ಶುಕ್ರವಾರ, ಆಗಸ್ಟ್ 14, 2020
27 °C
ಏಪ್ರಿಲ್‌ನಿಂದ ತಡೆ ಹಿಡಿದಿರುವ ವೇತನ ಪಾವತಿಸುವಂತೆ ಒತ್ತಾಯಿಸಿ ನಗರದಲ್ಲಿ ಅಕ್ಷರ ದಾಸೋಹ ನೌಕರರ ಪ್ರತಿಭಟನೆ

ನಿಲ್ಲಿಸಿರುವ ವೇತನ ನೀಡುವಂತೆ ಆಗ್ರಹ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಚಿಕ್ಕಬಳ್ಳಾಪುರ: ರಾಜ್ಯ ಸರ್ಕಾರ ಕಳೆದ ಏಪ್ರಿಲ್‌ನಿಂದ ಶಾಲೆಗಳು ಆರಂಭವಾಗುವವರೆಗೂ ಸಂಬಳ ಕೊಡಬೇಕು ಎಂದು ಆಗ್ರಹಿಸಿ ಅಕ್ಷರ ದಾಸೋಹ ನೌಕರರು ಶುಕ್ರವಾರ ನಗರದಲ್ಲಿ ಪ್ರತಿಭಟನೆ ನಡೆಸಿದರು.

ಈ ವೇಳೆ ಮಾತನಾಡಿದ ರಾಜ್ಯ ಅಕ್ಷರ ದಾಸೋಹ ನೌಕರರ ಸಂಘದ ಜಿಲ್ಲಾ ಘಟಕದ ಗೌರವಾಧ್ಯಕ್ಷ ಬಿ.ಎನ್.ಮುನಿಕೃಷ್ಣಪ್ಪ ಮಾತನಾಡಿ, ‘ರಾಜ್ಯದಲ್ಲಿ ಕೊರೊನಾ ವೈರಸ್‌ ಸೋಂಕು ಹೆಚ್ಚಿದ ಕಾರಣಕ್ಕೆ ಜಾರಿಗೆ ತಂದ ಲಾಕ್‌ಡೌನ್‌ನಿಂದ ಮಾರ್ಚ್‌ನಲ್ಲಿ ಶಾಲೆಗಳು ಬಾಗಿಲು ಮುಚ್ಚುತ್ತಿದ್ದಂತೆ ರಾಜ್ಯ ಸರ್ಕಾರ ಏಪ್ರಿಲ್‌ನಿಂದ ಅಕ್ಷರ ದಾಸೋಹ ನೌಕರರ ಸಂಬಳ ನೀಡಿಲ್ಲ’ ಎಂದು ಹೇಳಿದರು.

‘ರಾಜ್ಯದಲ್ಲಿ 1.18 ಲಕ್ಷ ಮಹಿಳೆಯರು ಬಿಸಿಯೂಟ ನೌಕರರಾಗಿ ದುಡಿಯುತ್ತಿದ್ದಾರೆ. ಮಕ್ಕಳ ಅಪೌಷ್ಠಿಕತೆ ಹೋಗಲಾಡಿಸಲು ದುಡಿಯುವ ಈ ಮಹಿಳೆಯರಿಗೆ ತಿಂಗಳಿಗೆ ಸುಮಾರು ₹2,700 ವೇತನ ಬಿಟ್ಟರೆ ಯಾವುದೇ ಸೌಲಭ್ಯಗಳಿಲ್ಲ. ಕಳೆದ ಮೂರು ತಿಂಗಳಿಂದ ಸರ್ಕಾರ ಸಂಬಳವನ್ನೂ ನೀಡದೆ ನೌಕರರನ್ನು ಸಂಕಷ್ಟಕ್ಕೆ ತಳ್ಳಿದೆ’ ಎಂದು ತಿಳಿಸಿದರು.

‘ಕೋವಿಡ್‌ ಕಾರಣಕ್ಕೆ ಅಕ್ಷರ ದಾಸೋಹ ನೌಕರರ ಬದುಕು ತೀವ್ರ ಸಂಕಷ್ಟಕ್ಕೆ ಸಿಲುಕಿದೆ. ಸರ್ಕಾರ ಕೂಡಲೇ ನೆರವಿಗೆ ಧಾವಿಸಬೇಕು. ಅನಿಶ್ಚಿತತೆ ಕಳೆದು ಶಾಲೆಗಳು ಆರಂಭವಾಗುವವರೆಗೂ ಸಂಬಳ ನೀಡಬೇಕು. ಜತೆಗೆ ನೌಕರರ ಕುಟುಂಬಕ್ಕೆ ಉಚಿತವಾಗಿ ಪಡಿತರ ಪದಾರ್ಥಗಳನ್ನು ವಿತರಿಸಬೇಕು’ ಎಂದು ಆಗ್ರಹಿಸಿದರು.

ಸಂಘದ ಜಿಲ್ಲಾ ಘಟಕದ ಪ್ರಧಾನ ಕಾರ್ಯದರ್ಶಿ ಕೆ.ಆರ್.ಮಂಜುಳಾ ಮಾತನಾಡಿ, ‘ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ನಮಗೆ ಯಾವುದೇ ಸೌಲಭ್ಯ, ಆರ್ಥಿಕ ಭದ್ರತೆ ನೀಡದೆ ಕಡೆಗಣಿಸಿವೆ. ಇದೀಗ ಕೋವಿಡ್ ನೌಕರರಿಗೆ ಗಾಯದ ಮೇಲೆ ಬರೆ ಎಳೆದಂತೆ ಮಾಡಿ, ಮತ್ತಷ್ಟು ಕಷ್ಟ ತಂದೊಡ್ಡಿದೆ’ ಎಂದು ಹೇಳಿದರು.

‘ಸರ್ಕಾರ ಏಪ್ರಿಲ್‌ನಿಂದ ನಿಲ್ಲಿಸಿರುವ ಸಂಬಳ ನೀಡುವ ಜತೆಗೆ ಪ್ರತಿ ನೌಕರರ ಕುಟುಂಬಕ್ಕೆ ಕೋವಿಡ್ ಪರಿಸ್ಥಿತಿ ಕಳೆಯುವರೆಗೂ ತಿಂಗಳಿಗೆ ₹7,500 ಪರಿಹಾರಧನ ನೀಡಬೇಕು. ಸುಮಾರು ಎರಡು ದಶಕಗಳಿಂದ ದುಡಿಯುತ್ತಿರುವ ನೌಕರರನ್ನು ಕಾಯಂಗೊಳಿಸಬೇಕು’ ಎಂದು ತಿಳಿಸಿದರು.

‘ಆಶಾ ಕಾರ್ಯಕರ್ತೆಯರಿಗೆ ಮತ್ತು ಗ್ರಾಮ ಪಂಚಾಯಿತಿ ನೌಕರರಿಗೆ ಸರ್ಕಾರ ಕನಿಷ್ಠ ವೇತನ ನಿಗದಿ ಮಾಡಿದೆ. ಆದರೆ ನಮ್ಮ ವಿಚಾರದಲ್ಲಿ ತಾರತಮ್ಯ ಮಾಡಿದೆ. ನಮಗೂ ಕನಿಷ್ಠ ತಿಂಗಳಿಗೆ ₹21 ಸಾವಿರ ವೇತನ ನಿಗದಿ ಮಾಡಬೇಕು’ ಎಂದು ಒತ್ತಾಯಿಸಿದರು.

‘ಆರೋಗ್ಯ ವಿಮೆ, ಪಿಂಚಣಿ ಸೌಲಭ್ಯ ವಿಚಾರದಲ್ಲಿ ಪ್ರತಿಯೊಬ್ಬರಿಗೂ ಅವಕಾಶ ನೀಡಬೇಕು ಎಂಬ ಬೇಡಿಕೆ ಈಡೇರಿಸಿಲ್ಲ. ಎಲ್ಲ ನೌಕರರಿಗೂ ಎಲ್‌ಐಸಿ ಆಧಾರಿತ ಪಿಂಚಣಿ ವ್ಯವಸ್ಥೆ ಜಾರಿಗೆ ತರಬೇಕು. ಯಾವುದೇ ಸಂಘಸಂಸ್ಥೆಗಳಿಗೆ ಈ ಯೋಜನೆ ಹಸ್ತಾಂತರಿಸಬಾರದು. ಕಾಯಂ ಸ್ವರೂಪದ ಉದ್ಯೋಗ ಸೃಷ್ಟಿಸಬೇಕು’ ಎಂದು ಎಂದು ಹೇಳಿದರು.

ಪ್ರತಿಭಟನಾಕಾರರು ತಹಶೀಲ್ದಾರ್ ಮೂಲಕ ರಾಜ್ಯ ಸರ್ಕಾರಕ್ಕೆ ಮನವಿ ಸಲ್ಲಿಸಿದರು. ಸಂಘದ ಪದಾಧಿಕಾರಿಗಳಾದ ಉಮಾ,ನಾರಾಯಣಮ್ಮ, ಚೆನ್ನಮ್ಮ, ಲಕ್ಷ್ಮಮ್ಮ, ಗಂಗಮ್ಮ ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.