ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೈಲಾದ ಮಟ್ಟಿಗೆ ಸತ್ಕಾರ್ಯ ಮಾಡಿ: ನಿರ್ಮಲಾನಂದನಾಥ ಸ್ವಾಮೀಜಿ

ಎಸ್‌ಜೆಸಿಐಟಿ ಹಳೆಯ ವಿದ್ಯಾರ್ಥಿಗಳ ಸಮಾವೇಶ ‘ಸಮ್ಮಿಲನ’
Last Updated 21 ಡಿಸೆಂಬರ್ 2019, 13:17 IST
ಅಕ್ಷರ ಗಾತ್ರ

ಚಿಕ್ಕಬಳ್ಳಾಪುರ: ‘ಈ ನೆಲದಿಂದ ಎಲ್ಲವನ್ನೂ ಪಡೆದಿರುವ ನಾವು ಅದಕ್ಕೆ ಪ್ರತಿಯಾಗಿ ಏನಾದರೂ ಕೊಡುಗೆ ನೀಡಬೇಕು. ಸಮಾಜದಲ್ಲಿ ಅಪಾರ ಸಂಖ್ಯೆಯ ಬಡವರಿದ್ದಾರೆ. ಬಡ ಮಕ್ಕಳನ್ನು ದತ್ತು ಪಡೆದು ಶಿಕ್ಷಣ ಕೊಡಿಸುವುದು ನಾವು ಸಮಾಜಕ್ಕೆ ಮಾಡಬಹುದಾದ ಅತ್ಯುತ್ತಮ ಸತ್ಕಾರ್ಯ’ ಎಂದು ಆದಿಚುಂಚನಗಿರಿ ಮಠದ ಪೀಠಾಧ್ಯಕ್ಷ ನಿರ್ಮಲಾನಂದನಾಥ ಸ್ವಾಮೀಜಿ ತಿಳಿಸಿದರು.

ನಗರದ ಹೊರವಲಯದ ಶ್ರೀಜಗದ್ಗುರು ಚಂದ್ರಶೇಖರನಾಥ ಸ್ವಾಮೀಜಿ ತಾಂತ್ರಿಕ ಸಂಸ್ಥೆಯಲ್ಲಿ (ಎಸ್‌ಜೆಸಿಐಟಿ) ಶನಿವಾರ ಹಮ್ಮಿಕೊಂಡಿದ್ದ ಹಳೆಯ ವಿದ್ಯಾರ್ಥಿಗಳ ಸಮಾವೇಶ ‘ಸಮ್ಮಿಲನ’ದಲ್ಲಿ ಅವರು ಮಾತನಾಡಿದರು.

‘ಎಸ್‌ಜೆಸಿಐಟಿಯಲ್ಲಿ ವ್ಯಾಸಂಗ ಮಾಡಿದ ವಿದ್ಯಾರ್ಥಿಗಳು ಇವತ್ತು ವಿಶ್ವದ ಎಲ್ಲೆಡೆ ಸಿಗುತ್ತಾರೆ. ಅನೇಕರು ದೇಶ, ವಿದೇಶಗಳಲ್ಲಿ ಉತ್ತಮ ಸ್ಥಾನಮಾನ ಹೊಂದಿದ್ದಾರೆ. ಎಷ್ಟೇ ಉನ್ನತ ಸ್ಥಾನ ಹೊಂದಿದರೂ ನಾವು ನಮ್ಮ ಸಂಸ್ಕೃತಿಯನ್ನು ಬಿಡಬಾರದು. ವಯಸ್ಸಾದ ತಂದೆ ತಾಯಿಯನ್ನು ಪೋಷಣೆ ಮಾಡಬೇಕು. ಬಡ ಮಕ್ಕಳನ್ನು ದತ್ತು ಪಡೆದು ಶಿಕ್ಷಣ ಕೊಡಿಸಿದರೆ ಸಮಾಜದ ಅಭಿವೃದ್ಧಿಗೆ ಸಹಕಾರಿಯಾಗಲಿದೆ’ ಎಂದು ಹೇಳಿದರು.

‘ಆದಿಚುಂಚನಗಿರಿ ಶಿಕ್ಷಣ ಸಂಸ್ಥೆಯಲ್ಲಿ ಈಗಾಗಲೇ ಆರು ಸಾವಿರಕ್ಕೂ ಹೆಚ್ಚು ವಿದ್ಯಾರ್ಥಿಗಳಿಗೆ ಉಚಿತ ಶಿಕ್ಷಣ ನೀಡಲಾಗುತ್ತಿದೆ. ಉತ್ತಮ ಸ್ಥಿತಿಯಲ್ಲಿರುವ ಹಳೇ ವಿದ್ಯಾರ್ಥಿಗಳು ಇಂತಹ ಮಕ್ಕಳಲ್ಲಿ ಕನಿಷ್ಠ ಒಂದು ಸಾವಿರ ವಿದ್ಯಾರ್ಥಿಗಳನ್ನಾದರೂ ದತ್ತು ಪಡೆಯಬೇಕು. ದತ್ತು ಪಡೆದ ವಿದ್ಯಾರ್ಥಿಗಳ ವೆಚ್ಚದ ಶೇ50ರಷ್ಟು ಹಳೆಯ ವಿದ್ಯಾರ್ಥಿಗಳು ನೀಡಿದರೆ, ಉಳಿದದ್ದನ್ನು ಮಠ ಭರಿಸಲಿದೆ. ಪ್ರಸ್ತುತ ಸಮಾಜದಲ್ಲಿ ಶಿಕ್ಷಣದ ಅಗತ್ಯ ಮತ್ತು ಮಹತ್ವ ಹೆಚ್ಚಿದೆ. ಇದನ್ನು ಮನಗಂಡು ನಿಮ್ಮ ಮಕ್ಕಳಂತೆಯೇ ಬಡ ಮಕ್ಕಳ ಶಿಕ್ಷಣಕ್ಕೂ ಕೈಜೋಡಿಸಬೇಕು’ ಎಂದರು.

ಶಾಸಕ ಡಾ.ಕೆ. ಸುಧಾಕರ್ ಮಾತನಾಡಿ, ‘ಎಸ್‌ಜೆಸಿಐಟಿ ಎಂಜಿನಿಯರ್‌ಗಳ ಉತ್ಪಾದನಾ ಕೇಂದ್ರವಾಗಿದೆ. ಈ ಸಂಸ್ಥೆಯಲ್ಲಿ ವ್ಯಾಸಂಗ ಮಾಡಿದ ಸಾವಿರಾರು ಮಂದಿ ನಾನಾ ದೇಶಗಳಲ್ಲಿ ಉನ್ನತ ಸ್ಥಾನಗಳನ್ನು ಅಲಂಕರಿಸಿರುವುದು ಅಭಿನಂದನಾರ್ಹ ವಿಷಯ. ಪ್ರತಿ ವರ್ಷ ನೂರಾರು ವಿದ್ಯಾರ್ಥಿಗಳು ಬಿಜಿಎಸ್ ಶಿಕ್ಷಣ ಸಂಸ್ಥೆಗಳಲ್ಲಿ ವ್ಯಾಸಂಗ ಪೂರೈಸುತ್ತಾರೆ. ಶಿಕ್ಷಣ ಪಡೆದ ಸಂಸ್ಥೆಯನ್ನು ಸ್ಮರಿಸಿಕೊಂಡು ಸಂಸ್ಥೆಯ ಮಕ್ಕಳ ಉನ್ನತಿಗಾಗಿ ಯೋಚನೆ ಮಾಡಿರುವ ಹಳೆಯ ವಿದ್ಯಾರ್ಥಿಗಳ ಕಾರ್ಯ ಅಭಿನಂದನೀಯ’ ಎಂದು ಹೇಳಿದರು.

ರಾಜ್ಯಸಭಾ ಸದಸ್ಯ ಎಂ.ವಿ.ರಾಜೀವ್ ಗೌಡ , ಆದಿಚುಂಚನಗಿರಿಯ ಚಿಕ್ಕಬಳ್ಳಾಪುರ ಶಾಖಾ ಮಠದ ಮಂಗಳನಾಥ ಸ್ವಾಮೀಜಿ, ಬೆಂಗಳೂರಿನ ಟಾಟಾ ಕನ್ಸಲ್ಟೆನ್ಸಿ ಸರ್ವೀಸ್‌ ಮುಖ್ಯಸ್ಥ ಇ.ಎಸ್.ಚಕ್ರವರ್ತಿ, ಬಿಜಿಎಸ್‌ ಶಿಕ್ಷಣ ಸಂಸ್ಥೆಗಳ ಆಡಳಿತಾಧಿಕಾರಿ ಎನ್.ಶಿವರಾಮರೆಡ್ಡಿ, ಎಸ್‌ಜೆಸಿಐಟಿ ಪ್ರಾಂಶುಪಾಲ ಕೆ.ಎಂ.ರವಿಕುಮಾರ್, ವೈದ್ಯ ಡಾ.ಕೆ.ಪಿ.ಶ್ರೀನಿವಾಸಮೂರ್ತಿ, ಹಳೆಯ ವಿದ್ಯಾರ್ಥಿಗಳ ಸಂಘದ ಅಧ್ಯಕ್ಷೆ ಗೀತಾ ವಿವೇಕಾನಂದ ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT