ಶಾಶ್ವತ ನೀರಾವರಿಗೆ ಆದ್ಯತೆ ನೀಡಲು ಆಗ್ರಹ

7
ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿಗೆ ಶಾಶ್ವತ ನೀರಾವರಿ ಹೋರಾಟ ಸಮಿತಿ ಪದಾಧಿಕಾರಿಗಳ ಮನವಿ

ಶಾಶ್ವತ ನೀರಾವರಿಗೆ ಆದ್ಯತೆ ನೀಡಲು ಆಗ್ರಹ

Published:
Updated:
Deccan Herald

ಚಿಕ್ಕಬಳ್ಳಾಪುರ: ಕೆಂಪೇಗೌಡ ಜಯಂತಿ ಕಾರ್ಯಕ್ರಮದಲ್ಲಿ ಭಾಗವಹಿಸಲು ಶುಕ್ರವಾರ ನಗರಕ್ಕೆ ಭೇಟಿ ನೀಡಿದ ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ಅವರಿಗೆ ಶಾಶ್ವತ ನೀರಾವರಿ ಹೋರಾಟ ಸಮಿತಿ ಪದಾಧಿಕಾರಿಗಳು ನಗರ ಹೊರವಲಯದ ಚದುಲಪುರ ಕ್ರಾಸ್‌ ಬಳಿ ಮನವಿ ಪತ್ರ ಸಲ್ಲಿಸಿ, ಶಾಶ್ವತ ನೀರಾವರಿಗೆ ಕ್ರಮಕೈಗೊಳ್ಳುವಂತೆ ಆಗ್ರಹಿಸಿದರು.

ಈ ವೇಳೆ ಮಾತನಾಡಿದ ಶಾಶ್ವತ ನೀರಾವರಿ ಹೋರಾಟ ಸಮಿತಿ ಅಧ್ಯಕ್ಷ ಆರ್.ಆಂಜನೇಯರೆಡ್ಡಿ, ‘ಹಲವಾರು ವರ್ಷಗಳಿಂದ ಈ ಭಾಗದಲ್ಲಿ ಶಾಶ್ವತ ನೀರಾವರಿ ಯೋಜನೆಗಳು ಜಾರಿಯಾಗಬೇಕು ಎನ್ನುವ ಕೂಗಿದೆ. ಇದಕ್ಕೆ ಹಿಂದೆ ಆಳಿದಂತಹ ಎಲ್ಲ ಸರ್ಕಾರಗಳೂ ಈ ಭಾಗಕ್ಕೆ ಮಲತಾಯಿ ಧೋರಣೆಯನ್ನು ತೋರಿಸಿವೆ. ಕಳೆದ ಸರ್ಕಾರದ ಅವಧಿಯಲ್ಲಿ ಕೂಡ ನಾವು ನಿರ್ದಿಷ್ಟ ನೀರಾವರಿ ಯೋಜನೆಗಳನ್ನು ಪಡೆದುಕೊಳ್ಳಲು ಸಾಧ್ಯವಾಗಲಿಲ್ಲ. ನಮ್ಮ ಕೂಗು ಅರಣ್ಯರೋಧನವಾಯಿತು’ ಎಂದು ಹೇಳಿದರು.

‘ನೀರಾವರಿ ತಜ್ಞ ಪರಮಶಿವಯ್ಯ ಅವರ ವರದಿ ಮೂಲೆಗುಂಪು ಮಾಡಿ, ಈ ಭಾಗದ 5000ಕ್ಕೂ ಹೆಚ್ಚು ಕೆರೆಗಳಿಗೆ ನೀರು ತುಂಬಿಸಬೇಕಾದ ಸರ್ಕಾರಗಳು ಕೇವಲ ಎತ್ತಿನಹೊಳೆ ಜಪದಲ್ಲಿಯೇ ಅನೇಕ ವರ್ಷಗಳಿಂದ ಕಾಲಹರಣ ಮಾಡಿಕೊಂಡು ಬರುತ್ತಿವೆ. ಶಾಶ್ವತ ನೀರಾವರಿ ಬದಿಗೊತ್ತಿ ಬೆಂಗಳೂರಿನ ತ್ಯಾಜ್ಯ ನೀರು ತಂದು ಕೆರೆ ತುಂಬಲು ಮುಂದಾಗಿರುವವರು ಅದರ ಶುದ್ಧತೆ ಬಗ್ಗೆ ಕಾಳಜಿ ತೋರುತ್ತಿಲ್ಲ’ ಎಂದು ಆರೋಪಿಸಿದರು.

‘ವಿಜ್ಞಾನಿಗಳನ್ನು ಕರೆದುಕೊಂಡು ಬಂದು ಸಂಸ್ಕರಿಸಿದ ತ್ಯಾಜ್ಯ ನೀರಿನ ಬಳಕೆಯಿಂದಾಗುವ ದುಷ್ಪರಿಣಾಮದ ಬಗ್ಗೆ ತಿಳುವಳಿಕೆ ಮೂಡಿಸಿದರೂ ಪ್ರಯೋಜನವಾಗಲಿಲ್ಲ. ಅನಿವಾರ್ಯವಾಗಿ ಕೋರ್ಟ್‌ ಮೆಟ್ಟಿಲೇರಬೇಕಾಯಿತು. ಈಗಾಗಲೇ ಕೋಲಾರ ಜಿಲ್ಲೆಯಲ್ಲಿ ಕೆ.ಸಿ ವ್ಯಾಲಿಯಿಂದ ವಿಷಕಾರಿ ನೀರು ಹರಿದು ಅಂರ್ತಜಲ ಸೇರಿದ್ದು ಆತಂಕಕಾರಿ ವಿಚಾರ’ ಎಂದು ತಿಳಿಸಿದರು.

‘ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ಅವರು ಹಿಂದೆ ನಮ್ಮ ಅನೇಕ ಹೋರಾಟಗಳಿಗೆ ಭೇಟಿ ನೀಡಿ ಬೆಂಬಲ ವ್ಯಕ್ತಪಡಿಸಿದ್ದರು. ಅಧಿಕಾರಕ್ಕೆ ಬಂದರೆ ಖಂಡಿತ ಬಯಲು ಸೀಮೆ ಜಿಲ್ಲೆಗಳಿಗೆ ಶಾಶ್ವತ ನೀರಾವರಿ ಯೋಜನೆ ಜಾರಿಗೆ ತರುತ್ತೇನೆ ಎಂದು ಭರವಸೆ ನೀಡಿದ್ದರು. ಇದೀಗ ಅವರು ಬಯಲು ಸೀಮೆ ಪ್ರದೇಶಕ್ಕೆ ನೀರು ಒದಗಿಸುವ ಕಾರ್ಯವನ್ನು ಆದ್ಯತೆ ಮೆರೆಗೆ ತೆಗೆದುಕೊಳ್ಳಬೇಕು’ ಎಂದು ಒತ್ತಾಯಿಸಿದರು.

‘ಫ್ಲೋರೈಡ್ ನೀರಿನ ದುಷ್ಪರಿಣಾಮ, ರೈತರ ಆತ್ಮಹತ್ಯೆ ತಡೆಯುವ ನಿಟ್ಟಿನಲ್ಲಿ ಕುಡಿಯಲು, ಕೃಷಿ ಮತ್ತು ಕೆರೆಗಳಿಗೆ ಶುದ್ಧ ನೀರು ಒದಗಿಸುವ ಕೆಲಸ ಮಾಡಬೇಕು. ಸಮಗ್ರ ಜಲಾನಯನ ಪ್ರದೇಶದ ಅಭಿವೃದ್ಧಿಯ ನಿಟ್ಟಿನಲ್ಲಿ ಕೆರೆ, ಕಾಲುವೆ, ಕುಂಟೆಗಳನ್ನು ಪುನಶ್ಚೇತನಗೊಳಿಸಬೇಕು’ ಎಂದು ತಿಳಿಸಿದರು.

‘ಸಣ್ಣ ಮತ್ತು ಬೃಹತ್ ನೀರಾವರಿ ಇಲಾಖೆಗಳ ಅನುದಾನದಲ್ಲಿ ಬಹಳ ದೊಡ್ಡ ಪ್ರಮಾಣದ ಅಸಮತೋಲನವಿದೆ. ಅದನ್ನು ನಿವಾರಿಸಿ ನಮ್ಮ ಭಾಗಕ್ಕೆ ವಿಶೇಷ ಪ್ಯಾಕೇಜ್ ಘೋಷಿಸಬೇಕು’ ಎಂದು ಆಗ್ರಹಿಸಿದರು.

‘ಎತ್ತಿನಹೊಳೆ, ಕೆ.ಸಿ.ವ್ಯಾಲಿ ಮತ್ತು ಎಚ್‌.ಎನ್.ವ್ಯಾಲಿಯಂತಹ ಅವೈಜ್ಞಾನಿಕ ಯೋಜನೆಗಳ ಕುರಿತು ಮತ್ತೊಮ್ಮೆ ತಜ್ಞರಿಂದ ಪಾರದರ್ಶಕವಾದ ಪುನರ್‌ ಪರಿಶೀಲನೆ ಮಾಡಿಸಬೇಕು. ಇದಕ್ಕೆ ಮುಖ್ಯಮಂತ್ರಿಗಳು ಸ್ಪಂದಿಸುತ್ತಾರೆ ಎನ್ನುವ ಆಶಾಭಾವನೆಯಲ್ಲಿದ್ದೇವೆ’ ಎಂದರು.

ಸಮಿತಿಯ ಪದಾಧಿಕಾರಿಗಳಾದ ಮಳ್ಳೂರು ಹರೀಶ್, ನಾಗದೇನಹಳ್ಳಿ ನಾರಾಯಣಸ್ವಾಮಿ, ಸುಷ್ಮಾ ಶ್ರೀನಿವಾಸ್, ಆಯೆಷಾ ಸುಲ್ತಾನಾ, ಶ್ರೀರಾಮೇಗೌಡ ಹಾಜರಿದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !