ಬುಧವಾರ, ಜೂನ್ 16, 2021
21 °C

ನೆಗಡಿ, ಜ್ವರ ಎಂದು ಉದಾಸೀನ ಬೇಡ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಶಿಡ್ಲಘಟ್ಟ: ನನಗೆ 39 ವರ್ಷ. ನನ್ನ ಪತ್ನಿಗೆ 30 ವರ್ಷ. ಇಬ್ಬರಿಗೂ ಕೊರೊನಾ ಸೋಂಕು ತಗುಲಿತ್ತು. ನಾನು ಜನರಲ್ಲಿ ಕೇಳಿಕೊಳ್ಳುವುದು ಏನೆಂದರೆ ರೋಗದ ಲಕ್ಷಣಗಳು ಕಂಡ ತಕ್ಷಣ ಮೊದಲು ಕೋವಿಡ್ ‍ಪರೀಕ್ಷೆ ಮಾಡಿಸಿಕೊಳ್ಳಿ. ನೆಗಡಿ ಅಥವಾ ಜ್ವರ ಎಂದು ಉದಾಸೀನ ಮಾಡಬೇಡಿ–ಹೀಗೆ ಸಲಹೆ ನೀಡುವರು ತಾಲ್ಲೂಕಿನ ಅಪ್ಪೇಗೌಡನಹಳ್ಳಿಯ ಸಂಪತ್.

ಸಂಪತ್, ಕುರಿ ಸಾಕಾಣಿಕೆ ವೃತ್ತಿ ಮಾಡುವರು. ಅವರು ಕೋವಿಡ್ ಸೋಂಕಿನಿಂದ ಗುಣವಾದುದುರ ಬಗ್ಗೆ ಹೇಳುವುದು ಹೀಗೆ.

ಮೈಕೈ ನೋವು, ತಲೆ ನೋವು, ಜ್ವರ, ನೆಗಡಿ, ಕಫ ಇತ್ತು. ನಾಲಿಗೆಗೆ ‌ರುಚಿ ಸಿಗುತ್ತಿರಲಿಲ್ಲ, ವಾಸನೆ ಕೂಡ ಗೊತ್ತಾಗುತ್ತಿರಲಿಲ್ಲ. ಸುಮಾರು ಹತ್ತು ದಿನಗಳ ಕಾಲ ವಾಸನೆ ಮತ್ತು ರುಚಿ ಗೊತ್ತಾಗುತ್ತಿರಲಿಲ್ಲ. ಶುಂಠಿ, ಮೆಣಸು, ನಿಂಬೆರಸ, ವೀಳ್ಯದ ಎಲೆ, ಅರಿಶಿನದ ಪುಡಿ, ಲವಂಗ, ತುಳಸಿ ಸೇರಿಸಿ ತಯಾರಿಸಿದ ಕಷಾಯವನ್ನು ಪ್ರತಿದಿನ ಮೂರು ಬಾರಿ ಕುಡಿಯುತ್ತಿದ್ದೆವು.

ಕೊರೊನಾ ಭಯಪಡುವ ಕಾಯಿಲೆಯಲ್ಲ. ಭಯಪಟ್ಟರೆ, ವಾಸಿ ಆಗುವುದಿಲ್ಲ. ನಮ್ಮದು ಚಿಕ್ಕ ಮನೆಯಾದರೂ ಇಬ್ಬರೂ ಎಲ್ಲಿಗೂ ಹೋಗದೆ ಮನೆಯಲ್ಲಿಯೇ ಹದಿನಾಲ್ಕು ದಿನಗಳಿದ್ದೆವು. ನಮ್ಮ ಮಕ್ಕಳನ್ನು ಬೇರೆ ಊರಿಗೆ ಕಳುಹಿಸಿದೆವು. ನನ್ನ ತಾಯಿಗೆ ಎಂಬತ್ತು ವರ್ಷ. ಅವರು ಕೂಡ ನಮ್ಮ ಮನೆಯಲ್ಲಿದ್ದರು. ಅವರು ನಮ್ಮಿಂದ ದೂರದಲ್ಲಿದ್ದುಕೊಂಡು ನಮ್ಮ ಊಟ ತಿಂಡಿಗೆ ನೆರವಾಗುತ್ತಿದ್ದರು.

ನಾವು ಮನೆಯಲ್ಲಿ ದಿನದ 24 ಗಂಟೆಯೂ ಮಾಸ್ಕ್ ಧರಿಸಿ ಇರುತ್ತಿದ್ದೆವು. ನಮ್ಮ ವಸ್ತುಗಳನ್ನು ಬೇರೆ ಇಟ್ಟುಕೊಂಡಿದ್ದೆವು. ನಮ್ಮ ತಾಯಿ ಕೂಡ ಮುಟ್ಟದಂತೆ ಜಾಗರೂಕತೆವಹಿಸಿದ್ದೆವು. ಬಿಸಿ ನೀರು ಕುಡಿಯುತ್ತಿದ್ದೆವು. ಬಿಸಿ ಮುದ್ದೆ ತಿನ್ನುತ್ತಿದ್ದೆವು. ಮೂರು ಹೊತ್ತು ಹಬೆ ತೆಗೆದುಕೊಳ್ಳುತ್ತಿದ್ದೆವು. ಹೀಗೆ ಶಿಸ್ತುಬದ್ಧವಾಗಿದ್ದ ಕಾರಣ ‌‌ಐದು ದಿನಕ್ಕೆ ಗುಣವಾದೆವು. ಸುಮಾರು ಹತ್ತು ದಿನಗಳ ಕಾಲ ರುಚಿ ಸಿಗುತ್ತಿರಲಿಲ್ಲ. ಮೈಕೈ ನೋವು ಮತ್ತು ಸುಸ್ತು ಇತ್ತು.

ಸಂಪೂರ್ಣ ಗುಣವಾದ ಮೇಲೆ ಈಗ ಮಕ್ಕಳನ್ನೂ ಕರೆದುಕೊಂಡು ಬಂದೆವು. ಎಂದಿನಂತೆ ಕೃಷಿ ಕೆಲಸದಲ್ಲಿ ನಿರತರಾದೆವು. ಈ ರೋಗದ ಲಕ್ಷಣಗಳು ತಿಳಿಯುತ್ತಿದ್ದಂತೆ ಮಾಸ್ಕ್ ಧರಿಸಿ, ಇತರರಿಂದ ದೂರವಿರಿ. ವೈದ್ಯರು ಸೂಚಿಸಿದ ಔಷಧಿಗಳನ್ನು ತಪ್ಪದೆ ಸೇವಿಸಿ. ಎಚ್ಚರಿಕೆ ಮಾತ್ರ ಅತ್ಯಗತ್ಯ. ಆದಷ್ಟು ನಿಮ್ಮ ಹುಷಾರಿಯಲ್ಲಿ ನೀವಿರಿ. ಗಟ್ಟಿಮುಟ್ಟಾದ ನಾವುಗಳೇ ನೋವಿಗೆ ತತ್ತರಿಸಿದಾಗ ವಯಸ್ಸಾದವರು, ಮಕ್ಕಳು ಹೇಗೆ ತಾನೇ ತಡೆದುಕೊಳ್ಳಬಲ್ಲರು. ಭಯಪಡದೆ ಮುನ್ನೆಚ್ಚರಿಕೆ ವಹಿಸಿ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.