ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕ್ರಿಕೆಟ್‌ ಬೆಟ್ಟಿಂಗ್‌ನಿಂದ ಜೀವನ ನಾಶ

ಪೊಲೀಸ್‌ ಇಲಾಖೆಗೆ ಸಹಕರಿಸಿ: ಎಸ್‌ಪಿ ಮಿಥುನ್‌ಕುಮಾರ್ ಮನವಿ
Last Updated 19 ಜನವರಿ 2021, 2:23 IST
ಅಕ್ಷರ ಗಾತ್ರ

ಚಿಂತಾಮಣಿ: ಕಾನೂನು, ಸುವ್ಯವಸ್ಥೆ ಕಾಪಾಡಲು ಹಾಗೂ ಅಕ್ರಮ ಚಟುವಟಿಕೆಗಳನ್ನು ಮಟ್ಟ ಹಾಕಲು ಪೊಲೀಸರಿಗೆ ಸಾರ್ವಜನಿಕರ ಸಹಕಾರ ಅಗತ್ಯ ಎಂದು ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಮಿಥುನ್ ಕುಮಾರ್ ತಿಳಿಸಿದರು.‌

ನಗರದ ತಾಲ್ಲೂಕು ಪಂಚಾಯಿತಿ ಸಭಾಂಗಣದಲ್ಲಿ ಪೊಲೀಸ್ ಇಲಾಖೆ ಸೋಮವಾರ ಹಮ್ಮಿಕೊಂಡಿದ್ದ ಜನಸಂಪರ್ಕ ಸಭೆಯಲ್ಲಿ ಮಾತನಾಡಿದರು.

ನಗರದಲ್ಲಿ 2-3 ಬಾರಿ ಗಾಂಜಾ ವಶಪಡಿಸಿಕೊಳ್ಳಲಾಗಿದೆ. ಹಳ್ಳಿಗಳಲ್ಲಿ ಪರವಾನಗಿ ಇಲ್ಲದೆ ಅಕ್ರಮವಾಗಿ ಮದ್ಯ ಮಾರಾಟ ಮಾಡುತ್ತಾರೆ. ಮಟ್ಕಾ, ಕ್ರಿಕೆಟ್ ಬೆಟ್ಟಿಂಗ್ ಮತ್ತಿತರ ಅಕ್ರಮ ಮತ್ತು ಅನೈತಿಕ ಚಟುವಟಿಕೆಗಳು ನಡೆಯುತ್ತವೆ ಎಂದು ದೂರುತ್ತಾರೆ. ಈ ಎಲ್ಲ ಚಟುವಟಿಕೆಗಳು ಸಾರ್ವಜನಿಕರಿಗೆ ಗೊತ್ತಿರುತ್ತದೆ. ಆದರೆ, ಎಷ್ಟು ಪ್ರಕರಣಗಳ ಬಗ್ಗೆ ಪೊಲೀಸರಿಗೆ ಮಾಹಿತಿ ನೀಡಿದ್ದೀರಿ. ಜನಸಂಪರ್ಕ ಸಭೆ ನಡೆಸಿ ಜನರ ಬದಲಾವಣೆಗೆ ಪ್ರಯತ್ನಿಸಿದ್ದೀರಿ, ಸಾರ್ವಜನಿಕ ಮುಖಂಡರಿಗೆ ಜವಾಬ್ದಾರಿ ಇಲ್ಲವೇ ಎಂದುಪ್ರಶ್ನಿಸಿದರು.

ಚಿಂತಾಮಣಿ ನಗರಕ್ಕೆ ತನ್ನದೆ ಆದ ವೈಶಿಷ್ಟ್ಯ, ಪರಂಪರೆ ಇದೆ. ಅಭಿವೃದ್ಧಿಯಲ್ಲಿ ಚಿಕ್ಕಬಳ್ಳಾಪುರ, ಕೋಲಾರವನ್ನು ಮೀರಿಸುತ್ತದೆ. ಜನಸಂಖ್ಯೆಗೆ ಹೋಲಿಸಿದರೆ ಪೊಲೀಸ್ ಸಿಬ್ಬಂದಿ ತುಂಬಾ ಕಡಿಮೆ ಇದೆ. ಗಾಂಜಾ, ಕ್ರಿಕೆಟ್ ಬೆಟ್ಟಿಂಗ್, ಮಟ್ಕಾದಿಂದ ಯುವಕರ ಜೀವನ ಹಾಳಾಗುತ್ತಿದೆ ವಿಷಾದಿಸಿದರು.

ಸಂಚಾರ ವ್ಯವಸ್ಥೆಯ ಸುಧಾರಣೆಗಾಗಿ ಕಾನೂನು ಉಲ್ಲಂಘಿಸುವವರ ವಿರುದ್ಧ ಕ್ರಮಕೈಗೊಳ್ಳಲಾಗುವುದು. ಬಹುತೇಕ ಅಪಘಾತಗಳಲ್ಲಿ ಹೆಲ್ಮೆಟ್ ಧರಿಸದಿರುವುದೇ ಸಾವಿಗೆ ಕಾರಣವಾಗುತ್ತದೆ. ನಗರದ ಎಲ್ಲ ವಾರ್ಡ್‌ಗಳಲ್ಲಿ ನಗರಸಭೆ ಸದಸ್ಯರನ್ನು ಹಾಗೂ ಇತರೆ ಮುಖಂಡರನ್ನು ಸೇರಿಸಿಕೊಂಡು ಸಭೆಗಳನ್ನು ನಡೆಸಿ ವರದಿ ತಯಾರಿಸಬೇಕು ಎಂದು ಸೂಚಿಸಿದರು.

ಆಟೊ ಚಾಲಕರು ಕಡ್ಡಾಯವಾಗಿ ಚಾಲನಾ ಪರವಾನಗಿ, ವಾಹನದ ಆರ್.ಸಿ, ವಿಮೆ ಮತ್ತಿತರ ದಾಖಲೆ ಹೊಂದಿರಬೇಕು. ಗುರುತಿನ ಕಾರ್ಡ್ ಮಾಡಿಸಿಕೊಂಡರೆ ಉತ್ತಮ. ಗಾಂಜಾ, ಮದ್ಯ ಮಾರಾಟಗಾರರನ್ನು ಹಿಡಿದು ಮೊಕದ್ದಮೆ ದಾಖಲಿಸಲಾಗುವುದು ಎಂದು ಭರವಸೆ ನೀಡಿದರು.

ನಗರಸಭೆ ಸದಸ್ಯರಾದ ಸಾಧಿಕ್, ನಟರಾಜ್, ಮುಖಂಡರಾದ ರಾಧಾಕೃಷ್ಣ, ನಾಗರಾಜ್, ಮಧುಸೂದನ್ ಮಾತನಾಡಿ, ನಗರದ ಟ್ರಾಫಿಕ್ ಪೊಲೀಸ್ ಠಾಣೆಯ ಬೇಡಿಕೆ, ಸಂಚಾರ ವ್ಯವಸ್ಥೆಯ ಅವ್ಯವಸ್ಥೆ, ಬಸ್‌ಗಳ ಮೇಲೆ ಕುಳಿತು ಪ್ರಯಾಣ, ಗ್ರಾಮೀಣ ಭಾಗಗಳಲ್ಲಿ ಅನಧಿಕೃತವಾಗಿ ಮದ್ಯ ಮಾರಾಟ ಮತ್ತಿತರ ಸಮಸ್ಯೆಗಳ ಕುರಿತು ಬೆಳಕು ಚೆಲ್ಲಿದರು.

ಡಿವೈಎಸ್‌ಪಿ ಲಕ್ಷ್ಮಯ್ಯ, ನಗರ ಠಾಣೆ ಇನ್‌ಸ್ಪೆಕ್ಟರ್ ಆನಂದಕುಮಾರ್, ಗ್ರಾಮಾಂತರ ಸರ್ಕಲ್ ಇನ್‌ಸ್ಪೆಕ್ಟರ್ ಶ್ರೀನಿವಾಸಪ್ಪ, ನಗರಸಭೆ ಪರಿಸರ ಎಂಜಿನಿಯರ್ ಉಮಾಶಂಕರ್, ಬೆಸ್ಕಾಂ ಎಂಜಿನಿಯರ್ ಜಯಂತ್, ವಿವಿಧ ಸಂಘ, ಸಂಸ್ಥೆಗಳ ಪದಾಧಿಕಾರಿಗಳು ಭಾಗವಹಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT