ನೀರು, ಮೇವಿನ ಮೇಲೆ ನೀಗಾ ಇಡಿ: ಅಧಿಕಾರಿಗಳಿಗೆ ಬಿ.ಎಂ.ರಾಮಸ್ವಾಮಿ ಸಲಹೆ

7
ಸಾಮಾನ್ಯ ಸಭೆ

ನೀರು, ಮೇವಿನ ಮೇಲೆ ನೀಗಾ ಇಡಿ: ಅಧಿಕಾರಿಗಳಿಗೆ ಬಿ.ಎಂ.ರಾಮಸ್ವಾಮಿ ಸಲಹೆ

Published:
Updated:
Deccan Herald

ಚಿಕ್ಕಬಳ್ಳಾಪುರ: ‘ಈಗಾಗಲೇ ಜಿಲ್ಲೆಯ ಎಲ್ಲ ತಾಲ್ಲೂಕುಗಳು ಅಧಿಕೃತವಾಗಿ ಬರಪೀಡಿತವೆಂದು ಘೋಷಣೆಯಾಗಿರುವ ಕಾರಣಕ್ಕೆ ಅಧಿಕಾರಿಗಳು ಮುಂಬರುವ ದಿನಗಳಲ್ಲಿ ಕುಡಿಯುವ ನೀರು ಮತ್ತು ಮೇವಿನ ಕೊರತೆಯಾಗದಂತೆ ಆದ್ಯತೆಯ ಮೆರೆಗೆ ಕ್ರಮಕೈಗೊಳ್ಳಬೇಕು’ ಎಂದು ತಾಲ್ಲೂಕು ಪಂಚಾಯಿತಿ ಅಧ್ಯಕ್ಷ ಬಿ.ಎಂ.ರಾಮಸ್ವಾಮಿ ಹೇಳಿದರು.

ತಾಲ್ಲೂಕು ಪಂಚಾಯಿತಿಯಲ್ಲಿ ಶನಿವಾರ ನಡೆದ ಸಾಮಾನ್ಯ ಸಭೆಯಲ್ಲಿ ಮಾತನಾಡಿದ ಅವರು, ‘ಆರ್ಥಿಕ ವರ್ಷ ಆರಂಭಗೊಂಡು ಆರು ತಿಂಗಳು ಕಳೆದಿದೆ. ಆದರೆ ಎಲ್ಲಾ ಇಲಾಖೆಗಳ ಪ್ರಗತಿ ನಿರೀಕ್ಷಿತ ಮಟ್ಟದಲ್ಲಿ ನಡೆದಿಲ್ಲ. ಬಾಕಿ ಉಳಿದಿರುವ, ನನೆಗುದಿಗೆ ಬಿದ್ದಿರುವ ಯೋಜನೆಗಳನ್ನು ತ್ವರಿತಗತಿಯಲ್ಲಿ ಪೂರ್ಣಗೊಳಿಸುವ ಜತೆಗೆ ಸರ್ಕಾರದಿಂದ ಬಿಡುಗಡೆಯಾದ ಅನುದಾನದ ಸಮರ್ಪಕ ಬಳಕೆಗೆ ಅಧಿಕಾರಿಗಳು ಕ್ರಮಕೈಗೊಳ್ಳಬೇಕು’ ಎಂದು ತಾಕೀತು ಮಾಡಿದರು.

ಸಮಾಜ ಕಲ್ಯಾಣ ಇಲಾಖೆ ಅಧಿಕಾರಿ ಸಭೆಗೆ ಮಾಹಿತಿ ನೀಡುವ ವೇಳೆ ಅಧ್ಯಕ್ಷರು ಮತ್ತು ಸದಸ್ಯ ಸುಬ್ಬರಾಯಪ್ಪ ಇಲಾಖೆಯ ಕಾರ್ಯವೈಖರಿಯ ಬಗ್ಗೆ ಆಕ್ರೋಶ ವ್ಯಕ್ತಪಡಿಸಿದರು.

‘ಸಮಾಜ ಕಲ್ಯಾಣ ಇಲಾಖೆ ವತಿಯಿಂದ ನಿರ್ಮಿಸುವ ಅಂಬೇಡ್ಕರ್, ವಾಲ್ಮೀಕಿ ಮತ್ತು ಬಾಬು ಜಗಜೀವನ್ ರಾಂ ಭವನಗಳ ನಿರ್ಮಾಣ ಕಾಮಗಾರಿಗೆ ಮುಷ್ಟೂರು, ದಿಬ್ಬೂರು, ಕಾಡುದಿಬ್ಬನಹಳ್ಳಿ, ಗೊಲ್ಲರದೊಡ್ಡಿ ವಿವಿಧೆಡೆ ನಿವೇಶನ ನೀಡಲಾಗಿದೆ. ಟೆಂಡರ್ ಆಗಿ, ಕಾಮಗಾರಿ ಆರಂಭಗೊಂಡು ನಾಲ್ಕು ವರ್ಷಗಳು ಕಳೆದರೂ ಈವರೆಗೆ ಭವನಗಳು ಸಿದ್ಧವಾಗಿಲ್ಲ. ಸರ್ಕಾರದಿಂದ ಬಿಡುಗಡೆಯಾದ ಅನುದಾನ ಎಲ್ಲಿ ಹೋಯಿತು. ಸಭೆಯಲ್ಲಿ ಹಳೆಯ ವರದಿ ಮಾಹಿತಿ ನೀಡುತ್ತೀರಿ’ ಎಂದು ಗುಡುಗಿದರು.

‘ಕೆಎಂಎಫ್‌ನಲ್ಲಿ ಹಾಲಿನ ಹಣದಲ್ಲಿ ಕಡಿತ ಮಾಡಿಕೊಂಡು ವಿಮೆ ನೀಡುತ್ತಿರುವುದನ್ನು ಹೈನುಗಾರರು ಉಚಿತ ವಿಮೆ ಎಂದುಕೊಂಡಿದ್ದಾರೆ. ಪಶು ಸಂಗೋಪನೆ ಇಲಾಖೆಯಲ್ಲಿ ನೀಡುತ್ತಿರುವ ವಿಮೆಗೆ ಹೈನುಗಾರರು ಮುಂದೆ ಬರುತ್ತಿಲ್ಲ. ಇಲಾಖೆಯಲ್ಲಿ ನೀಡುವ ವಿಮೆಗೆ ಅರ್ಧದಷ್ಟು ಮೊತ್ತವನ್ನು ಇಲಾಖೆಯೇ ಕಟ್ಟುತ್ತಿದೆ. ಈ ಬಗ್ಗೆ ಹೈನುಗಾರರಿಗೆ ಮಾಹಿತಿ ನೀಡುವ ಕೆಲಸವಾಗಬೇಕು’ ಎಂದು ಪಶು ವೈದ್ಯಕೀಯ ಇಲಾಖೆ ಅಧಿಕಾರಿ ತಿಳಿಸಿದರು.

ತಾಲ್ಲೂಕು ಆರೋಗ್ಯಾಧಿಕಾರಿ ಡಾ.ಮಿತ್ರಣ್ಣ ಮಾತನಾಡಿ, ‘ಸಂತಾನ ಶಕ್ತಿ ಹರಣ ಶಸ್ತ್ರಚಿಕಿತ್ಸೆಗೆ ಪುರುಷರು ಒಲುವು ತೋರುತ್ತಿಲ್ಲ. ತಾಲ್ಲೂಕು ಪಂಚಾಯಿತಿ ಸದಸ್ಯರು ಈ ಬಗ್ಗೆ ಗ್ರಾಮೀಣ ಪ್ರದೇಶದಲ್ಲಿ ಜಾಗೃತಿ ಮೂಡಿಸಬೇಕಿದೆ. ಗ್ರಾಮೀಣ ಪ್ರದೇಶಗಳಲ್ಲಿ ಸಾಂಕ್ರಾಮಿಕ ರೋಗಗಳ ಬಗ್ಗೆ ಸಮೀಕ್ಷೆ ನಡೆಸುವವರಿಗೆ ನಗರಸಭೆ ವತಿಯಿಂದ ಊಟದ ವ್ಯವಸ್ಥೆ ಮಾಡಲಾಗುತ್ತಿತ್ತು. ಅದನ್ನು ಇದೀಗ ನಿಲ್ಲಿಸಲಾಗಿದೆ. ಅದನ್ನು ಪುನಃ ಆರಂಭಿಸಬೇಕು’ ಎಂದರು.

ಸಾಮಾಜಿಕ ನ್ಯಾಯ ಸ್ಥಾಯಿ ಸಮಿತಿ ಅಧ್ಯಕ್ಷ ತಿರುಮಳಪ್ಪ, ಸದಸ್ಯರಾದ ನಾರಾಯಣಪ್ಪ, ಸುಬ್ಬರಾಯಪ್ಪ, ಕೆ.ಆರ್.ಸತೀಶ್, ಸದಸ್ಯೆ ರತ್ನಮ್ಮ ಉಪಸ್ಥಿತರಿದ್ದರು.

Tags: 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !