ಶನಿವಾರ, ಡಿಸೆಂಬರ್ 14, 2019
24 °C
ಬಿಎಸ್ಪಿ ಅಭ್ಯರ್ಥಿ ಡಿ.ಆರ್.ನಾರಾಯಣಸ್ವಾಮಿ ಮನವಿ

ವಿರೋಧಿಗಳ ಅಪಪ್ರಚಾರಕ್ಕೆ ಕಿವಿಗೊಡಬೇಡಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಚಿಕ್ಕಬಳ್ಳಾಪುರ: ‘ಚುನಾವಣೆಯಲ್ಲಿ ಸೋಲುವ ಭೀತಿಯಿಂದ ಬಿಜೆಪಿ, ಕಾಂಗ್ರೆಸ್, ಜೆಡಿಎಸ್ ಅಭ್ಯರ್ಥಿಗಳು ನನ್ನ ವಿರುದ್ಧ ಅಪಪ್ರಚಾರ ಮಾಡುತ್ತಿದ್ದಾರೆ. ಇದಕ್ಕೆ ಯಾರೂ ಕಿವಿಗೊಡಬಾರದು. ನಾನು ನೋಟಿಗೆ ಬುಕ್ ಆಗೋ ವ್ಯಕ್ತಿಯಲ್ಲ. ನಾನು ಕೂಡ ಶಕ್ತಿವಂತ, ವಿದ್ಯಾವಂತ. ಕ್ಷೇತ್ರದ ಜನರು ನನಗೊಂದು ಅವಕಾಶ ಕೊಟ್ಟರೆ ಸಾಯೊತನಕ ಅವರ ಸೇವೆ ಮಾಡುವೆ’ ಎಂದು ಬಿಎಸ್ಪಿ ಅಭ್ಯರ್ಥಿ ಡಿ.ಆರ್.ನಾರಾಯಣಸ್ವಾಮಿ ಮನವಿ ಮಾಡಿದರು.

ನಗರದಲ್ಲಿ ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘ನನ್ನನ್ನು ಅನರ್ಹ ಶಾಸಕ ಸುಧಾಕರ್, ಕಾಂಗ್ರೆಸ್, ಜೆಡಿಎಸ್ ಅವರು ಮತ ವಿಭಜನೆಗಾಗಿ ನಿಲ್ಲಿಸಿದ್ದಾರೆ ಎಂದು ಒಂದೊಂದು ಕಡೆ ಒಂದೊಂದು ಬಗೆಯ ವದಂತಿಗಳು ಹರಿದಾಡುತ್ತಿವೆ. ಇದು ಶುದ್ಧ ಸುಳ್ಳು. ಮೂರೂ ಪಕ್ಷದ ಅಭ್ಯರ್ಥಿಗಳು ತಾಕತ್ತಿದ್ದರೆ ಚುನಾವಣೆಯಲ್ಲಿ ಗೆದ್ದು ತೋರಿಸಲಿ, ಅದನ್ನು ಬಿಟ್ಟು ಹೇಡಿಗಳಂತೆ ಅಪಪ್ರಚಾರ ಮಾಡುವುದು ಸರಿಯಲ್ಲ’ ಎಂದು ಹೇಳಿದರು.

‘ಈ ಉಪ ಚುನಾವಣೆಯಲ್ಲಿ ಬಹುಜನರು ತಮ್ಮ ಶಕ್ತಿ ತೋರಿಸಲಿದ್ದಾರೆ. ಬಡವರು, ದೀನ ದಲಿತರು, ಯವಕರು, ರೈತರು, ಮಹಿಳೆಯರು ಎಲ್ಲ ಸಮುದಾಯದವರ ಅಭಿವೃದ್ಧಿಗಾಗಿ ಈ ಬಾರಿ ಬಿಎಸ್ಪಿ ಜಯಗಳಿಸಿ ಹೊಸ ದಾಖಲೆ ಬರೆಯಲಿದೆ. ಉದ್ಯೋಗ, ಶಿಕ್ಷಣ, ಆರೋಗ್ಯ, ನೀರಾವರಿಗೆ ಆದ್ಯತೆ ನೀಡಲಾಗುವುದು. ಸಂವಿಧಾನವೇ ನಮ್ಮ ಪ್ರಣಾಳಿಕೆಯಾಗಿದ್ದು, ಅದರ ಆಶಯಗಳನ್ನು ಈಡೇರಿಸಲಾಗುವುದು’ ಎಂದು ತಿಳಿಸಿದರು.

ಬಿಎಸ್ಪಿ ರಾಜ್ಯ ಸಂಯೋಜಕ ಮಾರಸಂದ್ರ ಮುನಿಯಪ್ಪ ಮಾತನಾಡಿ, ‘ಕ್ಷೇತ್ರದಲ್ಲಿ ಅಭಿವೃದ್ಧಿ ವಿಚಾರದಲ್ಲಿ ಅನರ್ಹ ಶಾಸಕ ಡಾ.ಕೆ.ಸುಧಾಕರ್ ಅವರ ಕೊಡುಗೆ ಶೂನ್ಯ. ಎತ್ತಿನಹೊಳೆ, ಎಚ್.ಎಚ್.ವ್ಯಾಲಿ ಯೋಜನೆ, ವೈದ್ಯಕೀಯ ಕಾಲೇಜು ಇವೆಲ್ಲ ಮತ ಗಿಟ್ಟಿಸಿಕೊಳ್ಳುವ ಗಿಮಿಕ್ ಯೋಜನೆಗಳು. ಮತದಾರರು ಅವರ ಮಾತಿಗೆ ಮರಳಾಗದಿರಿ. ಕ್ಷೇತ್ರದ ಜನರ ಅಭಿವೃದ್ಧಿಗಾಗಿ ಬಿಎಸ್ಪಿ ಅಭ್ಯರ್ಥಿಗೆ ಬೆಂಬಲಿಸಿ’ ಎಂದು ಮನವಿ ಮಾಡಿದರು.

ಬಿಎಸ್ಪಿ ರಾಜ್ಯ ಉಸ್ತುವಾರಿ ದಿನೇಶ್ ಗೌತಮ್, ರಾಜ್ಯ ಕಾರ್ಯದರ್ಶಿ ಪಿ.ವಿ.ನಾಗಪ್ಪ, ತಾಲ್ಲೂಕು ಅಧ್ಯಕ್ಷ ಗುರುಯ್ಯ, ಜಿಲ್ಲಾ ಸಂಯೋಜಕ ಮುನಿಕೃಷ್ಣಯ್ಯ, ಜಿಲ್ಲಾ ಉಪಾಧ್ಯಕ್ಷ ದ್ಯಾವಪ್ಪ, ಮುಖಂಡರಾದ ಬಾಲು, ಹರೀಶ್ , ಗಂಗಾಧರಪ್ಪ, ಪೆದ್ದಪ್ಪ, ರಹಮತ್ ತುಲ್ಲಾ, ಬಾಲರಾಜ್, ಪೆದ್ದಣ್ಣ ಹಾಜರಿದ್ದರು.

ಪ್ರತಿಕ್ರಿಯಿಸಿ (+)