ಭಾನುವಾರ, ಆಗಸ್ಟ್ 18, 2019
26 °C
ಸಿ.ವಿ.ವಿ. ಕ್ಯಾಂಪಸ್‌ನಲ್ಲಿ ಐಸಿಎಸ್‍ಇ ಶಾಲೆಗಳ ರಾಜ್ಯ ಮಟ್ಟದ ವಾಲಿಬಾಲ್ ಪಂದ್ಯಾವಳಿಗೆ ಚಾಲನೆ

ಪಾಠದಷ್ಟೇ ಪಠ್ಯೇತರ ಚಟುವಟಿಕೆ ಮುಖ್ಯ

Published:
Updated:
Prajavani

ಚಿಕ್ಕಬಳ್ಳಾಪುರ: ‘ಮಕ್ಕಳ ದೈಹಿಕ ಮತ್ತು ಮಾನಸಿಕ ಬೆಳವಣಿಗೆಯಲ್ಲಿ ಕ್ರೀಡೆಗಳು ಮಹತ್ವದ ಪಾತ್ರ ವಹಿಸುತ್ತವೆ. ಆದ್ದರಿಂದ ವಿದ್ಯಾರ್ಥಿಗಳು ಪಾಠದೊಂದಿಗೆ ಪಠ್ಯೇತರ ಚಟುವಟಿಕೆಗಳಲ್ಲಿ ಕೂಡ ಸಕ್ರಿಯವಾಗಿ ತೊಡಗಿಸಿಕೊಳ್ಳಬೇಕು’ ಎಂದು ಜಿಲ್ಲಾ ಪಂಚಾಯಿತಿ ಅಧ್ಯಕ್ಷ ಎಚ್‌.ವಿ.ಮಂಜುನಾಥ್ ತಿಳಿಸಿದರು.

ನಗರದ ಹೊರವಲಯದ ಸಿ.ವಿ.ವಿ. ಕ್ಯಾಂಪಸ್‌ನಲ್ಲಿ ಬುಧವಾರ ಆಯೋಜಿಸಿದ್ದ ಐಸಿಎಸ್‍ಇ ಶಾಲೆಗಳ ರಾಜ್ಯ ಮಟ್ಟದ ವಾಲಿಬಾಲ್ ಪಂದ್ಯಾವಳಿಗೆ ಚಾಲನೆ ನೀಡಿ ಅವರು ಮಾತನಾಡಿದರು.

‘ವಿದ್ಯಾರ್ಥಿಗಳು ಆಟ ಪಾಠಗಳಲ್ಲಿ ಶಿಸ್ತಿನಿಂದ ತೊಡಗಿಸಿಕೊಳ್ಳುವ ಮೂಲಕ ವಿದ್ಯಾರ್ಥಿ ಜೀವನವನ್ನು ಸುಂದರವಾಗಿಸಿಕೊಳ್ಳಬೇಕು. ಕ್ರೀಡೆಗಳಿಂದ ಒತ್ತಡ ನಿವಾರಣೆಯಾಗುವ ಜತೆಗೆ ಓದಿನಲ್ಲಿ ಏಕಾಗ್ರತೆ ಸಾಧಿಸಲು ಅನುಕೂಲವಾಗುತ್ತದೆ. ಕ್ರೀಡಾ ಕ್ಷೇತ್ರದಲ್ಲಿ ಉತ್ತಮ ಸಾಧನೆ ಮಾಡಿದರೆ ಭವಿಷ್ಯದಲ್ಲಿ ಉತ್ತಮ ಉದ್ಯೋಗಾವಕಾಶಗಳು, ಖ್ಯಾತಿ ಪಡೆಯಲು ಸಾಧ್ಯವಾಗುತ್ತದೆ’ ಎಂದು ಹೇಳಿದರು.

ಕೆ. ವಿ. ಮತ್ತು ಪಂಚಗಿರಿ ಶಿಕ್ಷಣ ದತ್ತಿಗಳ ಅಧ್ಯಕ್ಷ ಕೆ. ವಿ. ನವೀನ್ ಕಿರಣ್ ಮಾತನಾಡಿ, ‘ಕ್ರೀಡೆಗಳು ಇಂದಿನ ದಿನಗಳಲ್ಲಿ ಉತ್ತಮವಾಗಿ ಮುನ್ನಡೆಯುತ್ತಿದ್ದು, ವಿದ್ಯಾರ್ಥಿಗಳೂ ಹುಮ್ಮಸ್ಸಿನಿಂದ ಪಾಲ್ಗೊಳ್ಳುತ್ತಿರುವುದು ಸಂತಸದ ವಿಚಾರ. ಕ್ರೀಡಾಪಟುಗಳು ಕ್ರೀಡಾ ಮನೋಭಾವನೆಯನ್ನು ಮೈಗೂಡಿಸಿಕೊಂಡು ರಾಜ್ಯವನ್ನು ಅಂತರರಾಷ್ಟ್ರೀಯ ಮಟ್ಟದಲ್ಲಿ ಗುರುತಿಸುವಂತೆ ಸಾಧನೆ ತೋರಬೇಕು’ ಎಂದರು.

ರಾಜ್ಯ ವಾಲಿಬಾಲ್ ಅಸೋಸಿಯೇಷನ್‌ನ ಸಹ ಕಾರ್ಯದರ್ಶಿ ಮುನಿಕೃಷ್ಣ ಮಾತನಾಡಿ, ‘ವಿದ್ಯಾರ್ಥಿಗಳು ಮಾನಸಿಕವಾಗಿ ಸದೃಢರಾಗಬೇಕಾದರೆ ದೈಹಿಕವಾಗಿ ಕೂಡ ಸಬಲರಾಗಿರುವುದು ಮುಖ್ಯ. ಪರಿಪೂರ್ಣ ವ್ಯಕ್ತಿತ್ವ ಗಳಿಸಿಕೊಳ್ಳಲು ಕ್ರೀಡೆ ಪೂರಕವಾಗಿರುತ್ತದೆ. ಜತೆಗೆ ಇವತ್ತು ಕ್ರೀಡಾ ಕ್ಷೇತ್ರದಲ್ಲಿ ಕೂಡ ಸಾಧನೆ ತೋರಿ ಉತ್ತಮ ಉದ್ಯೋಗಾವಕಾಶಗಳನ್ನು ಗಳಿಸಿಕೊಳ್ಳಲು ಅವಕಾಶಗಳಿವೆ’ ಎಂದು ಹೇಳಿದರು.

ಕ್ರೀಡಾಪಟು ಕೆ. ಆರ್. ಲಕ್ಷ್ಮೀನಾರಾಯಣ್, ಪಂಚಗಿರಿ ಶಿಕ್ಷಣ ದತ್ತಿಗಳ ಸದಸ್ಯ ಬಿ. ಮುನಿಯಪ್ಪ, ಕೆ. ವಿ. ಇಂಗ್ಲಿಷ್ ಶಾಲೆಯ ಪ್ರಾಂಶುಪಾಲ ತ್ಯಾಗರಾಜ್, ಮುಖ್ಯಶಿಕ್ಷಕ ಗಿರೀಶ್ ಉಪಸ್ಥಿತರಿದ್ದರು.

Post Comments (+)