ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚಿಕ್ಕಬಳ್ಳಾಪುರ: ‘ಬಿಜೆಪಿಯಿಂದ ಕುಟುಂಬ ರಾಜಕಾರಣ ಅಂತ್ಯ’

ಕಾಂಗ್ರೆಸ್ ಮತ್ತು ಜೆಡಿಎಸ್ ವಿರುದ್ಧ ಬಿಜೆಪಿ ರಾಜ್ಯ ಚುನಾವಣಾ ಸಹ ಉಸ್ತುವಾರಿ ಕೆ.ಅಣ್ಣಾಮಲೈ ವಾಗ್ದಾಳಿ
Last Updated 7 ಮಾರ್ಚ್ 2023, 10:14 IST
ಅಕ್ಷರ ಗಾತ್ರ

ಚಿಕ್ಕಬಳ್ಳಾಪುರ: ಕಾಂಗ್ರೆಸ್, ಜೆಡಿಎಸ್ ಕುಟುಂಬ ಮತ್ತು ವಂಶಾಡಳಿತ ಪಕ್ಷಗಳಾಗಿವೆ. ಬಿಜೆಪಿಯಿಂದ ಮಾತ್ರ ಈ ಕುಟುಂಬ ರಾಜಕಾರಣದ ಅಂತ್ಯ ಸಾಧ್ಯ ಎಂದು ಬಿಜೆಪಿ ರಾಜ್ಯ ಚುನಾವಣಾ ಸಹ ಉಸ್ತುವಾರಿ ಕೆ.ಅಣ್ಣಾಮಲೈ ತಿಳಿಸಿದರು.

ನಗರದಲ್ಲಿ ಸೋಮವಾರ ನಡೆದ ಬಿಜೆಪಿ ಯುವ ಸಮಾವೇಶದಲ್ಲಿ ಅವರು ಮಾತನಾಡಿದರು.

ಕಾಂಗ್ರೆಸ್ ಮತ್ತು ಜೆಡಿಎಸ್ ಆಡಳಿತದಲ್ಲಿ ಕುಟುಂಬಕ್ಕೆ ಮೊದಲ ಪ್ರಾಶಸ್ತ್ಯ. ನಂತರ ಸಂಬಂಧಿಕರು, ಅನುಯಾಯಿಗಳು, ತದ ನಂತರ ಜನಸಾಮಾನ್ಯರು ಎನ್ನುವುದು ಇವರ ನೀತಿ. ಬಿಜೆಪಿಯದ್ದು ಜನಸಾಮಾನ್ಯರ ರಾಜಕಾರಣ. ಪ್ರಧಾನಿ ನರೇಂದ್ರ ಮೋದಿ ಅವರು ಜನಸಾಮಾನ್ಯರಿಗಾಗಿ ಕೆಲಸ ಮಾಡುತ್ತಿದ್ದಾರೆ ಎಂದು ಹೇಳಿದರು.

ನಮಗೆ ಮೊದಲ ಉಳಿದಿದ್ದು ಜನರಿಗೆ ಎನ್ನುವುದು ಕಾಂಗ್ರೆಸ್‌ ಸಂಸ್ಕೃತಿ ರಾಜ್ಯ ಮತ್ತು ದೇಶದಲ್ಲಿ ಕಾಂಗ್ರೆಸ್ ಮತ್ತು ಆ ಪಕ್ಷದ ಸಂಸ್ಕೃತಿಯನ್ನು ನಿರ್ಮೂಲನೆ ಮಾಡಲು ಬಿಜೆಪಿ ಅಧಿಕಾರಕ್ಕೆ ಬರಬೇಕು ಎಂದರು.

ಕರ್ನಾಟಕದಲ್ಲಿ ಕಾಂಗ್ರೆಸ್ ಮತ್ತು ಜೆಡಿಎಸ್ ಪುರಾತನ ಭಾರತದ ರಾಜಕಾರಣ ಮಾಡುತ್ತಿವೆ. ಈ ಪುರಾತನ ರಾಜಕಾರಣದಲ್ಲಿ ಕುಟುಂಬವೇ ಪ್ರಧಾನ. ಪ್ರಧಾನಿ ನರೇಂದ್ರ ಮೋದಿ ನವಭಾರತದ ರಾಜಕಾರಣವನ್ನು ಮಾಡುತ್ತಿದ್ದಾರೆ. ಈ ನವಭಾರತದ ರಾಜಕಾರಣದಲ್ಲಿ ಯುವಕರಿಗೆ ಆದ್ಯತೆ. ಯಾವ ರಾಜಕಾರಣ ಆಯ್ಕೆ ಮಾಡಿಕೊಳ್ಳಬೇಕು ಎನ್ನುವುದನ್ನು ಜನರಿಗೆ ಯುವ ಸಮುದಾಯ ಮನವರಿಕೆ ಮಾಡಿಕೊಡಬೇಕು ಎಂದು ಹೇಳಿದರು.

ಈ ಹಿಂದೆ ಆಡಳಿತ ನಡೆಸಿದವರು ಯುವಕರ ಮೇಲೆ ನಂಬಿಕೆ ಇಡುತ್ತಿರಲಿಲ್ಲ. ಹಿಂದೆ ಯಾರೆಲ್ಲ ಪ್ರಧಾನಿ, ಮುಖ್ಯಮಂತ್ರಿ ಆಗಿದ್ದರೊ ಅವರಿಗೆ ಯುವ ಸಮುದಾಯದ ಶಕ್ತಿ ಗೊತ್ತಿರಲಿಲ್ಲ. ನರೇಂದ್ರ ಮೋದಿ ಅವರಿಗೆ ಯುವಕರ ಜತೆ ಉತ್ತಮ ಸಂಪರ್ಕವಿದೆ. ಯುವಕರ ಬದುಕನ್ನು ಬದಲಿಸುವ ಯೋಜನೆಗಳನ್ನು ಜಾರಿಗೊಳಿಸಿದ್ದಾರೆ. ಯುವ ಸಮುದಾಯವನ್ನು ಕೇಂದ್ರೀಕರಿಸಿ ಕೆಲಸ ಮಾಡುತ್ತಿದ್ದಾರೆ ಎಂದು ಹೇಳಿದರು.

ಎಲ್ಲ ಮನೆಗಳಿಗೂ ಕುಡಿಯುವ ನೀರು ಕೊಡಬೇಕು ಎನ್ನುವುದು ನರೇಂದ್ರ ಮೋದಿ ಅವರ ಆಶಯ.‌ ಶೇ 64 ರಷ್ಟು ಮನೆಗಳಲ್ಲಿ ಕುಡಿಯುವ ನೀರು ತಲುಪುತ್ತಿದೆ. ಜನಸಾಮಾನ್ಯರ ಕಷ್ಟಗಳು ಮೋದಿ ಅವರಿಗೆ ಗೊತ್ತು ಎಂದರು.

ರಾಜ್ಯ ವಿಧಾನಸಭೆ ಚುನಾವಣೆಗೆ ಮೇ ನಲ್ಲಿ ನಡೆಯಲಿದೆ. ಮುಂದಿನ 45 ದಿನಗಳ ಕಾಲ ಯುವಕರು ರಾಜಕೀಯ‌ವಾಗಿ ಕೆಲಸ ಮಾಡಬೇಕು. ಯಡಿಯೂರಪ್ಪ ಮತ್ತು ಬಸವರಾಜ ಬೊಮ್ಮಾಯಿ ಅವರ ಸರ್ಕಾರ ಮಾಡಿರುವ ಕೆಲಸಗಳನ್ನು ತಿಳಿಸಬೇಕು ಎಂದರು.

ಅಧಿಕಾರಕ್ಕೆ ಬಂದರೆ ಮನೆಯ ಯಜಮಾನಿಗೆ ₹ 2 ಸಾವಿರ ನೀಡುತ್ತೇವೆ ಎಂದು ಕಾಂಗ್ರೆಸ್ ನಾಯಕರು ಹೇಳುತ್ತಿದ್ದಾರೆ. ಇದೇ ರೀತಿಯಲ್ಲಿ ಹೇಳಿ 24 ತಿಂಗಳ ಹಿಂದೆ ತಮಿಳುನಾಡಿನಲ್ಲಿ ಡಿಎಂಕೆ ಅಧಿಕಾರಕ್ಕೆ ಬಂದಿದೆ. ಆದರೆ ಇಂದಿಗೂ ಹಣ ಕೊಡಲು ಸಾಧ್ಯವಾಗಿಲ್ಲ ಎಂದರು.

ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ.ಸುಧಾಕರ್ ಮಾತನಾಡಿ, ಮುಂದಿನ ವಿಧಾನಸಭಾ ಚುನಾವಣೆಯಲ್ಲಿ ನನ್ನ ಜತೆ ಬಿಜೆಪಿಯ ನಾಲ್ಕು ಶಾಸಕರನ್ನು ಜಿಲ್ಲೆಯಿಂದ ಕಳುಹಿಸಿಕೊಡಬೇಕು. ನಿಮ್ಮ ಬೂತ್‌ಗಳನ್ನು ಸಶಕ್ತವಾಗಿ ಇಟ್ಟುಕೊಳ್ಳಿ. ಪ್ರತಿಬೂತ್‌ನಲ್ಲಿ ವಿರೋಧ ಪಕ್ಷಕ್ಕಿಂತ ಪರಿಣಾತ್ಮಕವಾಗಿ ಕೆಲಸ ಮಾಡಬೇಕು ಎಂದು ಹೇಳಿದರು.

ಕೇಂದ್ರ ಮತ್ತು ರಾಜ್ಯದಲ್ಲಿ ಡಬ್ಬಲ್ ಎಂಜಿನ್ ಸರ್ಕಾರ ಇರುವುದರಿಂದ ಅಭಿವೃದ್ಧಿ ಸಾಧ್ಯವಾಗಿದೆ. ಪ್ರತಿಯೊಬ್ಬ ಕಾರ್ಯಕರ್ತರಿಗೂ ಈ ಚುನಾವಣೆ ನನ್ನದೇ ಎನ್ನುವ ಭಾವನೆ ಬರಬೇಕು ಎಂದರು.

ವಿಶ್ವದಲ್ಲಿ ಸಾಂಕ್ರಾಮಿಕ ರೋಗ ಕೋವಿಡ್ ತರುವಾಯ ಬಹಳಷ್ಟು ದೇಶಗಳು ಅರ್ಥಿಕ ದುಸ್ಥಿತಿಗೆ ಸಿಲುಕಿದವು. ಆದರೆ ಭಾರತ ಆರ್ಥಿಕ ಪ್ರಗತಿಯತ್ತ ಸಾಗುತ್ತಿದೆ. ನವೋದ್ಯಮಗಳ ಮೂಲಕ ಉದ್ಯೋಗ ಸೃಷ್ಟಿ ಆಗುತ್ತಿದೆ ಎಂದರು.

ಕಾಂಗ್ರೆಸ್ ನಾಯಕರು ಮಹಿಳೆಯರಿಗೆ ಮಾಸಿಕ ₹ 2 ಸಾವಿರ, 200 ಯುನಿಟ್ ಉಚಿತ ವಿದ್ಯುತ್, 10 ಕೆ.ಜಿ ಅಕ್ಕಿ ನೀಡಲಾಗುವುದು ಎಂದು ಹೇಳುತ್ತಿದ್ದಾರೆ. ಈ ರಾಜ್ಯವನ್ನು ಎಲ್ಲಿಗೆ ತೆಗೆದುಕೊಂಡು ಹೋಗಬೇಕು ಎಂದುಕೊಂಡಿದ್ದಾರೆ. ಅಂಗನವಾಡಿ, ರಸ್ತೆ, ಆಸ್ಪತ್ರೆ ಬೇಡವಾ? ಇವರು ಘೋಷಿಸುತ್ತಿರುವ ಯೋಜನೆಗಳು ಜನರನ್ನು ದಿಕ್ಕುತಪ್ಪಿಸುತ್ತವೆ ಎಂದರು.

ಕೋಲಾರ ಸಂಸದ ಮುಮುನಿಸ್ವಾಮಿ ಮಾತನಾಡಿ, ಗರೀಬಿ ಹಠಾವೊ ಎಂದು ಕಾಂಗ್ರೆಸ್‌ನವರು ಇನ್ನೂ ಬಡತನ ಜೀವಂತವಾಗಿ ಇಟ್ಟಿದ್ದಾರೆ. ರಾಹುಲ್ ಗಾಂಧಿ ಹೋದ ಕಡೆ ಕಾಂಗ್ರೆಸ್ ನೆಲಕಚ್ಚುತ್ತಿದೆ. ಜೆಡಿಎಸ್, ಕಾಂಗ್ರೆಸ್ ಕುಟುಂಬದ ಪಕ್ಷ. ಕುಟುಂಬ ರಾಜಕಾರಣದ ಮೂಲಕ ದೇಶವನ್ನು ಲೂಟಿ ಮಾಡಿದ್ದಾರೆ ಎಂದರು.

‌ಬಿಜೆಪಿ ಯುವ ಘಟಕದ ರಾಜ್ಯ ಅಧ್ಯಕ್ಷ ಸಂದೀಪ್, ‘ಕುಂಕುಮ, ಕೇಸರಿ ಕಂಡರೆ ಯಾರು ಕೆಂಗಣ್ಣು ಬೀರುತ್ತಾರೊ, ಟಿಪ್ಪು ಪರವಾಗಿ ಇರುತ್ತಾರೊ ಅವರನ್ನು ಅಧಿಕಾರದಿಂದ ದೂರವಿಡಬೇಕು ಎಂದರು.

ಕೇಂದ್ರ ಕಾರ್ಮಿಕ ಸಚಿವ ಭೂಪೇಂದ್ರ ಯಾದವ್ ಸಮಾವೇಶವನ್ನು ಉದ್ಘಾಟಿಸಿದರು. ಮತ್ತೊಂದು ಕಾರ್ಯನಿಮಿತ್ತ ತೆರಳಿದರು.

ಬಿಜೆಪಿ ಜಿಲ್ಲಾ ಅಧ್ಯಕ್ಷ ಟಿ.ರಾಮಲಿಂಗಪ್ಪ, ಯುವ ಘಟಕದ ಜಿಲ್ಲಾ ಅಧ್ಯಕ್ಷ ಅಭಿಷೇಕ್, ಖಾದಿ ಮತ್ತು ಗ್ರಾಮೋದ್ಯೋಗ ಮಂಡಳಿ ಅಧ್ಯಕ್ಷ ಕೆ.ವಿ.ನಾಗರಾಜ್, ಮಾಜಿ ಶಾಸಕ ಎಂ.ರಾಜಣ್ಣ, ಮುಖಂಡರಾದ ಮುನಿರಾಜು, ವೇಣುಗೋಪಾಲ್, ಕೋನಪ್ಪ ರೆಡ್ಡಿ ಇತರರು ವೇದಿಕೆಯಲ್ಲಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT