ಕೆಟ್ಟ ಕೆಲಸಗಳನ್ನು ಮಾಡಿಲ್ಲ’ ಎಂದು ತಿಳಿಸಿದರು.

ರೈತ ಸಂಘದ ಜಿಲ್ಲಾ ಘಟಕದ ಅಧ್ಯಕ್ಷೆ ಸುಷ್ಮಾ ಶ್ರೀನಿವಾಸ್ ಮಾತನಾಡಿ, ‘ಸರ್ವೇ ನಂಬರ್ 64/1–5 ರಲ್ಲಿರುವ ಜಮೀನು 1992 ರಿಂದಲೇ ವೇಣುಗೋಪಾಲ್ ಸ್ವಾಮಿ ಮಾನ್ಯ ಎಂದು ದಾಖಲೆಯಲ್ಲಿದೆ. ನಂತರ ವಿವಿಧ ನ್ಯಾಯಾಲಯ ಮತ್ತು ಜಿಲ್ಲಾಧಿಕಾರಿ ಅವರ ನ್ಯಾಯಾಲಯದಲ್ಲಿ ಅದು ಕೊಳಚೆ ಪ್ರದೇಶ ಎಂದು ಆದೇಶವಾಗಿದೆ’ ಎಂದು ಹೇಳಿದರು.

‘ನಮಗೆ ಯಾರ ಬಗ್ಗೆಯೂ ದ್ವೇಷವಿಲ್ಲ. ಆ ಜಾಗ ನಿರಾಶ್ರಿತರಿಗೆ ಸಿಗಬೇಕು ಎನ್ನುವುದಷ್ಟೇ ನಮ್ಮ ಉದ್ದೇಶ. ಆ ಜಮೀನು ತಮ್ಮದು ಎಂದು ಇವತ್ತು ಹೇಳುತ್ತಿರುವವರು ಸೆ.4 ರಂದು ನಮ್ಮ ಕಚೇರಿಗೆ ಬಂದಾಗ ಜಮೀನಿಗೆ ಸಂಬಂಧಿತ ಮೂಲ ದಾಖಲೆಗಳನ್ನು ತೋರಿಸುವಂತೆ ಹೇಳಿದಾಗ, ತಂದು ತೋರಿಸುತ್ತೇವೆ ಎಂದು ಹೇಳಿ ಹೋದವರು ಈವರೆಗೆ ವಾಪಸ್ ಬಂದಿಲ್ಲ’ ಎಂದರು.

‘ರೈತ ಸಂಘಟನೆಗಳ ಪದಾಧಿಕಾರಿಗಳು ಸಹೋದರ ಭಾವದಿಂದ ಹೋರಾಟ ಮಾಡಬೇಕೇ ವಿನಾ ವೈಯಕ್ತಿಕ ದ್ವೇಷ ಸಾಧನೆ ಒಳ್ಳೆಯದಲ್ಲ. ರೈತರ ಪರವಾದ ಧರಣಿಗೆ ಸಾಥ್‌ ಕೊಡುವುದು ಬಿಟ್ಟು, ಮೊಸರಿನಲ್ಲಿ ಕಲ್ಲು ಹುಡುಕುವ ಕೆಲಸ ಯಾರಿಗೂ ಶೋಭೆ ತರುವುದಿಲ್ಲ. ಆ ಜಮೀನಿಗೆ ಸಂಬಂಧಪಟ್ಟಂತೆ ನಮ್ಮ ಬಳಿ ಸಂಪೂರ್ಣ ದಾಖಲೆಗಳಿವೆ’ ಎಂದು ಹೇಳಿದರು.

ರೈತ ಸಂಘದ ಪದಾಧಿಕಾರಿಗಳಾ ಜಿ.ನಾರಾಯಣಸ್ವಾಮಿ, ಮಹಾಲಕ್ಷ್ಮಮ್ಮ, ಕಲ್ವಮಂಜಲಿ ರಾಮು ಶಿವಣ್ಣ, ವೆಂಕಟರಾಮಯ್ಯ, ಚಲಪತಿ, ಸುಧಾಕರ್, ಪ್ರವೀಣ್, ವೆಂಕಟಲಕ್ಷ್ಮಯ್ಯ ಹಾಜರಿದ್ದರು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು