ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಂತ್ರಸ್ತರ ಖಾತೆಗೆ ನೇರ ವರ್ಗ

ಕೋವಿಡ್‌ನಿಂದ ಮೃತಪಟ್ಟ ಕುಟುಂಬಗಳಿಗೆ ಪರಿಹಾರ: ಸಚಿವ ಡಾ. ಕೆ.ಸುಧಾಕರ್‌
Last Updated 20 ಡಿಸೆಂಬರ್ 2021, 2:21 IST
ಅಕ್ಷರ ಗಾತ್ರ

ಗೌರಿಬಿದನೂರು: ‘ಪರಿಹಾರ ಧನವನ್ನು ಈ ಹಿಂದೆ ಚೆಕ್ ಮುಖಾಂತರ ವಿತರಿಸಲಾಗುತ್ತಿದ್ದ ಸಂದರ್ಭದಲ್ಲಿ ಸಾಕಷ್ಟು ಲೋಪದೋಷಗಳು ಉಂಟಾಗಿ ಫಲಾನುಭವಿಗಳಿಗೆ ತೊಂದರೆಯಾಗುತ್ತಿತ್ತು. ಆದರೆ ಈಗ ಸರ್ಕಾರದಿಂದ ನೇರವಾಗಿ ಫಲಾನುಭವಿಗಳ ಬ್ಯಾಂಕ್ ಖಾತೆಗಳಿಗೆ ಪರಿಹಾರ ಧನ ಸಂದಾಯ ಮಾಡುವ ವ್ಯವಸ್ಥೆ ಪಾರದರ್ಶಕವಾಗಿದೆ’ ಎಂದು ಜಿಲ್ಲಾ ಉಸ್ತುವಾರಿ ಸಚಿವರಾದ ಡಾ.ಕೆ.ಸುಧಾಕರ್ ತಿಳಿಸಿದರು.

ಜಿಲ್ಲಾಡಳಿತ ಹಾಗೂ ಜಿಲ್ಲಾ ಪಂಚಾಯತ್ ಇವರ ವತಿಯಿಂದ ನಗರದ ಎಚ್.ಎನ್.ಕಲಾಭವನದಲ್ಲಿ ನಡೆದ ಕೋವಿಡ್‌ನಿಂದ ಮೃತಪಟ್ಟ ಬಡತನ ರೇಖೆಗಿಂತ ಕೆಳಗಿರುವ ಕುಟುಂಬಗಳಿಗೆ ಚೆಕ್ ವಿತರಣೆ ಮತ್ತು ಅತಿವೃಷ್ಟಿ/ಪ್ರವಾಹದಿಂದ ಹಾನಿಯಾದ ಕುಟುಂಬಗಳಿಗೆ ಪರಿಹಾರ ಧನ ಮಂಜೂರಾತಿ ಪತ್ರ ವಿತರಣಾ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.

‘ಈ ವರ್ಷ ವಾಡಿಕೆಗಿಂತ ಹೆಚ್ಚು ಮಳೆಯಾಗಿದ್ದು, ಜಿಲ್ಲೆಯ ಬಹುತೇಕ ಕೆರೆಗಳು ತುಂಬಿವೆ. ಇಡೀ ರಾಜ್ಯದಲ್ಲಿ ಕೋಲಾರ-ಚಿಕ್ಕಬಳ್ಳಾಪುರದಲ್ಲಿರುವ ಕೆರೆಗಳ ಸಂಖ್ಯೆ ಇನ್ನೆಲ್ಲೂ ಕಾಣಲು ಸಾಧ್ಯವಿಲ್ಲ. ಸುಮಾರು 2,500 ಕೆರೆಗಳಿದ್ದು ಎರಡು ಜಿಲ್ಲೆಗಳನ್ನು ಕೆರೆಗಳ ತವರೂರು ಎಂದು ಕರೆಯಲಾಗುತ್ತದೆ. ಆದರೆ ಅಕಾಲಿಕ ಮಳೆಯು ಎರಡು ಜಿಲ್ಲೆಗಳಿಗೆ ವರದಾನವಾಗಿದೆ’ ಎಂದರು.

‘ಜಿಲ್ಲೆಯಲ್ಲಿ ಅಕ್ಟೋಬರ್ ಮತ್ತು ನವೆಂಬರ್‌ನಲ್ಲಿ ಭಾರಿ ಮಳೆಯಿಂದ ಬೆಳೆ ಹಾನಿಯಾಗಿದೆ. ತಾಲ್ಲೂಕಿನಲ್ಲಿ ಕೃಷಿ ಬೆಳೆ 16,230, ತೋಟಗಾರಿಕೆ ಬೆಳೆ 865 ಮತ್ತು ರೇಷ್ಮೆ ಬೆಳೆ 9.3 ಹೆಕ್ಟೇರ್ ಪ್ರದೇಶದ ಬೆಳೆಯು ಹಾನಿಯಾಗಿದೆ. ಈ ಪೈಕಿ 19,068 ರೈತರಿಗೆ ಸಂಕಷ್ಟಕ್ಕೆ ಒಳಗಾಗಿದ್ದಾರೆ. ಪರಿಹಾರ ತಂತ್ರಾಂಶದಲ್ಲಿ ನೊಂದಣಿ ಕಾರ್ಯ ಪ್ರಕ್ರಿಯೆಯಲ್ಲಿದ್ದು, ಜಿಲ್ಲೆಯಾದ್ಯಂತ ₹29.35 ಕೋಟಿ ಪ್ರತ್ಯೇಕವಾಗಿ ವಿವಿಧ ಬೆಳೆಗಳ ಹಾನಿಗೊಳಗಾದ ರೈತರ ಬ್ಯಾಂಕ್ ಖಾತೆಗೆ ನೇರವಾಗಿ ಜಮಾ ಆಗಿರುತ್ತದೆ’ ಎಂದರು.

‘ಗೌರಿಬಿದನೂರು ತಾಲ್ಲೂಕಿನಲ್ಲಿ 33 ಬಿಪಿಎಲ್ ಕುಟುಂಬಸ್ಥರು ಕೋವಿಡ್ ನಿಂದ ಮೃತಪಟ್ಟಿದ್ದು,15 ಮಂದಿ ಎಪಿಎಲ್ ಕುಟುಂಬಸ್ಥರು ಮೃತಪಟ್ಟಿದ್ದಾರೆ. ಬಿಪಿಎಲ್ ಕುಟುಂಬಸ್ಥರಿಗೆ ₹ 1.50 ಲಕ್ಷ ಪರಿಹಾರ ಧನ ನೀಡಲಾಗುವುದು ಮತ್ತು ಎಪಿಎಲ್ ಕುಟುಂಬಸ್ಥರಿಗೆ ₹50 ಸಾವಿರ ನೀಡಲಾಗುವುದು. ಕೇಂದ್ರ ಸರ್ಕಾರದಿಂದ ನೀಡುವ ₹50 ಸಾವಿರಗಳನ್ನು ಕೋವಿಡ್-19 ನಿಂದ ಜಿಲ್ಲೆಯಲ್ಲಿ ಮೃತಪಟ್ಟ 341 ಕುಟುಂಬಸ್ಥರಿಗೆ ಸರ್ಕಾರದಿಂದ ನೇರವಾಗಿ ಸಂಬಂಧಪಟ್ಟವರ ಖಾತೆಗೆ ಜಮೆ ಆಗುವುದು. ರಾಜ್ಯ ಸರ್ಕಾರದಿಂದ ನೀಡುವ ₹ 1 ಲಕ್ಷಗಳ ಪರಿಹಾರ ಮೊತ್ತವನ್ನು ಚೆಕ್ ಮೂಲಕ 246 ಕುಟುಂಬಸ್ಥರಿಗೆ ವಿತರಿಸಲಾಗುವುದು’ ಎಂದರು.

‘ಸರ್ಕಾರದಿಂದ ಜಿಲ್ಲೆಯಾದ್ಯಂತ ಮಳೆಯಿಂದ ಹಾನಿಯಾದ ಮನೆಗಳಿಗೆ ಎ, ಬಿ, ಸಿ ವರ್ಗಗಳಲ್ಲಿ ಕಂತುಗಳಲ್ಲಿ ಪರಿಹಾರ ನೀಡಲಾಗುವುದು. ಎ ವರ್ಗ (ಶೇ 75 ರಿಂದ ಶೇ 100) ಪೂರ್ಣ ಮನೆ ಹಾನಿ ಮತ್ತು ಬಿ2 ವರ್ಗ ತೀವ್ರ ಮನೆ ಹಾನಿಗೆ (ಕೆಡವಿ ಹೊಸದಾಗಿ ನಿರ್ಮಿಸುವುದು) ₹5 ಲಕ್ಷ ಮತ್ತು ಬಿ1 ವರ್ಗ (ಶೇ 25 ರಿಂದ ಶೇ 75) ಮನೆ ಹಾನಿಗೆ (ದುರಸ್ತಿ) ₹ 3 ಲಕ್ಷ ಮೊತ್ತವನ್ನು ನೀಡಲಾಗುತ್ತದೆ. ಸಿ ವರ್ಗ (ಶೇ 15 ರಿಂದ ಶೇ 25) ಭಾಗಶಃ
ಮನೆ ಹಾನಿಗೆ ₹50 ಸಾವಿರ
ಮೊತ್ತವನ್ನು ನೀಡಲಾಗುವುದು’ ಎಂದು ಹೇಳಿದರು.

ಮಳೆಯಿಂದ ಮನೆಯಲ್ಲಿ ನೀರು ನಿಂತು ದಿನಬಳಕೆ ವಸ್ತುಗಳು/ ಪಾತ್ರೆ/ ಬಟ್ಟೆ /ದವಸ ಧಾನ್ಯಗಳು ಹಾನಿಯಾಗಿದ್ದರೆ ತುರ್ತು ಪರಿಹಾರಕ್ಕೆ ₹ 10ಸಾವಿರ ನೀಡಲಾಗುತ್ತದೆ. ಶಾಸಕ ಎನ್.ಎಚ್.ಶಿವಶಂಕರರೆಡ್ಡಿ, ತಹಶೀಲ್ದಾರ್ ಎಚ್.ಶ್ರೀನಿವಾಸ್, ನಗರಸಭೆ ಅಧ್ಯಕ್ಷೆ ಭಾಗ್ಯಮ್ಮ, ಆಯುಕ್ತರಾದ ವಿ.ಸತ್ಯನಾರಾಯಣ, ಇಒ ಎನ್‌.ಮುನಿರಾಜು, ಬಿಇಒ ಕೆ.ವಿ.ಶ್ರೀನಿವಾಸಮೂರ್ತಿ, ನಗರಸಭೆಯ ಚುನಾಯಿತ ಪ್ರತಿನಿಧಿಗಳು ಹಾಗೂ ಸದಸ್ಯರು, ತಾಲ್ಲೂಕಿನ ವಿವಿಧ ಇಲಾಖೆಗಳ ಅಧಿಕಾರಿಗಳು, ಫಲಾನುಭವಿಗಳು ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT