ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸರ್ಕಾರದ ಯೋಜನೆಗಳನ್ನು ರೈತರಿಗೆ ತಲುಪಿಸಿ

ಬ್ಯಾಂಕ್ ಅಧಿಕಾರಿಗಳೊಂದಿಗೆ ತ್ರೈಮಾಸಿಕ ಸಭೆ ನಡೆಸಿದ ಸಿಇಒ
Last Updated 29 ಮೇ 2020, 16:14 IST
ಅಕ್ಷರ ಗಾತ್ರ

ಚಿಕ್ಕಬಳ್ಳಾಪುರ: ‘ರೈತರ ಅನುಕೂಲಕ್ಕಾಗಿ ವಿವಿಧ ಯೋಜನೆಗಳ ಮುಖಾಂತರ ಬಿಡುಗಡೆ ಮಾಡುವ ಹಣವನ್ನು ನೇರವಾಗಿ ರೈತರ ಖಾತೆಗೆ ತಲುಪುವಂತೆ ಮಾಡುವ ಹೊಣೆಗಾರಿಕೆ ಬ್ಯಾಂಕುಗಳದ್ದಾಗಿವೆ’ ಎಂದು ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಬಿ.ಫೌಜಿಯಾ ತರನ್ನುಮ್ ಹೇಳಿದರು.

ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ಶುಕ್ರವಾರ ನಡೆದ ಬ್ಯಾಂಕ್‍ ವ್ಯವಸ್ಥಾಪಕರ ತ್ರೈಮಾಸಿಕ ಸಭೆಯಲ್ಲಿ ಅವರು ಮಾತನಾಡಿದರು.

‘ಸರ್ಕಾರದ ಯೋಜನೆಗಳು, ಬ್ಯಾಂಕ್ ವ್ಯವಹಾರಗಳು ಸಮರ್ಪಕವಾಗಿ ನಡೆಯುವಲ್ಲಿ ಬ್ಯಾಂಕ್ ಅಧಿಕಾರಿಗಳು ಪ್ರಮುಖ ಪಾತ್ರವನ್ನು ವಹಿಸಬೇಕು. ಜಿಲ್ಲೆಯಲ್ಲಿ ನಡೆಯುವ ಹಣಕಾಸಿನ ವ್ಯವಹಾರವು ಜಿಲ್ಲೆಯ ಅಭಿವೃದ್ಧಿಗೆ ಸಹಕಾರವಾಗುವಂತೆ ಕೃಷಿ ಸಂಬಂಧಿತ ಯೋಜನೆಗಳಲ್ಲಿ ಇಲ್ಲಿಯೇ ಹೂಡಿಕೆಯನ್ನು ಮಾಡಲು ಕ್ರಮಕೈಗೊಳ್ಳಬೇಕು’ ಎಂದು ಸಲಹೆ ನೀಡಿದರು.

‘ಕರ್ನಾಟಕ ಅಲ್ಪಸಂಖ್ಯಾತರ ಅಭಿವೃದ್ಧಿ ನಿಗಮ, ದೇವರಾಜ್ ಅರಸು ಯೋಜನೆ, ರಾಜೀವ್‍ಗಾಂಧಿ ಚೈತನ್ಯ ಯೋಜನೆ ಸೇರಿದಂತೆ 2019-20ನೇ ಸಾಲಿನ ಅನೇಕ ಸರ್ಕಾರದ ಯೋಜನೆಗಳಿಗೆ ಸಾಲ ಸೌಲಭ್ಯವನ್ನು ನೀಡದೆ ಅರ್ಜಿಗಳನ್ನು ಬಾಕಿ ಉಳಿಸಿಕೊಂಡಿದ್ದು, ಇದರಿಂದ ರೈತರಿಗೆ ತೊಂದರೆ ಉಂಟಾಗುತ್ತಿದೆ. ಅದರ ಬಗೆಗಿನ ಸಮರ್ಪಕವಾದ ವರದಿಯನ್ನು ಸಂಬಂಧಪಟ್ಟ ಬ್ಯಾಂಕ್‍ಗಳು ನೀಡಬೇಕು’ ಎಂದು ಹೇಳಿದರು.

‘ಪ್ರಧಾನ್ ಮಂತ್ರಿ ಗರೀಬ್ ಕಿಸಾನ್ ಯೋಜನೆ ಮತ್ತು ಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ್ ಯೋಜನೆಯ ಫಲಾನುಭವಿಗಳಿಗೆ ಸಮರ್ಪಕವಾಗಿ ಉಪಯೋಗವಾಗುವಂತೆ ನೋಡಿಕೊಳ್ಳಬೇಕು. ಸಾಧ್ಯವಾದರೆ ಈ ಯೋಜನೆಗಳಡಿ ನರೇಗಾ ಯೋಜನೆ ಅಳವಡಿಸಲು ಪಶುಸಂಗೋಪನೆ ಹಾಗೂ ಮೀನುಗಾರಿಕೆಗೆ ಹಣಕಾಸಿನ ಸಾಲ ಸೌಲಭ್ಯ ಒದಗಿಸಲು ಬ್ಯಾಂಕ್‍ಗಳು ಮುಂದಾಗಬೇಕು’ ಎಂದರು.

‘ವಿವಿಧ ಯೋಜನೆಗಳಿಗೆ ಸಂಬಂಧಿಸಿದಂತೆ ಜಿಲ್ಲೆಯಾದ್ಯಂತ ಎಲ್ಲಾ ಬ್ಯಾಂಕ್‍ಗಳಲ್ಲಿ ಉಳಿದ ಯೋಜನೆಗಳ ಅರ್ಜಿಗಳನ್ನು ಸಕಾಲಕ್ಕೆ ಜಾರಿಗೊಳಿಸಬೇಕು. ರೈತ ಸಂಪರ್ಕ ಕೇಂದ್ರಗಳಿಗೆ ಭೇಟಿ ನೀಡಿದಾಗ ಬ್ಯಾಂಕ್‍ಗಳಿಗೆ ಅರ್ಜಿಸಲ್ಲಿದ್ದು ಯಾವುದೇ ಪ್ರತಿಕ್ರಿಯೆ ಬಂದಿಲ್ಲ ಎಂಬುದು ಗಮನಕ್ಕೆ ಬರುತ್ತಿದ್ದು, ತಿರಸ್ಕಾರಗೊಂಡ ಅರ್ಜಿಗಳ ಬಗ್ಗೆ 15 ದಿನಗಳೊಳಗೆ ಪೂರ್ಣ ವಿವರಣೆ ನೀಡಬೇಕು’ ಎಂದು ಹೇಳಿದರು.

‘ಕೋವಿಡ್-19 ಸೋಂಕಿನ ಕಾರಣಕ್ಕೆ ಕಿಸಾನ್ ಕಾರ್ಡ್‍ಗಳನ್ನು ರೈತರಿಗೆ ತಲುಪಿಸಲು ತಡವಾಗಿದ್ದು ಅದಕ್ಕೆ ಸಂಬಂಧಿಸಿದಂತೆ ಅಗತ್ಯ ಕ್ರಮಗಳನ್ನು ಕೈಗೊಳ್ಳಲಾಗುವುದು. ಬ್ಯಾಂಕ್‍ಗಳಿಗೆ ಬರುವ ಮಹಿಳೆಯರಿಗೆ ಬ್ಯಾಂಕ್ ವ್ಯವಹಾರದ ಅರಿವು ಮೂಡಿಸಬೇಕು. ಸಂಘಗಳಿಗೆ ಸಾಲಸೌಲಭ್ಯ ನೀಡಲು ಬ್ಯಾಂಕ್ ಸಿಬ್ಬಂದಿ ಪಾನ್ ಕಾರ್ಡ್ ಕೇಳಬೇಡಿ’ ಎಂದು ಸೂಚಿಸಿದರು.

‘ರೈತರಿಗೆ ವ್ಯವಸಾಯಕ್ಕೆ ಸಂಬಂಧಿಸಿದಂತೆ ರಾಜ್ಯ ಹಾಗೂ ಕೇಂದ್ರ ಸರ್ಕಾರದ ವಿವಿಧ ಯೋಜನೆಗಳ ಬಗ್ಗೆ ಅರಿವು ಮೂಡಿಸುವ ಕಾರ್ಯ ಆಗಬೇಕು. ಪಂಚಾಯಿತಿ, ನಾಡಕಚೇರಿ ಸೇರಿದಂತೆ ವಿವಿಧೆಡೆ ಭಿತ್ತಿಪತ್ರಗಳನ್ನು ಅಂಟಿಸುವ ಮೂಲಕ ವ್ಯಾಪಕ ಪ್ರಚಾರ ನೀಡುವ ಮೂಲಕ ಯೋಜನೆಗಳು ರೈತರಿಗೆ ತಲುಪುವಂತೆ ನೋಡಿಕೊಳ್ಳಬೇಕು’ ಎಂದು ಹೇಳಿದರು.

‘ಕೋವಿಡ್-19 ಸಮಯದಲ್ಲಿ ವೈರಸ್ ಸೋಂಕು ಹರಡದಂತೆ ಅವಶ್ಯವಾದ ಮುಂಜಾಗ್ರತಾ ಕ್ರಮಗಳನ್ನು ತೆಗೆದುಕೊಳ್ಳಬೇಕು. ಅಗತ್ಯವಾದ ಸ್ಯಾನಿಟೈಸರ್ ಬಳಕೆ ಸೇರಿದಂತೆ ಅಂತರವನ್ನು ಕಾಯ್ದುಕೊಳ್ಳುವ ಜವಾಬ್ದಾರಿ ಆಯಾ ಬ್ಯಾಂಕ್ ಸಿಬ್ಬಂದಿ ಮೇಲಿದೆ’ ಎಂದರು.

ಜಿಲ್ಲಾ ಲೀಡ್ ಬ್ಯಾಂಕ್ ವ್ಯವಸ್ಥಾಪಕ ಬಸವರಾಜ್, ಕೆನೆರಾ ಬ್ಯಾಂಕ್ ಸಹಾಯಕ ಪ್ರಧಾನ ವ್ಯವಸ್ಥಾಪಕ ಸತ್ಯನಾರಾಯಣ, ಕರ್ನಾಟಕ ಗ್ರಾಮೀಣ ಬ್ಯಾಂಕ್ ಸಿ.ಬಿ.ಆರ್.ಎಸ್.ಇ.ಟಿ.ಐ ವೆಂಕಟಸ್ವಾಮಿ ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT