ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪ್ರತಿಯೊಬ್ಬರಿಗೂ ಕಾನೂನಿನ ಅರಿವು ಅಗತ್ಯ

ಸಿದ್ದರಾಮಯ್ಯ ಕಾನೂನು ಕಾಲೇಜಿನಲ್ಲಿ ಕಾನೂನು ಅರಿವು ಕಾರ್ಯಕ್ರಮ
Last Updated 12 ನವೆಂಬರ್ 2019, 17:12 IST
ಅಕ್ಷರ ಗಾತ್ರ

ಚಿಕ್ಕಬಳ್ಳಾಪುರ: ‘ಕಾನೂನಿನ ಮುಂದೆ ನಾವೆಲ್ಲರೂ ಒಂದೇ ಎಂಬ ಮನೋಭಾವನೆ ಬೆಳೆಸಿಕೊಂಡಾಗ ಮಾತ್ರ ಸಮಾಜದಲ್ಲಿ ಪ್ರತಿಯೊಬ್ಬರೂ ಸಮಾನತೆಯಿಂದ ಬಾಳಬಹುದು’ ಎಂದು ಹಿರಿಯ ಸಿವಿಲ್ ನ್ಯಾಯಾಧೀಶ ಎಚ್.ದೇವರಾಜ್ ಅಭಿಪ್ರಾಯಪಟ್ಟರು.

ರಾಷ್ಟ್ರೀಯ ಕಾನೂನು ಸೇವೆಗಳ ದಿನಾಚರಣೆ ಅಂಗವಾಗಿ ನಗರದ ಸಿದ್ದರಾಮಯ್ಯ ಕಾನೂನು ಕಾಲೇಜಿನಲ್ಲಿ ಮಂಗಳವಾರ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ವಕೀಲರ ಸಂಘ ಸಹಯೋಗದಲ್ಲಿ ಕಾನೂನು ಅರಿವು ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

‘ಸಂವಿಧಾನದಲ್ಲಿ ಪ್ರತಿಯೊಬ್ಬರಿಗೂ ಮೂಲಭೂತ ಹಕ್ಕುಗಳು ಮತ್ತು ಕರ್ತವ್ಯಗಳನ್ನು ಅಳವಡಿಸಲಾಗಿದೆ. ಎಲ್ಲ ಕಾನೂನುಗಳನ್ನು ತಿಳಿದುಕೊಳ್ಳಲು ಸಾಧ್ಯವಾಗದಿದ್ದರೂ ನಮ್ಮ ದೈನಂದಿನ ಜೀವನ ಯಾವುದೇ ಅಡೆ ತಡೆಯಿಲ್ಲದೇ ನೆಮ್ಮದಿಯಿಂದ ಸಾಗಲು ಕಾನೂನುಗಳ ಅರಿವು ಪಡೆದುಕೊಳ್ಳಬೇಕು’ ಎಂದು ಹೇಳಿದರು.

‘ಜಗತ್ತಿನಲ್ಲಿ ಕಾನೂನುಗಳು ಇಲ್ಲದೆ ಇದ್ದಿದ್ದರೆ ಯಾರೊಬ್ಬರು ಉತ್ತಮ ಜೀವನ ಸಾಧಿಸಲು ಸಾಧ್ಯವಿಲ್ಲ. ಕಾನೂನುಗಳು ಮನುಷ್ಯನ ಬದುಕಿಗೆ ಮಾರ್ಗದರ್ಶಿಯಾಗಿವೆ. ಅನೇಕರು ಗೊತ್ತಿದ್ದು ನಿರ್ಲಕ್ಷ್ಯ ಮಾಡಿ ತೊಂದರೆ ಅನುಭವಿಸುತ್ತಾರೆ. ಇನ್ನೂ ಕೆಲವರು ತಿಳಿವಳಿಕೆ ಇಲ್ಲದೆ ತಪ್ಪಿಗೆ ಸಿಲುಕಿ ಶಿಕ್ಷೆ ಅನುಭವಿಸುತ್ತಾರೆ. ಹೀಗಾಗಿ ಸಮಾಜದ ವ್ಯವಸ್ಥೆ ಶುದ್ಧವಾಗಿರಲು ಪ್ರತಿಯೊಬ್ಬರು ಕಾನೂನನ್ನು ತಿಳಿಯಬೇಕು. ಅಲ್ಲದೆ ಅದನ್ನು ಪಾಲನೆ ಮಾಡಬೇಕು’ ಎಂದು ತಿಳಿಸಿದರು.

‘ಶೋಷಿತರು, ಹಿಂದುಳಿದವರು, ಅಂಗವಿಕಲರು, ನಿರಾಶ್ರಿತರು, ಅನ್ಯಾಯಕ್ಕೆ ಒಳಗಾದ ಮಹಿಳೆಯರು, ಮಕ್ಕಳು, ಆರ್ಥಿಕವಾಗಿ ಹಿಂದುಳಿದವರಿಗೆ ಕಾನೂನು ಸೇವೆಗಳ ಪ್ರಾಧಿಕಾರವು ಉಚಿತ ಕಾನೂನು ಸೇವೆಯ ನೆರವು ಒದಗಿಸಲಾಗುತ್ತಿದೆ ಇದನ್ನು ಸದುಪಯೋಗ ಪಡಿಸಿಕೊಳ್ಳಬೇಕು’ ಎಂದರು.

ವಕೀಲ ಕೆ.ಸಿ.ಪ್ರಕಾಶ್ ಮಾತನಾಡಿ, ‘ದೇಶದ ಅಭಿವೃದ್ಧಿಯಲ್ಲಿ ಸಂವಿಧಾನದ ಪಾತ್ರ ಮುಖ್ಯವಾಗಿದೆ. ಮೂಲಭೂತ ಹಕ್ಕುಗಳು ಮತ್ತು ಕರ್ತವ್ಯಗಳು, ರಾಜ್ಯ ನಿರ್ದೇಶಕ ತತ್ವಗಳನ್ನು ಪಾಲನೆ ಮಾಡುವುದರಲ್ಲಿ ಜನಸಾಮಾನ್ಯರ ಪಾತ್ರ ಹೆಚ್ಚಿದೆ. ಸಂವಿಧಾನದ ಅನುಷ್ಠಾನದಲ್ಲಿ ಸರ್ಕಾರ ಮತ್ತು ಪ್ರಜೆಗಳು ಪರಸ್ಪರ ಕೈಜೋಡಿಸುವ ಅಗತ್ಯವಿದೆ’ ಎಂದು ಹೇಳಿದರು.

ವಕೀಲ ಕೆ.ನಾರಾಯಣಮೂರ್ತಿ ಮಾತನಾಡಿ, ‘ಸಾಮಾಜಿಕ, ರಾಜಕೀಯ ಆರ್ಥಿಕವಾಗಿ ಹಿಂದುಳಿದಿರುವಂತವರಿಗೆ ಸಂವಿಧಾನದಲ್ಲಿ ಮೀಸಲಾತಿ ಕಲ್ಪಿಸಿ ಸಮಾಜದಲ್ಲಿ ಅಸಮಾನತೆ ಹೋಗಲಾಡಿಸುವ ಕೆಲಸ ಮಾಡಲಾಗುತ್ತಿದೆ. ಇವತ್ತು ರಾಜಕೀಯದಲ್ಲಿ ಮೀಸಲಾತಿ ಇಲ್ಲದಿದ್ದರೆ ಎಲ್ಲಾ ಕ್ಷೇತ್ರಗಳು ಬಲಾಢ್ಯರ ಪಾಲಾಗುತ್ತಿದ್ದವು. ಆದರೆ ಈ ದಿನ ಮೀಸಲಾತಿಯಿಂದ ಬಡವರು, ಶೋಷಿತರು ಸಹ ರಾಜಕೀಯದಲ್ಲಿ ಬೆಳೆಯುವ ಅವಕಾಶಗಳು ಬಂದಿವೆ’ ಎಂದು ಹೇಳಿದರು.

ಸಿದ್ದರಾಮಯ್ಯ ಕಾನೂನು ಕಾಲೇಜಿನ ಪ್ರಾಂಶುಪಾಲ ಸಿ.ಎಚ್.ಸುರೇಶ್ ಮಾತನಾಡಿ, ‘ಎಲ್ಲ ಧರ್ಮ ಗ್ರಂಥಗಳಿಗಿಂತ ಸಂವಿಧಾನ ಅತ್ಯಂತ ಶ್ರೇಷ್ಠವಾದದ್ದು. ಆದ್ದರಿಂದ ವಿದ್ಯಾರ್ಥಿಗಳು ಸಂವಿಧಾನ ಪುಸ್ತಕವನ್ನು ಕೊಂಡು ಓದಬೇಕು. ಸಂವಿಧಾನದಲ್ಲಿ ಮೀಸಲಾತಿ ಪರಿಕಲ್ಪನೆಯಿಂದ ಹಿಂದುಳಿದ ವರ್ಗದವರು, ಅಲ್ಪಸಂಖ್ಯಾತರು, ದಲಿತರ ಬದುಕಿನಲ್ಲಿ ಅಗಾಧ ಬದಲಾವಣೆ ಕಾಣುವಂತಾಗಿದೆ’ ಎಂದರು.

ಕಾಲೇಜಿನ ಸಂಪತ್ ಕುಮಾರ್, ಮುನಿರಾಜು, ರೋಜಾ ಸೇರಿದಂತೆ ಕಾಲೇಜಿನ ಉಪನ್ಯಾಸಕ, ವಿದ್ಯಾರ್ಥಿಗಳು ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT