ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚಿಕ್ಕಬಳ್ಳಾಪುರ: ಬಡವರ ಆರೋಗ್ಯಕ್ಕೆ ತುಡಿಯುವ ವೈದ್ಯ

ಹಳ್ಳಿಗಳಲ್ಲಿ ಉಚಿತ ಆರೋಗ್ಯ ಶಿಬಿರ ಆಯೋಜಿಸುತ್ತ ಕೃಷಿ ಕೂಲಿಕಾರರ ಆರೋಗ್ಯ ತಪಾಸಣೆ ನಡೆಸುತ್ತಿರುವ ಡಾ.ಅನಿಲ್ ಕುಮಾರ್ ಆವುಲಪ್ಪ
Last Updated 24 ಜೂನ್ 2020, 19:30 IST
ಅಕ್ಷರ ಗಾತ್ರ

ಚಿಕ್ಕಬಳ್ಳಾಪುರ: ಎಲ್ಲೆಡೆ ಕೋವಿಡ್‌ ಭೀತಿ ಆವರಿಸಿ ಜನಸಾಮಾನ್ಯರು ತಲ್ಲಣಗೊಂಡಿರುವ ಈ ಹೊತ್ತಿನಲ್ಲಿ ಬಾಗೇಪಲ್ಲಿಯ ಪೀಪಲ್ಸ್‌ ಆಸ್ಪತ್ರೆಯ ಸಂಸ್ಥಾಪಕ, ವೈದ್ಯ ಡಾ.ಅನಿಲ್ ಕುಮಾರ್ ಆವುಲಪ್ಪ ಅವರು ಹಳ್ಳಿಗಳಲ್ಲಿ ಆರೋಗ್ಯ ಶಿಬಿರ ಏರ್ಪಡಿಸುತ್ತ, ಕೃಷಿ ಕೂಲಿಕಾರ್ಮಿಕರಿಗೆ ಉಚಿತವಾಗಿ ಔಷಧಿ, ಮಾತ್ರೆಗಳನ್ನು ವಿತರಿಸುವ ಮೂಲಕ ಸದ್ದಿಲ್ಲದೆ ಸೇವೆಗೆ ತಮ್ಮನ್ನು ಸರ್ಮಪಿಸಿಕೊಂಡು ಮಾದರಿಯಾಗಿದ್ದಾರೆ.

ವೈದ್ಯಕೀಯ ಕುಟುಂಬದ ಹಿನ್ನೆಲೆ ಹೊಂದಿರುವ ಅನಿಲ್‌ಕುಮಾರ್‌ ಅವರು ಸಿಪಿಎಂ ಬಾಗೇಪಲ್ಲಿ ಶಾಖೆಯ ಕಾರ್ಯದರ್ಶಿ ಕೂಡ ಆಗಿ, ಮೊದಲಿನಿಂದಲೂ ಸಮಾಜಮುಖಿ ಕಾರ್ಯಗಳಲ್ಲಿ ತಮ್ಮನ್ನು ತೊಡಗಿಸಿಕೊಂಡು ಬಂದವರು. ಹೀಗಾಗಿ, ಇವರ ಸೇವಾ ಕಾರ್ಯಗಳಿಗೆ ಕುಟುಂಬದವರು, ಸ್ನೇಹಿತರು ಕೈಜೋಡಿಸುತ್ತ ಬಂದಿದ್ದಾರೆ.

ಲಾಕ್‌ಡೌನ್‌ ಸಂದರ್ಭದಲ್ಲಿ ಕೂಡ ಇವರು ಸರ್ಕಾರಿ ವೈದ್ಯಕೀಯ ಸಿಬ್ಬಂದಿ ಜತೆಗೆ ಬಾಗೇಪಲ್ಲಿ ತಾಲ್ಲೂಕಿನ 102 ಹಳ್ಳಿಗಳಿಗೆ ಭೇಟಿ ನೀಡಿ, ಸಾರ್ವಜನಿಕರ ಆರೋಗ್ಯ ತಪಾಸಣೆ ನಡೆಸುವ ಜತೆಗೆ ಸ್ವಂತ ಖರ್ಚಿನಲ್ಲಿ ಉಚಿತವಾಗಿ ಔಷಧಿ ಮಾತ್ರೆಗಳನ್ನು ವಿತರಿಸುವ ಕೆಲಸ ಮಾಡಿದ್ದಾರೆ.

ಕಳೆದ ಕೆಲ ದಿನಗಳಿಂದ ಕರ್ನಾಟಕ ಪ್ರಾಂತ ಕೃಷಿ ಕೂಲಿಕಾರರ ಸಂಘದ ಕೋರಿಕೆ ಮೆರೆಗೆ ಬಾಗೇಪಲ್ಲಿ, ಗುಡಿಬಂಡೆ ತಾಲ್ಲೂಕುಗಳಲ್ಲಿ ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆಯ (ನರೇಗಾ) ಕಾಮಗಾರಿಗಳಲ್ಲಿ ತೊಡಗಿಕೊಂಡಿರುವ ಕೂಲಿ ಕಾರ್ಮಿಕರ ಆರೋಗ್ಯ ತಪಾಸಣೆಗೆ ಒತ್ತು ನೀಡಿದ್ದಾರೆ. ಅದಕ್ಕಾಗಿಯೇ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ ರಾಜ್ ಇಲಾಖೆಯಿಂದ ಅನುಮತಿ ಪಡೆದುಕೊಂಡಿದ್ದಾರೆ.

ಈಗಾಗಲೇ ಬಾಗೇಪಲ್ಲಿ ತಾಲ್ಲೂಕಿನ ಐವಾರಪಲ್ಲಿ, ದಿಗವನೆಟ್ಟಕುಂಟಪಲ್ಲಿ, ಏಗವನೆಟ್ಟಕುಂಟಪಲ್ಲಿ, ಚೇಳೂರು, ಗುಡಿಬಂಡೆ ತಾಲ್ಲೂಕಿನ ದೊಡ್ಡ ಕುರಬರಹಳ್ಳಿ, ಲಕ್ಷ್ಮಿಸಾಗರ, ಬಿಚಗಾನಹಳ್ಳಿ ಸೇರಿದಂತೆ ಸುಮಾರು 10 ಹಳ್ಳಿಗಳಲ್ಲಿ ನರೇಗಾ ಕಾಮಗಾರಿ ಸ್ಥಳಗಳಲ್ಲಿ ಆರೋಗ್ಯ ತಪಾಸಣಾ ಶಿಬಿರ ಏರ್ಪಡಿಸಿ, ಬಡ ಜನರ ಆರೋಗ್ಯ ತಪಾಸಣೆ ಮಾಡುವ ಜತೆ ಅಗತ್ಯ ಔಷಧಿ, ಮಾತ್ರೆಗಳನ್ನು ವಿತರಿಸಿದ್ದಾರೆ.

‘ವಯಸ್ಸಾದವರು, ಮಧುಮೇಹ, ರಕ್ತದೊತ್ತಡದಿಂದ ಬಳಲುವವರಲ್ಲಿಕೋವಿಡ್‌ ಹೆಚ್ಚಿನ ಅಪಾಯ ಉಂಟು ಮಾಡುತ್ತದೆ. ಇವತ್ತಿನ ಸಂದರ್ಭದಲ್ಲಿ ಹಳ್ಳಿಗಳಲ್ಲಿ ಈ ಕಾಯಿಲೆಗಳಿಂದ ಬಳಲುತ್ತಿರುವ ಬಡವರು ಚಿಕಿತ್ಸೆ, ಮಾತ್ರೆ ಕಾರಣಕ್ಕೆ ನಗರಕ್ಕೆ ಬರದೆ ಹಳ್ಳಿಯಲ್ಲೇ ಸುರಕ್ಷಿತವಾಗಿರುವುದು ಮುಖ್ಯವಾಗಿದೆ’ ಎನ್ನುತ್ತಾರೆ ಅನಿಲ್‌ಕುಮಾರ್.

‘ಆದ್ದರಿಂದ, ನಾನು ಹಳ್ಳಿಯ ಬಡಜನರತ್ತ ಗಮನ ಹರಿಸಿರುವೆ. ಪ್ರತಿ ಹಳ್ಳಿಯಲ್ಲಿ ನಾಲ್ಕೈದು ಆರೋಗ್ಯ ಸ್ವಯಂ ಸೇವಕರನ್ನು ನಿಯೋಜಿಸಿ ಅವರಿಗೆ ಪಲ್ಸ್‌ ರೀಡಿಂಗ್ ಡಿವೈಸ್, ಥರ್ಮಲ್ ಸ್ಕ್ಯಾನರ್ ನೀಡುವ ಜತೆಗೆ ಆರೋಗ್ಯ ತಪಾಸಣೆ ನಡೆಸುವ ತರಬೇತಿ ನೀಡಲು ಉದ್ದೇಶಿಸಿದ್ದೇವೆ’ ಎಂದು ಹೇಳಿದರು.

‘ಹಳ್ಳಿಗಳಲ್ಲಿ ಕೋವಿಡ್‌ನಿಂದ ಸಂಭವನೀಯ ಗಂಭೀರ ಸ್ವರೂಪದ ಅಪಾಯ ಎದುರಿಸುವಂತಹ ಜನರನ್ನು ಗುರುತಿಸಿ, ರಕ್ತದೊತ್ತಡ, ಮಧುಮೇಹದಂತಹ ಕಾಯಿಲೆಯಿಂದ ಬಳಲುವವರಿಗೆ ಉಚಿತ ಔಷಧಿ, ಮಾತ್ರೆ ನೀಡುವ ಜತೆಗೆ ಸೂಕ್ತ ಮಾರ್ಗದರ್ಶನ ನೀಡಲು ನಿರ್ಧರಿಸಿದ್ಧೇವೆ’ ಎಂದು ತಿಳಿಸಿದರು.

130 ಹಳ್ಳಿಗಳಿಗೆ ವಿಸ್ತರಣೆ ಗುರಿ

ತಮ್ಮ ಈ ಸೇವಾ ಕಾರ್ಯವನ್ನು ಆರೋಗ್ಯ ಸ್ವಯಂ ಸೇವಕರ ಮೂಲಕ ಬಾಗೇಪಲ್ಲಿ, ಗುಡಿಬಂಡೆ ತಾಲ್ಲೂಕುಗಳ 130 ಹಳ್ಳಿಗಳಿಗೆ ವಿಸ್ತರಿಸುವ ಯೋಜನೆ ಹಾಕಿಕೊಂಡಿರುವ ಡಾ.ಅನಿಲ್‌ಕುಮಾರ್ ಅವರು ಅದಕ್ಕಾಗಿ ಅಗತ್ಯ ಪ್ರಮಾಣದ ನಾಡಿ ಮಿಡಿತ ಪರೀಕ್ಷೆ ಸಾಧನ (ಪಲ್ಸ್‌ ರೀಡಿಂಗ್ ಡಿವೈಸ್), ದೇಹದ ಉಷ್ಣಾಂಶ ಪರೀಕ್ಷೆ ಸಾಧನ (ಥರ್ಮಲ್ ಸ್ಕ್ಯಾನರ್), ಔಷಧಿ, ಮಾತ್ರೆಗಳನ್ನು ದಾಸ್ತಾನು ಮಾಡಿಕೊಂಡಿದ್ದಾರೆ. ಶೀಘ್ರದಲ್ಲೇ ತಮ್ಮ ಯೋಜನೆ ಅನುಷ್ಟಾನಗೊಳಿಸುವ ಕಾರ್ಯಕ್ಕೆ ಸಿದ್ಧತೆ ನಡೆಸಿದ್ದಾರೆ.

ಬಡವರಿಗೆ ವರದಾನ

ಬಡವರ ಪಾಲಿಗೆ ಇವತ್ತು ಕೋವಿಡ್ ದುಬಾರಿ ಕಾಯಿಲೆಯಾಗಿದೆ. ಸರ್ಕಾರಗಳು ಬರೀ ಉಳ್ಳವರ ಪರವಾಗಿ ಆಲೋಚನೆ ಮಾಡುತ್ತಿವೆ ಹೊರತು ಗ್ರಾಮೀಣ ಜನರ ಬಗ್ಗೆ ಯಾರೊಬ್ಬರೂ ಚಿಂತಿಸುತ್ತಿಲ್ಲ. ಇಂತಹ ಹೊತ್ತಿನಲ್ಲಿ ಹಳ್ಳಿಯ ಜನರಲ್ಲಿ ಕೋವಿಡ್‌ ಜತೆಗೆ ಆರೋಗ್ಯದ ಬಗ್ಗೆ ಅರಿವು ಮೂಡಿಸಿ, ಕಾಯಿಲೆಗಳಿಂದ ಬಳಲುವ ಬಡವರಿಗೆ ಉಚಿತವಾಗಿ ಮಾತ್ರೆ, ಔಷಧಿ ವಿತರಿಸುವ ಈ ಜನಪರವಾದ ಸೇವಾ ಕಾರ್ಯ ಬಡವರಿಗೆ ವರದಾನವಾಗಿದೆ ಎನ್ನುತ್ತಾರೆಕರ್ನಾಟಕ ಪ್ರಾಂತ ಕೃಷಿ ಕೂಲಿಕಾರರ ಸಂಘದ ರಾಜ್ಯ ಘಟಕದ ಉಪಾಧ್ಯಕ್ಷಎಂ.ಪಿ.ಮುನಿವೆಂಕಟಪ್ಪ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT