ಭಾನುವಾರ, ನವೆಂಬರ್ 17, 2019
24 °C
ಚರ್ಚ್‌ಗಳ ಪಾದ್ರಿ ಮತ್ತು ಧರ್ಮ ಬೋಧಕರ ಸಭೆ ನಡೆಸಿದ ಕಾಂಗ್ರೆಸ್ ಅಭ್ಯರ್ಥಿ ನಂದಿ ಆಂಜನಪ್ಪ

ಕೋಮುವಾದಿ ಪಕ್ಷಕ್ಕೆ ಮತ ನೀಡಬೇಡಿ

Published:
Updated:
Prajavani

ಚಿಕ್ಕಬಳ್ಳಾಪುರ: ‘ದೇಶದಲ್ಲಿ ಮತ್ತು ರಾಜ್ಯದಲ್ಲಿ ಕೋಮುವಾದಿಗಳ ಆಟಾಟೋಪ ಜಾಸ್ತಿಯಾಗಿದೆ. ಬಿಜೆಪಿಯನ್ನು ಬೆಂಬಲಿಸಿದ್ದೇ ಆದರೆ ಮುಂದೊಂದು ದಿನ ಅಲ್ಪಸಂಖ್ಯಾತರಿಗೆ ಅಪಾಯ ಕಟ್ಟಿಟ್ಟ ಬುತ್ತಿ’ ಎಂದು ಕಾಂಗ್ರೆಸ್ ಅಭ್ಯರ್ಥಿ ನಂದಿ ಆಂಜನಪ್ಪ ಹೇಳಿದರು.

ನಗರ ಹೊರವಲಯದ ಸಿವಿವಿ ಕ್ಯಾಂಪಸ್‌ನಲ್ಲಿ ಮಂಗಳವಾರ ನಡೆದ ಚಿಕ್ಕಬಳ್ಳಾಪುರ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿನ ಚರ್ಚ್‌ಗಳ ಪಾದ್ರಿ ಮತ್ತು ಧರ್ಮ ಬೋಧಕರ ಸಭೆಯಲ್ಲಿ ಅವರು ಮಾತನಾಡಿದರು.

‘ಈಗಾಗಲೇ ದೇಶದಲ್ಲಿ ಬಿಜೆಪಿ ಆಡಳಿತದಲ್ಲಿ ಅಲ್ಪಸಂಖ್ಯಾತರ ಮೇಲೆ ದೌರ್ಜನ್ಯ, ದಾಳಿ ಮಿತಿ ಮೀರಿ ನಡೆಯುತ್ತಿವೆ. ಕ್ಷೇತ್ರದಲ್ಲಿರುವ ಅಲ್ಪಸಂಖ್ಯಾತರಿಗೆ ಈ ಹಿಂದಿನ ಅನರ್ಹ ಶಾಸಕ ಸುಧಾಕರ್ ಅವರ ಕೊಡುಗೆ ಶೂನ್ಯ. ಕ್ರಿಶ್ಚಿಯನ್ ಧರ್ಮದವರಿಗೆ ಕಳೆದ ಆರು ವರ್ಷಗಳಲ್ಲಿ ಸರ್ಕಾರದಿಂದ ಏನೂ ಸೌಲಭ್ಯಗಳನ್ನು ಒದಗಿಸುವ ಪ್ರಯತ್ನ ಮಾಡಲಿಲ್ಲ’ ಎಂದು ತಿಳಿಸಿದರು.

‘ಇದೀಗ ಉಪ ಚುನಾವಣೆ ಕಾರಣಕ್ಕೆ ಸುಧಾಕರ್ ಅವರು ಮತ್ತೆ ಅಲ್ಪಸಂಖ್ಯಾತರನ್ನು ಓಲೈಸಲು ಬರುತ್ತಾರೆ. ಯಾವುದೇ ಕಾರಣಕ್ಕೂ ಇಂತಹ ವ್ಯಕ್ತಿಗಳನ್ನು ಸತ್ಯ, ಧರ್ಮ ಬೋಧಿಸುವ ಚರ್ಚ್‌ಗಳ ಒಳಗೆ ತಾವು ಬಿಟ್ಟುಕೊಳ್ಳಬಾರದು. ಒಂದೊಮ್ಮೆ ನಿಮ್ಮೆಲ್ಲರ ಸಹಕಾರದಿಂದ ನಾನು ಶಾಸಕನಾದರೆ ಒಂದೇ ತಿಂಗಳಲ್ಲಿ ಸ್ಮಶಾನಕ್ಕೆ ಜಾಗ ಮಂಜೂರು ಮಾಡಿಸುವೆ. ಸರ್ಕಾರದಿಂದ ತಡವಾದರೆ ನನ್ನ ವೈಯಕ್ತಿಕ ಹಣದಲ್ಲಿ ಜಮೀನು ಖರೀದಿಸಿ, ಸ್ಮಶಾನಕ್ಕೆ ನೀಡುವೆ’ ಎಂದರು.

‘ಸುಮಾರು 15 ವರ್ಷಗಳ ಹಿಂದೆ ನಾನು ಅನಾರೋಗ್ಯದ ಹಿನ್ನೆಲೆಯಲ್ಲಿ ಬೆಂಗಳೂರಿನ ಬೌರಿಂಗ್ ಆಸ್ಪತ್ರೆಯಲ್ಲಿ ಸಾವು ನೋವಿನ ನಡುವೆ ಚಿಕಿತ್ಸೆ ಪಡೆಯುತ್ತಿದ್ದ ಸಂದರ್ಭದಲ್ಲಿ ಪ್ರತಿ ದಿನ ಅಲ್ಲಿನ ಪಾದ್ರಿಯೊಬ್ಬರು ನನ್ನ ಆರೋಗ್ಯ ಸರಿ ಹೊಂದಲಿ ಎಂದು ಪ್ರಾರ್ಥನೆ ಮಾಡುತ್ತಿದ್ದರು. ಏಸುವಿನ ಅನುಗ್ರಹದಿಂದಲೇ ನಾನಾಗ ಬದುಕುಳಿದೆ’ ಎಂದು ತಿಳಿಸಿದರು.

ಕೆ.ವಿ ಮತ್ತು ಪಂಚಗಿರಿ ದತ್ತಿ ಅಧ್ಯಕ್ಷ ಕೆ.ವಿ.ನವೀನ್ ಕಿರಣ್, ಕೆಪಿಸಿಸಿ ಸದಸ್ಯ ಎಸ್.ಪಿ.ಶ್ರೀನಿವಾಸ್, ಯುವ ಕಾಂಗ್ರೆಸ್ ಜಿಲ್ಲಾ ಘಟಕದ ಅಧ್ಯಕ್ಷ ಸುನಿಲ್ ಕುಮಾರ್, ಮುಖಂಡರಾದ ಪ್ರಕಾಶ್, ಮಹೇಶ್, ವೆಂಕಟ್, ಅರುಣ್, ವಿನಯ್ ಕುಮಾರ್ ಮತ್ತು ಧರ್ಮ ಬೋಧಕರಾದ ಇಸ್ರಾಯಲ್, ಶಂಕರ್, ಪೋಸ್ಟೈಲ್, ಸತ್ಯನಾರಾಯಣ, ನಾಗರಾಜಪ್ಪ, ಮಾನಸ್, ನಾರಾಯಣಸ್ವಾಮಿ, ನರಸಿಂಹ ಮೂರ್ತಿ, ಸಂತೋಷ್ ಉಪಸ್ಥಿತರಿದ್ದರು.

ಪ್ರತಿಕ್ರಿಯಿಸಿ (+)