ಭಾನುವಾರ, ಸೆಪ್ಟೆಂಬರ್ 25, 2022
30 °C
ಗೌರಿಬಿದನೂರು, ಬಾಗೇಪಲ್ಲಿ, ಶಿಡ್ಲಘಟ್ಟದಲ್ಲಿ ಬಣದ ಬಲ ಹೆಚ್ಚಳಕ್ಕೆ ಸಮಾಜ ಸೇವಕರ ‘ಗಾಳ’

‘ಮಾಜಿ’ ಜನಪ್ರತಿನಿಧಿಗಳಿಗೆ ಹೆಚ್ಚಿದ ಬೇಡಿಕೆ

ಡಿ.ಎಂ.ಕುರ್ಕೆ ಪ್ರಶಾಂತ್ Updated:

ಅಕ್ಷರ ಗಾತ್ರ : | |

ಚಿಕ್ಕಬಳ್ಳಾಪುರ: ಆಂಬುಲೆನ್ಸ್ ಕೊಡುಗೆ, ಬಾಗಿನ ನೀಡುವುದು, ಹಳ್ಳಿ ಹಳ್ಳಿಗಳಿಗೆ ಗಣೇಶ ಮೂರ್ತಿಗಳ ವಿತರಣೆ, ಹಬ್ಬಗಳ ಉಡುಗೊರೆ...ಇದು ಜಿಲ್ಲೆಯ ಬಾಗೇಪಲ್ಲಿ, ಗೌರಿಬಿದನೂರು, ಶಿಡ್ಲಘಟ್ಟ ಮತ್ತು ಚಿಂತಾಮಣಿ ಕ್ಷೇತ್ರದಲ್ಲಿ 2023ರ ವಿಧಾನಸಭಾ ಚುನಾವಣೆ ದೃಷ್ಟಿಯಲ್ಲಿ ‘ಹೂಡಿಕೆದಾರರು’ ಕೈಬಿಚ್ಚಿ ನೀಡುತ್ತಿರುವ ಕೊಡುಗೆ. 

ಸಮಾಜ ಸೇವೆ ಹೆಸರಿನಲ್ಲಿ ಆಯಾ ವಿಧಾನಸಭಾ ಕ್ಷೇತ್ರಗಳನ್ನು ಪ್ರವೇಶಿಸಿರುವ ‘ಸಮಾಜ ಸೇವಕ ಕಂ ರಾಜಕಾರಣಿ’ಗಳು ತಮ್ಮ ಗುಂಪಿನ ಅಥವಾ ಬೆಂಬಲಿಗರ ಬಲ ಹೆಚ್ಚಳಕ್ಕೆ ತೀವ್ರ ಕಸರತ್ತು ನಡೆಸಿದ್ದಾರೆ. ಸಮಾಜ ಸೇವಕರು ಹೀಗೆ ದೊಡ್ಡ ಮಟ್ಟದಲ್ಲಿ ಬೆಂಬಲಿಗರ ಪಡೆಯನ್ನು ಕಟ್ಟಲು ಕಸರತ್ತು ನಡೆಸಿರುವುದು, ಗ್ರಾಮ ಪಂಚಾಯಿತಿ, ತಾಲ್ಲೂಕು ಪಂಚಾಯಿತಿ, ಜಿಲ್ಲಾ ಪಂಚಾಯಿತಿ, ಎಪಿಎಂಸಿ, ನಗರ ಸ್ಥಳೀಯ ಸಂಸ್ಥೆಗಳ ಮಾಜಿ ಸದಸ್ಯರು, ಮಾಜಿ ಅಧ್ಯಕ್ಷರು ಹೀಗೆ ವಿವಿಧ ಹಂತಗಳಲ್ಲಿ ‘ಮಾಜಿ’ ಎನಿಸಿರುವ ಜನಪ್ರತಿನಿಧಿಗಳಿಗೆ ಬೇಡಿಕೆ ಸೃಷ್ಟಿಸಿದೆ.

ಸಮಾಜ ಸೇವಕರ ಪ್ರವೇಶವು ಯಾವುದೇ ಪಕ್ಷಗಳಲ್ಲಿ ಸೂಕ್ತ ಸ್ಥಾನಮಾನಗಳು ದೊರೆಯದೆ ‘ಮಾಜಿ’ಯಾಗಿನ ಜನಪ್ರತಿನಿಧಿಗಳಿಗೆ ಒಳ್ಳೆಯ ವೇದಿಕೆಯನ್ನೇ ತಂದುಕೊಟ್ಟಿದೆ. ಒಂದು ಸಮಯದಲ್ಲಿ ಸ್ಥಳೀಯ ಶಾಸಕರಿಗೆ ಹತ್ತಿರವಿದ್ದು ಈಗ ಮುನಿಸಿಕೊಂಡ ಹಾಗೂ ವಿವಿಧ ರಾಜಕೀಯ ಪಕ್ಷಗಳ ಮಾಜಿ ಪದಾಧಿಕಾರಿಗಳಿಗೆ ಭರ್ಜರಿಯಾಗಿಯೇ ಸಮಾಜ ಸೇವಕರು ‘ಗಾಳ’ ಹಾಕುತ್ತಿದ್ದಾರೆ. ಆ ಮೂಲಕ ತಮ್ಮ ಬಣದ ಬಲ ಹೆಚ್ಚಳಕ್ಕೆ ಸಮಾಜ ಸೇವಕರು ಕಸರತ್ತು ಮಾಡುತ್ತಿದ್ದಾರೆ. ಕಾಂಗ್ರೆಸ್, ಜೆಡಿಎಸ್ ಮತ್ತು ಬಿಜೆಪಿಯಲ್ಲಿ ಮೂಲೆಗುಂಪಾದವರು ಸಹ ಈ ಸಮಾಜ ಸೇವಕರ ಗಾಳಕ್ಕೆ ಸಿಲುಕುತ್ತಿದ್ದಾರೆ. 

ಗೌರಿಬಿದನೂರು ವಿಧಾನಸಭಾ ಕ್ಷೇತ್ರದಲ್ಲಿ ಕೆ.ಎಚ್.ಪುಟ್ಟಸ್ವಾಮಿಗೌಡ, ಕೆಂಪರಾಜು, ಜೈಪಾಲ್ ರೆಡ್ಡಿ, ಬಾಗೇಪಲ್ಲಿ ಕ್ಷೇತ್ರದಲ್ಲಿ ಮಿಥುನ್ ರೆಡ್ಡಿ, ಸತೀಶ್ ರೆಡ್ಡಿ, ಶಿಡ್ಲಘಟ್ಟ ಕ್ಷೇತ್ರದಲ್ಲಿ ಆಂಜನಪ್ಪ ಪುಟ್ಟ, ಚಿಂತಾಮಣಿ ಕ್ಷೇತ್ರದಲ್ಲಿ ವೇಣುಗೋಪಾಲ್ ಹೀಗೆ ಸಾಲು ಸಾಲು ಮಂದಿ ಸಮಾಜ ಸೇವಕರು ಚುನಾವಣಾ ದೃಷ್ಟಿಯಿಂದ ಕೆಲಸ ಮಾಡುತ್ತಿದ್ದಾರೆ. ತಮ್ಮ ಬಣದ ಬಲವನ್ನು ಹೆಚ್ಚಿಸಿಕೊಳ್ಳಲು ‘ಮಾಜಿಗಳಿಗೆ’ ಗಾಳ ಹಾಕುತ್ತಿದ್ದಾರೆ. 

ಸಮಾಜ ಸೇವಕರ ಹೆಸರಿನಲ್ಲಿ ಶಿಡ್ಲಘಟ್ಟ ಕ್ಷೇತ್ರ ಪ್ರವೇಶಿಸಿದ ರಾಜೀವ್ ಗೌಡ, ಈಗ ಕಾಂಗ್ರೆಸ್‌ನಲ್ಲಿ ಗುರುತಿಸಿಕೊಂಡಿದ್ದಾರೆ. ಆದರೆ ಅವರು ಅಲ್ಲಿ ಕಾಂಗ್ರೆಸ್ ಜತೆಗೆ ತಮ್ಮದೇ ಆದ ‘ಬಣ’ ಸಹ ಕಟ್ಟುತ್ತಿದ್ದಾರೆ. 

ವಿಧಾನಸಭಾ ಚುನಾವಣೆಗೆ ಇನ್ನೂ ಎಂಟೊಂಬತ್ತು ತಿಂಗಳಿದೆ. ಯಾವ ಸಮಾಜ ಸೇವಕರು ಅಧಿಕೃತವಾಗಿ ಚುನಾವಣಾ ಅಖಾಡಕ್ಕೆ ಇಳಿಯುತ್ತಾರೆ ಎನ್ನುವುದು ಮುಂದಿನ ದಿನಗಳಲ್ಲಿ ತಿಳಿಯಲಿದೆ.

ಹೂಡಿಕೆ ರಾಜಕಾರಣದ ಯಶಸ್ಸಿಗೆ ನಿದರ್ಶನ

ಬಾಗೇಪಲ್ಲಿ ಶಾಸಕ ಸುಬ್ಬಾರೆಡ್ಡಿ ಸಹ ಸಮಾಜ ಸೇವಕರಾಗಿಯೇ ರಾಜಕೀಯ ಪ್ರವೇಶಿಸಿದರು. ಸಮಾಜ ಸೇವಕರಾಗಿ ಅವರು ಆರಂಭಿಸಿದ ಸಾಮೂಹಿಕ ವಿವಾಹ ಕಾರ್ಯಕ್ರಮಗಳನ್ನು ಇಂದಿಗೂ ನಡೆಸಿಕೊಂಡು ಬರುತ್ತಿದ್ದಾರೆ. ಚಿಂತಾಮಣಿ ಶಾಸಕ ಎಂ.ಕೃಷ್ಣಾರೆಡ್ಡಿ ಸಹ ಆ ಕ್ಷೇತ್ರಕ್ಕೆ ಸಮಾಜ ಸೇವಕರಾಗಿ ಕಾಲಿಟ್ಟು ಎರಡು ಬಾರಿ ಶಾಸಕರಾಗಿ ಆಯ್ಕೆಯಾಗಿದ್ದಾರೆ. ಹೀಗೆ ಹೂಡಿಕೆಯಿಂದ ಶಾಸಕರಾಗಬಹುದು ಎನ್ನುವುದನ್ನು ನಿದರ್ಶನಗಳು ಇವೆ. ಈ ಕಾರಣದಿಂದ ಜಿಲ್ಲೆಯ ಕೆಲವು ಕ್ಷೇತ್ರಗಳತ್ತ ಹೂಡಿಕೆದಾರರ ಚಿತ್ತ ಜೋರಾಗಿಯೇ ಇದೆ. 

ಬೊಂಬೆ ಜಿಗಿತ

ಇನ್ನೂ ಅಚ್ಚರಿ ಎಂದರೆ ಗೌರಿಬಿದನೂರು, ಬಾಗೇಪಲ್ಲಿ, ಗುಡಿಬಂಡೆ ತಾಲ್ಲೂಕುಗಳಲ್ಲಿ ಒಬ್ಬ ಸಮಾಜ ಸೇವಕರ ಬಣದಲ್ಲಿ ಗುರುತಿಸಿಕೊಂಡ ಮುಖಂಡರು ಕೆಲವೇ ದಿನಗಳಲ್ಲಿ ಮತ್ತೊಂದು ಬಣದಲ್ಲಿ ಗುರುತಿಸಿಕೊಳ್ಳುತ್ತಿದ್ದಾರೆ. ಚುನಾವಣೆಯ ದಿನಗಳು ಹತ್ತಿರ ಬಂದಷ್ಟೂ ಈ ಜಿಗಿತ ಹೆಚ್ಚುವ ಸಾಧ್ಯತೆ ಇದೆ. 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.