ಮಂಗಳವಾರ, 16 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಾಯ್ದೆ ತಿದ್ದುಪಡಿ ಕೈಬಿಡುವಂತೆ ಆಗ್ರಹ

ಭೂಸುಧಾರಣಾ ಕಾಯ್ದೆಗೆ ತಿದ್ದುಪಡಿ ವಿರೋಧಿಸಿ ನಗರದಲ್ಲಿ ಭಾರತೀಯ ಕಿಸಾನ್‌ ಸಂಘದ ಪದಾಧಿಕಾರಿಗಳ ಪ್ರತಿಭಟನೆ
Last Updated 1 ಆಗಸ್ಟ್ 2020, 13:20 IST
ಅಕ್ಷರ ಗಾತ್ರ

ಚಿಕ್ಕಬಳ್ಳಾಪುರ: ರಾಜ್ಯ ಸರ್ಕಾರ ಸುಗ್ರೀವಾಜ್ಞೆಯ ಮೂಲಕ ಭೂಸುಧಾರಣಾ ಕಾಯ್ದೆಗೆ ತಿದ್ದುಪಡಿ ತಂದು ರೈತರ ಪಾಲಿಗೆ ಮರಣ ಶಾಸನ ಬರೆಯುವ ಕೆಲಸ ಕೈಬಿಡಬೇಕು ಎಂದು ಆಗ್ರಹಿಸಿ ಭಾರತೀಯ ಕಿಸಾನ್‌ ಸಂಘದ ಪದಾಧಿಕಾರಿಗಳು ತಾಲ್ಲೂಕು ಕಚೇರಿ ಎದುರು ಪ್ರತಿಭಟನೆ ನಡೆಸಿದರು.

ಈ ವೇಳೆ ಮಾತನಾಡಿದ ಸಂಘದ ರಾಜ್ಯ ಸಮಿತಿ ಸದಸ್ಯ ಎಚ್‌.ಪಿ.ನಾರಾಯಣರೆಡ್ಡಿ, ‘ದೇವರಾಜ ಅರಸು ಅವರು 1974ರ ಮಾರ್ಚ್‌ 1ರಂದು ಜಾರಿಗೆ ತಂದಿದ್ದ ಭೂಸುಧಾರಣಾ ಕಾಯ್ದೆಯಿಂದ ಲಕ್ಷಾಂತರ ಬಡ ರೈತರು ಭೂಮಿಯ ಒಡೆಯರಾಗಿದ್ದರು. ಇವತ್ತು ಮುಖ್ಯಮಂತ್ರಿ ಯಡಿಯೂರಪ್ಪ ಅವರು ಅರಸು ಅವರ ಆಶಯಕ್ಕೆ ತದ್ವಿರುದ್ದ ನಿಲುವು ತಳೆದಿದ್ದಾರೆ’ ಎಂದು ಆರೋಪಿಸಿದರು.

‘ಭೂ ಸುಧಾರಣೆ ಕಾಯ್ದೆ 1978ರ 79 ಹಾಗೂ 80ನೇ ಪರಿಚ್ಛೇದಗಳನ್ನು ರದ್ದುಪಡಿಸಿರುವುದಲ್ಲದೇ 63ನೇ ಪರಿಚ್ಛೇದಕ್ಕೂ ತಿದ್ದುಪಡಿ ಮಾಡಿರುವುದರಿಂದ ಅತಿ ಸುಲಭವಾಗಿ ಕೈಗಾರಿಕೋದ್ಯಮಿಗಳು ಭೂಮಿ ಖರೀದಿಸಲು ಮುಕ್ತ ಅವಕಾಶ ಕಲ್ಪಿಸಿದಂತಾಗಿದೆ. ಸರ್ಕಾರದ ಈ ನಿರ್ಧಾರದ ಹಿಂದೆ ಹಣ ಬಲ ಹೊಂದಿದ ದೊಡ್ಡ ಉದ್ಯಮಿಗಳ ಲಾಬಿ ಇದೆ’ ಎಂದು ತಿಳಿಸಿದರು.

‘ಭೂ ಸುಧಾರಣೆ ಕಾಯ್ದೆಯ 79ನೇ ಸೆಕ್ಷನ್‌ನ ಎ ಮತ್ತು ಬಿ ಕಲಂ ಪ್ರಕಾರ ಕೃಷಿಯೇತರ ಮೂಲಗಳಿಂದ ಹೆಚ್ಚು ಆದಾಯ ಹೊಂದಿರುವವರು ಹಾಗೂ ವಾಣಿಜ್ಯೋದ್ಯಮಿಗಳು ಭೂಮಿಯನ್ನು ಖರೀದಿಸಲು ಅವಕಾಶವಿರಲಿಲ್ಲ. ಈ ಸರ್ಕಾರ ರೈತ ಪರವಾದ ಕಲಂಗಳನ್ನು ರದ್ದುಗೊಳಿಸಿ ಧನಿಕರಿಗೆ ರತ್ನಗಂಬಳಿ ಹಾಸಿ ಕರೆಯುತ್ತಿರುವುದು ದುರಂತ’ ಎಂದು ಬೇಸರ ವ್ಯಕ್ತಪಡಿಸಿದರು.

‘ಕೃಷಿ ಅವಲಂಬಿತರ ಜಮೀನು ಖರೀದಿಗೆ ಯಾವುದೇ ನಿರ್ಬಂಧವಿಲ್ಲದೆ ಅವಕಾಶ ನೀಡುವ ಮೂಲಕ ಬಹುರಾಷ್ಟ್ರೀಯ ಕಂಪನಿಗಳಿಗೆ ಅವಕಾಶ ಮಾಡಿಕೊಟ್ಟಿದೆ. ಉಳ್ಳವನಿಗೆ ಜಮೀನು ಎನ್ನುವ ಬಿಜೆಪಿ ಧೋರಣೆ ಖಂಡನಾರ್ಹ. ಇದರಿಂದ ಸಹಕಾರಿ ರಂಗಕ್ಕೂ ದೊಡ್ಡ ಪೆಟ್ಟು ಬೀಳಲಿದೆ’ ಎಂದು ಹೇಳಿದರು.

‘ಭೂಸುಧಾರಣೆ ಕಾಯ್ದೆ ತಿದ್ದುಪಡಿಯಿಂದ ಭೂಮಿ ಕಳೆದುಕೊಳ್ಳಲಿರುವ ರೈತರು ಶ್ರೀಮಂತರ ಕೂಲಿ ಆಳುಗಳಾಗಿ ಬೀದಿಗೆ ಬೀಳುತ್ತಾರೆ. ಇದರಿಂದ ಹಿಂದಿನ ಜಮೀನ್ದಾರಿ ಪದ್ಧತಿ ಮರುಕಳಿಸಲಿದೆ. ಜತೆಗೆ ಮುಂದಿನ ದಿನಗಳಲ್ಲಿ ಆಹಾರದ ಕೊರತೆ ಎದುರಾಗುತ್ತದೆ. ಆದ್ದರಿಂದ ಸರ್ಕಾರ ಕೂಡಲೇ ತಿದ್ದುಪಡಿ ಕೈಬಿಡಬೇಕು’ ಎಂದು ಆಗ್ರಹಿಸಿದರು.

‘ಭೂಸುಧಾರಣೆ ಕಾಯ್ದೆ ತಿದ್ದುಪಡಿಯಿಂದ ಕಾರ್ಪೊರೇಟ್ ಸಂಸ್ಥೆಗಳು, ಉದ್ಯಮಿಗಳು ಹಾಗೂ ಬಂಡವಾಳಶಾಹಿಗಳಿಗೆ ಅನುಕೂಲವಾಗಲಿದೆ. 78 ಲಕ್ಷ ಸಣ್ಣ ಹಾಗೂ ಅತೀ ಸಣ್ಣ ರೈತರು ಬೀದಿ ಪಾಲಾಗುತ್ತಾರೆ ಎನ್ನುವ ಕನಿಷ್ಠ ಜ್ಞಾನವೂ ಸರ್ಕಾರಕ್ಕಿಲ್ಲ. ತಿದ್ದುಪಡಿಯನ್ನು ಸರ್ಕಾರ ಕೂಡಲೇ ಕೈಬಿಡಬೇಕು’ ಎಂದು ಒತ್ತಾಯಿಸಿದರು.

ಸಂಘದ ಜಿಲ್ಲಾ ಘಟಕದ ಕಾರ್ಯದರ್ಶಿ ರಾಮಾಂಜಿನಪ್ಪ, ಉಪಾಧ್ಯಕ್ಷ ರಾಮಚಂದ್ರರೆಡ್ಡಿ, ತಾಲ್ಲೂಕು ಘಟಕದ ಉಪಾಧ್ಯಕ್ಷ ವೆಂಕಟರೆಡ್ಡಿ, ಪದಾಧಿಕಾರಿಗಳಾದ ಜಿ.ವಿ.ವೆಂಕಟರೆಡ್ಡಿ, ಜಾತವಾರ ವೆಂಕಟೇಶ್‌ ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT