ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಉಪ ಚುನಾವಣೆ: ನಾರಾಯಣಸ್ವಾಮಿ ಬಿಎಸ್ಪಿ ಅಭ್ಯರ್ಥಿ

Last Updated 24 ಅಕ್ಟೋಬರ್ 2019, 10:28 IST
ಅಕ್ಷರ ಗಾತ್ರ

ಚಿಕ್ಕಬಳ್ಳಾಪುರ: ‘ಬಹುಜನ ಸಮಾಜ ಪಕ್ಷದ ರಾಜ್ಯ ಘಟಕದ ಪ್ರಧಾನ ಕಾರ್ಯದರ್ಶಿ ಡಿ.ಆರ್.ನಾರಾಯಣಸ್ವಾಮಿ ಅವರನ್ನು ಚಿಕ್ಕಬಳ್ಳಾಪುರ ವಿಧಾನಸಭಾ ಉಪ ಚುನಾವಣೆಗೆ ಪಕ್ಷದ ಅಭ್ಯರ್ಥಿಯಾಗಿ ಘೋಷಣೆ ಮಾಡಲಾಗಿದೆ’ ಎಂದು ಬಿಎಸ್ಪಿ ಜಿಲ್ಲಾ ಘಟಕದ ಸಂಯೋಜಕ ಎಂ.ಮುನಿಕೃಷ್ಣಯ್ಯ ತಿಳಿಸಿದರು.

ನಗರದಲ್ಲಿ ಗುರುವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಈ ದೇಶದಲ್ಲಿ ಅಧಿಕಾರ ಮತ್ತು ಸಂಪತ್ತು ಕೇವಲ ಒಂದೇ ವರ್ಗದ ಕೈಯಲ್ಲಿ ಸೀಮಿತವಾಗಿದೆ. ಅದು ಸಮಾನವಾಗಿ ಹಂಚಿಕೆಯಾಗಬೇಕು. ಉಪಚುನಾವಣೆಯಲ್ಲಿ ನಮ್ಮ ಅಭ್ಯರ್ಥಿಯ ಗೆಲುವಿಗಾಗಿ ನಮ್ಮ ಕಾರ್ಯಕರ್ತರು ಪ್ರತಿ ಹಳ್ಳಿಗೆ ಹೋಗಿ ಪಕ್ಷ ಸಂಘಟನೆಗೆ ಶ್ರಮಿಸಬೇಕು. ಜನರಿಗೆ ಮತದಾನ ಮತ್ತು ಅದರ ಮೌಲ್ಯದ ಜಾಗೃತಿ ಮೂಡಿಸಬೇಕು’ ಎಂದು ಹೇಳಿದರು.

ಅಭ್ಯರ್ಥಿ ಡಿ.ಆರ್. ನಾರಾಯಣಸ್ವಾಮಿ ಮಾತನಾಡಿ, ‘ನಮಗೆ ಸ್ವಾತಂತ್ರ್ಯ ಬಂದು 70 ವರ್ಷಗಳು ಕಳೆದಿವೆ. ಆದರೆ ಇಂದಿಗೂ ಹಳ್ಳಿ ಮತ್ತು ನಗರ ಪ್ರದೇಶಗಳಲ್ಲಿ ಕುಡಿಯುವ ನೀರು, ಮನೆ ಸೇರಿದಂತೆ ಮೂಲಸೌಕರ್ಯಗಳಿಂದ ಜನ ವಂಚಿತರಾಗಿದ್ದಾರೆ. ಇಷ್ಟು ವರ್ಷ ಕಾಂಗ್ರೆಸ್, ಬಿಜೆಪಿ, ಜೆಡಿಎಸ್ ಪಕ್ಷಗಳನ್ನು ನಂಬಿ ಮೋಸ ಹೋಗಿದ್ದು ಸಾಕು, ಬಿಎಸ್ಪಿಗೂ ಒಮ್ಮೆ ಅವಕಾಶ ನೀಡಿ’ ಎಂದು ಮನವಿ ಮಾಡಿದರು.

‘ಕಳೆದ 6 ವರ್ಷಗಳಿಂದ ಶಾಸಕರಾಗಿರುವ ಡಾ.ಕೆ.ಸುಧಾಕರ್ ಮತ್ತು ಮಾಜಿ ಸಂಸದ ಎಂ.ವೀರಪ್ಪ ಮೊಯಿಲಿ ಅವರು ಈ ಭಾಗದ ರೈತರಿಗೆ ಮತ್ತು ಜನರಿಗೆ ಕುಡಿಯುವ ನೀರು ಕೊಡಲು ಸಂಪೂರ್ಣ ವಿಫಲರಾಗಿದ್ದಾರೆ. ಜಿಲ್ಲೆಯಲ್ಲಿ ರಸ್ತೆಗಳ ಬದಲು ಗುತ್ತಿಗೆದಾರರು ಅಭಿವೃದ್ಧಿಯಾಗಿದ್ದಾರೆ. ನಿರುದ್ಯೋಗ ಸಮಸ್ಯೆ ತಾಂಡವಾಡುತ್ತಿದೆ. ಕೃಷಿ ಕೂಲಿ ಕಾರ್ಮಿಕರ ಸ್ಥಿತಿ ತುಂಬಾ ಶೋಚನೀಯವಾಗಿದೆ’ ಎಂದು ತಿಳಿಸಿದರು.

ದೇವನಹಳ್ಳಿ ಪುರಸಭೆ ಸದಸ್ಯ ಡಿ.ಆರ್.ಬಾಲರಾಜು, ಬಿಎಸ್ಪಿ ಜಿಲ್ಲಾ ಘಟಕದ ಅಧ್ಯಕ್ಷ ಅಪ್ಸರ್ ಪಾಷಾ, ಕಾರ್ಯದರ್ಶಿ ಕೆ. ಮೂರ್ತಿ, ಮುಖಂಡರಾದ ಬಿಎನ್ ಗಂಗಾಧರಪ್ಪ, ಪೆದ್ದಣ್ಣ, ಎಂ.ಎಂ.ಬಾಷಾ, ರಹಮತುಲ್ಲಾ ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT