ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಂತೂ ಇಂತೂ ಶುರುವಾಯ್ತು ರೈಲು

ಎರಡು ವರ್ಷದಿಂದ ಕೆಟ್ಟು ನಿಂತಿದ್ದ ಪುಟಾಣಿ ರೈಲು, ಸದ್ಯದಲ್ಲೇ ಹಸಿರಾಗಲಿರುವ ಉದ್ಯಾನ
Last Updated 9 ಏಪ್ರಿಲ್ 2018, 9:32 IST
ಅಕ್ಷರ ಗಾತ್ರ

ಹಾವೇರಿ: ನಗರದ ಮುನ್ಸಿಪಲ್‌ ಹೈಸ್ಕೂಲ್‌ ಬಳಿಯ ‘ಪುಟಾಣಿ ರೈಲು’ ಎರಡು ವರ್ಷಗಳ ಬಳಿಕ ಮತ್ತೆ ಆರಂಭವಾಗಿದ್ದು, ಪ್ರಸಕ್ತ ಬೇಸಿಗೆ ರಜೆಯಲ್ಲಿ ಮಕ್ಕಳ ಸಂತೋಷವನ್ನು ಇಮ್ಮಡಿಗೊಳಿಸಲಿದೆ.ಕಳೆದ 2016ರ ಆಗಸ್ಟ್‌ 15ರಂದು ಸ್ವಾತಂತ್ರ್ಯ ದಿನದಂದೇ ಯು.ಪಿ.ಎಸ್‌. ಬೋರ್ಡ್‌ ಹಾಗೂ ಮೋಟಾರ್‌ ಸಮಸ್ಯೆಯಿಂದ ಪುಟಾಣಿ ರೈಲಿನ ಸಂಚಾರ ಸ್ಥಗಿತಗೊಂಡಿತ್ತು. ಹೀಗಾಗಿ, ಮಕ್ಕಳ ಬಾಲವನವೇ ಬಿಕೋ ಎನ್ನುತ್ತಿತ್ತು.

ಆಗ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪ ನಿರ್ದೇಶಕ ಎಂ.ಎನ್‌.ಮಾಳಗೇರ ಅವರು ಪುಟಾಣಿ ರೈಲಿನ ಬೋರ್ಡ್‌ ಹಾಗೂ ಮೋಟಾರ್‌ ಅನ್ನು ‘ಮೈಸೂರಿನ ಸೆಂಟ್ರಲ್‌ ರೈಲ್ವೆ ವರ್ಕ್‌ ಶಾಪ್‌’ಗೆ ಕಳುಹಿಸಿದ್ದರು. ಆದರೆ, ಅದು ಸರಿಯಾಗುವುದಿಲ್ಲ ಎಂದು ತಿಳಿದ ಬಳಿಕ, ಬ್ಯಾಟರಿ ಚಾಲಿತ ರೈಲಿಗೆ ಡೀಸೆಲ್‌ ಚಾಲಿತ ಗೇರ್‌ ಎಂಜಿನ್ ಅಳವಡಿಸಲಾಗಿದೆ.

‘ಬಾಲವನದ ಉದ್ಯಾನ ಅಭಿವೃದ್ಧಿಪಡಿಸಲು ಒತ್ತು ನೀಡಲಾಗಿದೆ. ಈಗಾಗಲೇ, ಒಂದು ಕೊಳವೆಬಾವಿ ಕೊರೆಯಿಸಿದ್ದು ಮೂರು ಇಂಚು ನೀರು ಬರುತ್ತಿದೆ. ಸದ್ಯದಲ್ಲಿಯೇ ಹುಲ್ಲು ಬೆಳೆಸಲಾಗುವುದು’ ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪ ನಿರ್ದೇಶಕ ಎಂ.ಎನ್‌.ಮಾಳಗೇರ ‘ಪ್ರಜಾವಾಣಿ’ಗೆ ತಿಳಿಸಿದರು.

‘ಪುಟಾಣಿ ರೈಲಿನ ಹಳಿ ಕೆಳಗಿನ ಕಟ್ಟಿಗೆಗಳು ಶಿಥಿಲಗೊಂಡಿದ್ದು, ಬದಲಾಯಿಸಿ ಸಿಮೆಂಟ್‌ ಪಟ್ಟಿಗಳನ್ನು ಹಾಕಲಾಗುವುದು’ ಎಂದರು. ಬೇಸಿಗೆ ರಜೆ ಮುಗಿಯುವರೆಗೂ ಪ್ರತಿನಿತ್ಯ ಸಂಜೆ 4ರಿಂದ 6.30 ರ ವರೆಗೆ ‘ಪುಟಾಣಿ ರೈಲು’ ಓಡುತ್ತದೆ. ಪ್ರತಿ ಸೋಮವಾರ ರಜೆ ಇರುತ್ತದೆ. ಪೋಷಕರು ತಮ್ಮ ಮಕ್ಕಳೊಂದಿಗೆ ಒಂದು ಪುಟಾಣಿ ರೈಲಿನ ಸದುಪಯೋಗ ಪಡೆಯಬೇಕು’ ಎಂದು ಜಿಲ್ಲಾ ಬಾಲವನ ಕಾರ್ಯಕ್ರಮ ಸಂಯೋಜಕ ಎಸ್‌.ಎಂ.ಗಾಳಿಗೌಡ್ರ ತಿಳಿಸಿದರು.

ಕೆಟ್ಟು ನಿಂತ ಪುಟಾಣಿ ರೈಲು ದುರಸ್ತಿ ಹಾಗೂ ಉದ್ಯಾನ ಅಭಿವೃದ್ದಿ ಬಗ್ಗೆ ಬಗ್ಗೆ ‘ಪ್ರಜಾವಾಣಿ’ ಪ್ರತಿಕೆಯಲ್ಲಿ ಸರಣಿ ವರದಿಗಳು ಪ್ರಕಟವಾಗಿದ್ದವು.

ನವೆಂಬರ್‌ನಲ್ಲಿ ಉದ್ಯಾನ ಅಭಿವೃದ್ಧಿ

‘ಪ್ರಸಕ್ತ ಬೇಸಿಗೆ ರಜೆ ಮುಗಿದ ಬಳಿಕ ಜೂನ್‌–ನವೆಂಬರ್‌ ಒಳಗಾಗಿ ಉದ್ಯಾನದಲ್ಲಿ ಆಲಂಕಾರಿಕ ಗಿಡಗಳನ್ನು ನಾಟಿ ಮಾಡಲಾಗುವುದು. ಕೃಷ್ಣಮೃಗ, ನವಿಲು, ಕೊಕ್ಕರೆ, ಹಂಸ, ಮೇಕೆ, ಆಡು ಸೇರಿದಂತೆ ಪ್ರಾಣಿ, ಪಕ್ಷಿಗಳ ಆಕರ್ಷಕ ಹೊಸ ಮೂರ್ತಿಗಳನ್ನು ಇಡಲಾಗುವುದು. ಸದ್ಯದ ಮಟ್ಟಿಗೆ ಇದ್ದ ಮೂರ್ತಿಗಳನ್ನೇ ಸರಿಪಡಿಸಿ ಇಡಲಾಗಿದೆ’ ಎಂದು ಎಂ.ಎನ್‌.ಮಾಳಗೇರ ತಿಳಿಸಿದರು

**

ಸಮಸ್ಯೆಗಳ ಮಧ್ಯೆ ನಗರದ ಮುನ್ಸಿಪಲ್‌ ಹೈಸ್ಕೂಲ್‌ ಬಳಿಯ ‘ಪುಟಾಣಿ ರೈಲ’ನ್ನು ಮತ್ತೆ ಆರಂಭಿಸಲಾಗಿದ್ದು, ಸಾರ್ವಜನಿಕರು ಇದರ ಸದುಪಯೋಗ ಪಡೆಯಬೇಕು - ಎಂ.ಎನ್‌.ಮಾಳಗೇರ,ಉಪ ನಿರ್ದೇಶಕ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ.

ಪ್ರವೀಣ ಸಿ.ಪೂಜಾರ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT