ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಶಾಲಾ, ಕಾಲೇಜುಗಳ ಅನುದಾನಕ್ಕೆ ಒಳಪಡಿಸುವಂತೆ ಆಗ್ರಹ

ಸರ್ಕಾರಕ್ಕೆ ರಾಜ್ಯ ಅನುದಾನ ರಹಿತ ಕನ್ನಡ ಮಾಧ್ಯಮ ಶಾಲಾ ಕಾಲೇಜುಗಳ ಆಡಳಿತ ಮಂಡಳಿ ಹಾಗೂ ನೌಕರರ ಒಕ್ಕೂಟದ ಪದಾಧಿಕಾರಿಗಳ ಮನವಿ
Last Updated 20 ಸೆಪ್ಟೆಂಬರ್ 2020, 13:59 IST
ಅಕ್ಷರ ಗಾತ್ರ

ಚಿಕ್ಕಬಳ್ಳಾಪುರ: ರಾಜ್ಯದಲ್ಲಿ 1995ರ ನಂತರ ಸ್ಥಾಪಿತವಾದ ಕನ್ನಡ ಮಾಧ್ಯಮ ಶಾಲಾ, ಕಾಲೇಜುಗಳನ್ನು ಅನುದಾನಕ್ಕೆ ಒಳಪಡಿಸಬೇಕು ಎಂದು ರಾಜ್ಯ ಅನುದಾನ ರಹಿತ ಕನ್ನಡ ಮಾಧ್ಯಮ ಶಾಲಾ ಕಾಲೇಜುಗಳ ಆಡಳಿತ ಮಂಡಳಿ ಹಾಗೂ ನೌಕರರ ಒಕ್ಕೂಟದ ಪದಾಧಿಕಾರಿಗಳು ಜಿಲ್ಲಾಧಿಕಾರಿ ಮೂಲಕ ಮುಖ್ಯಮಂತ್ರಿ ಅವರಿಗೆ ಮನವಿ ಸಲ್ಲಿಸಿದರು.

ಈ ವೇಳೆ ಮಾತನಾಡಿದ ಒಕ್ಕೂಟದ ಜಿಲ್ಲಾ ಘಟಕದ ಅಧ್ಯಕ್ಷ ನರಸಿಂಹಮೂರ್ತಿ, ‘ಸ್ವಾತಂತ್ರ್ಯ ಪೂರ್ವದಿಂದಲೂ ಕರ್ನಾಟಕದಲ್ಲಿ ಮಠ-ಮಾನ್ಯಗಳು, ಶಿಕ್ಷಣ ಸಂಸ್ಥೆಗಳು ಯಾವುದೇ ಪ್ರತಿ ಫಲಾಪೇಕ್ಷೆಯಿಲ್ಲದೆ ಶಾಲೆಗಳನ್ನು ಸ್ಥಾಪಿಸಿ, ಸರ್ಕಾರಕ್ಕೆ ಸರಿಸಮನಾಗಿ ಶೈಕ್ಷಣಿಕ ಸೇವೆಯಲ್ಲಿ ತೊಡಗಿಸಿಕೊಂಡಿವೆ’ ಎಂದು ಹೇಳಿದರು.

‘1986ರ ವರೆಗೆ ಸ್ಥಾಪಿತವಾದ ಅನುದಾನ ರಹಿತ ಶಾಲೆಗಳಿಗೆ ಈ ಹಿಂದೆ ಅನುದಾನ ನೀಡಲಾಗಿತ್ತು. ನಂತರ 2006 ರಲ್ಲಿ ಅಧಿಕಾರಕ್ಕೆ ಬಂದ ಸಮ್ಮಿಶ್ರ ಸರ್ಕಾರದ ಅಂದಿನ ಉಪ ಮುಖ್ಯಮಂತ್ರಿಗಳಾಗಿದ್ದ ಬಿ.ಎಸ್.ಯಡಿಯೂರಪ್ಪ ಹಾಗೂ ಶಿಕ್ಷಣ ಸಚಿವ ಬಸವರಾಜ ಹೊರಟ್ಟಿ ಅವರು 1986 ರಿಂದ 1993ರ ವರೆಗಿನ ಶಾಲಾ, ಕಾಲೇಜುಗಳಿಗೆ ಅನುದಾನ ವಿಸ್ತರಿಸಿದ್ದರು’ ಎಂದು ತಿಳಿಸಿದರು.

‘2008ರ ಬಿಜೆಪಿ ಸರ್ಕಾರದ ಅವಧಿಯಲ್ಲಿ ಶಿಕ್ಷಣ ಸಚಿವರಾಗಿದ್ದ ವಿಶ್ವೇಶ್ವರ ಹೆಗಡೆ ಕಾಗೇರಿ ಅವರು 1993 ರಿಂದ 1995ರ ವರೆಗಿನ ಶಾಲಾ, ಕಾಲೇಜುಗಳಿಗೆ ಅನುದಾನ ನೀಡಿದರು. ಆದರೆ, ಆನಂತರ ಬಂದ ಯಾವುದೇ ಸರ್ಕಾರಗಳು 1995ರ ನಂತರದ ಶಾಲೆಗಳಿಗೆ ಯಾವುದೇ ರೀತಿಯ ಅನುದಾನ ನೀಡಲಿಲ್ಲ’ ಎಂದರು.

‘ಇಂದು ಕನ್ನಡ ಮಾಧ್ಯಮ ಶಾಲೆಗಳು ಮುಚ್ಚುವ ಹಂತಕ್ಕೆ ತಲುಪಿವೆ. ಆ ಸಂಸ್ಥೆಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ಸಹಸ್ರಾರು ಶಿಕ್ಷಕ ವರ್ಗ ಬೀದಿ ಪಾಲಾಗುವ ಹಂತ ತಲುಪಿವೆ. ಆದ್ದರಿಂದ ಸರ್ಕಾರ ಕೂಡಲೇ ರಾಜ್ಯದಲ್ಲಿ 1995ರ ನಂತರ ಸ್ಥಾಪಿತವಾದ ಕನ್ನಡ ಮಾಧ್ಯಮ ಶಾಲಾ, ಕಾಲೇಜುಗಳನ್ನು ಅನುದಾನಕ್ಕೆ ಒಳಪಡಿಸಬೇಕು’ ಎಂದು ಒತ್ತಾಯಿಸಿದರು.

ಪ್ರಧಾನಿ ನರೇಂದ್ರ ಮೋದಿ ಅವರು ಇತ್ತೀಚೆಗೆ ಮಾತೃ ಭಾಷಾ ಶಿಕ್ಷಣ ಪ್ರತಿಪಾದಿಸುತ್ತಿದ್ದಾರೆ. ಆದರೆ, ದುರದೃಷ್ಟವಶಾತ್ ರಾಜ್ಯದಲ್ಲಿ ಮಾತೃ ಭಾಷೆ ಕನ್ನಡದಲ್ಲಿ ಶಿಕ್ಷಣ ನೀಡುತ್ತಿರುವ ಸಾವಿರಾರು ಶಿಕ್ಷಕರು ಕಳೆದ 25 ವರ್ಷಗಳಿಂದಲೂ ಕನಿಷ್ಠ ವೇತನಕ್ಕೆ ದುಡಿಯುತ್ತ ಬಂದಿದ್ದಾರೆ. ಆದರೂ ಸರ್ಕಾರದ ನಿರ್ಲಕ್ಷ್ಯದಿಂದ ಕನ್ನಡ ಶಾಲೆಗಳು ಇಂದು ಮುಚ್ಚುವ ಹಂತ ತಲುಪಿವೆ’ ಎಂದು ಹೇಳಿದರು.

ಒಕ್ಕೂಟದ ಜಿಲ್ಲಾ ಘಟಕದ ಕಾರ್ಯದರ್ಶಿ ಗೋಪಾಲರೆಡ್ಡಿ ಮಾತನಾಡಿ, ‘ರಾಜ್ಯದಲ್ಲಿ ಇಂದು ಕನ್ನಡ ಶಾಲೆಗಳು ಮುಚ್ಚುವ ಹಂತಕ್ಕೆ ತಲುಪಿದ್ದು, ಹೊಸದಾಗಿ ಯಾರೂ ಕನ್ನಡ ಶಾಲೆಗಳನ್ನು ತೆರೆಯುತ್ತಿಲ್ಲ. ಇರುವ ಅತ್ಯಲ್ಪ ಸಂಖ್ಯೆಯ ಕನ್ನಡ ಶಾಲೆಗಳನ್ನಾದರೂ ಉಳಿಸಿ ಆ ಮೂಲಕ ಕನ್ನಡ ಭಾಷೆಯ ಉಳಿವಿಗೆ ಸರ್ಕಾರ ಕ್ರಮ ಕೈಗೊಳ್ಳಬೇಕು’ ಎಂದು ಆಗ್ರಹಿಸಿದರು.

‘ರಾಜ್ಯ ಸರ್ಕಾರ ಕೂಡಲೇ ನಮ್ಮ ಮನವಿಗೆ ಸ್ಪಂದಿಸಬೇಕು. ಇಲ್ಲದಿದ್ದರೆ ವಿಧಾನ ಪರಿಷತ್ ಸದಸ್ಯ ಬಸವರಾಜ ಹೊರಟ್ಟಿ ಅವರ ನೇತೃತ್ವದಲ್ಲಿ ರಾಜ್ಯ ವ್ಯಾಪಿ ಹೋರಾಟ ಹಮ್ಮಿಕೊಳ್ಳಲಾಗುವುದು’ ಎಂದರು.

ಒಕ್ಕೂಟದ ಜಿಲ್ಲಾ ಘಟಕದ ಕಾರ್ಯದರ್ಶಿ ಮುನಿರಾಜು, ಪದಾಧಿಕಾರಿಗಳಾದ ಕಲ್ಪವೃಕ್ಷ ಮುನಿರಾಜು, ಶ್ರೀನಿವಾಸ್, ಚಂದ್ರೇಗೌಡ, ನಳಿನಾ' ದಿಲ್‍ಷಾದ್, ಗಂಗಾಧರ್, ಶ್ರೀರಾಮ್, ವೆಂಕಟೇಶ್, ಮಹೇಶ್, ಪ್ರಸನ್ನ ಕುಮಾರಿ, ವೆಂಕಟೇಶ್ ಮೂರ್ತಿ, ಹರೀಶ್, ಸುಬ್ರಮಣಿ ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT