ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪಿಂಚಣಿ ಯೋಜನೆಗೆ ಒತ್ತು ನೀಡಿ

‘ಪ್ರಧಾನಮಂತ್ರಿ ಶ್ರಮಯೋಗಿ ಮಾನ್‌ಧನ್’ ಪಿಂಚಣಿ ಯೋಜನೆ ನೋಂದಣಿ ಅಭಿಯಾನಕ್ಕೆ ಚಾಲನೆ
Last Updated 18 ಡಿಸೆಂಬರ್ 2019, 14:55 IST
ಅಕ್ಷರ ಗಾತ್ರ

ಚಿಕ್ಕಬಳ್ಳಾಪುರ: ‘ಅಸಂಘಟಿತ ಕಾರ್ಮಿಕರ ಶ್ರೇಯೋಭಿವೃದ್ಧಿಗಾಗಿ ಕೇಂದ್ರ ಸರ್ಕಾರ ಜಾರಿಗೆ ತಂದಿರುವ ‘ಪ್ರಧಾನಮಂತ್ರಿ ಶ್ರಮಯೋಗಿ ಮಾನ್‌ಧನ್’ ಪಿಂಚಣಿ ಯೋಜನೆಯನ್ನು ಅಧಿಕಾರಿಗಳು ಜಿಲ್ಲೆಯಲ್ಲಿ ಪರಿಣಾಮಕಾರಿಯಾಗಿ ಅನುಷ್ಟಾನಗೊಳಿಸುವ ಜತೆಗೆ ಈ ಯೋಜನೆ ಕುರಿತು ವ್ಯಾಪಕ ಪ್ರಚಾರ ಮಾಡುವ ಮೂಲಕ ಹೆಚ್ಚಿನ ಸಂಖ್ಯೆಯ ಫಲಾನುಭವಿಗಳಿಗೆ ಈ ಯೋಜನೆಯ ಪ್ರಯೋಜನ ಸಿಗುವಂತೆ ನೋಡಿಕೊಳ್ಳಬೇಕು’ ಎಂದು ಜಿಲ್ಲಾಧಿಕಾರಿ ಆರ್.ಲತಾ ಹೇಳಿದರು.

ಜಿಲ್ಲಾಧಿಕಾರಿ ಕಚೇರಿ ನ್ಯಾಯಾಲಯ ಸಭಾಂಗಣದಲ್ಲಿ ಬುಧವಾರ ಕಾರ್ಮಿಕ ಇಲಾಖೆಯ ವತಿಯಿಂದ ಆಯೋಜಿಸಿದ್ದ ಜಿಲ್ಲಾ ಮಟ್ಟದ ಉಸ್ತುವಾರಿ ಸಮಿತಿ ಸಭೆಯಲ್ಲಿ ಅವರು ಮಾತನಾಡಿದರು.

‘ದೇಶದ ಅರ್ಧದಷ್ಟು ಆದಾಯವು ಅಸಂಘಟಿತ ವಲಯದ 42 ಕೋಟಿ ಕಾರ್ಮಿಕರಿಂದ ಉತ್ಪಾದನೆಯಾಗುತ್ತಿದೆ. ನಮ್ಮ ದೈನಂದಿನ ಜೀವನದಲ್ಲಿ ಗೃಹ ಆಧಾರಿತ ಕಾರ್ಮಿಕರು, ಬೀದಿ ಬದಿ ವ್ಯಾಪಾರಿಗಳು, ಬಿಸಿಯೂಟ ಸಿದ್ಧಪಡಿಸುವವರು, ಹಮಾಲಿಗಳು, ಇಟ್ಟಿಗೆ ಭಟ್ಟಿ ಕಾರ್ಮಿಕರು, ಚಮ್ಮಾರರು, ಚಿಂದಿ ಆಯುವವರು, ಮನೆ ಕೆಲಸದವರು, ಅಗಸರು, ರಿಕ್ಷಾ ಚಾಲಕರು, ಭೂರಹಿತ ಕಾರ್ಮಿಕರು, ಸ್ವಯಂ ಉದ್ಯೋಗಿಗಳು, ಕೃಷಿ ಕಾರ್ಮಿಕರು, ಕಟ್ಟಡ ಕಾರ್ಮಿಕರು, ಬೀಡಿ ಕಾರ್ಮಿಕರು, ಕೈಮಗ್ಗ ಕಾರ್ಮಿಕರು, ಚರ್ಮೋದ್ಯಮದ ಕಾರ್ಮಿಕರು, ಧ್ವನಿ ಮತ್ತು ದೃಶ್ಯ ಕಾರ್ಮಿಕರು ಮತ್ತು ಇದೇ ರೀತಿ ಇತರೆ ವಿವಿಧ ವಲಯಗಳಲ್ಲಿ ಕೆಲಸ ನಿರ್ವಹಿಸುತ್ತಿದ್ದಾರೆ’ ಎಂದು ತಿಳಿಸಿದರು.

‘ಅಸಂಘಟಿತ ಕಾರ್ಮಿಕರು ಆಧಾರ್ ಕಾರ್ಡ್‌, ಬ್ಯಾಂಕ್ ಅಥವಾ ಜನಧನ್ ಖಾತೆ, ಮೊಬೈಲ್‌ ಸಂಖ್ಯೆ ಮಾಹಿತಿ ನೀಡಿದರೆ ನೋಂದಣಿ ಮಾಡಬಹುದು. ಈ ಯೋಜನೆಯು 18 ರಿಂದ 40 ವರ್ಷದವರಿಗೆ ಮಾತ್ರ ಅನ್ವಯವಾಗುತ್ತದೆ. ₹ 55 ರಿಂದ ₹ 200 ಪ್ರತಿ ತಿಂಗಳು ವಂತಿಗೆ ಪಾವತಿಸಬೇಕು. ಒಬ್ಬ ವ್ಯಕ್ತಿ 30 ವರ್ಷವಾಗಿದ್ದರೆ ತಿಂಗಳಿಗೆ ₹ 100 ಪಾವತಿಸಬೇಕು. ಆತ 60 ವರ್ಷವಾದಾಗ ಪ್ರತಿ ವರ್ಷ ₹ 36 ಸಾವಿರ ಪಿಂಚಣಿ ಬರಲಿದೆ. ಒಂದು ವೇಳೆ ಪಿಂಚಣಿ ಪಡೆಯುವ ವ್ಯಕ್ತಿ ಮೃತಪಟ್ಟರೆ ಆತನ ಪತ್ನಿಗೆ ಶೇಕಡ 50 ರಷ್ಟು ಪಿಂಚಣಿ ಸಿಗಲಿದೆ. ಹೀಗಾಗಿ ಅಸಂಘಟಿತ ಕಾಮಿರ್ಕಕರು ಇದರ ಸದುಪಯೋಗ ಪಡೆದುಕೊಳ್ಳಬೇಕು’ ಎಂದರು.

‘ಈ ಯೋಜನೆಯನ್ನು ಪರಿಣಾಮಕಾರಿಯಾಗಿ ಅನುಷ್ಠಾನಗೊಳಿಸುವ ಉದ್ದೇಶದಿಂದ ಯೋಜನೆಯ ಪ್ರಮುಖ ಅಂಶಗಳನ್ನೊಳಗೊಂಡ ಭಿತ್ತಿಪತ್ರಗಳು, ಬ್ಯಾನರ್‌ಗಳನ್ನು ಪ್ರತಿ ಇಲಾಖೆ ಹಾಗೂ ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿ ಜನಸಾಮಾನ್ಯರ ಗಮನಕ್ಕೆ ಬರುವಂತೆ ಹಾಕಬೇಕು. ಅಲ್ಲದೆ, ಅಂಗನವಾಡಿ ಹಾಗೂ ಆಶಾ ಕಾರ್ಯಕರ್ತೆಯರು ಪ್ರತಿ ಗ್ರಾಮಗಳಿಗೆ ಭೇಟಿ ನೀಡಿ ಯೋಜನೆಯ ಬಗ್ಗೆ ಪರಿಣಾಮಕಾರಿಯಾಗಿ ಜಾಗೃತಿ ಮೂಡಿಸಬೇಕು’ ಎಂದು ಹೇಳಿದರು.

ಜಿಲ್ಲಾ ನಗರಾಭಿವೃದ್ಧಿ ಕೋಶದ ಯೋಜನಾ ನಿರ್ದೇಶಕಿ ರೇಣುಕಾ, ಜಿಲ್ಲಾ ಪಂಚಾಯಿತಿ ಯೋಜನಾ ನಿರ್ದೇಶಕ ಗಿರಿಜಾ ಶಂಕರ್, ಕಾರ್ಮಿಕ ಇಲಾಖೆಯ ಜಿಲ್ಲಾ ಅಧಿಕಾರಿ ಆರ್.ವರಲಕ್ಷ್ಮೀ, ಕಾರ್ಮಿಕ ಇಲಾಖೆಯ ನಿರೀಕ್ಷಕ ಸೋಮಶೇಖರ್ ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT