ಬುಧವಾರ, ಜುಲೈ 28, 2021
29 °C
ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಜತೆ ಮಾತಕತೆ; ಜಿಲ್ಲಾ ರಾಜಕೀಯದಲ್ಲಿ ಚರ್ಚೆ

ಕಾಂಗ್ರೆಸ್‌ನತ್ತ ಮುಖ ಮಾಡಿದರೇ ಚಿಂತಾಮಣಿ ಮಾಜಿ ಶಾಸಕ ಸುಧಾಕರ್?

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಚಿಕ್ಕಬಳ್ಳಾಪುರ: ಜಿಲ್ಲೆಯಲ್ಲಿ ತೀವ್ರ ರಾಜಕೀಯ ಜಿದ್ದಾಜಿದ್ದಿನ ಕ್ಷೇತ್ರ ಚಿಂತಾಮಣಿ. ಶಾಸಕ ಎಂ.ಕೃಷ್ಣಾರೆಡ್ಡಿ ಮತ್ತು ಮಾಜಿ ಶಾಸಕ ಡಾ.ಎಂ.ಸಿ.ಸುಧಾಕರ್ ಅವರ ನಡುವೆಯೇ ತಾಲ್ಲೂಕಿನ ರಾಜಕೀಯ ತಿರುಗುತ್ತದೆ.

ಈಗ ಮಾಜಿ ಶಾಸಕರು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಅವರನ್ನು ಭೇಟಿ ಮಾಡಿ ಮಾತುಕತೆ ನಡೆಸಿರುವುದು ಚಿಂತಾಮಣಿ ಅಷ್ಟೇ ಅಲ್ಲ ಜಿಲ್ಲಾ ರಾಜಕೀಯದಲ್ಲಿಯೂ ಚರ್ಚೆಯ ವಿಷಯವಾಗಿದೆ. ತಮ್ಮ ತಂದೆ ಎ.ಚೌಡರೆಡ್ಡಿ ಅವರ ತರುವಾಯ ರಾಜಕೀಯಕ್ಕೆ ಕಾಲಿಟ್ಟ ಸುಧಾಕರ್ 2004 ಮತ್ತು 2008ರಲ್ಲಿ ಕಾಂಗ್ರೆಸ್ ಪಕ್ಷದಿಂದ ಶಾಸಕರಾದರು. 2013 ಮತ್ತು 18ರಲ್ಲಿ ಪಕ್ಷೇತರರಾಗಿ ಸ್ಪರ್ಧಿಸಿ ಸೋಲು ಅನುಭವಿಸಿದ್ದರು. ಆದರೆ ಈಗ ಮತ್ತೆ ಕೆಪಿಸಿಸಿ ಅಧ್ಯಕ್ಷರನ್ನು ಭೇಟಿ ಮಾಡಿರುವುದು ಸುಧಾಕರ್ ಮತ್ತೆ ಕಾಂಗ್ರೆಸ್ ತೆಕ್ಕೆ ಸೇರಲಿದ್ದಾರೆಯೇ ಎನ್ನುವ ಸುದ್ದಿಗೆ ಕಾರಣವಾಗಿದೆ.

ಕಳೆದ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿಯ ಅಭ್ಯರ್ಥಿಯಾಗಿದ್ದ ಮುನಿಸ್ವಾಮಿ ಅವರ ಪರ ಮತಕೇಳಿದ್ದರು. ತಮ್ಮ ರಾಜಕೀಯ ವಿರೋಧಿ ಕೆ.ಎಚ್.ಮುನಿಯಪ್ಪ ಅವರನ್ನು ಸೋಲಿಸುವುದೇ ಅವರ ಏಕೈಕ ಅಜೆಂಡಾ ಆಗಿತ್ತು. ಸುಧಾಕರ್ ಬಿಜೆಪಿ ಸೇರುವರು ಎನ್ನುವ ಸುದ್ದಿಯೂ ಹರಿದಾಡುತ್ತಿತ್ತು. 

ಗ್ರಾಮ ಪಂಚಾಯಿತಿ, ಹಾಲು ಉತ್ಪಾದಕರ ಸಹಕಾರ ಸಂಘಗಳ ಚುನಾವಣೆಗಳು ಹೀಗೆ ಚಿಂತಾಮಣಿ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ನಡೆಯುತ್ತಿದ್ದ ಎಲ್ಲ ಚುನಾವಣೆಗಳಲ್ಲಿಯೂ ತಮ್ಮ ಬೆಂಬಲಿಗರನ್ನು ಪಕ್ಷೇತರವಾಗಿಯೇ ಕಣಕ್ಕಿಳಿಸುತ್ತಿದ್ದರು. ಜಿಲ್ಲಾ ಮತ್ತು ತಾಲ್ಲೂಕು ಪಂಚಾಯಿತಿ ಚುನಾವಣೆಯ ಹೊಸ್ತಿಲಿನಲ್ಲಿ ಸುಧಾಕರ್ ಕೆಪಿಸಿಸಿ ಅಧ್ಯಕ್ಷರನ್ನು ಭೇಟಿ ಮಾಡಿರುವುದು ಜಿಲ್ಲೆಯಲ್ಲಿ ರಾಜಕೀಯ ಸಂಚಲನಕ್ಕೂ ಕಾರಣವಾಗಿದೆ.

ಈ ಭೇಟಿಯ ವೇಳೆ ಗೌರಿಬಿದನೂರು ಶಾಸಕ ಶಿವಶಂಕರರೆಡ್ಡಿ, ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಕೇಶವರೆಡ್ಡಿ ಹಾಗೂ ಉಮಾಶ್ರೀ ಹಾಜರಿದ್ದರು. 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು