ಶುಕ್ರವಾರ, ಜುಲೈ 30, 2021
23 °C
ರೈತಾಪಿ ವರ್ಗದಲ್ಲಿ ಹರುಷ ತಂದ ಆರಿದ್ರ ವರ್ಷಧಾರೆ

ಜಿಲ್ಲೆಯಲ್ಲಿ ಚುರುಕುಗೊಂಡ ಬಿತ್ತನೆ ಕಾರ್ಯ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಚಿಕ್ಕಬಳ್ಳಾಪುರ: ಜಿಲ್ಲೆಯಲ್ಲಿ ಕಳೆದ ಕೆಲ ದಿನಗಳಲ್ಲಿ ಆರ್ಭಟಿಸಿದ ಆರಿದ್ರ ಮಳೆ ಮುಂಗಾರು ಬಿತ್ತನೆಗೆ ಉತ್ತಮ ಹದ ಉಂಟು ಮಾಡಿದ್ದು, ಜಿಲ್ಲೆಯಾದ್ಯಂತ ಬಿತ್ತನೆ ಕಾರ್ಯ ಚುರುಕುಗೊಂಡು ರೈತಾಪಿ ವರ್ಗದ ಮೊಗದಲ್ಲಿ ಸಂತಸ ಮೂಡಿದೆ.

ಮುಂಗಾರಿನ ಆರಂಭದಲ್ಲಿ ಮೃಗಶಿರ ಮಳೆ ನಿರೀಕ್ಷಿತ ಪ್ರಮಾಣದಲ್ಲಿ ಸುರಿಯದೇ ಮತ್ತೆ ಬರದ ಭೀತಿಯಲ್ಲಿ ಆಕಾಶದತ್ತ ದೃಷ್ಟಿ ನೆಟ್ಟಿದ್ದ ರೈತರಿಗೆ ಜೂನ್ 21 ರಿಂದ ಪ್ರವೇಶವಾದ ಆರಿದ್ರ ಮಳೆ ಆಗಾಗ ಅಬ್ಬರಿಸಿ, ಕೆರೆ, ಕಟ್ಟೆಗಳಲ್ಲಿ ನೀರು ಕಾಣುವಂತೆ ಮಾಡಿದ್ದು ಕೃಷಿಕರಲ್ಲಿ ಸಮಾಧಾನ ತಂದಿದೆ.

ಜೂನ್‌ನಲ್ಲಿ ಅಲ್ಪಸ್ವಲ್ಪ ಸುರಿದ ಮಳೆಗೆ ಬಿತ್ತನೆಗೆ ಭೂಮಿ ಸಿದ್ಧಗೊಳಿಸಿ, ಉತ್ತಮ ಮಳೆಗೆ ಎದುರು ನೋಡುತ್ತಿದ್ದ ರೈತರಿಗೆ ಆರಿದ್ರ ಮಳೆಯ ಉತ್ತಮ ಪ್ರವೇಶ ಮುದಗೊಳಿಸಿದೆ. ಜಿಲ್ಲೆಯಲ್ಲಿ ಜೂನ್ ತಿಂಗಳಲ್ಲಿ ವಾಡಿಕೆಯಂತೆ 172.2 ಮಿ.ಮೀ ಮಳೆಯಾಗಬೇಕಿತ್ತು. ಕಳೆದ ವರ್ಷದ ಜೂನ್‌ನಲ್ಲಿ 187.1 ಮಿ.ಮೀ ಮಳೆಯಾಗಿತ್ತು. ಈ ಬಾರಿ ಅದರ ಪ್ರಮಾಣ 223.9ಕ್ಕೆ ಏರಿಕೆಯಾಗಿದೆ.

ಜೂನ್‌ನಲ್ಲಿ ವಾಡಿಕೆಯಿಂದ ಶೇ 30 ರಷ್ಟು ಮಳೆ ಜಿಲ್ಲೆಯಲ್ಲಿ ಹೆಚ್ಚೇ ಸುರಿದಿದೆ. ಹೀಗಾಗಿ, ಜಲಮೂಲಗಳಲ್ಲಿ ನೀರು ಕಾಣುವಂತಾಗಿದೆ. ತಂಪಾದ ಭೂಮಿಯಲ್ಲಿ ಸದ್ಯ ಜಿಲ್ಲೆಯಾದ್ಯಂತ ರಾಗಿ, ತೊಗರಿ, ನೆಲಗಡಲೆ, ಮುಸುಕಿನಜೋಳದ ಬಿತ್ತನೆ ಕಾರ್ಯ ಭರದಿಂದ ನಡೆದಿದೆ.

ಜಿಲ್ಲೆಯಲ್ಲಿ 1.40 ಲಕ್ಷ ಹೆಕ್ಟೇರ್ ಮುಂಗಾರು ಬಿತ್ತನೆ ಪ್ರದೇಶವಿದೆ. ಈ ಪೈಕಿ ಈಗಾಗಲೇ 292 ಹೆಕ್ಟೇರ್‌ ನೀರಾವರಿ ಪ್ರದೇಶ,  4,518 ಹೆಕ್ಟೇರ್ ಖುಷ್ಕಿ ಪ್ರದೇಶ ಸೇರಿದಂತೆ ಒಟ್ಟು 4,810 ಹೆಕ್ಟೇರ್‌ ಪ್ರದೇಶ ಬಿತ್ತನೆಯಾಗಿದೆ. ಜಿಲ್ಲೆಯಲ್ಲಿ ಇನ್ನೂ ಶೇ 96.59 ರಷ್ಟು ಪ್ರದೇಶದಲ್ಲಿ ಮುಂಗಾರು ಬಿತ್ತನೆಯಾಗಬೇಕಿದೆ. ಅದೀಗ ಜೋರಾಗಿ ನಡೆಯುತ್ತಿದೆ.

ಈವರೆಗೆ ಜಿಲ್ಲೆಯಲ್ಲಿ 1,699 ಹೆಕ್ಟೇರ್ ನೆಲಗಡಲೆ, 1,934 ಹೆಕ್ಟೇರ್ ಮುಸುಕಿನಜೋಳ, 908 ಹೆಕ್ಟೇರ್ ತೊಗರಿ ಮತ್ತು 169 ಹೆಕ್ಟೇರ್ ಪ್ರದೇಶದಲ್ಲಿ ರಾಗಿ ಬಿತ್ತನೆಯಾಗಿದೆ. ಜುಲೈ 15ರ ವರೆಗೆ ನೆಲಗಡಲೆ, ತೊಗರಿ ಬಿತ್ತನೆ ಮಾಡಲು ಅವಕಾಶವಿದೆ. ಮುಸುಕಿ ಜೋಳ, ರಾಗಿ ಯಾವಾಗ ಬೇಕಾದರೂ ಬಿತ್ತನೆ ಮಾಡಬಹುದು ಎನ್ನುತ್ತಾರೆ ಕೃಷಿ ಇಲಾಖೆ ಅಧಿಕಾರಿಗಳು.

ಈಗಾಗಲೇ ರೈತ ಸಂಪರ್ಕ ಕೇಂದ್ರಗಳಲ್ಲಿ ಬಿತ್ತನೆ ಬೀಜ, ರಸಗೊಬ್ಬರ ಖರೀದಿಸಿ ದಾಸ್ತಾನು ಮಾಡಿಕೊಂಡವರು ಈಗ ಬಿತ್ತನೆ ಮುಂದಾಗಿದ್ದರೆ, ಮಳೆಯನ್ನು ಎದುರು ನೋಡುತ್ತ ಇದ್ದವರು ಇದೀಗ ಬೀಜ, ಗೊಬ್ಬರಕ್ಕಾಗಿ ಕೇಂದ್ರಗಳತ್ತ ಧಾವಿಸುತ್ತಿದ್ದಾರೆ. ಜಿಲ್ಲೆಯಲ್ಲಿ ಎಲ್ಲೂ ಬೀಜ, ಗೊಬ್ಬರದ ಕೊರತೆಯಾದ ವರದಿಗಳಿಲ್ಲ.

‘ಜಿಲ್ಲೆಯಲ್ಲಿ ಈ ವರ್ಷವೂ ಜೂನ್‌ನಲ್ಲಿ ವಾಡಿಕೆಗಿಂತ ಹೆಚ್ಚು ಮಳೆ ಸುರಿದಿದೆ. ಉತ್ತಮ ಮಳೆಯಾದ ಕಾರಣ ಇದೀಗ ಬಿತ್ತನೆ ಕಾರ್ಯ ಚುರುಕುಗೊಂಡಿದೆ. ಕಳೆದ ವರ್ಷದ ರೀತಿಯಲ್ಲಿಯೇ ಈ ಬಾರಿಯೂ ಉತ್ತಮ ರೀತಿಯಲ್ಲಿ ಬೆಳೆ ಬೆಳೆಯಲಿವೆ ಎಂಬ ನಿರೀಕ್ಷೆ ಇದೆ’ ಎನ್ನುತ್ತಾರೆ ಕೃಷಿ ಇಲಾಖೆ ಜಂಟಿ ನಿರ್ದೇಶಕಿ ಎಲ್.ರೂಪಾ.

‘ಮಳೆ ವಿಳಂಬದ ಕಾರಣಕ್ಕೆ ಕುಂಠಿತಗೊಂಡಿದ್ದ ತೊಗರಿ ಮತ್ತು ನೆಲಗಡಲೆ ಬಿತ್ತನೆ ಕಾರ್ಯ ಇದೀಗ ಪುನಃ ಆರಂಭಗೊಂಡಿದೆ.  ರೈತರು ನೆಲಗಡಲೆಯನ್ನು ಕೂರಿಗೆಯಲ್ಲಿ, ತೊಗರಿಯನ್ನು ಊರುಗಾಳು ಪದ್ಧತಿಯಲ್ಲಿ ಬಿತ್ತುವುದು ಒಳ್ಳೆಯದು. ಇದರಿಂದ ಹೆಚ್ಚಿನ ಇಳುವರಿ

ಅಂಕಿಅಂಶಗಳು

13,430 ಹೆಕ್ಟೇರ್

ನೀರಾವರಿ ಪ್ರದೇಶ

1,27,470 ಹೆಕ್ಟೇರ್

ಖುಷ್ಕಿ ಪ್ರದೇಶ

1,40,900 ಹೆಕ್ಟೇರ್

ಜಿಲ್ಲೆಯ ಒಟ್ಟು ಬಿತ್ತನೆ ಪ್ರದೇಶ

4,810 ಹೆಕ್ಟೇರ್

ಬಿತ್ತನೆಯಾಗಿರುವ ಪ್ರದೇಶ

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು