ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೆಲಸ ಮಾಡದಿದ್ರೆ ಕಠಿಣ ಕ್ರಮ: ಎಂ.ಟಿ.ಬಿ.ನಾಗರಾಜ್

ಅಧಿಕಾರಿಗಳಿಗೆ ಸಚಿವ ಎಂ.ಟಿ.ಬಿ.ನಾಗರಾಜ್ ಖಡಕ್‌ ಸೂಚನೆ
Last Updated 20 ಮಾರ್ಚ್ 2022, 3:05 IST
ಅಕ್ಷರ ಗಾತ್ರ

ಚೇಳೂರು: ‘ರಾಜ್ಯದಲ್ಲಿ ಸರ್ಕಾರ ಜಾರಿಗೆ ತರುವಂತಹ ಜನಪರ ಕಾರ್ಯಕ್ರಮಗಳನ್ನು ಜನರಿಗೆ ತಲುಪಿಸುವ ಜವಾಬ್ದಾರಿ ಅಧಿಕಾರಿಗಳ ಮೇಲಿದೆ. ಜನಪರ ಕೆಲಸ ಮಾಡದೆ ಇದ್ದರೆ ಜಿಲ್ಲೆಯಿಂದ ವರ್ಗಾವಣೆ ಮಾಡಿಕೊಂಡು ಹೋಗಿ’ ಎಂದು ಜಿಲ್ಲಾ ಉಸ್ತುವಾರಿ ಸಚಿವ ಎಂ.ಟಿ.ಬಿ. ನಾಗರಾಜ್ ಅಧಿಕಾರಿಗಳಿಗೆ ಖಡಕ್ ಎಚ್ಚರಿಕೆ ನೀಡಿದರು.

ಪಾತಪಾಳ್ಯ ಹೋಬಳಿಯ ಸೋಮನಾಥಪುರ ಗ್ರಾಮದಲ್ಲಿ ಜಿಲ್ಲಾಡಳಿತ ಮತ್ತು ಬಾಗೇಪಲ್ಲಿ ತಾಲ್ಲೂಕು ಆಡಳಿತದಿಂದ ಶನಿವಾರ ನಡೆದ ಜಿಲ್ಲಾಧಿಕಾರಿ ನಡೆ ಹಳ್ಳಿಗಳ ಕಡೆ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

ಸಮಾಜದ ಕಟ್ಟಕಡೆಯ ವ್ಯಕ್ತಿಗೂ ಸಾಮಾಜಿಕ ನ್ಯಾಯ ಸಿಗಬೇಕೆಂದು ಸಂವಿಧಾನದಲ್ಲಿ ಅಂಬೇಡ್ಕರ್‌ ಹೇಳಿದ್ದಾರೆ. ಅದರಂತೆ ಸರ್ಕಾರ ಜನಪರ, ರೈತ ಪರ, ದಲಿತ ಪರ ಬಜೆಟ್‍ ಮಂಡಿಸಿದೆ ಎಂದು ತಿಳಿಸಿದರು.

ಗುಂಡುತೋಪು, ಸ್ಮಶಾನ, ರಾಜಕಾಲುವೆ ಮುಂತಾದ ಸರ್ಕಾರಿ ಸ್ವತ್ತುಗಳನ್ನು ಬಲಾಢ್ಯರ ಪಾಲು ಮಾಡದೆ ಉಳಿಸಬೇಕಾಗಿದೆ. ಚೇಳೂರು ನೂತನ ತಾಲ್ಲೂಕೆಂದು ಗೆಜೆಟ್‍ನಲ್ಲಿ ಒಂದು ತಿಂಗಳ ಹಿಂದೆ ಪ್ರಕಟವಾಗಿದೆ. ಈ ಹಿನ್ನೆಲೆಯಲ್ಲಿ ಮುಂದಿನ ದಿನಗಳಲ್ಲಿ ಚೇಳೂರಿನಲ್ಲಿ ತಾಲ್ಲೂಕು ಮಟ್ಟದ ಎಲ್ಲಾ ಇಲಾಖೆಯ ಕಚೇರಿಗಳೊಂದಿಗೆ ಅಧಿಕಾರಿಗಳನ್ನು ನಿಯೋಜಿಸಲಾಗುವುದು. ಇದರಿಂದ 40 ಕಿ.ಮೀ ದೂರವಿರುವ ಬಾಗೇಪಲ್ಲಿ ತಾಲ್ಲೂಕಿಗೆ ಸುತ್ತಾಡುವುದು ತಪ್ಪುತ್ತದೆ ಎಂದು ಹೇಳಿದರು.

ಜಿಲ್ಲಾಧಿಕಾರಿ ಆರ್. ಲತಾ ಮಾತನಾಡಿ, ‘ಸೋಮನಾಥಪುರ ಗ್ರಾಮದಲ್ಲಿ ಮನೆಯ ಮಗಳಂತೆ ಆತ್ಮೀಯವಾಗಿ ಗ್ರಾಮಸ್ಥರು ಬರಮಾಡಿಕೊಂಡರು. ಸರ್ಕಾರ ಒಂದು ಗ್ರಾಮವನ್ನು ಗ್ರಾಮ ವಾಸ್ತವ್ಯಕ್ಕೆ ಆಯ್ಕೆ ಮಾಡುತ್ತದೆ. ಇಡೀ ಗ್ರಾಮ ಪಂಚಾಯಿತಿಯನ್ನು ಆಯ್ಕೆ ಮಾಡಿಕೊಂಡು ಅಗತ್ಯ ಸೌಲಭ್ಯ ಕಲ್ಪಿಸಲಾಗುವುದು’ ಎಂದು ಹೇಳಿದರು.

ಗ್ರಾಮ ಪಂಚಾಯಿತಿಯಲ್ಲಿ 9 ಸಾವಿರ ಜನಸಂಖ್ಯೆಯಿದೆ. 1,028 ಜನರಿಗೆ ಹೆಲ್ತ್ ಕಾರ್ಡ್ ನೀಡಲಾಗಿದೆ. ಸ್ಮಶಾನ, ಪಿಂಚಣಿ ಮುಂತಾದ ಸಮಸ್ಯೆಗಳನ್ನು ಹಂತ ಹಂತವಾಗಿ ಬಗೆಹರಿಸಲಾಗುವುದು. ಸೋಮನಾಥಪುರ ಪಂಚಾಯಿತಿ ಕೇಂದ್ರಕ್ಕೆ ಪ್ರಾಥಮಿಕ ಆರೋಗ್ಯ ಕೇಂದ್ರವನ್ನು ಮಂಜೂರು ಮಾಡಿಸಲಾಗುವುದು. ಈಗಾಗಲೇ, ಸರ್ಕಾರಿ ಶಾಲೆಯ ಕಟ್ಟಡವನ್ನು ಪರಿಶೀಲಿಸಲಾಗಿದ್ದು, ಅಲ್ಲಿಯೇ ಆಸ್ಪತ್ರೆ ಪ್ರಾರಂಭಿಸಲಾಗುವುದು ಎಂದು ಹೇಳಿದರು.

ಕಾರ್ಯಕ್ರಮದಲ್ಲಿ ಉಪ ವಿಭಾಗಾಧಿಕಾರಿ ಸಂತೋಷ್ ಕುಮಾರ್, ತಹಶೀಲ್ದಾರ್ ವೈ. ರವಿ, ಜಿಲ್ಲಾ ಕೃಷಿ ಇಲಾಖೆಯ ಉಪ ನಿರ್ದೇಶಕಿ ಎಂ. ಅನುರೂಪಾ, ಡಿಎಚ್‌ಒ ಡಾ.ಇಂದಿರಾ ಕಬಾಡೆ, ಗ್ರಾ.ಪಂ. ಅಧ್ಯಕ್ಷೆ ರತ್ನಮ್ಮ, ಉಪಾಧ್ಯಕ್ಷೆ ಈಶ್ವರಮ್ಮ, ಟಿಎಚ್‌ಒ ಸತ್ಯನಾರಾಯಣರೆಡ್ಡಿ, ಇ.ಒ. ಮಂಜುನಾಥಸ್ವಾಮಿ, ಬಿಇಒ ಸಿದ್ದಪ್ಪ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT