ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹಿರೇನಾಗವಲ್ಲಿ ಸ್ಫೋಟ: ನಿರ್ಮಾಣ ಕ್ಷೇತ್ರಕ್ಕೆ ಪೆಟ್ಟು

ಎಂ ಸ್ಯಾಂಡ್ ಕೊರತೆ; ಮಧ್ಯಮ ವರ್ಗಗಳ ಜನರಿಗೆ ಹೊರೆ
Last Updated 2 ಮಾರ್ಚ್ 2021, 5:00 IST
ಅಕ್ಷರ ಗಾತ್ರ

ಚಿಕ್ಕಬಳ್ಳಾಪುರ: ಜಿಲ್ಲೆಯ ಹಿರೇನಾಗವಲ್ಲಿ ಬಳಿ ಜಿಲೆಟಿನ್ ಸ್ಫೋಟಗೊಂಡು ಆರು ಮಂದಿ ಬಲಿಯಾದ ಪ್ರಕರಣದ ನಂತರ ಚಿಕ್ಕಬಳ್ಳಾಪುರ ಸೇರಿದಂತೆ ಬೆಂಗಳೂರಿನ ಆಸುಪಾಸಿನ ಪ್ರದೇಶಗಳಲ್ಲಿ ಕಟ್ಟಡ ನಿರ್ಮಾಣ ಕ್ಷೇತ್ರಕ್ಕೆ ಪೆಟ್ಟು ಬಿದ್ದಿದೆ.

ನಿಯಮಗಳು ಬಿಗಿಯಾದ ಕಾರಣ ಕಳ್ಳದಾರಿಗಳು ಬಂದ್ ಆಗಿವೆ. ಈ ಪರಿಣಾಮ ಎಂ ಸ್ಯಾಂಡ್, ವಾಷಿಂಗ್ ಸ್ಯಾಂಡ್, ಜಲ್ಲಿ ಕಲ್ಲು ಅಭಾವ ಎದುರಾಗಿದೆ. ದೊರೆತರೂ ಇವುಗಳ ಬೆಲೆಗಳು ದುಪ್ಪಟ್ಟಾಗಿವೆ. ಬೆಲೆ ಹೆಚ್ಚಳ ಮಧ್ಯಮ ವರ್ಗಕ್ಕೆ ಹೊರೆ ಆಗಿದೆ.

ಒಂದು ಜಲ್ಲಿ ಕ್ರಷರ್‌ನಿಂದ ಸರಾಸರಿ 20 ಕಿ.ಮೀ ದೂರದ ಸ್ಥಳಕ್ಕೆ ಒಂದು ಟನ್ ಎಂ ಸ್ಯಾಂಡ್ ಪೂರೈಸಿದರೆ ಈ ಹಿಂದೆ ₹520 ಪಡೆಯಲಾಗುತ್ತಿತ್ತು. ಈಗ ಆ ಬೆಲೆ ₹ 900 ತಲುಪಿದೆ. ಗೋಡೆಗಳ ಪ್ಲಾಸ್ಟಿಂಗ್‌ಗೆ ಬಳಸುವ ವಾಷಿಂಗ್ ಸ್ಯಾಂಡ್‌ ಒಂದು ಟನ್‌ಗೆ ₹ 1,050 ಇತ್ತು. ಈಗ ಜಲ್ಲಿ ಕ್ರಷರ್‌ಗಳಿಂದ ಸ್ಥಳಕ್ಕೆ ವಾಷಿಂಗ್ ಸ್ಯಾಂಡ್ ಪೂರೈಸಿದರೆ ₹ 1,800 ನೀಡಬೇಕಾಗಿದೆ. ಒಂದು ಕ್ಯುಬಿಕ್ ರೆಡಿ ಮಿಕ್ಸ್ (ಆರ್‌ಸಿಸಿ) ಬೆಲೆ ಈ ಹಿಂದೆ ₹4,200 ರವರೆಗಿತ್ತು. ಆದರೆ ಈ ಸ್ಫೋಟದ ತರುವಾಯ ನಿಯಮಗಳು ಬಿಗಿಯಾಗಿದ್ದು ₹ 5 ಸಾವಿರಕ್ಕೆ ಏರಿಕೆಯಾಗಿದೆ.

‘ಇಷ್ಟು ಹಣ ಕೊಡುತ್ತೇವೆ ಎಂದರೂ ಎಂ ಸ್ಯಾಂಡ್ ಸಿಗುತ್ತಿಲ್ಲ. ಈಗ ನಮ್ಮ ಬಳಿ ಇರುವ ಕಚ್ಚಾ ಸಾಮಗ್ರಿಗಳು ಮುಗಿದ ನಂತರ ಮುಂದೇನು ಎನ್ನುವ ಚಿಂತೆ ಇದೆ. ಕಚ್ಚಾ ಸಾಮಗ್ರಿಗಳು ಸುಲಭವಾಗಿ ದೊರೆಯುತ್ತಿದ್ದ ಕಾರಣ ಸಂಗ್ರಹವನ್ನೇನೂ ಮಾಡಿರಲಿಲ್ಲ. ಆದರೆ ಈಗ ಇವು ದೊರೆಯುವುದೇ ದುರ್ಲಬವಾಗಿದೆ. ನಿರ್ಮಾಣ ವೆಚ್ಚವೂ ಹೆಚ್ಚಳವಾಗುತ್ತದೆ’ ಎನ್ನುತ್ತಾರೆ ಚಿಕ್ಕಬಳ್ಳಾಪುರದಲ್ಲಿ ಮನೆ ನಿರ್ಮಿಸುತ್ತಿರುವ ಶ್ರೀನಿವಾಸ್.

ಮಧ್ಯಮವರ್ಗಕ್ಕೆ ಪೆಟ್ಟು: ನಿರ್ಮಾಣ ಕ್ಷೇತ್ರದಲ್ಲಿ ತೊಡಗಿಸಿಕೊಂಡಿರುವ ಬೃಹತ್ ಸಂಸ್ಥೆಗಳು, ದೊಡ್ಡ ಬಿಲ್ಡರ್‌ಗಳು ಈಗಾಗಲೇ ಎಂ ಸ್ಯಾಂಡ್, ಜಲ್ಲಿ, ವಾಷಿಂಗ್ ಸ್ಯಾಂಡ್‌ಗಳನ್ನು ಸಂಗ್ರಹಿಸಿದ್ದಾರೆ. ಇವರ ಕಾರ್ಯಚಟುವಟಿಕೆಗಳು ದೊಡ್ಡದಾಗಿ ನಡೆಯುವ ಕಾರಣ ಸಂಗ್ರಹ ಅನಿವಾರ್ಯ. ಆದರೆ ಮನೆ ನಿರ್ಮಾಣದಲ್ಲಿ ತೊಡಗಿರುವ ಮಧ್ಯಮ ವರ್ಗಕ್ಕೆ ಇವುಗಳ ಸಂಗ್ರಹವೇನೂ ಅನಿವಾರ್ಯವಲ್ಲ. ಬೆಲೆ ಹೆಚ್ಚಳದ ಬಿಸಿ ನೇರವಾಗಿ ತಟ್ಟುತ್ತಿರುವುದು ಮಧ್ಯಮವರ್ಗದ ಕುಟುಂಬಗಳಿಗೆ.

ಬಿಗಿಯಾದ ನಿಯಮಗಳು: ಕ್ರಷರ್‌ಗಳಲ್ಲಿ ಕಚ್ಚಾ ವಸ್ತುಗಳ ಸಂಗ್ರಹ ಇಲ್ಲ. ಶಿವಮೊಗ್ಗ ಜಿಲ್ಲೆಯ ಹುಣಸೋಡು ಮತ್ತು ಹಿರೇನಾಗವಲ್ಲಿ ಸ್ಫೋಟದ ತರುವಾಯ ಪೊಲೀಸರು, ಆರ್‌ಟಿಒ ಮತ್ತು ಗಣಿ ಮತ್ತು ಭೂ ವಿಜ್ಞಾನ ಇಲಾಖೆಯು ನಿಯಮಗಳನ್ನು ಬಿಗಿಗೊಳಿಸಿದೆ.

ಈ ಹಿಂದೆ ದೊಡ್ಡ ಲಾರಿಗಳಿಗೆ 32ರಿಂದ 33 ಟನ್‌ವರೆಗೂ ಎಂ ಸ್ಯಾಂಡ್ ತುಂಬಲಾಗುತ್ತಿತ್ತು. ಎಗ್ಗಿಲ್ಲದೆ ಸ್ಫೋಟಗಳು ಸಹ ನಡೆಸಲಾಗುತ್ತಿತ್ತು. ‘ಮಾಮೂಲಿ‘ಯ ಮೇಲೆ ವ್ಯವಹಾರಗಳು ಖುದುರುತ್ತಿದ್ದವು. ಆದರೆ ಈಗ ನಿಯಮಗಳನ್ನು ಬಿಗಿಗೊಳಿಸಿದ ಕಾರಣ ಎಂ ಸ್ಯಾಂಡ್, ವಾಷಿಂಗ್ ಸ್ಯಾಂಡ್‌ನ ಉತ್ಪಾದನೆ ಕಡಿಮೆಯಾಗಿದೆ.

ಕಾರ್ಮಿಕರಿಗೆ ನಿರಂತರ ಕೆಲಸವಿಲ್ಲ

‘ನಾವು ಮಧ್ಯಮ ವರ್ಗದ ಜನರ ಮನೆಗಳ ನಿರ್ಮಾಣ ಗುತ್ತಿಗೆ ಪಡೆಯುತ್ತೇವೆ. ಚಿಕ್ಕಬಳ್ಳಾಪುರ ಜಿಲ್ಲೆಯ ಕ್ರಷರ್‌ಗಳಿಂದ ಪ್ರಮುಖವಾಗಿ ಎಂ ಸ್ಯಾಂಡ್ ತರಿಸಿಕೊಳ್ಳುತ್ತಿದ್ದೆವು. ನನ್ನ ಬಳಿ 10 ಜನರು ಕೆಲಸ ಮಾಡುವರು. ಈಗ ಎಂ ಸ್ಯಾಂಡ್ ಕೊರತೆಯಿಂದ ಕೆಲಸ ನಿಂತಿದೆ. ಕಾರ್ಮಿಕರನ್ನು ಬೇರೆ ಕಡೆ ಕಳುಹಿಸುವಂತಿಲ್ಲ. ಒಮ್ಮೆ ಕಾರ್ಮಿರನ್ನು ಕಳುಹಿಸಿದರೆ ಮತ್ತೆ ಸಿಗುವುದು ಕಷ್ಟ. ಆದರೆ ಈಗ ನಿರಂತರವಾಗಿ ಕೆಲಸ ನೀಡಲು ಎಂ ಸ್ಯಾಂಡ್ ಕೊರತೆ ಇದೆ’ ಎನ್ನುವರು ದೊಡ್ಡಬಳ್ಳಾಪುರದ ಮೇಸ್ತ್ರಿ ನಾಗಣ್ಣ.

ಕಚ್ಚಾ ಸಾಮಗ್ರಿ ಕೊರತೆ

ಬೆಂಗಳೂರು ಸೇರಿದಂತೆ ರಾಜಧಾನಿಗೆ ಸಮೀಪವಿರುವ ಜಿಲ್ಲಾ ಕೇಂದ್ರಗಳಲ್ಲಿ ಕಟ್ಟಡ ನಿರ್ಮಾಣಗಳು ಹೆಚ್ಚಿವೆ. ಈ ಕ್ಷೇತ್ರವನ್ನೇ ನಂಬಿ ಸಾವಿರಾರು ಕಾರ್ಮಿಕರು ಕೆಲಸ ಮಾಡುತ್ತಿದ್ದಾರೆ. ಕಚ್ಚಾ ಸಾಮಗ್ರಿಗಳ ಕೊರತೆ ಬೆಲೆ ಹೆಚ್ಚಳಕ್ಕೆ ಕಾರಣವಾಗಿ ಮಧ್ಯಮ ವರ್ಗದವರ ಬದುಕಿಗೆ ಸಂಕಷ್ಟವಾಗಿದ್ದರೆ, ನಿತ್ಯ ಕೆಲಸವಿಲ್ಲದೆ ಕಾರ್ಮಿಕರು ಸಹ ಕಂಗಾಲಾಗಿದ್ದಾರೆ ಎಂಬುದು ನಿರ್ಮಾಣ ಉಸ್ತುವಾರಿ ರಾಮಕೃಷ್ಣ ಅವರ ಅಳಲು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT