ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೈಗಾರಿಕೆಗಳ ಸ್ಥಾಪನೆ ನಿಶ್ಚಿತ: ಸಚಿವ ಕೆ. ಸುಧಾಕರ್

ಕುಡಿಯುವ ನೀರಿನ ಪರೀಕ್ಷಾ ವರದಿಯನ್ನು ವೆಬ್‌ಸೈಟ್‌ಗೆ ಅಪ್‌ಲೋಡ್ ಮಾಡಲು ಸೂಚನೆ
Last Updated 9 ಜನವರಿ 2021, 3:36 IST
ಅಕ್ಷರ ಗಾತ್ರ

ಚಿಕ್ಕಬಳ್ಳಾಪುರ: ಎಲೆಕ್ಟ್ರಿಕ್ ಬೈಕ್ ಉತ್ಪಾದನೆ ಮಾಡುವ ಕೈಗಾರಿಕೆ ಸ್ಥಾಪನೆಗೆ ಕಂಪನಿಯೊಂದು ಮುಂದೆ ಬಂದಿದೆ. ಜಿಲ್ಲೆಯಲ್ಲಿ ಶೀಘ್ರವಾಗಿ ಸ್ಥಾಪನೆಗೆ ಕ್ರಮ ಕೈಗೊಳ್ಳಲಾಗುವುದು ಎಂದು ಜಿಲ್ಲಾ ಉಸ್ತುವಾರಿ ಸಚಿವ ಡಾ.ಕೆ.ಸುಧಾಕರ್ ಹೇಳಿದ್ದಾರೆ.

ಈಗಾಗಲೇ ಕಂಪನಿಯವರು ತಮ್ಮ ಜತೆ ಮಾತನಾಡಿದ್ದಾರೆ. ಅವರಿಗೆ 100 ಎಕರೆ ಭೂಮಿ ಬೇಕಾಗಿದೆ. ಇದಲ್ಲದೇ ಕೃಷಿ ಉತ್ಪನ್ನ ಆಧಾರಿತ ಕೈಗಾರಿಕೆಗಳ ಸ್ಥಾಪನೆಗೆ ಕನಿಷ್ಠ 300 ಎಕರೆ ಭೂಮಿ ಸಿದ್ಧಗೊಳಿಸುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿದರು.

ಶುಕ್ರವಾರ ಜಿಲ್ಲಾಡಳಿತದಲ್ಲಿ ಜಿಲ್ಲಾ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ಕೆಲ ಫಾರ್ಮಾ ಕಂಪನಿಗಳು ಮಾತುಕತೆ ನಡೆಸುತ್ತಿವೆ. ಈ ವರ್ಷ ಶತಾಯಗತಾಯ ಕೈಗಾರಿಕೆಗಳನ್ನು ತರಲೇಬೇಕು ಎಂಬ ಗುರಿ ಹಾಕಿಕೊಳ್ಳಲಾಗಿದೆ. ಕಾಮಗಾರಿ ಪೂರ್ಣಗೊಳಿಸುವಲ್ಲಿ ವಿಳಂಬ ಧೋರಣೆ ಅನುಸರಿಸುತ್ತಿರುವ ಕೆಆರ್‌ಐಡಿಎಲ್ ಅಧಿಕಾರಿಗಳ ವರ್ತನೆಗೆ ತೀವ್ರವಾಗಿ ತರಾಟೆಗೆ ತೆಗೆದುಕೊಂಡ ಸಚಿವರು, ಮಾರ್ಚ್ ಅಂತ್ಯದೊಳಗೆ ಬಾಕಿ ಇರುವ ಕಾಮಗಾರಿಗಳನ್ನು ಪೂರ್ಣಗೊಳಿಸಬೇಕು. ಇಲ್ಲವಾದರೆ ಕ್ರಮ ಕೈಗೊಳ್ಳಬೇಕಾಗುತ್ತದೆ.

ಗ್ರಾಮ ವಿಕಾಸ ಯೋಜನೆಯಡಿ 51 ಕಾಮಗಾರಿಗಳ ಯೋಜನೆ ಬದಲಾವಣೆ ಮಾಡಬೇಕಿದೆ ಎಂಬ ಉತ್ತರದಿಂದ ಕೆಂಡಾಮಂಡಲರಾದ ಸಚಿವರು, ಈಗಾಗಲೇ ಸೂಚನೆ ನೀಡಿರುವಂತೆ ಕಾಮಗಾರಿ ಪೂರ್ಣಗೊಳಿಸುವಂತೆ ಸೂಚಿಸಿದರು.

ಸಣ್ಣ ನೀರಾವರಿ ಇಲಾಖೆಯಡಿ ಅಮಾನಿಕೆರೆ ತುಂಬಿಸುವ ಯೋಜನೆ ಮಂದಗತಿಯಲ್ಲಿ ಸಾಗಿದೆ. ಕಲ್ವರ್ಟ್ ಕೆಲಸ ಬೇಗ ಮುಗಿಸಿ ತ್ವರಿತಗತಿಯಲ್ಲಿ ಕೆರೆ ತುಂಬಿಸಬೇಕು ಎಂದು ಸಚಿವರು ತಾಕೀತು ಮಾಡಿದರು.

ಅನುಷ್ಠಾನದಲ್ಲಿ ಒಂಬತ್ತು ಮಾನದಂಡಗಳ ಆಧಾರದಲ್ಲಿ ಜಿಲ್ಲೆ ರಾಜ್ಯಕ್ಕೆ ಎರಡನೇ ಸ್ಥಾನ ಪಡೆದಿರುವುದಕ್ಕೆ ಸಚಿವರು ಹರ್ಷ ವ್ಯಕ್ತಪಡಿಸಿದರು. ಮುಂದಿನ ತ್ರೈಮಾಸಿಕದಲ್ಲಿ ಮೊದಲ ಸ್ಥಾನಕ್ಕೆ ಬರುವಂತೆ ಕೆಲಸ ಮಾಡಬೇಕು. ಹಿಂದೆ ಜಿಲ್ಲೆಯಲ್ಲಿ ನರೇಗಾ ಯೋಜನೆಗೆ ಒತ್ತು ನೀಡಿರಲಿಲ್ಲ. ಆ ಧೋರಣೆ ಬದಲಾಗಬೇಕು. ಮುಂದೆ 90 ಲಕ್ಷ ಮಾನವ ದಿನಗಳ ಸೃಜನೆಗೆ ಯೋಜನೆ ರೂಪಿಸುವ ಮೂಲಕ ಮೊದಲ ಸ್ಥಾನ ಪಡೆಯಬೇಕು ಎಂದು ಸೂಚನೆ ನೀಡಿದರು.

ಈಗಲೂ ಕುಡಿಯುವ ನೀರು ಪೂರೈಕೆಗೆ ಚಿಂತಾಮಣಿ, ಶಿಡ್ಲಘಟ್ಟ ಮತ್ತು ಚಿಕ್ಕಬಳ್ಳಾಪುರ ತಾಲ್ಲೂಕಿನ ಅನೇಕ ಕಡೆ ಖಾಸಗಿ ಕೊಳವೆಬಾವಿ ಮತ್ತು ಟ್ಯಾಂಕರ್ ಅನ್ನು ಅವಲಂಬಿಸಲಾಗಿದೆ. ಟಾಸ್ಕ್ ಫೋರ್ಸ್ ನಿರ್ದೇಶನದಿಂದ ಕೈಗೊಂಡ ಕೆಲಸಗಳಿಗೆ ಬಾಕಿಯಿರುವ ಹಣವನ್ನು ಬಿಡುಗಡೆ ಮಾಡಿಸುವುದಾಗಿ ಭರವಸೆ ನೀಡಿದರು.

ನಿಯಮಿತವಾಗಿ ಕುಡಿಯುವ ನೀರಿನ ಪರೀಕ್ಷೆ ಮಾಡಬೇಕು. ಅದರ ವರದಿಯನ್ನು ವೆಬ್‌ಸೈಟ್‌ಗೆ ಅಪ್‌ಲೋಡ್ ಮಾಡಬೇಕು. ಎಲ್ಲಾ ಸರ್ಕಾರಿ ಕೊಳವೆ ಬಾವಿಗಳಿಗೆ ಇಂಗುಗುಂಡಿ ನಿರ್ಮಿಸಬೇಕು. ನಂತರ ಖಾಸಗಿ ಕೊಳವೆ ಬಾವಿಗಳಿಗೆ ಇಂಗುಗುಂಡಿ ನಿರ್ಮಿಸುವ ಕೆಲಸ ಆಗಬೇಕು ಎಂದು ನಿರ್ದೇಶನ ನೀಡಿದರು.
ಬಹುಗ್ರಾಮ ಕುಡಿಯುವ ನೀರಿನ ಯೋಜನೆಯಡಿ ಮಂಡಿಕಲ್ಲು ಯೋಜನೆ ಡಿಪಿಆರ್ ಸಿದ್ಧಪಡಿಸುವ ಅಂತಿಮ ಹಂತದಲ್ಲಿದೆ. ಉಳಿದ ಮೂರು ಯೋಜನೆಗಳು ನಾನಾ ಹಂತದಲ್ಲಿದ್ದು ಜೂನ್ ಅಂತ್ಯದೊಳಗೆ ಕಾಮಗಾರಿ ಪೂರ್ಣಗೊಳಿಸುವಂತೆ ಸೂಚನೆ ನೀಡಿದರು.

ಜಿಲ್ಲೆಯ ಐದು ನದಿಗಳ ಪುನರುಜ್ಜೀವನ ಯೋಜನೆಯನ್ನು ನರೇಗಾ ಅಡಿ ತೆಗೆದುಕೊಳ್ಳುವ ಸಾಧ್ಯತೆಗಳ ಬಗ್ಗೆ ಪರಿಶೀಲಿಸಲು ಜಿಲ್ಲಾ ಪಂಚಾಯತಿ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಅವರಿಗೆ ಆದೇಶ ನೀಡಿದರು.

ಚಿಂತಾಮಣಿಗೆ ಕುಡಿಯುವ ನೀರು ಒದಗಿಸುವ ಪೈಪ್ ಮೂಲಕ ನೀರು ಒದಗಿಸುವ ಯೋಜನೆಗೆ ಯಾರಾದರೂ ಅಡ್ಡಿ ಮಾಡಿದರೆ ಕಾನೂನು ಕ್ರಮ ಜರುಗಿಸಬೇಕು. ಮೊದಲ ಹಂತದಲ್ಲಿ ಸಾಧ್ಯವಾದಷ್ಟು ಗ್ರಾಮಗಳಿಗೆ ನೀರು ಪೂರೈಸಲಾಗುವುದು. ಈ ವಿಷಯದಲ್ಲಿ ರಾಜಕೀಯ ಬೆರೆಸಬಾರದು ಎಂದು ಮನವಿ ಮಾಡಿದರು.

ಈ ಬಾರಿ ವಾಡಿಕೆಗಿಂತ ಶೇ 31ರಷ್ಟು ಹೆಚ್ಚು ಮಳೆಯಾಗಿದೆ. ರಸಗೊಬ್ಬರ ಕೊರತೆ ಎದುರಾಗದಂತೆ ನೋಡಿಕೊಳ್ಳಬೇಕು. 1.15 ಲಕ್ಷ ರೈತ ಕುಟುಂಬಗಳಿಗೆ ಪ್ರಧಾನಮಂತ್ರಿ ಕಿಸಾನ್ ಯೋಜನೆಯಡಿ ಬ್ಯಾಂಕ್ ಖಾತೆಗಳಿಗೆ ಹಣ ತುಂಬಲಾಗಿದೆ. ಕಂದಾಯ ಮತ್ತು ಕೃಷಿ ಇಲಾಖೆ ನಡುವೆ ಸಮನ್ವಯ ಕೊರತೆಯಿಂದ ಪೌತಿ ಖಾತೆಗಳ ವಿಲೇವಾರಿ ಕೊರತೆಯಿಂದ ಇನ್ನೂ ಅರ್ಧದಷ್ಟು ರೈತರಿಗೆ ಯೋಜನೆ ಲಾಭ ಸಿಗದಂತಾಗಿದೆ. ಇದನ್ನು ಶೀಘ್ರವಾಗಿ ಸರಿಪಡಿಸಬೇಕು ಎಂದು ಸೂಚನೆ ನೀಡಿದರು.

ಇದೇ ವೇಳೆ ಶಾಸಕ ಜೆ.ಕೃಷ್ಣಾರೆಡ್ಡಿ, ಎಸ್.ಎನ್.ಸುಬ್ಬಾರೆಡ್ಡಿ, ವಿಧಾನಪರಿಷತ್ ಸದಸ್ಯ ಚಿದಾನಂದ.ಎಂ ಗೌಡ, ಜಿಲ್ಲಾ ಪಂಚಾಯಿತಿ ಅಧ್ಯಕ್ಷ ಚಿಕ್ಕನರಸಿಂಹಯ್ಯ, ಜಿಲ್ಲಾಧಿಕಾರಿ ಆರ್.ಲತಾ, ಜಿಲ್ಲಾ ಪಂಚಾಯತಿ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಶಿವಶಂಕರ್, ಎಸ್ಪಿ ಮಿಥುನ್ ಹಾಗೂ ಇತರೆ ಅಧಿಕಾರಿಗಳು ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT