ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹಣಕ್ಕಾಗಿ ಸ್ವಾಭಿಮಾನ ಮಾರಿಕೊಳ್ಳಬೇಡಿ

ಉಪ ಚುನಾವಣೆ ಪ್ರಚಾರ ಸಭೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ಎಂ.ಅಂಜನಪ್ಪ ಮನವಿ
Last Updated 29 ನವೆಂಬರ್ 2019, 12:43 IST
ಅಕ್ಷರ ಗಾತ್ರ

ಚಿಕ್ಕಬಳ್ಳಾಪುರ: ‘ಸಚಿವ ಸ್ಥಾನ ಮತ್ತು ಹಣದ ಆಸೆಗೆ ಬಲಿಯಾಗಿ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿದ ಸುಧಾಕರ್ ಅವರನ್ನು ಮತದಾರರು ಕ್ಷೇತ್ರದಿಂದ ದೂರ ಇಡಬೇಕು’ ಎಂದು ಕಾಂಗ್ರೆಸ್ ಅಭ್ಯರ್ಥಿ ಎಂ.ಅಂಜನಪ್ಪ ಹೇಳಿದರು.

ತಾಲ್ಲೂಕಿನ ಮುದ್ದೇನಹಳ್ಳಿ, ನಂದಿ ಸೇರಿದಂತೆ ಹಲವು ಹಳ್ಳಿಗಳಲ್ಲಿ ಶುಕ್ರವಾರ ನಡೆದ ಉಪ ಚುನಾವಣೆ ಪ್ರಚಾರ ಸಭೆಗಳಲ್ಲಿ ಮಾತನಾಡಿ ಅವರು, ‘ರಾಜಕಾರಣಿ ಆದವನಿಗೆ ಕೇವಲ ಮೋಡಿಯ ಮಾತುಗಾರಿಕೆ, ಹಣದ ಆಸೆ, ಆಸ್ತಿಯ ವ್ಯಾಮೋಹ, ಮಂತ್ರಿ ಪದವಿಯ ದುರಾಸೆ ಇರಬಾರದು. ನೈತಿಕತೆ ಮುಖ್ಯ’ ಎಂದು ತಿಳಿಸಿದರು.

‘ರಾಜಕಾರಣಿಗೆ ಜನರ ಕಷ್ಟ,ಸುಖ, ದುಃಖ ದುಮ್ಮಾನಗಳನ್ನು ಅರ್ಥಮಾಡಿಕೊಳ್ಳುವ ಹೃದಯ ಇರಬೇಕು. ಆದರೆ, ಕಳೆದ ಆರು ವರ್ಷಗಳಲ್ಲಿ ಸುಧಾಕರ್ ಅವರು ಎಷ್ಟು ಸಾಧ್ಯವೋ ಅಷ್ಟು ಕೋಟಿಗಟ್ಟಲೇ ಹಣ ಲೂಟಿ ಹೊಡೆದು, ಕಾಂಗ್ರೆಸ್‌ನಿಂದ ಎಲ್ಲ ಕೆಲಸಗಳನ್ನು ಮಾಡಿಸಿಕೊಂಡು, ಕೊನೆಗೆ ಬಿಜೆಪಿ ಆಮಿಷಕ್ಕೆ ಒಳಗಾಗಿ ಕ್ಷೇತ್ರದ ಅಭಿವೃದ್ಧಿಗೆ ಸಹಕಾರ ಸಿಗಲಿಲ್ಲ ಎಂಬ ಕುಂಟುನೆಪ ಹೇಳಿ ಪಕ್ಷಾಂತರ ಮಾಡುವ ಮೂಲಕ ಪಕ್ಷದ ಜತೆಗೆ ಮತದಾರರಿಗೆ ದ್ರೋಹ ಬಗೆದಿದ್ದಾರೆ. ಅವರಿಗೆ ತಕ್ಕ ಪಾಠ ಕಲಿಸಬೇಕು’ ಎಂದರು.

‘ಮುದ್ದೇನಹಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕೆಲ ಹಳ್ಳಿಗಳಿಗೆ ಇಂದಿಗೂ ಸರಿಯಾದ ರಸ್ತೆ ವ್ಯವಸ್ಥೆ ಇಲ್ಲ. ಶುದ್ಧ ಕುಡಿಯುವ ನೀರಿನ ಘಟಕಗಳು ಕಾರ್ಯನಿರ್ವಹಿಸುತ್ತಿಲ್ಲ. ಹಲವಾರು ಸಮಸ್ಯೆಗಳು ಜನರನ್ನು ಬಾಧಿಸುತ್ತಿವೆ. ಎಲ್ಲ ಸಮಸ್ಯೆಗಳಿಗೆ ಮುಂದಿನ ದಿನಗಳಲ್ಲಿ ಸೂಕ್ತ ಪರಿಹಾರ ಕಲ್ಪಿಸಲಾಗುವುದು. ನನಗೆ ಮತ ನೀಡುವ ಮೂಲಕ ಕಾಂಗ್ರೆಸ್ ಕೈ ಬಲಪಡಿಸಿದರೆ ಕ್ಷೇತ್ರದ ಅಭಿವೃದ್ಧಿಯನ್ನು ಬೆಂಬಲಿಸಿದಂತಾಗುತ್ತದೆ’ ಎಂದು ಹೇಳಿದರು.

ಕೋಚಿಮುಲ್‌ ನಿರ್ದೇಶಕ ಎನ್.ಸಿ.ವೆಂಕಟೇಶ್ ಮಾತನಾಡಿ, ‘ಬಿಜೆಪಿ ಸರ್ಕಾರ ಹೈನುಗಾರರ ವಿಚಾರದಲ್ಲಿ ತನ್ನ ಕುತಂತ್ರ ಬುದ್ಧಿ ತೋರಿಸಲು ಮುಂದಾಗಿದೆ. ಬೇರೆ ದೇಶದಿಂದ ಹಾಲನ್ನು ಆಮದು ಮಾಡಿಕೊಂಡು ದೇಶದಲ್ಲಿ ಮಾರಾಟ ಮಾಡುವ ಯೋಜನೆಗೆ ಸಂಚು ಮಾಡಿ ಸ್ಥಳೀಯ ರೈತರನ್ನು ಬೀದಿಪಾಲು ಮಾಡಲು ಹೊರಟಿದೆ. ಒಂದೊಮ್ಮೆ ಉದ್ದೇಶಿತ ಯೋಜನೆ ಏನಾದರೂ ದೇಶದಲ್ಲಿ ಜಾರಿಗೆ ಬಂದರೆ ರೈತರೆಲ್ಲರೂ ತಮ್ಮ ಮನೆಯಲ್ಲಿ ಸಾಕುತ್ತಿರುವ ಹಸುಗಳನ್ನು ಮಾರಿಕೊಳ್ಳುವ ಪರಿಸ್ಥಿತಿ ಎದುರಾಗುತ್ತದೆ. ಜನ ನೈಜತೆಯನ್ನು ಅರ್ಥ ಮಾಡಿಕೊಳ್ಳಬೇಕು’ ಎಂದು ತಿಳಿಸಿದರು.

‘ನಿಮ್ಮ ಮತವನ್ನು ಕೋಟಿ ಕೋಟಿ ಹಣಕ್ಕೆ ಅನರ್ಹ ಶಾಸಕ ಸುಧಾಕರ್ ಮಾರಿಕೊಂಡಿದ್ದಾರೆ. ನಿಮ್ಮ ನಂಬಿಕೆಗಳು ವಿಶ್ವಾಸ ಎಲ್ಲವನ್ನೂ ಕಳೆದುಕೊಂಡಿದ್ದಾರೆ. ಅಂತಹ ವ್ಯಕ್ತಿಗೆ ಮತ್ತೊಮ್ಮೆ ಮತ ನೀಡಬಾರದು. ಕ್ಷೇತ್ರದಲ್ಲಿ ಸ್ವಂತ ಹಣದಲ್ಲಿ ಅಕ್ಕಿ, ರಾಗಿ, ಗೋಧಿ, ಸಕ್ಕರೆಯನ್ನು ಎಂಟು ತಿಂಗಳ ಕಾಲ ನಿಮಗೆ ಉಚಿತವಾಗಿ ನೀಡಿದಂತಹ ಅಂಜನಪ್ಪ ಅವರಿಗೆ ಮತ ನೀಡುವ ಮೂಲಕ ಕ್ಷೇತ್ರದ ಅಭಿವೃದ್ಧಿಗೆ ಒತ್ತು ನೀಡಿದ ಕಾಂಗ್ರೆಸ್‌ನ ಅಭ್ಯರ್ಥಿ ಗೆಲುವು ಸಾಧಿಸಲು ಸಹಕರಿಸಬೇಕು’ ಎಂದು ಮನವಿ ಮಾಡಿದರು.

ಮಾಜಿ ಶಾಸಕ ಎಸ್.ಎಂ. ಮುನಿಯಪ್ಪ ಮಾತನಾಡಿ, ‘ಜನ ಸದಾ ನ್ಯಾಯದ ಕಡೆ ಇರುತ್ತಾರೆ. ಮೋಸ ಮಾಡಿದ ಹಾಗೂ ಪಕ್ಷ ಬದಲಾಯಿಸಿದ ಅನರ್ಹ ಶಾಸಕ ಸುಧಾಕರ್ ಅವರಿಗೆ ಜನತೆ ಬುದ್ಧಿ ಕಲಿಸುತ್ತಾರೆ ಎಂಬ ನಂಬಿಕೆ ಇದೆ. ಉಪ ಚುನಾವಣೆಯಲ್ಲಿ ಗೆಲ್ಲಲು ಜನರಿಗೆ ಹಣದ ಆಸೆ ತೋರಿಸಿ ಮತ ಪಡೆಯಲು ಸಂಚು ರೂಪಿಸಿದ್ದಾರೆ. ಚಿಕ್ಕಬಳ್ಳಾಪುರದ ಜನ ದುಡ್ಡಿಗೆ ತಮ್ಮ ಸ್ವಾಭಿಮಾನವನ್ನು ಮಾರಿಕೊಳ್ಳುವ ಕಾರ್ಯಕ್ಕೆ ಹೋಗುವುದಿಲ್ಲ. ಕಾಂಗ್ರೆಸ್ ಬಡವರ ಪಕ್ಷ. ಬಿಜೆಪಿ ಶ್ರೀಮಂತರ ಪಕ್ಷ. ಕಾಂಗ್ರೆಸ್ ಗೆದ್ದರೆ ಬಡವರ ಪರವಾಗಿ ಕೆಲಸ ಮಾಡುತ್ತದೆ, ಬಿಜೆಪಿ ಗೆದ್ದರೆ ಶ್ರೀಮಂತರ ಸೇವೆ ಮಾಡುತ್ತದೆ’ ಎಂದು ತಿಳಿಸಿದರು.

ಉಪ ಚುನಾವಣೆ ವೀಕ್ಷಕ, ಶಾಸಕ ವಿ ಮುನಿಯಪ್ಪ, ಮುಖಂಡರಾದ ಯಲುವಳ್ಳಿ ರಮೇಶ್, ನವೀನ್ ಕಿರಣ್ ಪ್ರಚಾರ ಸಭೆಯಲ್ಲಿ ಭಾಗಿಯಾಗಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT