ಸೋಮವಾರ, ಸೆಪ್ಟೆಂಬರ್ 23, 2019
28 °C

ಡಿಕೆಶಿ ಬೆಂಬಲಿಸಿ ಪ್ರತಿಭಟನೆ ತಪ್ಪು: ಸಂಸದ ಬಿ.ಎನ್.ಬಚ್ಚೇಗೌಡ ಟೀಕೆ

Published:
Updated:

ಚಿಕ್ಕಬಳ್ಳಾಪುರ: 'ಶಾಸಕ ಡಿ.ಕೆ.ಶಿವಕುಮಾರ್ ಬೆಂಬಲಿಸಿ ಒಕ್ಕಲಿಗರು ಪ್ರತಿಭಟನೆ ನಡೆಸಿರುವುದು ತಪ್ಪು. ಇಂತಹ ವಿಷಯದಲ್ಲಿ ಜಾತಿ, ಸಮುದಾಯದ ನಡುವೆ ಗೊಂದಲ ಮಾಡಬಾರದು' ಎಂದು ಸಂಸದ ಬಿ.ಎನ್.ಬಚ್ಚೇಗೌಡ ಹೇಳಿದರು.

ಜಿಲ್ಲಾಡಳಿತ ಭವನದಲ್ಲಿ ಬುಧವಾರ ನಡೆದ ಸಂಸದರ ಕಚೇರಿ ಉದ್ಘಾಟನೆ ಕಾರ್ಯಕ್ರಮದಲ್ಲಿ ಅವರು ಸುದ್ದಿಗಾರರೊಂದಿಗೆ ಮಾತನಾಡಿದರು. 'ಬಿಜೆಪಿ ದ್ವೇಷದ ರಾಜಕಾರಣ ಮಾಡುವುದಿಲ್ಲ. ಅವರವರು ಮಾಡಿದ್ದು ಅವರು ಅನುಭವಿಸುತ್ತಾರೆ. ಸುಮ್ಮನೆ ಎಲ್ಲದ್ದಕ್ಕೂ ರಾಜಕೀಯ ಬಣ್ಣ ಹಚ್ಚಬಾರದು' ಎಂದು ತಿಳಿಸಿದರು.

'ಒಕ್ಕಲಿಗರ ಪ್ರತಿಭಟನೆ ಕಾಂಗ್ರೆಸ್ ಗೆ ಸೀಮಿತವಾಗಿರುವ ಪ್ರತಿಭಟನೆ, ಅದಕ್ಕೂ ಬಿಜೆಪಿಗೂ ಸಂಬಂಧವಿಲ್ಲ. ದೇಶದಲ್ಲಿ, ರಾಜ್ಯದಲ್ಲಿ ಎಲ್ಲರೂ ಬೇಕಾದರೆ ರಾಜಕಾರಣ ಮಾಡಬೇಕು‌. ಅದು ಬಿಟ್ಟು ಒಕ್ಕಲಿಗರಿಗೆ ಮಾತ್ರ ಸೀಮಿತಗೊಳಿದರೆ ಉಳಿದವರು ಬೇಡವೆ? ಜಾತಿ, ಸಮುದಾಯದ ನಡುವೆ ರಾಜಕೀಯ ಮಾಡುವುದು ಎಷ್ಟು ಸರಿ' ಎಂದು ಪ್ರಶ್ನಿಸಿದರು.

'ದೇಶದ ರಾಜಕಾರಣ ಮಾಡಬೇಕೇ ವಿನಾ ದ್ವೇಷದ ರಾಜಕಾರಣ ಮಾಡಬಾರದು. ಇಡಿ, ಐಟಿ, ಸಿಬಿಐ ಸ್ವಾಯತ್ತ ಸಂಸ್ಥೆಗಳು ತಮ್ಮ ವ್ಯಾಪ್ತಿಯಲ್ಲಿ ಕರ್ತವ್ಯ ನಿರ್ವಹಿಸುತ್ತಿವೆ. ಅವುಗಳ ತನಿಖೆ ಮುಗಿದ ಬಳಿಕ ನಾವು ಮಾತನಾಡುತ್ತೇವೆ' ಎಂದು‌ ಹೇಳಿದರು.

Post Comments (+)