ಜಿಲ್ಲಾ ಆರೋಗ್ಯಾಧಿಕಾರಿ ರವಿಶಂಕರ್ ಅಮಾನತು

ಮಂಗಳವಾರ, ಜೂಲೈ 23, 2019
27 °C
ಜಿಲ್ಲಾ ಆರೋಗ್ಯಾಧಿಕಾರಿ ವಿರುದ್ಧ ವ್ಯಾಪಕ ದೂರುಗಳು, ಬಿಲ್ಲುಗಳಲ್ಲಿ ಕಮಿಷನ್‌ಗೆ ಬೇಡಿಕೆ ಇಟ್ಟು ಮಾನಸಿಕ ಕಿರುಕುಳ ನೀಡುತ್ತಿದ್ದ ಆರೋಪ

ಜಿಲ್ಲಾ ಆರೋಗ್ಯಾಧಿಕಾರಿ ರವಿಶಂಕರ್ ಅಮಾನತು

Published:
Updated:
Prajavani

ಚಿಕ್ಕಬಳ್ಳಾಪುರ: ಜಿಲ್ಲಾ ಆರೋಗ್ಯಾಧಿಕಾರಿ ಡಾ.ಬಿ.ಎಂ.ರವಿಶಂಕರ್ ಅವರನ್ನು ಕರ್ತವ್ಯಲೋಪ ಆರೋಪದ ಮೆರೆಗೆ ಆರೋಗ್ಯ ಇಲಾಖೆ ಆಯುಕ್ತ ಪಂಕಜ್ ಕುಮಾರ್ ಪಾಂಡೆ ಅವರು ಅಮಾನತು ಮಾಡಿದ್ದಾರೆ.

ರವಿಶಂಕರ್ ಆಡಳಿತ ವೈಖರಿ ಖಂಡಿಸಿ, ಅವರ ವಿರುದ್ಧ ಕ್ರಮಕ್ಕೆ ಆಗ್ರಹಿಸಿ ಆರೋಗ್ಯ ಇಲಾಖೆ ನೌಕರರ ಸಂಘದ ಜಿಲ್ಲಾ ಘಟಕದ ಅಧ್ಯಕ್ಷ ಜಿ.ಹರೀಶ್‌ ಅವರು ಜಿಲ್ಲಾಧಿಕಾರಿ ಮತ್ತು ಆರೋಗ್ಯ ಇಲಾಖೆ ಆಯುಕ್ತರಿಗೆ ಮತ್ತು ಆರೋಗ್ಯ ಇಲಾಖೆ ವೈದ್ಯಾಧಿಕಾರಿಗಳ ಸಂಘದ ಜಿಲ್ಲಾ ಘಟಕದ ಕಾರ್ಯದರ್ಶಿ ಡಾ.ಸತ್ಯನಾರಾಯಣರೆಡ್ಡಿ, ರಾಜ್ಯ ಸರ್ಕಾರಿ ನೌಕರರ ಸಂಘದ ಜಿಲ್ಲಾ ಘಟಕದ ಅಧ್ಯಕ್ಷ ಆರ್.ಸಿ.ರೆಡ್ಡಪ್ಪ ಅವರು ಜಿಲ್ಲಾಧಿಕಾರಿ ಅವರಿಗೆ ದೂರು ನೀಡಿದ್ದರು.

ಈ ದೂರಿನ ಕುರಿತು ಜಿಲ್ಲಾ ನೋಡಲ್ ಅಧಿಕಾರಿ ಅವರು ಕೈಗೊಂಡ ತನಿಖೆಯಲ್ಲಿ ರವಿಶಂಕರ್‌ ಅವರ ವಿರುದ್ಧ ವ್ಯಾಪಕ ದೂರುಗಳು ಕೇಳಿಬಂದಿದ್ದವು. ತನಿಖೆಯ ವರದಿಯ ಆಧಾರದಲ್ಲಿ ರವಿಶಂಕರ್ ಅವರನ್ನು ಅಮಾನತು ಮಾಡಿರುವ ಆಯುಕ್ತರು ಜಿಲ್ಲಾ ಕ್ಷಯ ರೋಗ ನಿಯಂತ್ರಣಾಧಿಕಾರಿ ಡಾ.ಯಲ್ಲಾ ರಮೇಶ್ ಬಾಬು ಅವರನ್ನು ಹಂಗಾಮಿ ಜಿಲ್ಲಾ ಆರೋಗ್ಯಾಧಿಕಾರಿಯನ್ನಾಗಿ ನಿಯೋಜಿಸಿ ಆದೇಶ ಹೊರಡಿಸಿದ್ದಾರೆ.

‘ರವಿಶಂಕರ್ ಅವರು ಆರೋಗ್ಯ ಇಲಾಖೆಯ ಎಲ್ಲ ಕಾರ್ಯಕ್ರಮಗಳ ಅನುಷ್ಠಾನಾಧಿಕಾರಿಗಳಿಗೆ ಮಾನಸಿಕ ಕಿರುಕುಳ ನೀಡುತ್ತಿದ್ದಾರೆ. ಕಾರ್ಯಕ್ರಮಗಳಿಗೆ ಸಂಬಂಧಪಟ್ಟ ಕುಂದುಕೊರತೆಗಳನ್ನು ಚರ್ಚಿಸಲು ಹೋದಾಗ ಸೌಜನ್ಯದಿಂದ ವರ್ತಿಸದೆ ಅತಿರೇಕದ ವರ್ತನೆ ತೋರಿ, ಕನಿಷ್ಠ ಗೌರವ ಕೊಡದೆ ಏಕವಚನ ಪ್ರಯೋಗಿಸಿ ದಬ್ಬಾಳಿಕೆ ನಡೆಸುತ್ತಿದ್ದಾರೆ. ಇಲಾಖೆಯಲ್ಲಿ ಭ್ರಷ್ಟಾಚಾರ ಭ್ರಷ್ಟಾಚಾರ ಮತ್ತು ಉಸಿರುಗಟ್ಟುವ ವಾತಾವರಣ ನಿರ್ಮಾಣ ಮಾಡಿದ್ದಾರೆ’ ಎಂದು ತನಿಖೆಯ ವರದಿಯಲ್ಲಿ ಉಲ್ಲೇಖಿಸಲಾಗಿದೆ.

‘ರವಿಶಂಕರ್ ಅವರು ರಾಷ್ಟ್ರೀಯ ಕಾರ್ಯಕ್ರಮಗಳಿಗೆ ಅನುಮತಿ ನೀಡುವಾಗ ಅಧಿಕಾರಿಗಳ ಬಳಿ ಬಿಲ್ಲುಗಳಲ್ಲಿ ಕಮಿಷನ್‌ಗೆ ಬೇಡಿಕೆ ಇಟ್ಟು ಮಾನಸಿಕ ಕಿರುಕುಳ ನೀಡುತ್ತಿದ್ದರು. ಹಣ ನೀಡಿದೆ ಇದ್ದಾಗ ವಿನಾಕಾರಣ ಕಡತಗಳಲ್ಲಿ ಚರ್ಚಿಸಿ ಎಂದು ಬರೆದು ಚರ್ಚಿಸಲು ಹೋದಾಗ ಅವಾಚ್ಯ ಶಬ್ದಗಳಿಂದ ನಿಂದಿಸಿ ಹಣ ನೀಡುವಂತೆ ಒತ್ತಾಯಿಸುತ್ತಿದ್ದರು. ಹಣ ನೀಡದಿದ್ದಾಗ ಕಡತಗಳಲ್ಲಿ ಸಣ್ಣಪುಟ್ಟ ತಪ್ಪುಗಳನ್ನು ಹುಡುಕಿ ಆಕ್ಷೇಪಣೆಗಳನ್ನು ಬರೆಯುತ್ತಿದ್ದರು’ ಎಂದು ಹೇಳಲಾಗಿದೆ.

‘ಪ್ರಾಥಮಿಕ ಆರೋಗ್ಯ ಕೇಂದ್ರಗಳಿಗೆ ಭೇಟಿ ನೀಡಿದಾಗ ವೈದ್ಯರನ್ನು ಹೀಯಾಳಿಸುವುದು. ಚಿಂತಾಮಣಿಯಲ್ಲಿರುವ ಸಂಚಾರಿ ಚಿಕಿತ್ಸಾ ಘಟಕದವರಿಗೆ ಹಣಕ್ಕೆ ಬೇಡಿಕೆ ಇಡುವುದು. ಪೆಟ್ರೋಲ್ ಬಂಕ್‌ಗಳಿಗೆ ಇಲಾಖೆಯಿಂದ ಪರವಾನಗಿ ನೀಡಲು ಹಣಕ್ಕೆ ಬೇಡಿಕೆ ಇಡುತ್ತಿದ್ದರು. ಕಾಸು ಕೊಟ್ಟವರಿಗೆ ಕೆಲಸ ಎಂಬಂತಹ ಉಸಿರುಗಟ್ಟಿಸುವ ವಾತಾವರಣ ನಿರ್ಮಾಣ ಮಾಡಿದ್ದರು’ ಎಂದು ವರದಿಯಲ್ಲಿ ಆರೋಪಿಸಲಾಗಿದೆ.

ಬರಹ ಇಷ್ಟವಾಯಿತೆ?

 • 1

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !