ಬುಧವಾರ, ಆಗಸ್ಟ್ 10, 2022
20 °C
ರೇಷ್ಮೆ ಗೂಡು ಮಾರುಕಟ್ಟೆಯಲ್ಲಿ ಲಾಭದ ಗೂಡಿಗೆ ಕಡಿವಾಣ ಹಾಕಿ

ಮಧ್ಯವರ್ತಿಗಳಿಗೆ ಅವಕಾಶ ಬೇಡ: ರೈತ ಸಂಘಟನೆಗಳ ಒತ್ತಾಯ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಶಿಡ್ಲಘಟ್ಟ: ರೇಷ್ಮೆ ಗೂಡನ್ನು ಮಾರುಕಟ್ಟೆಗೆ ತರುವ ರೈತರು ಯಾವುದೇ ಕಾರಣಕ್ಕೂ ಲಾಭದ ಗೂಡೆಂದು ಅಥವಾ ಸ್ಯಾಂಪಲ್ ಗೂಡೆಂದು ಯಾರಿಗೂ ಕೊಡಬಾರದು ಎಂದು ರಾಜ್ಯ ರೈತ ಸಂಘ ಹಾಗೂ ಹಸಿರುಸೇನೆ ರಾಜ್ಯ ಪ್ರಧಾನ ಕಾರ್ಯದರ್ಶಿ ಭಕ್ತರಹಳ್ಳಿ ಬೈರೇಗೌಡ ತಿಳಿಸಿದರು.

ರೇಷ್ಮೆ ಗೂಡಿನ ಮಾರುಕಟ್ಟೆಯಲ್ಲಿ ಬುಧವಾರ ರೈತರು ಹಾಗೂ ರೀಲರುಗಳನ್ನೊಳಗೊಂಡ ಸಭೆಯಲ್ಲಿ ಅವರು ಮಾತನಾಡಿದರು.

ರೇಷ್ಮೆ ಗೂಡಿನ ಮಾರುಕಟ್ಟೆಯಲ್ಲಿ ಲಾಭದ ಗೂಡು ಅಥವಾ ಸ್ಯಾಂಪಲ್ ಹೆಸರಿನಲ್ಲಿ ರೈತರಿಂದ ಕೆಲವಾರು ಮಂದಿ ಗೂಡನ್ನು ಹೊರಕ್ಕೆ ಕೊಂಡೊಯ್ಯುತ್ತಿದ್ದರು. ಇದೀಗ ಇದು ದಲ್ಲಾಳಿಗಳನ್ನು ಬೆಳೆಸುವ ದೊಡ್ಡ ಪಿಡುಗಾಗಿದೆ. ಇದನ್ನು ನಿಲ್ಲಿಸಬೇಕೆಂದು ರೀಲರುಗಳೇ ರೇಷ್ಮೆ ಕೃಷಿ ಉಪನಿರ್ದೇಶಕರಿಗೆ ಮನವಿ ಸಲ್ಲಿಸಿರುವುದು ಸ್ವಾಗತಾರ್ಹ ಎಂದರು.

ಪರವಾನಗಿ ಇರುವ ರೀಲರುಗಳನ್ನು ಮಾತ್ರ ರೇಷ್ಮೆ ಗೂಡಿನ ಮಾರುಕಟ್ಟೆಯ ಒಳಗೆ ಬರಲು ಅವಕಾಶ ಮಾಡಿಕೊಡಬೇಕು. ಒಂದೇ ಒಂದು ರೇಷ್ಮೆ ಗೂಡನ್ನೂ ಯಾರಿಗೂ ಉಚಿತವಾಗಿ ನೀಡಬಾರದು ಎಂದು ಹೇಳಿದರು.

ರೀಲರ್ಸ್ ಸಂಘದ ಅಧ್ಯಕ್ಷ ಅನ್ಸರ್ ಮಾತನಾಡಿ, ರೇಷ್ಮೆ ಗೂಡಿನ ಮಾರುಕಟ್ಟೆಯಲ್ಲಿ ಕೆಲವಾರು ದಳ್ಳಾಳಿಗಳು ರೈತರಿಂದ ಲಾಭದ ಗೂಡು ಪಡೆಯುತ್ತಿದ್ದು, ಇದರಿಂದ ವಹಿವಾಟಿನಲ್ಲಿ ವ್ಯತ್ಯಾಸವಾಗುತ್ತಿದೆ. ಇದರಿಂದಾಗಿ ಹಲವಾರು ರೀಲರುಗಳಿಗೆ ಗೂಡು ಖರೀದಿಸಲು ಆಗುತ್ತಿಲ್ಲ. ಮಧ್ಯವರ್ತಿಗಳು ಹರಾಜಿನ ಸಮಯಕ್ಕಿಂತ ಮುಂಚೆಯೇ ರೈತರಿಂದ ನೇರ ಒಳ ಒಪ್ಪಂದ ಮಾಡಿಕೊಳ್ಳುತ್ತಿದ್ದಾರೆ. ಇದಕ್ಕೆ ಕಡಿವಾಣ ಬೀಳಬೇಕು. ರೀಲರುಗಳು ರೈತರಿಂದ ಪಾರದರ್ಶಕವಾಗಿ ಗೂಡು ಖರೀದಿಸಲು ಅನುಕೂಲವಾಗುವ ವ್ಯವಸ್ಥೆಯನ್ನು ಕಲ್ಪಿಸಬೇಕು ಎಂದು ಹೇಳಿದರು.

ರೀಲರುಗಳಾದ ಜಿ.ರಹಮಾನ್ ಮಾರುಕಟ್ಟೆಯ ಸಮಸ್ಯೆಗಳ ಬಗ್ಗೆ ಮಾತನಾಡಿ, ಅಧಿಕಾರಿಗಳ ಬಿಗಿ ಇಲ್ಲದಿದ್ದರೆ ವ್ಯವಸ್ಥೆಯನ್ನು ಸರಿಪಡಿಸಲು ಆಗದು ಎಂದರು.

ರೇಷ್ಮೆ ಗೂಡು ಮಾರುಕಟ್ಟೆಯ ಉಪನಿರ್ದೇಶಕ ನರಸಿಂಹಮೂರ್ತಿ, ರೈತ ಸಂಘದ ತಾಲ್ಲೂಕು ಅಧ್ಯಕ್ಷ ತಾದೂರು ಮಂಜುನಾಥ್, ಬೋದಗ್ರು ವೆಂಕಟಸ್ವಾಮಿರೆಡ್ಡಿ, ವೇಣುಗೋಪಾಲ್, ದೇವರಾಜ್, ರಾಮಕೃಷ್ಣಪ್ಪ, ನರಸಿಂಹಮೂರ್ತಿ, ಬಸವರಾಜ್, ರೀಲರ್‌ ಅನ್ವರ್ ಸಾಬ್ ಇದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು