ಶನಿವಾರ, ಜನವರಿ 28, 2023
20 °C
ಜಮೀನುಗಳಿಗೆ ನುಗ್ಗಿದ ನೀರು: ಬೆಳೆ ಹಾನಿ

ನೆಕ್ಕುಂದಿ ಕೆರೆ ಕೋಡಿ ದುರಸ್ತಿಗೆ ಆಗ್ರಹ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಚಿಂತಾಮಣಿ: ನಗರದ ನೆಕ್ಕುಂದಿ ಕೆರೆಯ ಕಟ್ಟೆಯನ್ನು ದುಷ್ಕರ್ಮಿಗಳು ಸೋಮವಾರ ರಾತ್ರಿ ಒಡೆದು ಸ್ವಲ್ಪ ಭಾಗವನ್ನು ನಾಶಪಡಿಸಿರುವುದರಿಂದ ಕೆರೆಯ ನೀರು ವ್ಯರ್ಥವಾಗಿ ಹರಿದು ಹೋಗುತ್ತಿದೆ. ಜತೆಗೆ ಆ ನೀರು ರೈತರ ಜಮೀನುಗಳಿಗೆ ನುಗ್ಗಿ ಬೆಳೆ ಹಾಳಾಗಿದೆ ಎಂದು ನಗರಸಭೆ ಸದಸ್ಯೆ ರಾಣಿಯಮ್ಮ ತಿಳಿಸಿದರು.

ಅವರು ಮಂಗಳವಾರ ಕೆರೆ ಕಟ್ಟೆಗೆ ಭೇಟಿ ನೀಡಿ, ನೀರು ಹರಿಯುತ್ತಿರುವುದನ್ನು ಖಚಿತಪಡಿಸಿಕೊಂಡರು.

‘ಕೆರೆಯ ಕಟ್ಟೆಯನ್ನು ದುರಸ್ತಿಗೊಳಿಸುವಂತೆ ಹಲವಾರು ಬಾರಿ ನಗರಸಭೆ ಪೌರಾಯುಕ್ತರಿಗೆ ಮನವಿ ಮಾಡಿದ್ದೇನೆ. ಹಿಂದಿನ ಪೌರಾಯುಕ್ತ ಉಮಾಶಂಕರ್ ಸ್ಥಳಕ್ಕೆ ಭೇಟಿ ನೀಡಿ ಶೀಘ್ರವಾಗಿ ಮಾಡಿಸುವುದಾಗಿ ಭರವಸೆ ನೀಡಿದ್ದರು. ಅವರು ವರ್ಗಾವಣೆಯಾದರು. ಈಗಿನ ಪೌರಾಯುಕ್ತರು ಈ ಕಡೆಗೆ ಬರುವುದಿಲ್ಲ. ಕೆರೆಯ ನೀರು ವ್ಯರ್ಥವಾಗಿ ಹರಿದುಹೋಗುತ್ತಿದ್ದು ನಗರಸಭೆಗೆ ಲಕ್ಷಾಂತರ ರೂ ನಷ್ಟವಾಗುತ್ತದೆ’ ಎಂದು ಆರೋಪಿಸಿದರು.

‘ಕಳೆದ 10 ವರ್ಷಗಳಿಂದ ಕೆರೆಯಲ್ಲಿ ನೀರು ಇರಲಿಲ್ಲ. ಕಳೆದ ಎರಡು ವರ್ಷದಿಂದ ಕೆರೆಯಲ್ಲಿ ನೀರಿದೆ. ನೀರು ಪೂರೈಕೆಗಾಗಿ ಲಕ್ಷಾಂತರ ರೂ ಖರ್ಚು ಮಾಡಲಾಗುತ್ತಿತ್ತು. ಕೆರೆಗೆ ನೀರು ಬಂದಿರುವುದರಿಂದ ನಗರಸಭೆಗೆ ಹಣ ಉಳಿತಾಯವಾಗಿದೆ, ಜನರಿಗೂ ಅನುಕೂಲವಾಗಿದೆ. ನಗರದ ಅಗ್ರಹಾರ, ನೆಕ್ಕುಂದಿ ಸೇರಿದಂತೆ ಹಲವಾರು ವಾರ್ಡ್‌ಗಳಿಗೆ ಈ ಕೆರೆಯಿಂದ ನೀರು ಪೂರೈಕೆಯಾಗುತ್ತಿತ್ತು. ನೀರು ವ್ಯರ್ಥವಾಗಿ ಹರಿದುಹೋದರೆ ನಗರಸಭೆ ನೀರಿನ ಟ್ಯಾಂಕರ್‌ಗಳಿಗಾಗಿ ಲಕ್ಷಾಂತರ ರೂ ಖರ್ಚು ಮಾಡಬೇಕಾಗುತ್ತದೆ’ ಎಂದರು.

ಕೆರೆಯ ನೀರು ರೈತರ ಜಮೀನುಗಳ ಮೇಲೆ ಹರಿದು ಬೆಳೆಗಳು ನಾಶವಾಗಿದ್ದು ಲಕ್ಷಾಂತರ ರುಪಾಯಿ ನಷ್ಟ ಅನುಭವಿಸುತ್ತಿದ್ದಾರೆ. ತಹಶೀಲ್ದಾರ್, ಪೌರಾಯುಕ್ತರು ಸ್ಥಳಕ್ಕೆ ಭೇಟಿ ನೀಡಿ ಕೆರೆಯ ಕಟ್ಟೆಯನ್ನು ದುರಸ್ತಿಗೊಳಿಸಲು ವ್ಯವಸ್ಥೆ ಮಾಡಬೇಕು. ಬೆಳೆ ನಷ್ಟ ಹೊಂದಿರುವ ರೈತರಿಗೆ ಪರಿಹಾರ ನೀಡಬೇಕು ಎಂದು ಒತ್ತಾಯಿಸಿದರು.

ಕೆರೆಯ ಕಟ್ಟೆಯನ್ನು ಒಂದು ಭಾಗದಲ್ಲಿ ಅಗೆದು ನೀರು ಹರಿದುಹೋಗುತ್ತಿದೆ. ಯಾರು ಮಾಡಿದ್ದಾರೋ ಗೊತ್ತಿಲ್ಲ. ಕೋಡಿ ಹರಿಯುವ ರಾಜಕಾಲುವೆಯೂ ಮುಚ್ಚಿ ಹೋಗಿದ್ದು ನೀರು ರೈತರ ಜಮೀನುಗಳ ಮೇಲೆ ಹರಿಯುತ್ತಿದೆ. ಪದೇ ಪದೇ ಈ ರೀತಿ ರೈತರಿಗೆ ಮತ್ತು ನಗರದ ನಾಗರಿಕರಿಗೆ ತೊಂದರೆ ಆಗುತ್ತಿದೆ. ಕಟ್ಟೆ ಮತ್ತು ರಾಜಕಾಲುವೆಯ ಸಮಸ್ಯೆಗೆ ಶಾಶ್ವತ ಪರಿಹಾರ ಒದಗಿಸಬೇಕು ಎಂದು ರೈತರು ಒತ್ತಾಯಿಸಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.