ಶಿಕ್ಷಣ, ಆರೋಗ್ಯ ಕ್ಷೇತ್ರದ ಸುಧಾರಣೆ ಅಗತ್ಯ

7
ಲಂಡನ್‌ನ ಕಿಂಗ್ಸ್ ಮತ್ತು ಇಂಪೀರಿಯಲ್ ಗ್ಲೋಬಲ್ ಅಕಾಡೆಮಿಯಿಂದ ಚಿನ್ನದ ಪದಕ ಪುರಸ್ಕೃತರಾದ ಶಾಸಕ ಡಾ.ಕೆ.ಸುಧಾಕರ್‌ ಅವರಿಗೆ ಸನ್ಮಾನ

ಶಿಕ್ಷಣ, ಆರೋಗ್ಯ ಕ್ಷೇತ್ರದ ಸುಧಾರಣೆ ಅಗತ್ಯ

Published:
Updated:
Deccan Herald

ಚಿಕ್ಕಬಳ್ಳಾಪುರ: ಲಂಡನ್‌ನ ಆರೋಗ್ಯ ಸಂಸ್ಥೆಗಳಾದ ಕಿಂಗ್ಸ್ ಮತ್ತು ಇಂಪೀರಿಯಲ್ ಗ್ಲೋಬಲ್ ಅಕಾಡೆಮಿಯಲ್ಲಿ ನರಮಂಡಲ ವ್ಯವಸ್ಥೆಗೆ ಸಂಬಂಧಿಸಿದ ಪಾರ್ಕಿನ್ಸನ್‌ ಕಾಯಿಲೆಗೆ ಸಂಬಂಧಿತ ಸಂಶೋಧನೆಯಲ್ಲಿ ತೊಡಗಿಸಿಕೊಂಡ ಕಾರಣಕ್ಕಾಗಿ ಚಿನ್ನದ ಪದಕ ಪುರಸ್ಕೃತರಾದ ಶಾಸಕ ಡಾ.ಕೆ.ಸುಧಾಕರ್‌ ಅವರನ್ನು ಅಭಿಮಾನಿಗಳು, ಕಾಂಗ್ರೆಸ್ ಕಾರ್ಯಕರ್ತರು ಶನಿವಾರ ಅದ್ದೂರಿಯಾಗಿ ಅಭಿನಂದಿಸಿದರು.

ನಗರದ ಒಕ್ಕಲಿಗರ ಕಲ್ಯಾಣ ಮಂಟಪದ ಆವರಣದಲ್ಲಿ ನಡೆದ ವೇದಿಕೆ ಕಾರ್ಯಕ್ರಮದಲ್ಲಿ ಬೆಳ್ಳಿ ಕಿರೀಟ ತೊಡಿಸಿ, ಗದೆ, ಸ್ಮರಣಿಕೆ ನೀಡಿ ಗೌರವಿಸುವ ಜತೆಗೆ ಅಲಂಕೃತ ರಥದಲ್ಲಿ ನಗರದ ಮುಖ್ಯರಸ್ತೆಯಲ್ಲಿ ಮೆರವಣಿಗೆ ಮಾಡಿದರು.

ಕಾರ್ಯಕ್ರಮದಲ್ಲಿ ಸನ್ಮಾನ ಸ್ವೀಕರಿಸಿ ಮಾತನಾಡಿದ ಸುಧಾಕರ್, ‘ಇವತ್ತು ವಿದ್ಯಾವಂತರಲ್ಲಿ ಜಾತಿ ವ್ಯವಸ್ಥೆ ಹೆಚ್ಚುತ್ತಿದೆ. ದೇಶದಲ್ಲಿ ಇತರ ಸಮಸ್ಯೆಗಳಿಗಿಂತ ಜಾತಿ ವ್ಯವಸ್ಥೆ ದೊಡ್ಡ ಮಾರಕವಾಗಿದೆ. ಸರ್ಕಾರಗಳು ನಿರೀಕ್ಷಿತ ಮಟ್ಟದಲ್ಲಿ ಶಿಕ್ಷಣ, ಆರೋಗ್ಯಕ್ಕೆ ಹೆಚ್ಚಿನ ಆದ್ಯತೆ ನೀಡುತ್ತಿಲ್ಲ. ಈ ಎರಡು ಕ್ಷೇತ್ರಗಳ ಸುಧಾರಣೆಯಿಂದ ಮಾತ್ರ ಸಮಗ್ರ ಅಭಿವೃದ್ಧಿ ಸಾಧ್ಯವಾಗುತ್ತದೆ’ ಎಂದು ಅಭಿಪ್ರಾಯಪಟ್ಟರು.

‘ಈ ಭಾಗದಲ್ಲಿ ತೀವ್ರ ನೀರಿನ ಸಮಸ್ಯೆ ಇದೆ. ಅದಕ್ಕಾಗಿ ಸಮಗ್ರ ನೀರಾವರಿ ತರಲು ನಾವು ಹೋರಾಟ ಮಾಡುತ್ತಿದ್ದೇವೆ. ಅದರ ಭಾಗವಾಗಿ ಎತ್ತಿನಹೊಳೆ, ಏತ ನೀರಾವರಿ ಯೋಜನೆಗಳು ಅನುಷ್ಟಾನಗೊಳ್ಳುತ್ತಿವೆ. ಪ್ರಮುಖವಾಗಿ ಈ ಭಾಗದಲ್ಲಿ ಕೈಗಾರಿಕೆಗಳು ಅಭಿವೃದ್ಧಿಯಾಗಬೇಕಾದರೆ ನೀರಾವರಿ ಅತಿ ಅಗತ್ಯ. ಆದ್ದರಿಂದ ಸರ್ಕಾರ ನೀರಾವರಿ ಪ್ರಮುಖ ಆದ್ಯತೆಯಾಗಿ ಪರಿಗಣಿಸಬೇಕು’ ಎಂದು ಆಗ್ರಹಿಸಿದರು.

‘ಕೆಲವು ವಿಷಯಗಳು ಬಂದಾಗ ನಿಜವನ್ನು ನಿಷ್ಠುರವಾಗಿ ಹೇಳೋದು ನನ್ನ ಹವ್ಯಾಸ. ಹೀಗಾಗಿ ಯಾರಿಗೂ ಅಂಜುವ ಅಗತ್ಯವಿಲ್ಲ. ಸಮ್ಮಿಶ್ರ ಸರ್ಕಾರಕ್ಕೆ ಮುಜುಗರ ತರುವ ಕೆಲಸ ನಾನು ಮಾಡುವುದಿಲ್ಲ. ನನ್ನ ಕ್ಷೇತ್ರದ ಜನರ ಅಭಿವೃದ್ಧಿಗಾಗಿ ನಾನು ಯಾವುದೇ ತ್ಯಾಗಕ್ಕೂ ಸಿದ್ಧ’ ಎಂದು ಹೇಳಿದರು.

‘ಜಿಲ್ಲೆಯ ಅಭಿವೃದ್ಧಿ ವಿಚಾರದಲ್ಲಿ ಸರ್ಕಾರ ನಮಗೆ ಸಮರ್ಪಕ ಅನುದಾನ ನೀಡಬೇಕು. ವೈದ್ಯಕೀಯ ಕಾಲೇಜು ಮಂಜೂರಾಗಿ ಎರಡು ವರ್ಷಗಳು ಕಳೆದಿವೆ. ಆದರೆ ಅನುದಾನದ ಕೊರತೆಯಿಂದ ಅನುಷ್ಟಾನಕ್ಕೆ ಬಂದಿಲ್ಲ. ಈ ವರ್ಷಾಂತ್ಯಕ್ಕೆ ಕಾಲೇಜು ನಿರ್ಮಾಣಕ್ಕೆ ಸರ್ಕಾರ ಅನುದಾನ ನೀಡಬೇಕು. ಇದರ ವಿರುದ್ಧ ನನ್ನ ಹೋರಾಟ ನಿರಂತರವಾಗಿರುತ್ತದೆ’ ಎಂದು ತಿಳಿಸಿದರು.

ನಾರಾಯಣ ನೇತ್ರಾಲಯದ ಅಧ್ಯಕ್ಷ ಡಾ.ಭುಜಂಗಶೆಟ್ಟಿ, ಶಾಸಕ ಎಸ್‌.ಎನ್.ಸುಬ್ಬಾರೆಡ್ಡಿ, ಜಿಲ್ಲಾ ಪಂಚಾಯಿತಿ ಸದಸ್ಯ ಪಿ.ಎನ್.ಕೇಶವರೆಡ್ಡಿ, ತಾಲ್ಲೂಕು ಪಂಚಾಯಿತಿ ಅಧ್ಯಕ್ಷ ಬಿ.ಎಂ.ರಾಮಸ್ವಾಮಿ, ಪಿಎಲ್‌ಡಿ ಬ್ಯಾಂಕ್‌ ಅಧ್ಯಕ್ಷ ನಾಗೇಶ್, ನಗರಸಭೆ ಅಧ್ಯಕ್ಷ ಮುನಿಕೃಷ್ಣಪ್ಪ, ಮುಖಂಡರಾದ ಕೆ.ವಿ.ನಾಗರಾಜ್, ಯಲುವಹಳ್ಳಿ ರಮೇಶ್, ಮರಳುಕುಂಟೆ ಕೃಷ್ಣಮೂರ್ತಿ ಉಪಸ್ಥಿತರಿದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !