ಶನಿವಾರ, ಏಪ್ರಿಲ್ 1, 2023
29 °C
ಡಾ.ಕೆ. ಸುಧಾಕರ್ ಚುನಾವಣಾ ತಂತ್ರ ಎಂದ ಕಾಂಗ್ರೆಸ್; ಕೈ ಪಾಳೆಯದ ವಿರುದ್ಧ ಬಿಜೆಪಿ ಕಿಡಿ

ಚಿಕ್ಕಬಳ್ಳಾಪುರ ಕ್ಷೇತ್ರ: ಚುನಾವಣೆ ಹೊಸ್ತಿಲಿನಲ್ಲಿ ಬೆಂಬಲಿಗರಿಗೆ ಅಧಿಕಾರ

ಡಿ.ಎಂ.ಕುರ್ಕೆ ಪ್ರಶಾಂತ್ Updated:

ಅಕ್ಷರ ಗಾತ್ರ : | |

Prajavani

ಚಿಕ್ಕಬಳ್ಳಾಪುರ: ವಿಧಾನಸಭೆ ಚುನಾವಣೆಗೆ ಕೆಲವೇ ದಿನಗಳಿವೆ. ಈ ಹೊತ್ತಿನಲ್ಲಿ ಸಚಿವ ಡಾ.ಕೆ. ಸುಧಾಕರ್ ತಮ್ಮ ಬೆಂಬಲಿಗರಿಗೆ ವಿವಿಧ ನಿಗಮ ಮಂಡಳಿಗಳಲ್ಲಿ ನಿರ್ದೇಶಕ ಸ್ಥಾನ ಕೊಡಿಸಿದ್ದಾರೆ. ಈ ಮೂಲಕ ಬೆಂಬಲಿಗರಿಗೆ ಬಲ ತುಂಬುವ ಮತ್ತು ಪಕ್ಷ ಸಂಘಟನೆಗೆ ಅಣಿಗೊಳಿಸುವ ಕೆಲಸ ಮಾಡಿದ್ದಾರೆ. 

ಸಚಿವರ ಈ ನಡೆ ಚಿಕ್ಕಬಳ್ಳಾಪುರ ವಿಧಾನಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್ ಮತ್ತು ಬಿಜೆಪಿ ನಾಯಕರ ನಡುವೆ ಟೀಕೆ ಮತ್ತು ಸಮರ್ಥನೆಗೆ ಎಡೆ ಮಾಡಿಕೊಟ್ಟಿದೆ. ಚುನಾವಣೆಯಲ್ಲಿ ಗೆಲ್ಲಬೇಕು ಎನ್ನುವ ಉದ್ದೇಶದಿಂದಷ್ಟೇ ಅಧಿಕಾರ ಕೊಟ್ಟಿದ್ದಾರೆ. ರಾಜಕೀಯ ತಂತ್ರಗಾರಿಕೆ ಇದು. ಈ ಅಧಿಕಾರ ಕೆಲವೇ ದಿನಗಳಲ್ಲಿ ಮುಕ್ತಾಯವಾಗಲಿದೆ ಎಂದು ಕಾಂಗ್ರೆಸ್ ನಾಯಕರು ಕಾಲೆಳೆದರೆ, ‘ನಮ್ಮ ನಾಯಕರು ಅಧಿಕಾರ ದೊರಕಿಸಿಕೊಟ್ಟಿದ್ದಾರೆ. ಒಂದು ದಿನ ಅನುಭವಿಸಲಿ ಅದು ಅಧಿಕಾರವೇ’ ಎಂದು ಸುಧಾಕರ್ ಬೆಂಬಲಿಗರು ತಿರುಗೇಟು ನೀಡುತ್ತಿದ್ದಾರೆ. 

ಪಟ್ರೇನಹಳ್ಳಿಯ ಪಿ.ಎ. ಮೋಹನ್ ಅವರನ್ನು ಮಾರ್ಕೆಟಿಂಗ್ ಕಮ್ಯುನಿಕೇಷನ್ ಮತ್ತು ಅಡ್ವರ್ಟೈಸಿಂಗ್ ಲಿಮಿಟೆಡ್ ನಿರ್ದೇಶಕರಾಗಿ ಮತ್ತು ಮಂಚೇನಹಳ್ಳಿ ಹೋಬಳಿಯ ಹೊನ್ನಪ್ಪನಹಳ್ಳಿಯ ಎಚ್‌.ಎಂ. ವೆಂಕಟೇಶ್ ಅವರನ್ನು ಡಿ. ದೇವರಾಜ ಅರಸು ಹಿಂದುಳಿದ ವರ್ಗಗಳ ಅಭಿವೃದ್ಧಿ ನಿಗಮದ ಅಧಿಕಾರೇತರ ನಿರ್ದೇಶಕರನ್ನಾಗಿ, ಆವಲಗುರ್ಕಿ ಗ್ರಾಮದ ಎ.ಸಿ. ನಾಗರಾಜ್ ಅವರನ್ನು ಕರ್ನಾಟಕ ಒಕ್ಕಲಿಗರ ಅಭಿವೃದ್ಧಿ ನಿಗಮದ ಅಧಿಕಾರೇತರ ನಿರ್ದೇಶಕರನ್ನಾಗಿ ಜ. 30ರಂದು ಸರ್ಕಾರ ನೇಮಿಸಿದೆ. 

ಮಂಚೇನಹಳ್ಳಿ ಹೋಬಳಿ ಮಿಣಕನಗುರ್ಕಿ ಗ್ರಾಮದ ಗಂಗಾಧರಪ್ಪ ಅವರನ್ನು ಕರ್ನಾಟಕ ಅರಣ್ಯ ಅಭಿವೃದ್ಧಿ ನಿಗಮದ ಅಧಿಕಾರೇತರ ನಿರ್ದೇಶಕರನ್ನಾಗಿ ಫೆ.2ರಂದು ನೇಮಿಸಿ ಸರ್ಕಾರ ಆದೇಶಿಸಿದೆ. ಹೀಗೆ ಆ ಭಾಗಗಳಲ್ಲಿ ಪ್ರಮುಖರು ಎನಿಸಿದ ಮುಖಂಡರಿಗೆ ನಿರ್ದೇಶಕದ ಸ್ಥಾನದ ಭಾಗ್ಯ ಈಗ ದೊರೆತಿದೆ.

ಬಿಜೆಪಿ ಸರ್ಕಾರ ಅಸ್ತಿತ್ವಕ್ಕೆ ಬಂದು ಮೂರು ವರ್ಷಗಳ ತರುವಾಯ ಚಿಕ್ಕಬಳ್ಳಾಪುರ ನಗರಾಭಿವೃದ್ಧಿ ಪ್ರಾಧಿಕಾರ (ಸುಡಾ) ಅಧ್ಯಕ್ಷರನ್ನು ನೇಮಿಸಲಾಯಿತು. ಕಳೆದ ನವೆಂಬರ್ ಅಂತ್ಯದಲ್ಲಿ ಚಿಕ್ಕಕಾಡಿಗೇನಹಳ್ಳಿಯ ಕೆ.ಕೃಷ್ಣಮೂರ್ತಿ ಅವರನ್ನು ಪ್ರಾಧಿಕಾರದ ಅಧ್ಯಕ್ಷರನ್ನಾಗಿ ನೇಮಕ ಮಾಡಲಾಯಿತು. ಕೃಷ್ಣಮೂರ್ತಿ, ಜಿಲ್ಲಾ ಬಿಜೆಪಿ ಪರಿಶಿಷ್ಟ ಘಟಕದ ಪ್ರಧಾನ ಕಾರ್ಯದರ್ಶಿ ಸಹ ಆಗಿದ್ದಾರೆ. ಚಿಕ್ಕಬಳ್ಳಾಪುರ ಕ್ಷೇತ್ರದಲ್ಲಿ ಪ್ರಬಲವಾಗಿರುವ ಪರಿಶಿಷ್ಟ ಜಾತಿಯ ಮತದಾರರನ್ನು ದೃಷ್ಟಿಯಲ್ಲಿ ಇಟ್ಟುಕೊಂಡು ಕೃಷ್ಣಮೂರ್ತಿ ಅವರ ನೇಮಕವಾಗಿದೆ ಎನ್ನುವ ಮಾತುಗಳಿವೆ.

ಬಲಿಜ ಸಮುದಾಯದ ಮುಖಂಡ ಹಾಗೂ ಕೆ.ವಿ ಮತ್ತು ಪಂಚಗಿರಿ ಶಿಕ್ಷಣ ಸಂಸ್ಥೆಗಳ ಅಧ್ಯಕ್ಷ ಕೆ.ವಿ.ನವೀನ್ ಕಿರಣ್ ಅವರನ್ನು ನವೆಂಬರ್ ಮೊದಲ ವಾರದಲ್ಲಿ ಬೆಂಗಳೂರು ಮಹಾನಗರ ಪಾಲಿಕೆ ಸಾರಿಗೆ ಸಂಸ್ಥೆ (ಬಿಎಂಟಿಸಿ) ಉಪಾಧ್ಯಕ್ಷರನ್ನಾಗಿ ನೇಮಿಸಲಾಯಿತು. ಕ್ಷೇತ್ರದಲ್ಲಿ ಗಣನೀಯವಾಗಿರುವ ಬಲಿಜ ಸಮುದಾಯದ ಮತದಾರರನ್ನು ಗಮನದಲ್ಲಿ ಇಟ್ಟುಕೊಂಡು ಸುಧಾಕರ್ ಈ ನೇಮಕ ಮಾಡಿಸಿದ್ದಾರೆ ಎನ್ನಲಾಗುತ್ತಿದೆ.

ಚುನಾವಣೆಗೆ ಬೆರಳೆಣಿಕೆಯ ದಿನಗಳು ಬಾಕಿ ಇರುವಾಗ ಈ ನೇಮಕಗಳು ನಡೆದಿರುವುದೇ ಚರ್ಚೆಗೆ ಮೂಲ ಕಾರಣವಾಗಿದೆ. 

ಡಾ.ಕೆ. ಸುಧಾಕರ್ 2019ರಲ್ಲಿ ಸಚಿವರಾಗಿ ಅಧಿಕಾರ ಸ್ವೀಕರಿಸಿದರು. ಅಧಿಕಾರ ಸ್ವೀಕರಿಸಿದ ನಂತರ ಕೆ.ವಿ. ನಾಗರಾಜ್ ಮತ್ತಿತರರಿಗೆ ನಿಗಮ ಮಂಡಳಿಗಳ ಅಧ್ಯಕ್ಷ, ನಿರ್ದೇಶಕ ಸ್ಥಾನ ದೊರಕುವಂತೆ ಮಾಡಿದ್ದರು. ಆ ನಂತರ ಮೂರು ವರ್ಷ ನಗರಾಭಿವೃದ್ಧಿ ಪ್ರಾಧಿಕಾರದಂತಹ ಪ್ರಮುಖ ಹುದ್ದೆಯೇ ಖಾಲಿ ಇತ್ತು. ಜಿಲ್ಲಾ ಬಿಜೆಪಿ ವಿವಿಧ ನಿಗಮ, ಮಂಡಳಿಗಳಿಗೆ ನೇಮಿಸುವಂತೆ ಶಿಫಾರಸು ಸಹ ಮಾಡಿತ್ತು. ಆದರೆ ಆ ಶಿಫಾರಸು ಸಹ ನನೆಗುದಿಗೆ ಬಿದ್ದಿತ್ತು.  ಈಗ ಅಧಿಕಾರ ಪಡೆದವರಲ್ಲಿ ಬಹುತೇಕರು ‘ಮೂಲ’ ಬಿಜೆಪಿಗರಲ್ಲ. ಸುಧಾಕರ್ ಬೆಂಬಲಿಗರಾಗಿದ್ದಾರೆ. ಸುಧಾಕರ್ ಸಚಿವರಾದರೂ ತಮಗೆ ಯಾವುದೇ ಅಧಿಕಾರದ ಹುದ್ದೆಗಳು ದೊರೆತಿಲ್ಲ ಎನ್ನುವ ಬೇಸರ ಕೆಲವು ಬೆಂಬಲಿಗರಲ್ಲಿ ಇತ್ತು. ಚುನಾವಣೆಯ ಈ ಹೊತ್ತಿನಲ್ಲಿ ನಿಗಮ, ಮಂಡಳಿಗಳಲ್ಲಿ ನಿರ್ದೇಶಕ ಸ್ಥಾನ ಕೊಡಿಸುವ ಮೂಲಕ ಬೆಂಬಲಿಗರಲ್ಲಿ ಉತ್ಸಾಹ ತುಂಬುವ ಕೆಲಸವನ್ನು ಸುಧಾಕರ್  ಮಾಡಿದ್ದಾರೆ ಎನ್ನುತ್ತವೆ ಬಿಜೆಪಿ ಮೂಲಗಳು. ‘ಇದು ಚುನಾವಣೆಯ ತಂತ್ರವಷ್ಟೇ’ ಎನ್ನುವ ಆರೋಪ ಕಾಂಗ್ರೆಸ್ ಪಾಳಯದಿಂದ ಕೇಳಿ ಬರುತ್ತಿದೆ.

ಮಾತನಾಡಲು ಅರ್ಹತೆ ಇಲ್ಲ

ಒಂದು ದಿನವಿರಲಿ, ಮೂರು ತಿಂಗಳು ಇರಲಿ ಅಧಿಕಾರ ಅಧಿಕಾರವೇ. ಈ ಬಗ್ಗೆ ಮಾತನಾಡಲು ಕಾಂಗ್ರೆಸ್‌ನವರಿಗೆ ಯಾವ ಅರ್ಹತೆ ಇದೆ. ಈ ಹಿಂದೆ ಕಾಂಗ್ರೆಸ್ ಆಡಳಿತದ ಅವಧಿಯಲ್ಲಿ ಎಷ್ಟು ಜನರಿಗೆ ಅಧಿಕಾರ ದೊರಕಿಸಿಕೊಟ್ಟಿದ್ದಾರೆ? ಇದನ್ನು ಎತ್ತಿ ಹೇಳುವ ಅವಶ್ಯಕತೆಯೂ ಕಾಂಗ್ರೆಸ್‌ನವರಿಗೆ ಇಲ್ಲ ಎಂದು ಚಿಕ್ಕಬಳ್ಳಾಪುರ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಕೃಷ್ಣಮೂರ್ತಿ ತಿಳಿಸಿದರು.

ಚುನಾವಣಾ ದೃಷ್ಟಿಯಿಂದ ಅಧಿಕಾರ

ಚುನಾವಣೆ ಹತ್ತಿರವಿದೆ. ಆ ಕಾರಣದಿಂದ ಬಿಎಂಸಿಟಿ ಉಪಾಧ್ಯಕ್ಷ, ಒಕ್ಕಲಿಗರ ನಿಗಮಕ್ಕೆ ನಿರ್ದೇಶಕ ಸ್ಥಾನ, ಚಿಕ್ಕಬಳ್ಳಾಪುರ ನಗರಾಭಿವೃದ್ಧಿ ಪ್ರಾಧಿಕಾರಕ್ಕೆ ಅಧ್ಯಕ್ಷರ ನೇಮಕ ಮಾಡಲಾಗಿದೆ. ಕೆಲವರಿಗೆ ನಿಗಮ ಮಂಡಳಿಗಳ ನಿರ್ದೇಶಕ ಸ್ಥಾನ ನೀಡಲಾಗಿದೆ. ಇವರ ಅಧಿಕಾರದ ಅವಧಿ ಕೆಲವೇ ದಿನಗಳು ಮಾತ್ರ ಎನ್ನುತ್ತಾರೆ ಕಾಂಗ್ರೆಸ್ ಮುಖಂಡ ಹಾಗೂ ಕೋಚಿಮುಲ್ ನಿರ್ದೇಶಕ ಭರಣಿ ವೆಂಕಟೇಶ್.

ಮೂಲ ಬಿಜೆಪಿಗರಿಗೆ ಸಿಗದ ಅಧಿಕಾರ

ಚಿಕ್ಕಬಳ್ಳಾಪುರ ವಿಧಾನಸಭಾ ಕ್ಷೇತ್ರದ ಮೂಲ ಬಿಜೆಪಿಗರಿಗೆ ಸಚಿವರು ಅಧಿಕಾರ ಭಾಗ್ಯ ದೊರಕಿಸಿಕೊಟ್ಟಿಲ್ಲ. ಇದಲ್ಲದೆ ಜಿಲ್ಲೆಯ ಉಳಿದ ಯಾವುದೇ ವಿಧಾನಸಭಾ ಕ್ಷೇತ್ರದ ಬಿಜೆಪಿ ಕಾರ್ಯಕರ್ತರಿಗೂ ಚುನಾವಣೆ ಹೊಸ್ತಿಲಲ್ಲಿ ನಿಗಮ ಮಂಡಳಿಗಳಲ್ಲಿ ಸ್ಥಾನ ದೊರೆತಿಲ್ಲ. ಬೆಂಬಲಿಗರಿಗೆ ಮಾತ್ರ ಮಣೆ ಹಾಕಿದ್ದಾರೆ. ಚಿಕ್ಕಬಳ್ಳಾಪುರ ಬಿಜೆಪಿಯಲ್ಲಿ ಈ ಹಿಂದಿನಿಂದಲೂ ಮೂಲ ಮತ್ತು ವಲಸಿಗ ಎನ್ನುವ ತಿಕ್ಕಾಟ ಇದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು