ನೀರಿನ ವಿಚಾರದಲ್ಲಿ ಅನ್ಯಾಯ ಮಾಡುವುದಿಲ್ಲ

7
ಒಕ್ಕಲಿಗರ ಸಂಘದ ವತಿಯಿಂದ ಆಯೋಜಿಸಿದ್ದ ಕೆಂಪೇಗೌಡ ಜಯಂತಿ ಕಾರ್ಯಕ್ರಮದಲ್ಲಿ ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ಭರವಸೆ

ನೀರಿನ ವಿಚಾರದಲ್ಲಿ ಅನ್ಯಾಯ ಮಾಡುವುದಿಲ್ಲ

Published:
Updated:
Deccan Herald

ಚಿಕ್ಕಬಳ್ಳಾಪುರ: ‘ಈ ಭಾಗದ ಕುಡಿಯುವ ನೀರು, ಕೆರೆಗಳ ತುಂಬುವ ವಿಚಾರದಲ್ಲಿ ಯಾವುದೇ ಕಾರಣಕ್ಕೂ ನಿಮಗೆ ಅನ್ಯಾಯ ಮಾಡಿ ಈ ಸರ್ಕಾರ ನಡೆಸುತ್ತೇವೆ ಎನ್ನುವ ಭಾವನೆ ಬೇಡ. ನಿಮಗೆ ಶಾಶ್ವತವಾದ ನೀರನ್ನು ಯಾವುದೇ ಮೂಲದಿಂದಲಾದರೂ ತಂದು ಕೊಡುವ ಜವಾಬ್ದಾರಿ ನಮ್ಮದು’ ಎಂದು ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ಹೇಳಿದರು.

ನಗರದಲ್ಲಿ ಶುಕ್ರವಾರ ಒಕ್ಕಲಿಗರ ಸಂಘದ ವತಿಯಿಂದ ಆಯೋಜಿಸಿದ್ದ ಕೆಂಪೇಗೌಡ ಜಯಂತಿ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

‘ಕೋಲಾರ ಮತ್ತು ಚಿಕ್ಕಬಳ್ಳಾಪುರ ಜಿಲ್ಲೆಗಳ ಜನರು ಹಲವಾರು ವರ್ಷಗಳಿಂದ ನಿತ್ಯ ನೀರಿನ ವೇದನೆಯಿಂದ ಕಳೆಯುತ್ತಿದ್ದಿರಿ. ಶಾಶ್ವತ ನೀರಿನ ಪರಿಹಾರ ದೊರಕಬೇಕು ಎನ್ನುವುದು ನಿಮ್ಮೆಲ್ಲರ ಹೋರಾಟ, ಒತ್ತಡವನ್ನು ನಾವು ಸೂಕ್ಷ್ಮವಾಗಿ ಗಮನಿಸಿದ್ದೇವೆ. ಈ ಭಾಗಕ್ಕೆ ನೀರು ಒದಗಿಸುವುದು ನಮ್ಮ ಕರ್ತವ್ಯ. ಅದನ್ನು ನಾವು ಈಡೇರಿಸುತ್ತೇವೆ’ ಎಂದು ತಿಳಿಸಿದರು.

‘ನಾಲ್ಕು ವರ್ಷಗಳ ಹಿಂದೆ ಎತ್ತಿನಹೊಳೆ ಯೋಜನೆಗೆ ಶಂಕುಸ್ಥಾಪನೆ ನೆರವೇರಿಸಲಾಗಿದೆ. ಇಂದಿಗೂ ಆ ನೀರು ಬಂದಿಲ್ಲ. ಮುಂದಿನ ಎರಡು ತಿಂಗಳಲ್ಲಿ ಈ ಭಾಗದ ನೀರಾವರಿ ಯೋಜನೆಗಳಿಗೆ ದೊಡ್ಡ ಮಟ್ಟದಲ್ಲಿ ಹೇಗೆ ಚಾಲನೆ ನೀಡಬೇಕು ಎನ್ನುವ ಬಗ್ಗೆ ಜಲಸಂಪನ್ಮೂಲ ಸಚಿವ ಡಿ.ಕೆ.ಶಿವಕುಮಾರ್ ಮತ್ತು ನಾವು ಚರ್ಚೆ ಮಾಡುತ್ತೇವೆ’ ಎಂದು ಆಶ್ವಾಸನೆ ನೀಡಿದರು.

‘ಹೆಬ್ಬಾಳ ಮತ್ತು ನಾಗವಾರ ಕಣಿವೆಗಳ ತ್ಯಾಜ್ಯ ನೀರನ್ನು ಮೂರನೇ ಹಂತದಲ್ಲಿ ಶುದ್ಧೀಕರಿಸುವ ಘಟಕ ಸ್ಥಾಪನೆ ಬಗ್ಗೆ ಈಗಾಗಲೇ ಚರ್ಚೆ ನಡೆಸಿದ್ದೇವೆ. ಎಷ್ಟೇ ಹಣ ಖರ್ಚಾಗಲಿ ನಿಮಗೆ ಉತ್ತಮ ನೀರು ಕೊಡಬೇಕು ಎನ್ನುವುದೇ ನಮ್ಮ ಕರ್ತವ್ಯ. ಶಾಶ್ವತ ಪರಿಹಾರ ತಂದುಕೊಡುವುದರಲ್ಲಿ ಯಾವುದೇ ಕಾರಣಕ್ಕೂ ನಿಮ್ಮನ್ನು ನಿರಾಸೆಗೊಳಿಸುವುದಿಲ್ಲ’ ಎಂದು ಹೇಳಿದರು.

‘ಈ ಜಿಲ್ಲೆಯಲ್ಲಿ 25 ಸಾವಿರ ಯುವ ಜನರಿಗೆ ಉದ್ಯೋಗ ನೀಡುವ ಉದ್ದೇಶದಿಂದ ಮೊಬೈಲ್ ಬಿಡಿಭಾಗಗಳನ್ನು ಉತ್ಪಾದಿಸುವ ಘಟಕವನ್ನು ಸ್ಥಾಪಿಸಲು ನಿರ್ಧರಿಸಿದ್ದೇವೆ. ಈಗಾಗಲೇ ಕೆಲ ಕಂಪೆನಿಗಳು ಈ ಕಾರ್ಯಕ್ಕೆ ಮುಂದೆ ಬಂದಿವೆ. ಯೋಜನೆಯ ನೀಲನಕ್ಷೆ ರೂಪಿಸಲಾಗುತ್ತಿದೆ. ರೈತರನ್ನು ಸಬಲರನ್ನಾಗಿ ಮಾಡುವ ನಿಟ್ಟಿನಲ್ಲಿ ಇಸ್ರೇಲ್ ಮಾದರಿ ನೀತಿ ತರಲು ನಿರ್ಧರಿಸಿದ್ದೇವೆ. ನಮಗೆ ಸಮಯ ಕೊಡಿ. ನಿಮ್ಮನ್ನು ಉಳಿಸುವುದು ನಮ್ಮ ಜವಾಬ್ದಾರಿ’ ಎಂದು ತಿಳಿಸಿದರು.

ಶಾಸಕ ಆರ್.ಅಶೋಕ್ ಮಾತನಾಡಿ, ‘ಕೆಂಪೇಗೌಡರ ದೂರದೃಷ್ಟಿಯ ಪರಿಣಾಮ ವಿಶ್ವಕ್ಕೆ ರಾಜಧಾನಿಯಾಗುವ ಮಟ್ಟಿಗೆ ಬೆಂಗಳೂರು ನಗರ ಬೆಳೆದು ನಿಂತಿದೆ. ಕೆಂಪೇಗೌಡರ ಪರಂಪರೆಯ ನಾವು ಅವರಂತೆ ಇವತ್ತು ಸಮಾಜ ಕಟ್ಟಬೇಕಾಗಿದೆ. ಸಾಮಾಜಿಕ ನ್ಯಾಯವನ್ನು ನಾವು ಬೇರೆಯವರಿಂದ ಕಲಿಯುವ ಅಗತ್ಯವಿಲ್ಲ’ ಎಂದು ಹೇಳಿದರು.

‘ಇವತ್ತು ಒಕ್ಕಲಿಗರ ಸಂಘದ ಪದಾಧಿಕಾರಿಗಳು ನಡೆದುಕೊಳ್ಳುವ ರೀತಿ ಬೇಸರ ಹುಟ್ಟಿಸುತ್ತಿದೆ. ನಮ್ಮ ಸಮಾಜದಲ್ಲಿ ತುಂಬಾ ಪ್ರತಿಭಾವಂತ ವಿದ್ಯಾರ್ಥಿಗಳಿದ್ದಾರೆ. ಹೀಗಾಗಿ ನಾವು ಶಿಕ್ಷಣಕ್ಕೆ ಹೆಚ್ಚು ಒತ್ತು ನೀಡಬೇಕಿದೆ. ಕೆಂಪೇಗೌಡರ ಪರಂಪರೆಯನ್ನು ಮುಂದಿನ ಪೀಳಿಗೆಗೆ ಪರಿಚಯಿಸುವ ಅಗತ್ಯವಿದೆ’ ಎಂದರು.

ಪ್ರಗತಿಪರ ರೈತರು, ವಿವಿಧ ಕ್ಷೇತ್ರಗಳ ಸಾಧಕರು, ಪ್ರತಿಭಾವಂತ ವಿದ್ಯಾರ್ಥಿಗಳನ್ನು ಕಾರ್ಯಕ್ರಮದಲ್ಲಿ ಸನ್ಮಾನಿಸಲಾಯಿತು. ಆದಿಚುಂಚನಗಿರಿ ಮಠದ ನಿರ್ಮಲಾನಂದನಾಥ ಸ್ವಾಮೀಜಿ, ವಿಧಾನಸಭೆ ಉಪ ಸಭಾಧ್ಯಕ್ಷ ಎಂ.ಕೃಷ್ಣಾರೆಡ್ಡಿ, ಜಲ ಸಂಪನ್ಮೂಲ ಸಚಿವ ಡಿ.ಕೆ.ಶಿವಕುಮಾರ್, ಕೃಷಿ ಸಚಿವ ಎನ್.ಎಚ್.ಶಿವಶಂಕರ ರೆಡ್ಡಿ, ಶಾಸಕರಾದ ಎಸ್.ಎನ್.ಸುಬ್ಬಾರೆಡ್ಡಿ, ನಿಸರ್ಗ ನಾರಾಯಣಸ್ವಾಮಿ, ವಿಧಾನ ಪರಿಷತ್ ಸದಸ್ಯರಾದ ತೂಪಲ್ಲಿ ಚೌಡರೆಡ್ಡಿ, ವೈ.ಎ.ನಾರಾಯಣಸ್ವಾಮಿ, ಮಾಜಿ ಶಾಸಕ ಕೆ.ಪಿ.ಬಚ್ಚೇಗೌಡ, ಜಿಲ್ಲಾಧಿಕಾರಿ ಅನಿರುದ್ದ್ ಶ್ರವಣ್, ಒಕ್ಕಲಿಗರ ಸಂಘದ ಜಿಲ್ಲಾ ಘಟಕದ ಅಧ್ಯಕ್ಷ ಜಿ.ಆರ್.ನಾರಾಯಣಸ್ವಾಮಿ, ಮುಖಂಡರಾದ ಕೆ.ವಿ.ನಾಗರಾಜ್, ಎನ್.ನಾರಾಯಣಸ್ವಾಮಿ, ಯಲುವಹಳ್ಳಿ ರಮೇಶ್ ಉಪಸ್ಥಿತರಿದ್ದರು.

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !