ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪ್ರಜಾವಾಣಿ ವರದಿ ಫಲಶೃತಿ: ಕೊಳವೆಬಾವಿಗೆ ಕೊನೆಗೂ ವಿದ್ಯುತ್ ಸಂಪರ್ಕ

ಪೌರಕಾರ್ಮಿಕರ ಬಡಾವಣೆ ಬಳಿಯ ಬೋರ್‌ವೆಲ್‌ಗೆ ವರ್ಷಗಳ ಬಳಿಕ ಪ್ಯಾನೆಲ್ ಬೋರ್ಡ್‌ ಅಳವಡಿಕೆ
Last Updated 12 ಮೇ 2020, 19:30 IST
ಅಕ್ಷರ ಗಾತ್ರ

ಚಿಕ್ಕಬಳ್ಳಾಪುರ: ನಗರದ ಎಂಟು ಮತ್ತು ಒಂಬತ್ತನೇ ವಾರ್ಡ್ ಮಧ್ಯೆ ಇರುವ ಜೈ ಭೀಮ್ ನಗರ ಎರಡನೇ ಮುಖ್ಯ ರಸ್ತೆಯಲ್ಲಿ ಪೌರಕಾರ್ಮಿಕರ ಬಡಾವಣೆಯ ನೀರಿನ ಬವಣೆ ನೀಗಲು ಮೂರು ವರ್ಷಗಳ ಹಿಂದೆ ಕೊರೆಯಿಸಿದ ಕೊಳವೆಬಾವಿಗೆ ಕೊನೆಗೂ ವಿದ್ಯುತ್ ಸಂಪರ್ಕ ದೊರೆತಿದೆ.

2017ರಲ್ಲಿ ಕೊರೆಯಿಸಿದ ಈ ಕೊಳವೆಬಾವಿಯಲ್ಲಿ ಉತ್ತಮ ಪ್ರಮಾಣದಲ್ಲಿ ನೀರು ಸಿಕ್ಕಿತ್ತು. ಕೊಳವೆ ಬಾವಿಗೆ ಪೈಪು, ಮೋಟರ್‌, ಪಂಪ್‌ ಅಳವಡಿಸಲಾಗಿತ್ತು. ಗುತ್ತಿಗೆದಾರರಿಗೆ ನಗರಸಭೆ ವತಿಯಿಂದ ಬಿಲ್‌ ಕೂಡ ಪಾವತಿಸಲಾಗಿತ್ತು.

ಆದರೆ ಕೊಳವೆಬಾವಿಗೆ ಈವರೆಗೆ ವಿದ್ಯುತ್‌ ಸಂಪರ್ಕ ಒದಗಿಸಿ ಪೌರ ಕಾರ್ಮಿಕರ ನೀರಿನ ಬವಣೆ ನೀಗುವ ಕೆಲಸವಾಗಿರಲಿಲ್ಲ. ಈ ಬಗ್ಗೆ ’ಪ್ರಜಾವಾಣಿ‘ ಏಪ್ರಿಲ್ 29 ರಂದು ’ಬರೀ ಬಿಲ್‌ಗಾಗಿ ಬೋರ್ ಕೊರೆದರು!‘ ಎಂಬ ಶೀರ್ಷಿಕೆ ಅಡಿ ವಿಶೇಷ ವರದಿ ಪ್ರಕಟಿಸಿತ್ತು.

ವರದಿಯ ಬೆನ್ನಲ್ಲೇ ಎಚ್ಚೆತ್ತುಕೊಂಡ ನಗರಸಭೆ ಅಧಿಕಾರಿಗಳು ಕೊಳವೆಬಾವಿ ನೀರು ಬಳಸಲು ಕ್ರಮಕೈಗೊಂಡಿದ್ದರು. ಪರಿಣಾಮ, ಮಂಗಳವಾರ ಕೊಳವೆಬಾವಿಗೆ ವಿದ್ಯುತ್ ಸಂಪರ್ಕ ಕಲ್ಪಿಸುವ ಜತೆಗೆ ಪ್ಯಾನೆಲ್‌ ಬೋರ್ಡ್‌ ಅಳವಡಿಸುವ ಕೆಲಸ ನಡೆಯಿತು.

’ಕೊಳವೆಬಾವಿ ವಿಚಾರ ನನ್ನ ಗಮನಕ್ಕೆ ಬರುತ್ತಿದ್ದಂತೆ ವಿದ್ಯುತ್ ಸಂಪರ್ಕ, ಪ್ಯಾನೆಲ್ ಬೋರ್ಡ್ ಅಳವಡಿಸಿ ಸ್ಥಳೀಯ ನಿವಾಸಿಗಳಿಗೆ ನೀರು ಪೂರೈಸಲು ನಿರ್ಧರಿಸಿದ್ದೇವೆ. ಎರಡ್ಮೂರು ದಿನಗಳಲ್ಲಿ ಕೊಳವೆಬಾವಿಯಿಂದ ನೀರು ಸರಬರಾಜು ಮಾಡಲಾಗುತ್ತದೆ‘ ಎಂದು ನಗರಸಭೆ ಆಯುಕ್ತ ಲೋಹಿತ್ ತಿಳಿಸಿದರು.

’ಸ್ಥಳೀಯ ಜನರು ನೀರಿನ ಸಮಸ್ಯೆ ಎದುರಿಸುತ್ತಿದ್ದರೂ ನಗರಸಭೆ ಅಧಿಕಾರಿಗಳು ಕೊಳವೆಬಾವಿಯನ್ನು ಉಪೇಕ್ಷಿಸಿದ್ದರು. ನಗರಸಭೆ ಆಯುಕ್ತರ ಗಮನಕ್ಕೆ ಈ ವಿಚಾರ ತಂದರೂ ಪ್ರಯೋಜನವಾಗಿರಲಿಲ್ಲ. ಈ ಬಗ್ಗೆ ’ಪ್ರಜಾವಾಣಿ‘ ಗಮನ ಸೆಳೆಯುವ ಮೂಲಕ ಅಧಿಕಾರಿಗಳನ್ನು ಎಚ್ಚರಿಸುವ ಕೆಲಸ ಮಾಡಿದೆ. ಹೀಗಾಗಿ, ಪತ್ರಿಕೆಗೆ ಧನ್ಯವಾದ ಹೇಳುವೆ‘ ಎಂದು ನಗರಸಭೆಯ 9ನೇ ವಾರ್ಡ್ ಸದಸ್ಯ ಮಟಮಪ್ಪ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT