ಶನಿವಾರ, ಸೆಪ್ಟೆಂಬರ್ 25, 2021
25 °C

ಗೌರಿಬಿದನೂರಿನಲ್ಲಿ ನೀರಿನ ಸಮಸ್ಯೆ:ಡ್ಯಾಂ ನಿರ್ಮಾಣಕ್ಕೆ ಜಿಲ್ಲಾಧಿಕಾರಿಗೆ ಮನವಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಚಿಕ್ಕಬಳ್ಳಾಪುರ: ಗೌರಿಬಿದನೂರು ನಗರ ಹಾಗೂ ತಾಲ್ಲೂಕಿನಲ್ಲಿ ಕುಡಿಯುವ ನೀರಿನ ಸಮಸ್ಯೆ ಉಲ್ಬಣಿಸುತ್ತಿದೆ. ಈ ಪ್ರಯುಕ್ತ ನಗರದ ಸಮೀಪದ ಅಣೆಕಟ್ಟೆ ನಿರ್ಮಿಸಿ ಎತ್ತಿನಹೊಳೆ ನೀರು ತುಂಬಿಸಬೇಕು. ತಾಲ್ಲೂಕಿನ ಕುಡಿಯುವ ನೀರಿನ ಸಮಸ್ಯೆ ಪರಿಹರಿಸಬೇಕು ಎಂದು ಕರ್ನಾಟಕ ರಕ್ಷಣಾ ವೇದಿಕೆ (ಶಿವರಾಮೇಗೌಡ ಬಣ) ಪದಾಧಿಕಾರಿಗಳು ಜಿಲ್ಲಾಧಿಕಾರಿ ಆರ್. ಲತಾ ಅವರಿಗೆ ಗುರುವಾರ ಮನವಿ ಸಲ್ಲಿಸಿದರು.

ಗೌರಿಬಿದನೂರು ನಗರದಲ್ಲಿ ಈಗ ಸುಮಾರು 40 ಸಾವಿರ ಜನಸಂಖ್ಯೆ ಇದೆ. 25 ವರ್ಷಗಳಿಂದ ನಗರದಲ್ಲಿ ಕುಡಿಯುವ ನೀರಿನ ಸಮಸ್ಯೆ ಇದೆ. ಒಂದು ಟ್ಯಾಂಕರ್ ಕುಡಿಯುವ ನೀರಿಗೆ ₹ 800 ಪಾವತಿಸಬೇಕಾಗಿದೆ. ತಾಲ್ಲೂಕಿನಲ್ಲಿ 3 ಲಕ್ಷ ಜನಸಂಖ್ಯೆ ಇದ್ದು ಶೇ 90ರಷ್ಟು ಜನರು ಕೃಷಿಯನ್ನೇ ಅವಲಂಬಿಸಿದ್ದಾರೆ ಎಂದು ಹೇಳಿದರು.

ಎರಡು ಸಾವಿರ ಅಡಿ ಆಳದವರೆಗೆ ಕೊಳವೆಬಾವಿ ಕೊರೆದರೂ ನೀರು ದೊರೆಯುತ್ತಿಲ್ಲ. ಇದರಿಂದ ಬೆಂಗಳೂರು ಸೇರಿದಂತೆ ನಗರಗಳತ್ತ ಕೆಲಸಕ್ಕಾಗಿ ವಲಸೆ ಹೋಗುತ್ತಿದ್ದಾರೆ. ಈ ನೀರಿನ ಸಮಸ್ಯೆ ಶಾಶ್ವತ ಪರಿಹಾರಕ್ಕೆ ಅಣೆಕಟ್ಟೆ ನಿರ್ಮಾಣವೇ ಮಾರ್ಗವಾಗಿದೆ. ಗೌರಿಬಿದನೂರಿನ ಮಿನಿ ವಿಧಾನಸೌಧದ ಹಿಂಬದಿಯ ಕಿಂಡಿ ಅಣೆಕಟ್ಟೆ ಬಳಿ ಕನಿಷ್ಠ 10 ಸಾವಿರ ಕ್ಯೂಸೆಕ್ ನೀರು ಸಂಗ್ರಹ ಸಾಮರ್ಥ್ಯದ ಅಣೆಕಟ್ಟೆಯನ್ನು ಎತ್ತಿನಹೊಳೆ ಯೋಜನೆಯಡಿ ನಿರ್ಮಿಸಬೇಕು ಎಂದು ಕೋರಿದರು.

ಜನರಿಗೆ ಅನುಕೂಲ ಕಲ್ಪಿಸಲು ರಾಜ್ಯ ಸರ್ಕಾರ ಹಾಗೂ ಜಿಲ್ಲಾ ಉಸ್ತುವಾರಿ ಸಚಿವರು ತ್ವರಿತವಾಗಿ ಕ್ರಮಕೈಗೊಳ್ಳಬೇಕು ಎಂದು ಮನವಿ ಮಾಡಿದರು.

ಸಂಘಟನೆ ಜಿಲ್ಲಾ ಘಟಕದ ಅಧ್ಯಕ್ಷ ಮಂಜುನಾಥ್, ಗೌರಿಬಿದನೂರು ತಾಲ್ಲೂಕು ಅಧ್ಯಕ್ಷ ಆದಿಮೂರ್ತಿ, ಚಿಕ್ಕಬಳ್ಳಾಪುರ ಘಟಕದ ಅಧ್ಯಕ್ಷ ಜಿ.ಕೆ. ಲೋಕೇಶ್, ಉಪಾಧ್ಯಕ್ಷ ಕೃಷ್ಣ, ರಮೇಶ್‌ಬಾಬು, ಶಿವಶಂಕರರೆಡ್ಡಿ, ಶಿವಮೂರ್ತಿ, ಜಗದೀಶ್ ಇದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.