ಶನಿವಾರ, 12 ಅಕ್ಟೋಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಚಿಕ್ಕಬಳ್ಳಾಪುರ | ಚಿಂತಾಮಣಿ ತಾಲ್ಲೂಕಿನಲ್ಲಿ ಡೆಂಗಿ ಹತೋಟಿಗೆ

Published : 23 ಸೆಪ್ಟೆಂಬರ್ 2024, 6:20 IST
Last Updated : 23 ಸೆಪ್ಟೆಂಬರ್ 2024, 6:20 IST
ಫಾಲೋ ಮಾಡಿ
Comments

ಚಿಂತಾಮಣಿ: ತಾಲ್ಲೂಕಿನಲ್ಲಿ ಜೂನ್, ಜುಲೈನಲ್ಲಿ ಹೆಚ್ಚಾಗಿದ್ದ ಡೆಂಗಿ ಜ್ವರ, ಚಿಕನ್ ಗುನ್ಯಾ, ಮಲೇರಿಯಾ ಜ್ವರ ನಿಯಂತ್ರಣಕ್ಕೆ ಬಂದಿವೆ. ಆದರೂ ಕೆಮ್ಮು, ಜ್ವರ, ನೆಗಡಿಯಂತಹ ಸಾಂಕ್ರಾಮಿಕ ರೋಗಗಳು ಜನರನ್ನು ಬಾಧಿಸುತ್ತಿವೆ.

ಜನವರಿಯಿಂದ ಸೆಪ್ಟೆಂಬರ್ 21 ರವರೆಗೆ 41 ಡೆಂಗಿ ಪ್ರಕರಣ ದೃಢಪಟ್ಟಿವೆ. ಕಳೆದ ವರ್ಷ ಜನವರಿಯಿಂದ ಸೆಪ್ಟೆಂಬರ್‌ವರೆಗೆ 10-12 ಪ್ರಕರಣ ಮಾತ್ರ ದೃಢಪಟ್ಟಿತ್ತು. ಜೂನ್, ಜುಲೈನಲ್ಲಿ ಮಳೆ ಬಂದಿದ್ದರಿಂದ ಡೆಂಗಿ ಜ್ವರದಿಂದ ಬಳಲುತ್ತಿರುವವರ ಸಂಖ್ಯೆ ಜಾಸ್ತಿಯಾಗಿತ್ತು. ಆಗಸ್ಟ್ ತಿಂಗಳಲ್ಲಿ 5 ಮತ್ತು ಸೆಪ್ಟೆಂಬರ್‌ನಲ್ಲಿ ಇದುವರೆಗೆ ಕೇವಲ ಒಂದು ಪ್ರಕರಣ ಮಾತ್ರ ಪತ್ತೆಯಾಗಿದ್ದು, ನಿಧಾನವಾಗಿ ನಿಯಂತ್ರಣಕ್ಕೆ ಬರುತ್ತಿದೆ ಎಂದು ತಾಲ್ಲೂಕು ಆರೋಗ್ಯಾಧಿಕಾರಿ ಡಾ.ರಾಮಚಂದ್ರಾರೆಡ್ಡಿ ತಿಳಿಸಿದರು.

ಪ್ರಾಥಮಿಕ ಆರೋಗ್ಯ ಕೇಂದ್ರ, ಸಮುದಾಯ ಆರೋಗ್ಯ ಕೇಂದ್ರ, ತಾಲ್ಲೂಕು ಆಸ್ಪತ್ರೆ ಸೇರಿದಂತೆ ಸರ್ಕಾರಿ ಆಸ್ಪತ್ರೆಗಳಲ್ಲಿ ಪತ್ತೆಯಾಗುವ ಡೆಂಗಿ ಪ್ರಕರಣಗಳ ಲೆಕ್ಕ ಮಾತ್ರ ಸಿಗುತ್ತದೆ. ಖಾಸಗಿ ಆಸ್ಪತ್ರೆಗಳು, ಕ್ಲಿನಿಕ್, ರೋಗ ಪತ್ತೆ ಕೇಂದ್ರಗಳಲ್ಲಿ ದೃಢಪಡುತ್ತಿರುವ ಪ್ರಕರಣಗಳು ಪೂರ್ಣ ಪ್ರಮಾಣದಲ್ಲಿ ವರದಿಯಾಗುತ್ತಿಲ್ಲ. ಪರೀಕ್ಷೆಗೆ ಒಳಪಡದೆ ಮನೆಯಲ್ಲೇ ಇದ್ದುಕೊಂಡು ಚಿಕಿತ್ಸೆ ಪಡೆಯುತ್ತಿರುವವರ ಸಂಖ್ಯೆಯೂ ಗಣನೆಗೆ ಬರುತ್ತಿಲ್ಲ ಎಂದು ವೈದ್ಯರೊಬ್ಬರು ಅಭಿಪ್ರಾಯಪಟ್ಟರು.

ಜಿಲ್ಲೆಯ ಇತರೆ ತಾಲ್ಲೂಕುಗಳಿಗೆ ಹೋಲಿಸಿದರೆ ತಾಲ್ಲೂಕಿನಲ್ಲಿ ಡೆಂಗಿ ಪ್ರಕರಣ ಕಡಿಮೆ ಇವೆ. ತಾಲ್ಲೂಕಿನಲ್ಲಿ ಚಿಕನ್ ಗುನ್ಯಾ ಮತ್ತು ಮಲೇರಿಯಾ ಪ್ರಕರಣ ಶೂನ್ಯ. ಜ್ವರ ನಿಯಂತ್ರಿಸಲು ಆರೋಗ್ಯ ಇಲಾಖೆ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ, ತಾಲ್ಲೂಕು ಪಂಚಾಯಿತಿ ನಿರಂತರ ಕ್ರಮ ಕೈಗೊಂಡಿದ್ದರಿಂದ ಡೆಂಗಿ ಕಡಿಮೆಯಾಗಿದೆ ಎಂದು ಆರೋಗ್ಯ ಇಲಾಖೆ ಮೂಲಗಳು ಪ್ರಜಾವಾಣಿಗೆ ತಿಳಿಸಿವೆ.

ಸಾಮಾನ್ಯವಾಗಿ ನಿಂತ ನೀರಿನ ಎಲ್ಲ ತಾಣಗಳು ಸೊಳ್ಳೆ ಉತ್ಪತ್ತಿಯ ಕೇಂದ್ರಗಳಾಗಿರುತ್ತವೆ. ಡೆಂಗಿ, ಚಿಕನ್ ಗುನ್ಯಾ, ಮಲೇರಿಯಾ ಬಾಧಿಸಲು ಸೊಳ್ಳೆಗಳೇ ಕಾರಣ. ನಿಯಮಿತವಾಗಿ ಕಸ ವಿಲೇವಾರಿ ಆಗದಿರುವುದು, ಚರಂಡಿ ನೀರು ಸರಾಗವಾಗಿ ಹರಿದು ಹೋಗದಿರುವುದು, ಪ್ಲಾಸ್ಟಿಕ್ ಮತ್ತು ತೆಂಗಿನ ಚಿಪ್ಪು, ಹಳೆ ಟೈರ್‌, ಟ್ಯೂಬ್ ಮತ್ತಿತರ ತ್ಯಾಜ್ಯ ವಸ್ತುಗಳಲ್ಲಿ ಮಳೆ ನೀರು ಸಂಗ್ರಹವಾಗುವುದು ಸೊಳ್ಳೆಗಳ ಉತ್ಪತ್ತಿಗೆ ಪೂರಕವಾಗಿ ಈ ರೋಗಗಳ ಉಲ್ಬಣಕ್ಕೆ ಕಾರಣವಾಗುತ್ತದೆ.

ತಾಲ್ಲೂಕಿನಲ್ಲಿ ಪತ್ತೆಯಾಗಿದ್ದ 41 ಡೆಂಗಿ ಜ್ವರದ ರೋಗಿಗಳು ಚಿಕಿತ್ಸೆಯಿಂದ ಗುಣಮುಖರಾಗಿದ್ದಾರೆ.

ಪ್ರತಿ ತಿಂಗಳು 1-5 ಮತ್ತು 16-20 ಎರಡು ಹಂತಗಳಲ್ಲಿ ಮನೆ ಮನೆಗೂ ಭೇಟಿ ನೀಡಿ ಡೆಂಗಿ ಜ್ವರ ಹರಡುವ ಹಾಗೂ ನಿಯಂತ್ರಿಸುವ ಕುರಿತು ಜಾಗೃತಿ ಮೂಡಿಸುತ್ತಾರೆ. ನೀರು ಸಂಗ್ರಹದ ತಾಣಗಳಲ್ಲಿ ಲಾರ್ವಾ ಸಮೀಕ್ಷೆ ನಡೆಸುತ್ತಾರೆ.

ಒಂದು ಪಿಎಚ್‌ಸಿಯಲ್ಲಿ ವಾರಕ್ಕೆ ಕನಿಷ್ಠ 2ರಂತೆ, ತಾಲ್ಲೂಕಿನ ಎಲ್ಲ ಆಸ್ಪತ್ರೆಗಳಲ್ಲಿ ತಿಂಗಳಿಗೆ 80-100 ಜನರ ರಕ್ತದ ಮಾದರಿ ಪರೀಕ್ಷೆ ಮಾಡಲಾಗುತ್ತದೆ. ಯಾವುದಾದರೂ ಪಾಸಿಟಿವ್ ಪ್ರಕರಣ ಸಿಕ್ಕಿದರೆ ಆರೋಗ್ಯ ಇಲಾಖೆ, ಆಶಾ, ಅಂಗನವಾಡಿ ಕಾರ್ಯಕರ್ತೆಯರು, ತಾಲ್ಲೂಕು ಮತ್ತು ಗ್ರಾಮ ಪಂಚಾಯಿತಿ ಸಿಬ್ಬಂದಿ ಒಟ್ಟಿಗೆ ಗ್ರಾಮಕ್ಕೆ ತೆರಳಿ ಸಮೀಕ್ಷೆ ನಡೆಸಿ ಜಾಗೃತಿ ಮೂಡಿಸುತ್ತಾರೆ.

ಡೆಂಗಿ ಪತ್ತೆಯಾದ ರೋಗಿಯ ಮನೆ ಸುತ್ತಲೂ 40-50 ಮನೆ, ಗ್ರಾಮವಾದರೆ ಇಡೀ ಗ್ರಾಮದ ಜನರಲ್ಲಿ ಜ್ವರ ಸಮೀಕ್ಷೆ ಮಾಡಿ ಯಾರಾದರೂ ಜ್ವರದಿಂದ ಬಳಲುತ್ತಿದ್ದರೆ ಅಂತಹವರ ರಕ್ತದ ಮಾದರಿ ಸಂಗ್ರಹಿಸಲಾಗುತ್ತದೆ. ಮಳೆ ಕಡಿಮೆಯಾಗಿ ಬಿಸಿಲು ಹೆಚ್ಚಾಗುತ್ತಿರುವುದು ಡೆಂಗಿ ಕಡಿಮೆಗೆ ಕಾರಣ. ತುಂತುರು ಮಳೆ ಆದರೆ ಡೆಂಗಿ ಉಲ್ಬಣಗೊಳ್ಳುತ್ತದೆ ಎಂದು ಆರೋಗ್ಯ ಇಲಾಖೆ ಅಧಿಕಾರಿಗಳು ಅಭಿಪ್ರಾಯಪಡುತ್ತಾರೆ.

ಚಿಂತಾಮಣಿ ತಾಲ್ಲೂಕಿನ ಮಿನಿ ಕಂಬಾಲಹಳ್ಳಿಯಲ್ಲಿ ಸ್ವಚ್ಛತೆ ಕಾಣದ ಸಾರ್ವಜನಿಕ ನೀರಿನ ತೊಟ್ಟಿ
ಚಿಂತಾಮಣಿ ತಾಲ್ಲೂಕಿನ ಮಿನಿ ಕಂಬಾಲಹಳ್ಳಿಯಲ್ಲಿ ಸ್ವಚ್ಛತೆ ಕಾಣದ ಸಾರ್ವಜನಿಕ ನೀರಿನ ತೊಟ್ಟಿ
ಚಿಂತಾಮಣಿ ತಾಲ್ಲೂಕಿನ ಗ್ರಾಮವೊಂದರ ಚರಂಡಿ ಕಸಕಡ್ಡಿಗಳಿಂದ ತುಂಬಿರುವುದು
ಚಿಂತಾಮಣಿ ತಾಲ್ಲೂಕಿನ ಗ್ರಾಮವೊಂದರ ಚರಂಡಿ ಕಸಕಡ್ಡಿಗಳಿಂದ ತುಂಬಿರುವುದು
ಡೆಂಗಿ ಬಗ್ಗೆ ಜಾಗೃತಿ ಮೂಡಿಸಿದರೆ ಸಾಲದು. ಆಸ್ಪತ್ರೆಗಳಲ್ಲಿ ಸರಿಯಾದ ಚಿಕಿತ್ಸೆ ವ್ಯವಸ್ಥೆ ಆಗಬೇಕು. ರೋಗಿಗಳಿಗೆ ಗುಣಮಟ್ಟದ ಚಿಕಿತ್ಸೆ ಔಷಧಿ ಮತ್ತು ಆಹಾರ ನೀಡಬೇಕು
-ಕೃಷ್ಣಾರೆಡ್ಡಿ, ಹಿರಿಯ ನಾಗರಿಕ
ಡೆಂಗಿ ಚಿಕನ್ ಗುನ್ಯಾ ಮಲೇರಿಯಾ ಮತ್ತಿತರ ಸಾಂಕ್ರಾಮಿಕ ರೋಗಗಳು ಹರಡಲು ಸೊಳ್ಳೆಗಳ ಜತೆಗೆ ಹಂದಿಗಳು ಕಾರಣವಾಗುತ್ತಿವೆ. ನಗರ ಮತ್ತು ಗ್ರಾಮಗಳಲ್ಲಿ ಹಂದಿಗಳನ್ನು ನಿಯಂತ್ರಿಸಲು ಕ್ರಮಕೈಗೊಳ್ಳಬೇಕು
-ಜಯರಾಂ, ಕೈವಾರ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT