ಶುಕ್ರವಾರ, ನವೆಂಬರ್ 15, 2019
22 °C
ಖಾತೆ ಹಂಚಿಕೆಯಾಗಿ 26 ದಿನಗಳ ಬಳಿಕ ಜಿಲ್ಲೆಗಳ ಉಸ್ತುವಾರಿಗಳ ನೇಮಕ, ಒಕ್ಕಲಿಗರನ್ನು ಸೆಳೆಯುವ ನಿಟ್ಟಿನಲ್ಲಿ ಅಳೆದುತೂಗಿ ಲೆಕ್ಕಾಚಾರ

ಡಾ.ಅಶ್ವತ್ಥನಾರಾಯಣ್ ಹೆಗಲಿಗೆ ಚಿಕ್ಕಬಳ್ಳಾಪುರ ಜಿಲ್ಲೆ ಹೆಚ್ಚುವರಿ ಹೊಣೆ

Published:
Updated:
Prajavani

ಚಿಕ್ಕಬಳ್ಳಾಪುರ: ಮುಖ್ಯಮಂತ್ರಿ ಯಡಿಯೂರಪ್ಪನವರ ನೇತೃತ್ವದ ಬಿಜೆಪಿ ಸರ್ಕಾರದಲ್ಲಿ ಖಾತೆ ಹಂಚಿಕೆಯಾಗಿ 26 ದಿನಗಳ ಬಳಿಕ ಜಿಲ್ಲೆಗಳ ಉಸ್ತುವಾರಿಯನ್ನು ಹಂಚಿಕೆ ಮಾಡಿದ್ದು, ಉಪ ಮುಖ್ಯಮಂತ್ರಿ ಡಾ.ಸಿ.ಎನ್.ಅಶ್ವತ್ಥನಾರಾಯಣ್ ಅವರ ಹೆಗಲಿಗೆ ಚಿಕ್ಕಬಳ್ಳಾಪುರ ಜಿಲ್ಲೆ ಹೆಚ್ಚುವರಿ ಹೊಣೆಗಾರಿಕೆ ವಹಿಸಲಾಗಿದೆ.

ಜಿಲ್ಲೆಯಲ್ಲಿ ಪ್ರಸ್ತುತ ಬಿಜೆಪಿಯ ಒಬ್ಬೇ ಒಬ್ಬ ಶಾಸಕರಾಗಲಿ, ಸಚಿವರಾಗಲಿ ಇಲ್ಲ. ಹೀಗಾಗಿಯೇ ಜಿಲ್ಲೆಯ ಉಸ್ತುವಾರಿ ಸಚಿವರು ಯಾರಾಗುತ್ತಾರೆ ಎಂಬ ಕುತೂಹಲ ಸಹಜವಾಗಿಯೇ ಜನರಲ್ಲಿ ಮೊಳೆತಿತ್ತು. ಈ ನಡುವೆ ನೆರೆ ಕೋಲಾರದ ಜಿಲ್ಲೆಯ ಅಬಕಾರಿ ಸಚಿವ ಎಚ್‌.ನಾಗೇಶ್‌ ಅವರು ಜಿಲ್ಲೆಯ ಉಸ್ತುವಾರಿ ಹುದ್ದೆಗೆ ಆಕಾಂಕ್ಷಿಯಾಗಿದ್ದಾರೆ ಎಂಬ ಮಾತುಗಳೂ ಕೇಳಿಬಂದಿದ್ದವು.

ಆದರೆ, ಡಾ.ಅಶ್ವತ್ಥನಾರಾಯಣ್ ಅವರನ್ನು ಬಿಜೆಪಿಯಲ್ಲಿ ಭವಿಷ್ಯದ ಒಕ್ಕಲಿಗ ನಾಯಕನನ್ನಾಗಿ ಬೆಳೆಸುವ ಉದ್ದೇಶದಿಂದ ರಾಮನಗರ ಜಿಲ್ಲಾ ಉಸ್ತುವಾರಿಯನ್ನಾಗಿ ನೇಮಕ ಮಾಡಿದ್ದು, ಜಿಲ್ಲೆಯಲ್ಲಿ ಕೂಡ ಒಕ್ಕಲಿಗರ ಪ್ರಭಾವ ಇರುವ ಕಾರಣಕ್ಕೆ ತಾತ್ಕಾಲಿಕವಾಗಿ ಅವರಿಗೆ ಜಿಲ್ಲೆಯ ಜವಾಬ್ದಾರಿ ನೀಡಲಾಗಿದೆ ಎಂದು ತಿಳಿದು ಬಂದಿದೆ.

ಮೈತ್ರಿ ಸರ್ಕಾರದ ಆಡಳಿತದಲ್ಲಿ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿ ಅನರ್ಹಗೊಂಡಿರುವ ಚಿಕ್ಕಬಳ್ಳಾಪುರ ಕ್ಷೇತ್ರದ ಶಾಸಕ ಡಾ.ಕೆ.ಸುಧಾಕರ್ ಅವರು ಸುಪ್ರೀಂ ಕೋರ್ಟ್‌ನಲ್ಲಿರುವ ವ್ಯಾಜ್ಯ ಮುಗಿಯುತ್ತಿದ್ದಂತೆ ಬಿಜೆಪಿ ಸೇರ್ಪಡೆಯಾಗಲಿದ್ದಾರೆ ಎಂಬ ವದಂತಿ ಇದೆ. ಮುಂಬರುವ ಉಪಚುನಾವಣೆಯಲ್ಲಿ ಸುಧಾಕರ್ ಅವರು ಗೆದ್ದು ಸಚಿವರಾದರೆ ಅವರಿಗೆ ಚಿಕ್ಕಬಳ್ಳಾಪುರ ಉಸ್ತುವಾರಿ ನೀಡುವ ಸಾಧ್ಯತೆ ಇದೆ ಎನ್ನಲಾಗಿದೆ.

ಉನ್ನತ ಶಿಕ್ಷಣ ಸಚಿವರೂ ಆಗಿರುವ ಡಾ.ಅಶ್ವತ್ಥನಾರಾಯಣ್ ಸಾರಥ್ಯದಲ್ಲಿಯಾದರೂ ಜಿಲ್ಲೆಯ ಆಡಳಿತ ಯಂತ್ರದಲ್ಲಿ ಚುರುಕು ಕಾಣಿಸಿಕೊಂಡು, ನನೆಗುದಿಗೆ ಬಿದ್ದಿರುವ ಅಭಿವೃದ್ಧಿ ಕಾಮಗಾರಿಗಳು ಚುರುಕಿನಿಂದ ನಡೆಯಲಿ ಎಂಬುದು ಜಿಲ್ಲೆಯ ಜನರ ಆಶಯವಾಗಿದೆ.

ಪ್ರತಿಕ್ರಿಯಿಸಿ (+)