ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

12ರಂದು ಚುನಾವಣೆ; ಮತದಾನಕ್ಕೆ ಸಿದ್ಧತೆ

76 ಅಭ್ಯರ್ಥಿಗಳು ಕಣದಲ್ಲಿ, ಜಿಲ್ಲೆಯಲ್ಲಿ 1.37 ಲಕ್ಷ ಮತದಾರರು
Last Updated 8 ಮೇ 2018, 10:33 IST
ಅಕ್ಷರ ಗಾತ್ರ

ಚಿತ್ರದುರ್ಗ: ಇದೇ 12ರಂದು ನಡೆಯ ಲಿರುವ ವಿಧಾನಸಭಾ ಚುನಾವಣೆ ಮತದಾನಕ್ಕೆ ಸಕಲ ಸಿದ್ಧತೆಗಳು ಪೂರ್ಣಗೊಂಡಿವೆ ಎಂದು ಜಿಲ್ಲಾಧಿಕಾರಿ ಮತ್ತು ಜಿಲ್ಲಾ ಚುನಾವಣಾಧಿಕಾರಿ ವಿ.ವಿ.ಜ್ಯೋತ್ಸ್ನಾ ತಿಳಿಸಿದರು.

ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಸೋಮವಾರ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ‘ಜಿಲ್ಲೆಯ 6 ವಿಧಾನಸಭಾ ಕ್ಷೇತ್ರಗಳಿಂದ 76 ಅಭ್ಯರ್ಥಿಗಳು ಚುನಾವಣಾ ಕಣದಲ್ಲಿದ್ದಾರೆ. ಒಟ್ಟು ಆರು ಕ್ಷೇತ್ರಗಳಿಂದ 13,37,940 ಮತದಾರರಿದ್ದಾರೆ. ಇದರಲ್ಲಿ 6,74,851 ಪುರುಷ, 6,62,990 ಮಹಿಳಾ ಮತದಾರರು ಹಾಗೂ 99 ಇತರೆ ಮತದಾರರು ಸೇರಿದ್ದಾರೆ. ಮತದಾನಕ್ಕಾಗಿ ಒಟ್ಟು 1628 ಮತಗಟ್ಟೆಗಳನ್ನು ಸ್ಥಾಪಿಸಲಾಗುತ್ತದೆ’ ಎಂದು ಮಾಹಿತಿ ನೀಡಿದರು.

ಮಸ್ಟರಿಂಗ್ ಮತ್ತು ಡಿ-ಮಸ್ಟರಿಂಗ್ ಕೇಂದ್ರಗಳು:
ಚುನಾವಣೆಗಾಗಿ ಆರು ವಿಧಾನಸಭಾ ಕ್ಷೇತ್ರಗಳಲ್ಲಿ ಮಸ್ಟರಿಂಗ್ ಮತ್ತು ಡಿ-ಮಸ್ಟರಿಂಗ್ ಕೇಂದ್ರಗಳನ್ನು ಗುರುತಿಸಲಾಗಿದೆ. ಕ್ಷೇತ್ರ ಮತ್ತು ಕೇಂದ್ರದ ವಿವರ ಹೀಗಿದೆ;

ಮೊಳಕಾಲ್ಮುರು – ಸರ್ಕಾರಿ ಪದವಿ ಪೂರ್ವ ಕಾಲೇಜು, ಮೊಳಕಾಲ್ಮುರು, ಚಳ್ಳಕೆರೆ ಕ್ಷೇತ್ರ – ಎಚ್ ಪಿ ಪಿ ಸಿ ಕಾಲೇಜು, ಚಳ್ಳಕೆರೆ, ಚಿತ್ರದುರ್ಗ ಕ್ಷೇತ್ರ – ಸರ್ಕಾರಿ ಬಾಲಕರ ಪದವಿಪೂರ್ವ ಕಾಲೇಜು, ಬಿ.ಡಿ.ರಸ್ತೆ, ಚಿತ್ರದುರ್ಗ, ಹಿರಿಯೂರು ಕ್ಷೇತ್ರ– ಸೇಂಟ್ ಆನ್ಸ್ ಕಾನ್ವೆಂಟ್ ಶಾಲೆ, ವೇದಾವತಿ ನಗರ, ಹಿರಿಯೂರು, ಹೊಸದುರ್ಗ – ಶ್ರೀಮತಿ ತಾಯಮ್ಮ ಶ್ರೀ ಏಡಿತೋರೆ ಸದ್ದಿವಾಲ್ ಲಿಂಗಯ್ಯ ಸರ್ಕಾರಿ ಪದವಿಪೂರ್ವ ಕಾಲೇಜು, ಹೊಸದುರ್ಗ, ಹೊಳಲ್ಕೆರೆ – ಸರ್ಕಾರಿ ಪ್ರಥಮ ದರ್ಜೆ ಕಾಲೇಜು, ಹೊಳಲ್ಕೆರೆ.

ಬಹಿರಂಗ ಪ್ರಚಾರ ಮುಕ್ತಾಯದ ಸಮಯ;
ಮತದಾನ ಮುಕ್ತಾಯಗೊಳ್ಳುವ 48 ಗಂಟೆಗಳ ಮುನ್ನ ಬಹಿರಂಗ ಪ್ರಚಾ ರವನ್ನು ಮುಕ್ತಾಯಗೊಳಿಸಬೇಕು. ಅಂದರೆ ಇದೇ 10 ರ ಸಂಜೆ 6 ಗಂಟೆಗೆ ಬಹಿರಂಗ ಪ್ರಚಾರ ಮುಕ್ತಾಯಗೊಳಿಸಬೇಕು. ಆಯಾ ಕ್ಷೇತ್ರದ ಮತದಾರರನ್ನು ಹೊರತು ಪಡಿಸಿ, ಉಳಿದವರು ಕ್ಷೇತ್ರ ಬಿಟ್ಟು ಹೋಗತಕ್ಕದ್ದು, ಮನೆ ಮನೆ ಪ್ರಚಾರವನ್ನು ಕೈಗೊಳ್ಳಬಹುದಾಗಿದ್ದು ಅಭ್ಯರ್ಥಿ ಸೇರಿ 10 ಜನರನ್ನು ಮೀರುವಂತಿಲ್ಲ ಎಂದು ತಿಳಿಸಿದರು.

ಜಾಹೀರಾತು ಪ್ರಕಟಣೆಗೆ ನಿರ್ಬಂಧ:
ಮತದಾನ ಮುಕ್ತಾಯವಾಗುವ 48 ಗಂಟೆಗಳ ಮುಂಚಿತವಾಗಿ ಯಾವುದೇ ವಿದ್ಯುನ್ಮಾನ ಮಾಧ್ಯಮಗಳಲ್ಲಿ ಪಕ್ಷದ ಪರವಾಗಿ, ಅಭ್ಯರ್ಥಿಪರವಾಗಿ ಜಾಹಿರಾತು ಪ್ರಕಟಿಸುವಂತಿಲ್ಲ. ಆದರೆ ಮುದ್ರಣ ಮಾಧ್ಯಮಗಳಲ್ಲಿ ಜಾಹೀರಾತು ಪ್ರಕಟಣೆಗೆ ಅವಕಾಶ ಇರುತ್ತದೆ. ಇದಕ್ಕಾಗಿ ರಾಷ್ಟ್ರೀಯ ಮತ್ತು ಇತರೆ ಪಕ್ಷದ ಅಭ್ಯರ್ಥಿಗಳು ರಾಜ್ಯ ಮುಖ್ಯ ಚುನಾವಣಾಧಿಕಾರಿಗಳ ಕಚೇರಿಯಿಂದ ಅನುಮತಿ ಪಡೆದುಕೊಳ್ಳಬೇಕು. ಪಕ್ಷೇತರ ಅಭ್ಯರ್ಥಿಗಳು ಜಿಲ್ಲಾ ಚುಣಾವಣಾಧಿಕಾರಿಗಳಿಗೆ ನಮೂನೆ ಸಿ ಅಡಿ ವಿವರವನ್ನು ಸಲ್ಲಿಸಿ ಅನುಮತಿ ಪಡೆದು ಪ್ರಕಟಿಸಲು ಅವಕಾಶ ಇದೆ ಎಂದು ತಿಳಿಸಿದರು.

‘ಮತದಾನದ ದಿವಸ ಮತಗಟ್ಟೆಯ 100 ಮೀಟರ್ ಹೊರಗೆ ನೆರಳಿನ ವ್ಯವಸ್ಥೆ (ಛತ್ರಿ) ಮಾತ್ರ ಮಾಡಿಕೊಳ್ಳಬೇಕು. ಮತದಾರರಿಗೆ ಮತಗಟ್ಟೆಗಳಿಗೆ ಕರೆದು ಕೊಂಡು ಬರಲು ಮತ್ತು ಹೋಗಲು ವಾಹನದ ವ್ಯವಸ್ಥೆ ಮತ್ತು ತಿಂಡಿ/ಊಟದ ವ್ಯವಸ್ಥೆ ಮಾಡುವಂತಿಲ್ಲ. ತಮ್ಮ ಮತಗಟ್ಟೆ ಏಜೆಂಟರಿಗೆ ನಿಗದಿತ ಸಮಯದೊಳಗೆ ಮತಗಟ್ಟೆಗಳಲ್ಲಿ ಹಾಜರಾಗುವಂತೆ ತಿಳಿಸಬೇಕು’ ಎಂದು ಸೂಚಿಸಿದರು. ‘ಬೆಳಿಗ್ಗೆ 6 ಗಂಟೆಗೆ ಸಂಬಂಧಪಟ್ಟ ಮತದಾನ ಸಿಬ್ಬಂದಿ ಮಾಕ್ ಪೊಲಿಂಗ್ ಮಾಡಲಿದ್ದು, ಸದರಿ ಕಾರ್ಯದಲ್ಲಿ ಪಕ್ಷದ ಏಜೆಂಟರು ಪಾಲ್ಗೊಳ್ಳಲು ಮನವಿ ಮಾಡುತ್ತಿದ್ದೇವೆ’ ಎಂದರು.

‘ಮತದಾನದ ವೇಳೆ ಏಜೆಂಟರು ಶಾಂತಿ ಮತ್ತು ಸುವ್ಯವಸ್ಥೆ ಕಾಪಾಡಬೇಕು. ಡಿ-ಮಸ್ಟರಿಂಗ್ ಕೇಂದ್ರದಿಂದ ಭದ್ರತಾ ಕೊಠಡಿಗೆ ಇವಿಎಂ ಗಳನ್ನು ಸಾಗಿಸುವಾಗ ಅಭ್ಯರ್ಥಿಗಳು ಕೂಡ ಜೊತೆಯಲ್ಲಿ ಬರಬಹುದು. ಮತ ದಾನಕ್ಕೆ ಉಪಯೋಗಿಸುವ ಇವಿಎಂ ಗಳನ್ನು ಭದ್ರತಾ ಕೊಠಡಿಯಲ್ಲಿ ಇಡುವಾಗ ಅಭ್ಯರ್ಥಿಗಳು ಹಾಜರಿದ್ದು, ಸದರಿ ಕೊಠಡಿಗಳನ್ನು ಸೀಲು ಮಾಡುವಾಗ ತಮ್ಮ ಮೊಹರು ಸಹ ಮಾಡಬಹುದಾಗಿದೆ. ಅಭ್ಯರ್ಥಿಗಳು ಅಥವಾ ಅವರ ನಿಯೋಜಕರು ಭದ್ರತಾ ಕೊಠಡಿಗಳ ಬಳಿ ಮತ ಎಣೆಕೆಯವರೆಗೆ ಇರಬಹುದು’ ಎಂದು ತಿಳಿಸಿದರು.

ಅಶಕ್ತರು, ಅಂಗವಿಕಲರಿಗೆ ಮೊದಲ ಆದ್ಯತೆ:
‘ಮತದಾ ನದ ವೇಳೆ ಪುರುಷರು ಹಾಗೂ ಮಹಿಳಾ ಮತದಾರರಿಗೆ ಪ್ರತ್ಯೇಕ ಸಾಲುಗಳಿರುತ್ತವೆ. ಇಲ್ಲಿ ವೃದ್ಧರು, ಅಂಗವಿಕಲರು, ಗರ್ಭಿಣಿ, ಬಾಣಂತಿ ಯರಿಗೆ, ತೀವ್ರತರ ಅನಾರೋಗ್ಯದಿಂದ ಬಳಲುತ್ತಿ ರುವವರಿಗೆ ಮೊದಲ ಆದ್ಯತೆ ನೀಡಲಾಗುತ್ತದೆ. ಅಂಗವಿಕಲರು ಮತದಾನ ಮಾಡಲು ಅವರ ಸಹಾಯಕ್ಕೆ ಬೇಕಾದ ಎಲ್ಲಾ ಪರಿಕರಗಳ ವ್ಯವಸ್ಥೆಯನ್ನು ಮತದಾನ ಕೇಂದ್ರಗಳಲ್ಲಿ ವ್ಯವಸ್ಥೆ ಮಾಡಲಾಗುತ್ತದೆ’ ಎಂದು ಜ್ಯೋತ್ಸ್ನಾ ವಿವರಿಸಿದರು.

ಜಿಲ್ಲೆಯಲ್ಲಿ 14,092 ವಿಕಲಚೇತನ ಮತದಾರರಿದ್ದು ಆಯಾ ಮತಗಟ್ಟೆಗೆ ಬೇಕಾದ ಸೌಲಭ್ಯವನ್ನು ಕಲ್ಪಿಸಲಾಗಿದೆ. ಪ್ರತಿ ಕ್ಷೇತ್ರದಲ್ಲಿ ಎರಡು ಪಿಂಕ್ ಮತದಾನ ಕೇಂದ್ರಗಳನ್ನು ಗುರುತಿಸಲಾಗಿದ್ದು, ಇಲ್ಲಿ ಮತದಾನ ಸಿಬ್ಬಂದಿ ಎಲ್ಲರೂ ಮಹಿಳೆಯರಾಗಿರುತ್ತಾರೆ. ಒಟ್ಟು ಜಿಲ್ಲೆಯಲ್ಲಿ 12 ಪಿಂಕ್ ಮತದಾನ ಕೇಂದ್ರಗಳನ್ನು ಗುರುತಿಸಲಾಗಿದೆ. ಮತದಾನ ಮಾಡುವವರು ಪುರುಷ ಹಾಗೂ ಮಹಿಳೆಯರು ಇರುತ್ತಾರೆ ಎಂದು ಮಾಹಿತಿ ನೀಡಿದರು.

24 ಪ್ರಕರಣ ದಾಖಲು:
ಚುನಾವಣಾ ದಿನಾಂಕ ಪ್ರಕಟವಾಗಿ ನೀತಿ ಸಂಹಿತೆ ಜಾರಿಯಾದಾಗಿನಿಂದ ಇಲ್ಲಿಯವರೆಗೆ ನೀತಿ ಸಂಹಿತೆ ಉಲ್ಲಂಘನೆಗೆ ಸಂಬಂಧಿಸಿದಂತೆ 24 ಪ್ರಕರಣಗಳಿಗೆ ಎಫ್‌ಐಆರ್ ದಾಖಲಿಸಲಾಗಿದೆ. ಇದೇ ಅವಧಿಯಲ್ಲಿ 25,724.44 ಲೀಟರ್ ಮದ್ಯ ವಶಪಡಿಸಿಕೊಳ್ಳಲಾಗಿದೆ. ದಾಖಲೆ ಗಳಿಲ್ಲದೆ ನಗದು ಸಾಗಣೆ ಮಾಡುತ್ತಿದ್ದ ವೇಳೆ ಎಫ್‌ಎಸ್‌ಟಿಯಿಂದ ₹ 23, 23,200 ಹಾಗೂ ಚೆಕ್‌ ಪೋಸ್ಟ್‌ ಗಳಲ್ಲಿ ₹ 20,80,023 ಗಳನ್ನು ವಶಪಡಿ ಸಿಕೊಳ್ಳಲಾಗಿದೆ. ಚುನಾವಣೆಗೆ ಸಂಬಂಧಿಸಿದಂತೆ ಯಾವುದೇ ದೂರು ಗಳಿದ್ದಲ್ಲಿ 1077 ಟೋಲ್‌ಫ್ರೀ ಸಂಖ್ಯೆಗೆ ಕರೆ ಮಾಡಬಹುದಾಗಿದೆ ಎಂದರು.

ಸುದ್ದಿಗೋಷ್ಠಿಯಲ್ಲಿ ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಹಾಗೂ ಸ್ವೀಪ್ ಸಮಿತಿ ಅಧ್ಯಕ್ಷ ಪಿ.ಎನ್.ರವೀಂದ್ರ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಶ್ರೀನಾಥ್ ಜೋಶಿ ಹಾಗೂ ಹೆಚ್ಚುವರಿ ಜಿಲ್ಲಾಧಿಕಾರಿ ಕೆ.ಸಂಗಪ್ಪ ಉಪಸ್ಥಿತರಿದ್ದರು.

ಮತದಾನಕ್ಕೆ ಬೇಕಾದ 12 ದಾಖಲೆಗಳು

ಮತದಾನ ಮಾಡಲು ಗುರುತಿನ ಚೀಟಿ ಹಾಜರುಪಡಿಸುವುದು ಕಡ್ಡಾಯ. ಚುನಾವಣಾ ಆಯೋಗದಿಂದ ನೀಡಲಾದ ಭಾವಚಿತ್ರವಿರುವ ಗುರುತಿನ ಚೀಟಿ ತರಬೇಕು ಇಲ್ಲದಿದ್ದಲ್ಲಿ ಇತರೆ ಭಾವಚಿತ್ರವಿರುವ 12 ದಾಖಲೆಗಳಿಗೆ ಅವಕಾಶ ನೀಡಲಾಗಿದೆ. ಆ ದಾಖಲೆಗಳು ಹೀಗಿವೆ;

ಪಾಸ್‌ಪೋರ್ಟ್, ಚಾಲನ ಪರವಾನಗಿ , ಕೇಂದ್ರ ಮತ್ತು ರಾಜ್ಯ ಸರ್ಕಾರದ ಪಬ್ಲಿಕ್ ಕಂಪೆನಿಗಳ ನೌಕರರ ಫೋಟೊ ಸಹಿತ ಗುರುತಿನ ಸೇವಾ ಕಾರ್ಡ್, ಬ್ಯಾಂಕ್ ಅಥವಾ ಪೋಸ್ಟ್ ಆಫೀಸಿನಿಂದ ನೀಡಲಾದ ಫೋಟೋ ಸಹಿತ ಪಾಸ್‌ಬುಕ್, ಪಾನ್ ಕಾರ್ಡ್, ಆರ್ ಜಿ ಐ. ನಿಂದ ನೀಡಲಾದ ಸ್ಮಾರ್ಟ್ ಕಾರ್ಡ್, ನರೇಗಾ ಜಾಬ್‌ಕಾರ್ಡ್, ಕಾರ್ಮಿಕ ಸಚಿವಾಲಯದಿಂದ ನೀಡಲಾದ ಆರೋಗ್ಯ ಜೀವವಿಮೆ ಸ್ಮಾರ್ಟ್ ಕಾರ್ಡ್, ಪಿಂಚಣಿ ದಾಖಲಾತಿ (ಫೋಟೋ ಇರುವ), ಚುನಾವಣಾ ಕಚೇರಿಯಿಂದ ನೀಡಿದ ಫೋಟೋ ಇರುವ ವೋಟರ್ ಸ್ಲಿಪ್ ಹಾಗೂ ಆಧಾರ್‌ಕಾರ್ಡ್. ಇವುಗಳಲ್ಲಿ ಯಾವುದಾದರೂ ಒಂದನ್ನು ಹಾಜರುಪಡಿಸಿ ಮತದಾನ ಮಾಡಲು ಅವಕಾಶ ಇದೆ.

**
ಮತದಾನ ಮುಕ್ತಾಯವಾಗುವ 48 ಗಂಟೆಗಳ ಮುಂಚಿತವಾಗಿ ಯಾವುದೇ ವಿದ್ಯುನ್ಮಾನ ಮಾಧ್ಯಮಗಳಲ್ಲಿ ಪಕ್ಷದ ಪರವಾಗಿ, ಅಭ್ಯರ್ಥಿ ಪರವಾಗಿ ಜಾಹೀರಾತು ಪ್ರಕಟಿಸುವಂತಿಲ್ಲ
– ವಿ.ವಿ.ಜ್ಯೋತ್ಸ್ನಾ, ಜಿಲ್ಲಾಧಿಕಾರಿ 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT